ಖಲಿಸ್ತಾನಿಗಳನ್ನು ಹೆಡೆಮುರಿ ಕಟ್ಟಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪಗಳ ನಡುವೆಯೇ, ಹಲವು ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು ಕೆನಡಾದ ಸರ್ರೆಯಲ್ಲಿ ಅಪರಿಚಿತ ಯುವಕರು ಶೂಟೌಟ್ ಮಾಡಿದ್ದಾರೆ.
ನವದೆಹಲಿ (ಜೂ. 19): ಇತ್ತೀಚೆಗೆ ದೇಶದಲ್ಲಿ ಹಾಗೂ ದೇಶದ ಹೊರಗೆ ಖಲಿಸ್ತಾನಿಗಳ ಉಪಟಳ ಜೋರಾಗಿತ್ತು. ಇದಕ್ಕೆ ಅತಿ ಸೂಕ್ಷ್ಮವಾಗಿಯೇ ಸರ್ಕಾರ ಕ್ರಮ ಕೈಗೊಂಡಿರುವ ಹಾಗೆ ಕಾಣುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಕ್ಕೆ ದೊಡ್ಡ ತಲೆನೋವು ತಂದಿದ್ದ ಅಮೃತ್‌ಪಾಲ್ ಸಿಂಗ್ ಈಗ ಜೈಲಿನಲ್ಲಿದ್ದರೆ, ಕಳೆದ ಮೇ ತಿಂಗಳಿನಲ್ಲಿ ಪಾಕಿಸ್ತಾನದಲ್ಲಿ ಪರಮ್‌ಜಿತ್ ಸಿಂಗ್ ಪಂಜ್ವರ್‌ನನ್ನು ಮನೆಯ ಎದುರೇ ಅಪರಿಚಿತ ಯುವಕರು ಹೊಡೆದು ಹಾಕಿದ್ದರು. ಈಗ ದೇಶದ ಪಾಲಿಗೆ ಬೇಕಾಗಿದ್ದಸ ಖಲಿಸ್ತಾನಿಗಳ ದೊಡ್ಡ ಭಯೋತ್ಪಾದಕ ಹಾಗೂ ಖಲಿಸ್ತಾನಿ ಟೈಗರ್ ಫೋರ್ಸ್ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್, ಕೆನಡಾದ ಸರ್ರೆಯಲ್ಲಿರುವ ಗುರುದ್ವಾರದ ಮುಂದೆ ಬೀದಿ ಹೆಣವಾಗಿದ್ದಾನೆ. ಅಪರಿಚಿತ ಯುವಕರು ಬಂದು ಆತನನ್ನು ಶೂಟ್ ಮಾಡಿ ಹೋಗಿದ್ದಾರೆ. ಇದರ ಬೆನ್ನಲ್ಲಿಯೇ ಖಲಿಸ್ತಾನಿಗಳ ಪ್ರತಿಭಟನೆ ಕೂಡ ಜೋರಾಗಿದೆ. ಗುರು ನಾನಕ್ ಸಿಖ್ ಗುರುದ್ವಾರ ಸಾಹಿಬ್‌ನ ಪಾರ್ಕಿಂಗ್ ಸ್ಥಳದಲ್ಲಿ ಈತನನ್ನು ಶೂಟ್ ಮಾಡಲಾಗಿದೆ. ಈ ಗುರುದ್ವಾರಕ್ಕೆ ಈತ ಮುಖ್ಯಸ್ಥನಾಗಿದ್ದ ಎಂದೂ ಹೇಳಲಾಗಿದೆ. ಭಾನುವಾರ ಅಲ್ಲಿನ ಸ್ಥಳೀಯ ಕಾಲಮಾನ 8.27ರ ವೇಳೆಗೆ ಈತ ಹತ್ಯೆಯಾಗಿದೆ.
ಯಾರೀತ ಹರ್ದೀಪ್ ಸಿಂಗ್ ನಿಜ್ಜರ್: ಹರ್ದೀಪ್ ಸಿಂಗ್ ನಿಜ್ಜರ್ ಭಾರತದ ವಿರುದ್ಧದ ಪ್ರಚಾರ ಮತ್ತು ಅಭಿಯಾನಗಳನ್ನು ಮುನ್ನಡೆಸುತ್ತಿದ್ದ, ಪಂಜಾಬ್‌ನಲ್ಲಿ ಗುರಿಪಡಿಸುವ ಹತ್ಯೆಗಳಿಗೆ ಆದೇಶ ನೀಡುವುದರ ಜೊತೆಗೆ ಅಮೆರಿಕ, ಇಂಗ್ಲೆಂಡ್, ಜರ್ಮನಿ ಮತ್ತು ಕೆನಡಾದಲ್ಲಿ ಭಾರತದ ರಾಯಭಾರ ಕಚೇರಿಯ ಎದುರು ಪ್ರತಿಭಟನೆಗೆ ಬೆಂಬಲವನ್ನೂ ನೀಡುತ್ತಿದ್ದ. ಅದರೊಂದಿಗೆ ದೇಶದಿಂದ ಭಯೋತ್ಪಾದಕರು ಎಂದು ಗುರುತಿಸಲಾಗಿರುವ ಗುರ್ಪತ್ವಂತ್ ಸಿಂಗ್ ಪನ್ನುನ್ ಮತ್ತು ಪರಮ್ಜಿತ್ ಸಿಂಗ್ ಪಮ್ಮಾ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ. 2019ರಲ್ಲಿ ಕೇಂದ್ರ ಗೃಹ ಸಚಿವಾಲಯದಿಂದ ನಿಷೇಧಕ್ಕೆ ಒಳಗಾದ ಸಿಖ್ ಫಾರ್ ಜಸ್ಟೀಸ್ ಗುಂಪಿನ ಪ್ರಧಾನ ನಾಯಕರಲ್ಲೂ ಒಬ್ಬನಾಗಿದ್ದ.
