ಬಿಜೆಪಿ ಜತೆ ಮೈತ್ರಿಗೆ ಸಿದ್ಧರಾದ್ರಾ ದೊಡ್ಡಗೌಡರು? ಮೋದಿ ಕರೆ ಬಂದ ಬೆನ್ನಲ್ಲೇ ದಿಲ್ಲಿಗೆ ಹೋಗಿದ್ದೇಕೆ?

By Prashant NatuFirst Published Sep 8, 2023, 6:41 AM IST
Highlights

‘ಶತ್ರುವಿನ ಶತ್ರು ಮಿತ್ರ’ ಅನ್ನುವುದು ಸಹಜ, ಸ್ವಾಭಾವಿಕ. ಹೀಗಾಗಿ ಮೂರು ವ್ಯಕ್ತಿಗಳು ಅಥವಾ ಸಂಘಟನೆಗಳ ನಡುವೆ ಪೈಪೋಟಿ ಇದ್ದು ಒಬ್ಬ/ಒಂದು ಸಂಘಟನೆ ಏಕಾಏಕಿ ಪ್ರಬಲ ಆದಾಗ, ಉಳಿದ ಇಬ್ಬರು ಒಟ್ಟಿಗೆ ಬರದೇ ಇದ್ದರೆ ರಾಜಕಾರಣದಲ್ಲಿ ಯಥಾಸ್ಥಿತಿ ಬದಲಿಸಲು ಆಗದು. ಅದು ನಿಧಾನವಾಗಿ ಮನವರಿಕೆ ಆದ ನಂತರವೇ ಪಾರ್ಟಿಯ ಅಸ್ತಿತ್ವ ಮತ್ತು ರಾಜಕಾರಣದ ಪ್ರಸ್ತುತತೆ ಉಳಿಸಿಕೊಳ್ಳಲು ದೇವೇಗೌಡರು ಕೊನೆಗೂ ತಾವೇ ದೆಹಲಿಗೆ ಹೋಗಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ.

