’ದಲಿತರಾಗಿದ್ದಕ್ಕೆ ಕೋವಿಂದ್’ಗೆ ರಾಷ್ಟ್ರಪತಿ ಪಟ್ಟ’

By Web DeskFirst Published Apr 18, 2019, 8:08 AM IST
Highlights

ಜಾತಿ ಕಾರಣದಿಂದಾಗಿ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಲಾಗಿದೆ ಎಂಬರ್ಥದಲ್ಲಿ ಹೇಳಿಕೆ ನೀಡಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಪೇಚಿಗೆ ಸಿಲುಕಿದ್ದಾರೆ. ಏನಿದು ವಿವಾದ ನೀವೇ ನೋಡಿ...

ಜೈಪುರ[ಏ.18]: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು, ‘ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ದಲಿತ ಎಂಬ ಕಾರಣಕ್ಕೆ ರಾಷ್ಟ್ರಪತಿ ಮಾಡಲಾಗಿದೆ’ ಎಂಬರ್ಥದ ನೀಡಿದ ಹೇಳಿಕೆ ವಿವಾದದ ಅಲೆ ಎಬ್ಬಿಸಿದ್ದು, ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಇದರ ಬೆನ್ನಲ್ಲೇ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂಬ ಹಾರಿಕೆ ಉತ್ತರ ನೀಡಿರುವ ಗೆಹ್ಲೊಟ್‌, ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಯತ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಗೆಹ್ಲೋಟ್‌, ‘2017ರ ಗುಜರಾತ್‌ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ರಾಮನಾಥ ಕೋವಿಂದ್‌ ಅವರನ್ನು ರಾಷ್ಟ್ರಪತಿ ಮಾಡಲಾಯಿತು ಎಂದು ಜನರೇ ಮಾತನಾಡಿಕೊಳ್ಳುತ್ತಾರೆ. ನಾನು ಒಂದು ಲೇಖನ ಓದುತ್ತಿದ್ದೆ. ಅವರಿಗೆ (ಮೋದಿ) ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುವುದಿಲ್ಲ ಎಂಬ ಭೀತಿ ಉಂಟಾಗಿತ್ತು. ಆಗ ಅವರಿಗೆ ಅಮಿತ್‌ ಶಾ ಅವರು ಸಲಹೆ ನೀಡಿರಬಹುದು. ನಂತರ ರಾಮನಾಥ ಕೋವಿಂದ್‌ ಅವರನ್ನು ರಾಷ್ಟ್ರಪತಿ ಮಾಡಲು ತೀರ್ಮಾನಿಸಲಾಯಿತು’ ಎಂದು ಹೇಳಿದರು.

ರಾಜಸ್ಥಾನ ರಾಜಕಾರಣದಲ್ಲಿ ರಾತ್ರೋ ರಾತ್ರಿ ಮಹತ್ವದ ಬೆಳವಣಿಗೆ : ಏನಾಯ್ತು..?

‘ಅಡ್ವಾಣಿ ಅವರು ರಾಷ್ಟ್ರಪತಿ ಆಗಬೇಕಿತ್ತು. ಆದರೆ ಅವರನ್ನು ಹೊರಗಿಡಲಾಯಿತು. ಜನರು ಅಡ್ವಾಣಿ ಅವರು ರಾಷ್ಟ್ರಪತಿ ಆಗಲಿದ್ದಾರೆ ಎಂದು ನಿರೀಕ್ಷಿಸಿದ್ದರು. ಇದು ಬಿಜೆಪಿ ಆಂತರಿಕ ವಿಷಯ. ಆದರೆ ಪತ್ರಿಕೆಯ ಲೇಖನವೊಂದನ್ನು ಓದಿದ್ದಕ್ಕೆ ನಾನು ಚರ್ಚಿಸುತ್ತಿದ್ದೇನೆ’ ಎಂದು ಸಮಜಾಯಿಷಿ ನೀಡಿದರು.

ಬಿಜೆಪಿ ಆಕ್ಷೇಪ:

‘ಸಾಂವಿಧಾನಿಕ ಹುದ್ದೆಯಲ್ಲಿರುವ ಗೆಹ್ಲೋಟ್‌ ಅವರು ಸಂವಿಧಾನದ ‘ಕಸ್ಟೋಡಿಯನ್‌’ (ರಕ್ಷಕ) ಎನ್ನಿಸಿಕೊಂಡಿರುವ ರಾಷ್ಟ್ರಪತಿಗಳ ಬಗ್ಗೆ ಆಡಿದ ಮಾತು ಅಕ್ಷಮ್ಯ. ಇದು ಕಾಂಗ್ರೆಸ್‌ನ ದಲಿತ ವಿರೋಧಿ ಮನೋಭಾವನ್ನು ತೋರಿಸುತ್ತದೆ. ಕೂಡಲೇ ಚುನಾವಣಾ ಆಯೋಗವು ಗೆಹ್ಲೋಟ್‌ರ ಈ ಹೇಳಿಕೆಯನ್ನು ಪರಿಗಣಿಸಿ ಕ್ರಮ ಜರುಗಿಸಬೇಕು’ ಎಂದು ಬಿಜೆಪಿ ವಕ್ತಾರ ಜಿವಿಎಲ್‌ ನರಸಿಂಹರಾವ್‌ ಆಗ್ರಹಿಸಿದ್ದಾರೆ.

ಗೆಹ್ಲೋಟ್‌ ಸ್ಪಷ್ಟನೆ:

ಈ ವಿವಾದದ ಬೆನ್ನಲ್ಲೇ ಟ್ವೀಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಗೆಹ್ಲೋಟ್‌, ‘ನನ್ನ ಹೇಳಿಕೆಗಳನ್ನು ಮಾಧ್ಯಮಗಳು ತಪ್ಪಾಗಿ ವ್ಯಾಖ್ಯಾನಿಸಿವೆ. ರಾಷ್ಟ್ರಪತಿಗಳ ಬಗ್ಗೆ ನಾನು ಅಪಾರ ಗೌರವ ಹೊಂದಿದ್ದೇನೆ. ವೈಯಕ್ತಿಕವಾಗಿ ನಾನು ರಾಮನಾಥ ಕೋವಿಂದ ಅವರ ಬಗ್ಗೆ ಅತೀವ ಆದರ ಇರಿಸಿಕೊಂಡಿದ್ದು, ಅವರನ್ನು ಖುದ್ದು ಭೇಟಿ ಮಾಡಿದ್ದೇನೆ. ಅವರ ಸರಳತೆಗೆ ನಾನು ಮಾರು ಹೋಗಿದ್ದೇನೆ’ ಎಂದು ಡ್ಯಾಮೇಜ್‌ ಕಂಟ್ರೋಲ್‌ಗೆ ಯತ್ನಿಸಿದ್ದಾರೆ.  
 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!