ಕೆನಡಾದಲ್ಲಿರುವ ನಿಜ್ಜರ್‌ನ ನಿವಾಸಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನ್ನ ದಾಖಲೆಗಳಲ್ಲಿ ಪಟ್ಟಿಮಾಡಿದೆ. ಅದರ ಪ್ರಕಾರ, 8193, 143-A ಸ್ಟ್ರೀಟ್, ಸರ್ರೆ BC, ಕೆನಡಾ ಮತ್ತು 1418, 142 ಸ್ಟ್ರೀಟ್, 72 ಅವೆನ್ಯೂ, BC (ಬ್ರಿಟಿಷ್ ಕೊಲಂಬಿಯಾ) ಕೆನಡಾದಲ್ಲಿ ಉಳಿದುಕೊಂಡಿದ್ದಾರೆ ಎಂಧು ತಿಳಿಸಿತ್ತು.
Breaking: ಖಲಿಸ್ತಾನಿ ಭಯೋತ್ಪಾದಕ ಪರಮ್ಜಿತ್ ಸಿಂಗ್ ಪಂಜ್ವಾರ್ ಹತ್ಯೆ!
ಪನ್ನುನ್, ಯುಕೆ ಮೂಲದ ಪರಮ್‌ಜಿತ್ ಸಿಂಗ್ ಪಮ್ಮಾ ಮತ್ತು ಕೆನಡಾ ಮೂಲದ ಹರ್ದೀಪ್ ಸಿಂಗ್ ನಿಜ್ಜರ್ ವಿರುದ್ಧ 2020 ರ ಡಿಸೆಂಬರ್‌ನಲ್ಲಿ ಎನ್‌ಐಎ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಎಸ್‌ಎಫ್‌ಜೆ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಯುಎಸ್‌ಎಯಂತಹ ವಿವಿಧ ವಿದೇಶಗಳಲ್ಲಿನ ತನ್ನ ಕಚೇರಿಗಳೊಂದಿಗೆ 'ಮಾನವ ಹಕ್ಕುಗಳ ವಕೀಲರ ಗುಂಪು' ವೇಷದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದಿತ್ತು. ಪಾಕಿಸ್ತಾನ ಸೇರಿದಂತೆ ವಿದೇಶಿ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನ್ ಭಯೋತ್ಪಾದಕ ಸಂಘಟನೆಗಳ ಅತ್ಯಂತ ಪ್ರಮುಖ ಸಂಘಟನೆಯಾಗಿದೆ.
ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಮೊಳಗಿದ 'ಖಲಿಸ್ತಾನಿ ಜಿಂದಾಬಾದ್' ಘೋಷಣೆ!
ಎರಡೇ ತಿಂಗಳಲ್ಲಿ ಮೂರನೇ ಖಲಿಸ್ತಾನಿಯ ಹತ್ಯೆ: ಈ ಹತ್ಯೆಯ ಹಿಂದೆ ಯಾರಿದ್ದಾರೆ ಎನ್ನುವ ಮಾಹಿತಿ ಇನ್ನೀ ಬಹಿರಂಗವಾಗಿಲ್ಲ. ಆದರೆ, ಎರಡೇ ತಿಂಗಳ ಅಂತರದಲ್ಲಿ ಮೂವರು ಪ್ರಮುಖ ಖಲಿಸ್ತಾನಿಗಳ ಹತ್ಯೆಯಾಗಿದೆ. ಪರಮ್‌ಜಿತ್ ಸಿಂಗ್ ಪಂಜ್ವರ್ ಮೇ 6 ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಬೀದಿ ಹೆಣವಾದರೆ, ಜೂನ್ 16 ರಂದು ಇಂಗ್ಲೆಂಡ್‌ನಲ್ಲಿ ಖಲಿಸ್ತಾನಿ ನಾಯಕ ಅವತಾರ್ ಸಿಂಗ್ ಸಾವು ಕಂಡಿದ್ದ. ಈಗ ಹರ್ದೀಪ್ ನಿಜ್ಜರ್ ದಿನ ಕೂಡ ಮುಗಿದಿದೆ.