- ಪ್ರಶಾಂತ ನಾತು

ರಾಜಕಾರಣದಲ್ಲಿ ‘ಶತ್ರುವಿನ ಶತ್ರು ಮಿತ್ರ’ ಅನ್ನುವುದು ಸಹಜ, ಸ್ವಾಭಾವಿಕ. ಹೀಗಾಗಿ ಮೂರು ವ್ಯಕ್ತಿಗಳು ಅಥವಾ ಸಂಘಟನೆಗಳ ನಡುವೆ ಪೈಪೋಟಿ ಇದ್ದು ಒಬ್ಬ/ಒಂದು ಸಂಘಟನೆ ಏಕಾಏಕಿ ಪ್ರಬಲ ಆದಾಗ, ಉಳಿದ ಇಬ್ಬರು ಒಟ್ಟಿಗೆ ಬರದೇ ಇದ್ದರೆ ರಾಜಕಾರಣದಲ್ಲಿ ಯಥಾಸ್ಥಿತಿ ಬದಲಿಸಲು ಆಗದು. ಅದು ನಿಧಾನವಾಗಿ ಮನವರಿಕೆ ಆದ ನಂತರವೇ ಪಾರ್ಟಿಯ ಅಸ್ತಿತ್ವ ಮತ್ತು ರಾಜಕಾರಣದ ಪ್ರಸ್ತುತತೆ ಉಳಿಸಿಕೊಳ್ಳಲು ದೇವೇಗೌಡರು ಕೊನೆಗೂ ತಾವೇ ದೆಹಲಿಗೆ ಹೋಗಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ದಿಲ್ಲಿ ಬಿಜೆಪಿ ಮೂಲಗಳು ಮತ್ತು ದೇವೇಗೌಡರ ಆಪ್ತ ವಲಯ ಒಪ್ಪಿಕೊಂಡಿರುವ ಪ್ರಕಾರ, ಸೆಪ್ಟೆಂಬರ್‌ 4ಕ್ಕೆ ದಿಲ್ಲಿಗೆ ಹೋಗಿದ್ದ ದೇವೇಗೌಡರು ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಇಬ್ಬರ ಜೊತೆಗೂ ಕೂಡ ಅಧಿಕೃತ ಮಾತುಕತೆ ನಡೆಸಿ ಬಂದಿದ್ದಾರೆ. ಮೇನಲ್ಲಿ ಕುಮಾರಸ್ವಾಮಿ ದಿಲ್ಲಿಗೆ ಹೋದಾಗ ಅಮಿತ್‌ ಶಾ ಅವರು ಬಿಜೆಪಿ ಜೊತೆ ಜೆಡಿಎಸ್‌ ವಿಲೀನ ಆಗಲಿ ಎಂದು ಹೇಳಿದ್ದರು. ಇಲ್ಲ ಅದು ಸಾಧ್ಯವಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿ ಬಂದಿದ್ದರು. ಮೂಲಗಳು ಹೇಳುತ್ತಿರುವ ಪ್ರಕಾರ, ಅಮಿತ್‌ ಶಾ- ಕುಮಾರಸ್ವಾಮಿ ಭೇಟಿ ಆದ ಮೇಲೆ ಸ್ವತಃ ಪ್ರಧಾನಿ ಮೋದಿ ಅವರು ದೇವೇಗೌಡರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು. ಈಗ ಅಮಿತ್‌ ಶಾ ಮತ್ತು ಜೆ.ಪಿ. ನಡ್ಡಾ ಜೊತೆಗಿನ ಮಾತುಕತೆಯಲ್ಲಿ ದೇವೇಗೌಡರಿಗೆ 4 ಸೀಟು ಬಿಟ್ಟು ಕೊಡಲು ತಯಾರಿದ್ದೇವೆ ಎಂದು ಬಿಜೆಪಿಗರು ಹೇಳಿದ್ದಾರೆ. ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಬಿಟ್ಟು ಕೊಡಲು ಬಿಜೆಪಿ ತಯಾರಿದ್ದು, ಇನ್ನೊಂದು ಸೀಟು ಯಾವುದು ಎನ್ನುವುದು ತೀರ್ಮಾನ ಆಗಿಲ್ಲ. ಸೆಪ್ಟೆಂಬರ್‌ 10ರಂದು ನಾಯಕರ ಜೊತೆ ಒಂದು ಸುತ್ತಿನ ಚರ್ಚೆಯ ನಂತರ ದೇವೇಗೌಡರು ಕುಮಾರಸ್ವಾಮಿ ಜೊತೆ ಇನ್ನೊಂದು ಸುತ್ತಿನ ಚರ್ಚೆ ನಡೆಸಿ ಮೈತ್ರಿಗೆ ಅಂತಿಮ ಸ್ವರೂಪ ಕೊಡೋಣ ಎಂದು ಹೇಳಿ ಬಂದಿದ್ದಾರೆ.

