ಸ್ಥಳಕ್ಕೆ ಸೇನೆಯ ಹೆಚ್ಚುವರಿ ಪಡೆಯನ್ನು ರವಾನಿಸಲಾಗಿದೆ. ಸೇನಾ ಮುಖ್ಯಸ್ಥ ನರವಣೆ ಪರಿಸ್ಥಿತಿಯ ಅಧ್ಯಯನಕ್ಕೆ ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ.
ಇಂಫಾಲ್ (ಮೇ 29, 2023): ಕೆಲ ದಿನಗಳಿಂದ ತಣ್ಣಗಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾನುವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಬಹುಸಂಖ್ಯಾತ ಹಿಂದೂ ಮೀಟಿ ಸಮುದಾಯದವರನ್ನು ಗುರಿಯಾಗಿಸಿ ಕುಕಿ ಉಗ್ರರು ನಡೆಸಿದ ದಾಳಿಗೆ ಇಬ್ಬರು ಬಲಿಯಾಗಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಜೊತೆಗೆ ಉಗ್ರರು 80ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸೇನೆಯ ಹೆಚ್ಚುವರಿ ಪಡೆಯನ್ನು ರವಾನಿಸಲಾಗಿದೆ. ಸೇನಾ ಮುಖ್ಯಸ್ಥ ನರವಣೆ ಪರಿಸ್ಥಿತಿಯ ಅಧ್ಯಯನಕ್ಕೆ ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ.
ಇದನ್ನು ಓದಿ: Operation Weapon Recovery: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಶಾಂತಿ ಸ್ಥಾಪನೆಗೆ ಆಯುಧ ವಶಪಡಿಸಿಕೊಳ್ಳಲು ಮುಂದಾದ ಸೇನೆ
ರಾಜಧಾನಿ ಇಂಫಾಲ ಸಮೀಪ ಇರುವ ಪಹ್ಯೇಂಗ್‌ನಲ್ಲಿ ಕ್ರೈಸ್ತ ಸಮುದಾಯದಕ್ಕೆ ಸೇರಿದ ಕುಕಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಸೇರ್ಯೂ ಮತ್ತು ಸುಗ್ನು ಪ್ರದೇಶದಲ್ಲಿ 80ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ದಾಳಿ ಖಂಡಿಸಿರುವ ಗ್ರಾಮದ ಜನರು, ಸೇನಾಪಡೆಯನ್ನು ನಿಯೋಜನೆ ಮಾಡಿದ್ದರೂ ಸಹ ದಾಳಿ ನಡೆದ ಸಮಯದಲ್ಲಿ ಅವರು ಕೇವಲ ಪ್ರೇಕ್ಷಕರಾಗಿದ್ದರು ಎಂದು ಆರೋಪಿಸಿದ್ದಾರೆ. ಬಹುಸಂಖ್ಯಾತ ಮೀಟಿಗಳಿಗೆ ಎಸ್ಟಿ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಅಲ್ಪಸಂಖ್ಯಾತ ಕುಕಿಗಳು ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ಭಾರೀ ಹಿಂಸಾಚಾರ ನಡೆಸುತ್ತಿದ್ದಾರೆ.
ಸೇನೆಯಿಂದ 40ಕ್ಕೂ ಹೆಚ್ಚು ಉಗ್ರರ ಹತ್ಯೆ
ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಕಳೆದ ಕೆಲ ದಿನಗಳಿಂದ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ 40ಕ್ಕೂ ಹೆಚ್ಚು ಕುಕಿ ಉಗ್ರರು ಬಲಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿದ್ದಾರೆ. ಆದರೆ, ಕುಕಿ ಉಗ್ರರು ಎಕೆ-47, ಎಂ-16 ರೈಫಲ್‌ಗಳನ್ನು ಬಳಕೆ ಮಾಡಿ ದಾಳಿ ಮಾಡುತ್ತಿದ್ದಾರೆ. ಸೇನಾಪಡೆಗಳು ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಉಗ್ರರು ಹೊಸ ದಾಳಿಯನ್ನು ಆರಂಭಿಸಿದ್ದು, ಸಂಘಟಿತರಾಗಿ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಮೀಟಿ ಸಮುದಾಯ, ಆದಿವಾಸಿ ಕ್ರೈಸ್ತರ ನಡುವೆ ಸಂಘರ್ಷ: ಬೂದಿ ಮುಚ್ಚಿದ ಕೆಂಡವಾದ ಮಣಿಪುರ ಹಿಂಸೆಗೆ 54 ಬಲಿ!