ಮಂಡ್ಯ ಕೊಡಲು ಆಗುವುದಿಲ್ಲ

ಮಂಡ್ಯ ಸೀಟು ಬಿಟ್ಟು ಕೊಡಿ ಎಂದು ದೇವೇಗೌಡರು ಕೇಳಿದ್ದಾರಾದರೂ ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಇದಕ್ಕೆ ಒಪ್ಪಿಲ್ಲ. ಸುಮಲತಾರಿಗೆ ವಿಧಾನಸಭಾ ಚುನಾವಣೆಗೆ ಮುಂಚೆಯೇ ‘ನಾವು ನಿಮಗೆ ಸೀಟು ಬಿಟ್ಟು ಕೊಡುತ್ತೇವೆ’ ಎಂದು ಪ್ರಾಮಿಸ್‌ ಮಾಡಿದ್ದೇವೆ. ಹೀಗಾಗಿ ಅಲ್ಲಿ ಅವರು ನಿಲ್ಲಲಿ ಎಂದು ಅಮಿತ್‌ ಶಾ ಹೇಳಿದ್ದು, ನಮ್ಮ ಸ್ಥಳೀಯ ನಾಯಕರ ಜೊತೆಗೆ ಚರ್ಚೆ ಮಾಡಬೇಕು ಎಂದು ಗೌಡರು ಹೇಳಿದ್ದಾರೆ. ಬಿಜೆಪಿ ಮೂಲಗಳು ಹೇಳುತ್ತಿರುವ ಪ್ರಕಾರ, ಒಂದೋ ಸುಮಲತಾ ಪಕ್ಷೇತರರಾಗಿಯೇ ಮುಂದುವರೆಯಲಿ. ಬಿಜೆಪಿ ಮತ್ತು ಜೆಡಿಎಸ್‌ ಎರಡೂ ಪಾರ್ಟಿಗಳು ಬೆಂಬಲ ಕೊಡಲಿ. ಜೊತೆಗೆ ಇನ್ನೊಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜೆಡಿಎಸ್‌ ಚಿನ್ಹೆ ಮೇಲೆ ಸ್ಪರ್ಧಿಸಲಿ ಎಂಬ ಬಗ್ಗೆ ಕೂಡ ಚರ್ಚೆ ಆಗಿದೆ. ಆದರೆ ಯಾವುದು ಆ ಕ್ಷೇತ್ರ ಎಂಬುದನ್ನು ಅಮಿತ್‌ ಶಾ ಕರ್ನಾಟಕದ ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡಿದ ನಂತರ ತೀರ್ಮಾನಿಸೋಣ ಎಂದು ಜೆ.ಪಿ.ನಡ್ಡಾ ದೊಡ್ಡ ಗೌಡರಿಗೆ ಹೇಳಿ ಕಳುಹಿಸಿದ್ದಾರೆ. ಗೌಡರ ದಿಲ್ಲಿ ಆಪ್ತ ಮೂಲಗಳು ಹೇಳುತ್ತಿರುವ ಪ್ರಕಾರ, ಅಮಿತ್‌ ಶಾ ಮಾತುಕತೆಗಿಂತ ಮುಂಚೆ ಪ್ರಧಾನಿ ಮೋದಿ ಸ್ವತಃ ದೇವೇಗೌಡರ ಜೊತೆಗೆ ಸ್ಥಳೀಯ ರಾಜಕೀಯ ಸ್ಥಿತಿಯ ಬಗ್ಗೆ ಸುದೀರ್ಘ ದೂರವಾಣಿ ಚರ್ಚೆ ನಡೆಸಿದ್ದಾರೆ. ಅದಾದ ಮೇಲೆಯೇ ಗೌಡರು ದಿಲ್ಲಿಗೆ ಹೋಗಲು ಒಪ್ಪಿಗೆ ಸೂಚಿಸಿದ್ದಾರೆ. ಗೌಡರು ಹೊಸ ತಲೆಮಾರಿನ ರೀತಿ ಫೋಟೋ ಹೊಡೆಸಿಕೊಂಡು ನಂತರ ವೀಳ್ಯದ ಎಲೆ ಶಾಸ್ತ್ರ ಮಾಡುವವರು ಅಲ್ಲ. ಮೊದಲು ಯಾದಿ ಮಾಡಿ ಪಕ್ಕಾ ಮಾಡಿಕೊಂಡು ಆಮೇಲೆ ಶಾಸ್ತ್ರ ಕ್ಕೆ ರೆಡಿ ಅನ್ನುವ ಹಳೇ ತಲೆಮಾರಿನ ಪಕ್ಕಾ ರಾಜಕಾರಣಿ.

ಸೂರ್ಯಂಗೆ ಟಾರ್ಚ್‌ ಹಿಡಿಯೋಕೋಗಿ ನೋ ಬಾಲ್‌ ಎಸೆದ ಕಾರ್ಯಕರ್ತರು: ಬಿಗ್‌ಬಾಸ್‌ ಆದೇಶಕ್ಕೆ ಸಚಿವರು ಕಂಗಾಲು!

ಎರಡೂ ಪಕ್ಷಕ್ಕೂ ದೋಸ್ತಿ ಅನಿವಾರ‍್ಯ

2018ರಲ್ಲಿ ಬಿಜೆಪಿ ಜೊತೆಗೆ ಒಳ ಒಪ್ಪಂದವನ್ನು ಕುಮಾರಸ್ವಾಮಿ ಮಾಡಿಕೊಂಡಿದ್ದಾರಾದರೂ ಇದಕ್ಕೆ ದೇವೇಗೌಡರ ಒಪ್ಪಿಗೆ ಇರಲಿಲ್ಲ. ಮೊದಲಿನಿಂದಲೂ ದೇವೇಗೌಡರ ಒಲವು ಜಾಸ್ತಿ ಇರುವುದು ಜಾತ್ಯತೀತ ಪಾರ್ಟಿಗಳ ಕಡೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಜೊತೆಗಿನ ಕಂಪನಿ ದೇವೇಗೌಡರಿಗೆ ಇಷ್ಟವಾದರೆ, ದಿಲ್ಲಿಯಲ್ಲಿ ಲಾಲು, ಮುಲಾಯಂ, ಸುರ್ಜಿತ್‌, ಯೆಚೂರಿ ಜೊತೆಗೆ ಕುಳಿತು ಕೊಳ್ಳುವುದು ಗೌಡರಿಗೆ ಅತ್ಯಂತ ಖುಷಿ ಕೊಡುವ ವಿಷಯ. ಆದರೆ ಬೆಂಗಳೂರಿನಲ್ಲಿ ಪರಿಸ್ಥಿತಿ ಬದಲಾಗುವುದರೊಂದಿಗೆ ದಿಲ್ಲಿಯಲ್ಲೂ ಕಾಂಗ್ರೆಸ್‌ ಮಿತ್ರರಾಗಿರುವ ಲಾಲು, ಮಮತಾ, ಅಖಿಲೇಶ್‌, ನಿತೀಶ್‌ ಕುಮಾರರಿಗೆ ಈಗ ದೇವೇಗೌಡರು ಬೇಡವಾಗಿದ್ದಾರೆ. ಇನ್ನೊಂದು ಕಡೆ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ ದಿನದಿಂದ ದಿನಕ್ಕೆ ಪ್ರಬಲ ಆಗುತ್ತಿರುವಾಗ ದೇವೇಗೌಡರಿಗೆ ಕೂಡ ಈ ವಿಪರೀತ ಪರಿಸ್ಥಿತಿಯಲ್ಲಿ ಈಜಬೇಕಾದರೆ ಕಾಂಗ್ರೆಸ್‌ ಅಥವಾ ಬಿಜೆಪಿಯಂತಹ ದೊಡ್ಡ ದೋಣಿಯ ಆಸರೆ ಅನಿವಾರ್ಯ ಎಂದು ಮನವರಿಕೆ ಆಗಿದೆ. ಕಾಂಗ್ರೆಸ್‌ ಅಂತೂ ಸಿದ್ದು ಮತ್ತು ಡಿಕೆಶಿ ನೇತೃತ್ವ ಇರುವಾಗ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಹೀಗಾಗಿ ಬಿಜೆಪಿ ಜೊತೆಗೆ ಹೋಗುವುದೇ ಜಾಣತನ ಎಂಬ ನಿರ್ಧಾರಕ್ಕೆ ದೇವೇಗೌಡರು ಬಂದಿದ್ದಾರೆ ಅನ್ನಿಸುತ್ತದೆ. ಇನ್ನೊಂದು ಕಡೆ ಬಿಜೆಪಿ ಕೂಡ ಹಳೇ ಮೈಸೂರು ಭಾಗದ 8 ಕ್ಷೇತ್ರಗಳಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳದೆ ಚುನಾವಣೆಗೆ ಹೋದರೆ ಕಾಂಗ್ರೆಸ್‌ಗೆ ಲಾಭ ಆಗುತ್ತದೆ ಎಂಬ ಕಾರಣದಿಂದ ಕರ್ನಾಟಕದ ನಾಯಕರ ವಿರೋಧದ ಹೊರತಾಗಿಯೂ ಜೆಡಿಎಸ್‌ ಜೊತೆ ಹೋಗುವ ತೀರ್ಮಾನವನ್ನು ಮೋದಿ ಮತ್ತು ಅಮಿತ್‌ ಶಾ ತೆಗೆದುಕೊಂಡಿದ್ದಾರೆ ಅನ್ನಿಸುತ್ತದೆ. ಲಗ್ನ ಆಗಬೇಕಾದರೆ ಹುಡುಗ-ಹುಡುಗಿ ಇಬ್ಬರಿಗೂ ಒಪ್ಪಿಗೆಯೂ ಇರಬೇಕು. ಜೊತೆಗೆ ಜೊತೆಗಾರ ಬೇಕು ಎಂದು ಅನ್ನಿಸಬೇಕು ಅಲ್ಲವೇ?

ವಿಜಯೇಂದ್ರಗೆ ಪ್ರಮುಖ ಸ್ಥಾನಮಾನ?

ಅಂದುಕೊಂಡಂತೆ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮೈತ್ರಿ ಆದರೆ ಕರ್ನಾಟಕದಲ್ಲಿ ಲೋಕಸಭೆಯಲ್ಲಿ ಗೆಲ್ಲುವ ಯಾವುದೇ ಪಾರ್ಟಿಯ ಅಭ್ಯರ್ಥಿ ಶೇಕಡಾ 50ಕ್ಕಿಂತ ಹೆಚ್ಚು ಮತ ಪಡೆಯಬೇಕು. ಒಂದು ಕಡೆ ದೇವೇಗೌಡರ ಜೊತೆ ಮೈತ್ರಿ ಮಾಡಿಕೊಂಡು ಹಳೇ ಮೈಸೂರಿನ ಗ್ರಾಮೀಣ ಭಾಗದಲ್ಲಿ ಇರುವ ಒಕ್ಕಲಿಗರ ಮತಗಳನ್ನು ಕ್ರೋಢೀಕರಿಸಿ ಇನ್ನೊಂದು ಕಡೆ ಹಿಂದುತ್ವ ಮತ್ತು ಮೋದಿ ಕಾರಣದಿಂದ ಬಿಜೆಪಿ ಜೊತೆಗೆ ಬರುವ ಕುರುಬ ಹೊರತುಪಡಿಸಿದ ಉಳಿದ ಹಿಂದುಳಿದ ಸಮುದಾಯಗಳು, ದಲಿತ ಎಡಗೈ ಮತ್ತು ಪೂರ್ತಿ ಲಿಂಗಾಯಿತ ಸಮುದಾಯ ಒಟ್ಟಿಗೆ ಬಂದರೆ ಮಾತ್ರ ಬಿಜೆಪಿ ವಿಧಾನಸಭೆಯಲ್ಲಿ ಪಡೆದ ಶೇಕಡಾವಾರು ಮತ ಶೇ. 36ರಿಂದ ಶೇ.50ರವರೆಗೆ ತಲುಪಬಹುದು. ಹೀಗಾಗಿ ಬಿಜೆಪಿ ದಿಲ್ಲಿ ಮೂಲಗಳು ಹೇಳುತ್ತಿರುವ ಪ್ರಕಾರ, ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಪ್ರಮುಖ ಸ್ಥಾನಮಾನ ಕೊಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಒಂದು ಕಡೆ ಲಿಂಗಾಯಿತ ನಾಯಕರು ಗುಳೆ ಹೋಗುತ್ತಿರುವಾಗ ಯಡಿಯೂರಪ್ಪ ಕುಟುಂಬಕ್ಕೆ ಸ್ಥಾನಮಾನ ಕೊಟ್ಟರೆ ಮಾತ್ರ ಉತ್ತರ ಕರ್ನಾಟಕ ಭಾಗದಲ್ಲಿ ಶಕ್ತಿ ಕ್ರೋಢೀಕರಣ ಮಾಡಿಕೊಳ್ಳಬಹುದು ಎಂದು ಒಂದು ಆಲೋಚನೆ ಇದೆ. ಆದರೆ ಅದಕ್ಕೆ ಸಹಜವಾಗಿ ಉಳಿದ ನಾಯಕರ ಒಪ್ಪಿಗೆ ಇಲ್ಲ. ಆದರೆ ಇವತ್ತಿನ ಸ್ಥಿತಿಯಲ್ಲಿ ಮೋದಿ ಮತ್ತು ಅಮಿತ್‌ ಶಾ ಲೋಕಸಭೆಯಲ್ಲಿ ಸೀಟು ತಂದು ಕೊಡುವ ಗ್ಯಾರಂಟಿ ಕಂಡಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿ ಇದ್ದಾರೆ ಅನ್ನಿಸುತ್ತದೆ. ಹಾಗೇನಾದರೂ ಮೊದಲ ಬಾರಿ ಶಾಸಕರಾಗಿರುವ ವಿಜಯೇಂದ್ರಗೆ ಪ್ರಮುಖ ಸ್ಥಾನಮಾನ ಕೊಡುವ ಬಗ್ಗೆ ಅಂತಿಮವಾಗಿ ತೀರ್ಮಾನ ತೆಗೆದುಕೊಂಡಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಅವರಿಗಿಂತ ಹಿರಿಯರಾದ ನಾಯಕರ ಭವಿಷ್ಯ ಏನು ಅನ್ನುವುದು ಪ್ರಶ್ನಾರ್ಥಕ.

ಹೊಸ ತಲೆಮಾರು ಯಶಸ್ಸು ತರುತ್ತಾ?

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್‌ ಒಂದನ್ನು ಬಿಟ್ಟರೆ ಎರಡನೇ ತಲೆಮಾರಿನಲ್ಲೂ ಯಶಸ್ವಿಯಾದ ರಾಜಕೀಯ ಪಕ್ಷ ಇಲ್ಲ. ಕಾಂಗ್ರೆಸ್‌ನಲ್ಲಿ ಮಾತ್ರ ಮೊದಲು ಕೆಂಗಲ… ಹನುಮಂತಯ್ಯ, ನಂತರ ನಿಜಲಿಂಗಪ್ಪ, ಆಮೇಲೆ ದೇವರಾಜ ಅರಸು, ವೀರೇಂದ್ರ ಪಾಟೀಲ…, ಬಂಗಾರಪ್ಪ , ಎಸ್‌.ಎಂ.ಕೃಷ್ಣ, ಸಿದ್ದರಾಮಯ್ಯ ಈಗ ಡಿ.ಕೆ. ಶಿವಕುಮಾರವರೆಗೆ ಸಾಲು ಸಾಲು ಜನಪ್ರಿಯತೆ ಇರುವ ನಾಯಕರನ್ನು ಒಂದೋ ತಯಾರು ಮಾಡಿದೆ, ಅಪರೂಪಕ್ಕೆ ಆಮದು ಮಾಡಿಕೊಂಡಿದೆ. ಆದರೆ ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಮೊದಲು ಅಧಿಕಾರ ಅನುಭವಿಸಿದ ಜನತಾ ಪಾರ್ಟಿಯು ಮೊದಲನೇ ತಲೆಮಾರಿನ ರಾಮಕೃಷ್ಣ ಹೆಗಡೆ, ದೇವೇಗೌಡರು, ಜೆ.ಎಚ್‌. ಪಟೇಲ… ಮತ್ತು ಎಸ್‌.ಆರ್‌. ಬೊಮ್ಮಾಯಿ ಇರುವವರೆಗೆ ಒಂದು ರಾಜಕೀಯ ಪ್ರಸ್ತುತತೆ ಉಳಿಸಿಕೊಂಡು ಎರಡು ಬಾರಿ ಅಧಿಕಾರ ಹಿಡಿಯಿತು. ಆದರೆ ನಂತರ ಅವಸಾನ ಕಂಡಿತು. ಮುಂದೆ ಎರಡು ಬಾರಿ ರಾಜ್ಯದಲ್ಲಿ ಅಧಿಕಾರ ಹಿಡಿದ ಬಿಜೆಪಿ ಉಚ್ಛ್ರಾಯಕ್ಕೆ ಕಾರಣ ಯಡಿಯೂರಪ್ಪ ಮತ್ತು ಅನಂತಕುಮಾರ ಜೋಡಿ. ಯಡಿಯೂರಪ್ಪ ರೈತ ಹೋರಾಟ ಮತ್ತು ಜಾತಿ ಪ್ರಾಬಲ್ಯದ ಕಾರಣದಿಂದ ಜನಪ್ರಿಯರಾಗಿ ಬೆಳೆದರೆ, ಅನಂತಕುಮಾರ ತಮ್ಮ ಚತುರ ರಾಜಕಾರಣ ಮತ್ತು ಸಂಘಟನಾ ಸಾಮರ್ಥ್ಯದಿಂದಾಗಿ ತಾವು ಬೆಳೆದರು, ಜೊತೆಗೆ ಪಾರ್ಟಿಯನ್ನೂ ಬೆಳೆಸಿದರು. ಆದರೆ ಈಗ ಒಂದು ಕಡೆ ಯಡಿಯೂರಪ್ಪ ನೇಪಥ್ಯಕ್ಕೆ ಸರಿದು ಅನಂತಕುಮಾರ ತೀರಿಕೊಂಡಿರುವಾಗ ಮರಳಿ ಬಿಜೆಪಿ ಕವಲು ದಾರಿಗೆ ಬಂದು ತಲುಪಿದೆ. ಇವತ್ತು ಮರಳಿ ಯಡಿಯೂರಪ್ಪರಂಥ ಒಬ್ಬ ಮಾಸ್‌ ಲೀಡರ್‌ ಮತ್ತು ಅನಂತಕುಮಾರರಂಥ ಮತ್ತೊಬ್ಬ ಚತುರ ಸಂಘಟಕರನ್ನು ಬಿಜೆಪಿ ಹೈಕಮಾಂಡ್‌ ಮತ್ತು ಆರ್‌ಎಸ್‌ಎಸ್‌ ಸೇರಿಕೊಂಡು ತಯಾರು ಮಾಡುವಲ್ಲಿ ಯಶಸ್ವಿ ಆಗ್ತಾವಾ? ಅನ್ನುವುದು ರಾಜ್ಯದಲ್ಲಿ ಭವಿಷ್ಯದ ಕಾಂಗ್ರೆಸ್ಸೇತರ ರಾಜಕಾರಣದ ಭವಿಷ್ಯ ನಿರ್ಧರಿಸಲಿದೆ. ರಾಜಕಾರಣದ ಒಂದು ವಿಶೇಷತೆ ಎಂದರೆ ಪಾರ್ಟಿ ಕಟ್ಟುವಾಗ ನಾಯಕರ ನಡುವೆ ಪ್ರೀತಿ ಸ್ವಲ್ಪ ಕಡಿಮೆ ಇದ್ದರೂ ಪರವಾಗಿಲ್ಲ, ಆದರೆ ವಿಶ್ವಾಸಕ್ಕೆ ಕೊರತೆ ಆಗಬಾರದು. ಆದರೆ ಇವತ್ತಿನಕರ್ನಾಟಕ ಬಿಜೆಪಿಯಲ್ಲಿ ವಿಪರ್ಯಾಸ ನೋಡಿ ಪರಸ್ಪರ ಪ್ರೀತಿಯೂ ಇಲ್ಲ, ವಿಶ್ವಾಸವೂ ಇಲ್ಲ.

ಇಂಡಿಯಾ ಗೇಟ್ ಅಂಕಣಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎರಡೂವರೆ ವರ್ಷದ ನಂತರ ಏನು?

ದಿಲ್ಲಿ ಕಾಂಗ್ರೆಸ್‌ನ ಹೈಕಮಾಂಡ್‌ ಆಸುಪಾಸು ಇರುವ ಯಾವುದೇ ನಾಯಕರನ್ನು ಖಾಸಗಿಯಾಗಿ ಮಾತನಾಡಿಸಿದರೆ ಮೊದಲು ಗೊತ್ತಿಲ್ಲ, ಅವಾಗ ನೋಡೋಣ ಬಿಡಿ ಅನ್ನುತ್ತಿದ್ದವರು ಈಗ ಮೆಲ್ಲನೆ ಕಿವಿಯಲ್ಲಿ ‘ಹೌದು ಎರಡೂವರೆ ವರ್ಷದ ನಂತರ ಡಿ.ಕೆ.ಗೆ ಮುಖ್ಯಮಂತ್ರಿ ಮಾಡುವುದಾಗಿ ಮೇಡಂ ಖುದ್ದು ಹೇಳಿದ್ದಾರಂತೆ’ ಎಂದು ಒಪ್ಪಿಕೊಳ್ಳುತ್ತಾರೆ. ಇನ್ನು ಡಿ.ಕೆ. ಶಿವಕುಮಾರ ಮತ್ತು ಡಿ.ಕೆ. ಸುರೇಶ ಅಕ್ಕಪಕ್ಕ ಇರುವವರಂತೂ ‘ಸಂಶಯವೇ ಬೇಡ 100 ಪರ್ಸೆಂಟ್‌ ಸ್ವತಃ ಸಿದ್ದರಾಮಯ್ಯ ಅವರನ್ನು ಕೂರಿಸಿ ಒಪ್ಪಿಸಿದ ಬಳಿಕವೇ ಎಲ್ಲಾ ನಿರ್ಧಾರ ಆಗಿದ್ದು, ಸಿದ್ದು ಬಿಟ್ಟು ಕೊಡುತ್ತಾರೆ ಬಿಡಿ’ ಎಂದೆಲ್ಲ ಭಯಂಕರ ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. ಆದರೆ ಸಿದ್ದು ಆಪ್ತರಾಗಿರುವ ಹಿರಿಯ ಮಂತ್ರಿಗಳು ಹಿರಿಯ ಶಾಸಕರನ್ನು ಮಾತನಾಡಿಸಿ, ‘ಅಯ್ಯೋ ಹೇಳೋರೇನು ಬೇಕಾದ್ದು ಹೇಳಿಕೊಳ್ಳಬಹುದು. ನಾಳೆದು ಏನು ಅಂತ ಗೊತ್ತಿಲ್ಲ. ಎರಡೂವರೆ ವರ್ಷದ ನಂತರದ್ದು ಯಾರಿಗೆ ಗ್ಯಾರಂಟಿ ಕೊಡೋಕೆ ಆಗುತ್ತದೆ. ಸಿದ್ದು ಒಬ್ಬ ಮಾಸ್‌ ಲೀಡರ್‌, ಬಿಜೆಪಿ ಯಡಿಯೂರಪ್ಪ ಅವರನ್ನು ಇಳಿಸಿ ತಪ್ಪು ಮಾಡಿತು ಕಾಂಗ್ರೆಸ್‌ ಆ ತಪ್ಪು ಮಾಡೋಲ್ಲ ಬಿಡಿ’ ಎಂದೆಲ್ಲ ಹೇಳಿಯೇ ಹೇಳು ತ್ತಾರೆ. ಇವರೆಲ್ಲರ ಮಾತು ಕೇಳಿದರೆ ಈ ಎರಡೂವರೆ ವರ್ಷದ ಭವಿಷ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಎಷ್ಟುಸೀಟು ಗೆಲ್ಲುತ್ತದೆ, ದಿಲ್ಲಿಯಲ್ಲಿ ಮುಂದಿನ ಸರ್ಕಾರ ಬಿಜೆಪಿಯದಾ ಅಥವಾ ಸಮ್ಮಿಶ್ರ ಬರುತ್ತಾ? ಕಾಂಗ್ರೆಸ್‌ನ ರಾಷ್ಟ್ರೀಯ ಸ್ಥಿತಿಗತಿ ಏನು ಅನ್ನುವುದರ ಮೇಲೆ ನಿಂತಿದೆ.

click me!