ನಾವು ನಮ್ಮ ಕಾನೂನನ್ನೇ ಅನುಸರಿಸುತ್ತೇವೆ, ಆದರೆ ಏಕ​ರೂಪ ಸಂಹಿ​ತೆ ವಿರುದ್ಧ ಬೀದಿಗೆ ಇಳಿಯಲ್ಲ: ಜಮೀಯ​ತ್‌ ಮುಖ್ಯಸ್ಥ

By Kannadaprabha News  |  First Published Jun 19, 2023, 9:30 AM IST

ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಆದರೆ ಅದರ ವಿರುದ್ಧ ನಾವು ಬೀದಿಗಿಳಿಯುವುದಿಲ್ಲ ಎಂದು ಮುಸ್ಲಿ​ಮರ ಪ್ರಮುಖ ಸಂಸ್ಥೆ​ಯಾ​ದ ಜಮೀಯತ್‌ ಮುಖ್ಯಸ್ಥ ಆರ್ಷದ್‌ ಮದನಿ ಹೇಳಿದ್ದಾರೆ.


ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಆದರೆ ಅದರ ವಿರುದ್ಧ ನಾವು ಬೀದಿಗಿಳಿಯುವುದಿಲ್ಲ ಎಂದು ಮುಸ್ಲಿ​ಮರ ಪ್ರಮುಖ ಸಂಸ್ಥೆ​ಯಾ​ದ ಜಮೀಯತ್‌ ಮುಖ್ಯಸ್ಥ ಆರ್ಷದ್‌ ಮದನಿ ಹೇಳಿದ್ದಾರೆ. ಭಾನು​ವಾರ ಈ ಬಗ್ಗೆ ಮಾತನಾಡಿರುವ ಅವರು ‘1,300 ವರ್ಷಗಳಿಂದ ನಾವು ನಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಹೊಂದಿದ್ದೇವೆ. ನಾವು ಅದನ್ನೇ ಅನುಸರಿಸುತ್ತೇವೆ. ಯುಸಿಸಿಯನ್ನು ವಿರೋಧಿಸುತ್ತೇವೆಯಾದರೂ ಅದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲು ನಾವು ಇಷ್ಟಪಡುವುದಿಲ್ಲ. ಪ್ರತಿಭಟನೆ ಹೆಚ್ಚಾದಷ್ಟೂ ಹಿಂದೂ-ಮುಸ್ಲಿಮರು ಪರ​ಸ್ಪರ ದೂರವಾಗುತ್ತಾರೆ. ಇದರಿಂದ ದುರುದ್ದೇಶವುಳ್ಳ ಜನರ ಧ್ಯೇಯ ಈಡೇರುತ್ತದೆ. ಆದ​ರೂ ಈ ಕಾನೂನಿನ ಅಗತ್ಯವಿರಲಿಲ್ಲ ಎಂದಿದ್ದಾರೆ.

ಯುಸಿಸಿ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಆಹ್ವಾನಿಸಿದ ಕಾನೂನು ಆಯೋಗ

Tap to resize

Latest Videos

ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ, ಬಹುಚರ್ಚಿತ ಏಕರೂಪ ನಾಗರಿಕ ಸಂಹಿತೆ ವಿಷಯಕ್ಕೆ ಮತ್ತೆ ಜೀವ ಬಂದಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಅಗತ್ಯದ ಕುರಿತಂತೆ ಹೊಸದಾಗಿ ಪರಿಶೀಲನೆ ನಡೆಸಲು ನಿರ್ಧರಿಸಿರುವ ಕಾನೂನು ಆಯೋಗವು, ಸಾರ್ವಜನಿಕರು ಮತ್ತು ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯ ಆಹ್ವಾನಿಸಿದೆ.

ಶೀಘ್ರದಲ್ಲೇ ಬಹುಪತ್ನಿತ್ವ ನಿಷೇಧ, ಹೊಸ ನಿಯಮ ಜಾರಿಗೆ ಮುಂದಾದ ಸಿಎಂ ಹಿಮಂತ ಬಿಸ್ವಾ!

ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ಕಾನೂನು ಆಯೋಗವು, ಆಸಕ್ತರು ಪ್ರಕಟಣೆ ಹೊರಡಿಸಿದ 30 ದಿನಗಳಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದೆ. ಈ ಹಿಂದೆ 21ನೇ ಕಾನೂನು ಆಯೋಗ ಕೂಡ ಈ ವಿಷಯವನ್ನು ಪರಿಶೀಲನೆ ಮಾಡಿ, ಎರಡು ಬಾರಿ ಸಾರ್ವಜನಿಕರು ಮತ್ತು ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯ ಆಹ್ವಾನಿಸಿತ್ತು. 2018ರಲ್ಲಿ ಆಯೋಗದ ಅವಧಿ ಮುಕ್ತಾಯದ ವೇಳೆ ‘ಕೌಟುಂಬಿಕ ಕಾನೂನಿನಲ್ಲಿ ಸುಧಾರಣೆ’ ಹೆಸರಲ್ಲಿ ಅದು ಸಮಾಲೋಚನಾ ವರದಿ ಪ್ರಕಟಿಸಿತ್ತು.

ಆದರೆ ‘ಸಮಾಲೋಚನಾ ವರದಿ ಪ್ರಕಟಿಸಿ ಈಗಾಗಲೇ 3 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ, ಏಕರೂಪ ನಾಗರಿಕ ಸಂಹಿತೆಯ ಪ್ರಸ್ತುತತೆ, ಅದರ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಮತ್ತು ವಿವಿಧ ನ್ಯಾಯಾಲಯಗಳು ಹೊರಡಿಸಿರುವ ಆದೇಶಗಳನ್ನು ಗಮನಿಸಿ 22ನೇ ಕಾನೂನು ಆಯೋಗವು, ವಿಷಯದ ಕುರಿತು ಹೊಸದಾಗಿ ಸಮಾಲೋಚನೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದೆ. ಹೀಗಾಗಿ ಆಯೋಗವು ಮತ್ತೊಮ್ಮೆ ಸಾರ್ವಜನಿಕರು, ಧಾರ್ಮಿಕ ಸಂಘಟನೆಗಳಿಂದ ವಿಷಯದ ಕುರಿತು ಅಭಿಪ್ರಾಯ ಆಹ್ವಾನಿಸಲು ನಿರ್ಧರಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬದಲಾಗಲಿದೆಯೇ ಪೊಲೀಸ್‌ ಡ್ರೆಸ್‌.? : ಒನ್‌ ನೇಷನ್‌ ಒನ್‌ ಯೂನಿಫಾರ್ಮ್‌ಗೆ ರಾಜ್ಯ ತಾತ್ವಿಕ ಒಪ್ಪಿಗೆ

ಏನಿದು ಏಕರೂಪ ನಾಗರಿಕ ಸಂಹಿತೆ?: ಪ್ರಸ್ತುತ ದೇಶದಲ್ಲಿ ಹಿಂದೂ(Hindu), ಮುಸ್ಲಿಂ (Muslim), ಕ್ರೈಸ್ತ (christian), ಪಾರ್ಸಿ ಮೊದಲಾದ ಧರ್ಮಗಳು ವಿವಾಹ, ವಿಚ್ಛೇದನ, ಉತ್ತರದಾಯಿತ್ವ, ಆಸ್ತಿ ಹಕ್ಕು ಮೊದಲಾದ ವಿಷಯದಲ್ಲಿ ತಮ್ಮದೇ ಆದ ಪ್ರತ್ಯೇಕ ಕಾನೂನುಗಳನ್ನು ಹೊಂದಿವೆ. ಇವು ಮಹಿಳೆಯರಿಗೆ ಹಲವು ವಿಷಯಗಳಲ್ಲಿ ಸಮಾನ ಹಕ್ಕು ಕಲ್ಪಿಸಿಲ್ಲ. ಜೊತೆಗೆ ಧಾರ್ಮಿಕ ಕಾಯ್ದೆಗಳು ದೇಶದ ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಾಗಿವೆ ಎಂಬ ಅಭಿಪ್ರಾಯ ಇದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಜಾತಿ, ಧರ್ಮದವರಿಗೂ ಎಲ್ಲಾ ವಿಷಯದಲ್ಲಿ ಒಂದೇ ರೀತಿಯ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ.

ವಿವಿಧ ರಾಜ್ಯಗಳು ಸಜ್ಜು?: ಪ್ರಸಕ್ತ ಬಿಜೆಪಿ ಆಡಳಿತದ ಉತ್ತರಾಖಂಡ ಸರ್ಕಾರ (UttarKhand Govt) ಏಕರೂಪ ನಾಗರಿಕ ಸಂಹಿತೆ ಜಾರಿಯ ಹಂತದಲ್ಲಿದೆ. ಒಂದು ವೇಳೆ ಅಲ್ಲಿ ಜಾರಿಯಾದರೆ ಅದು ದೇಶದಲ್ಲಿ ಈ ಕಾಯ್ದೆ ಅಂಗೀಕರಿಸಿದ ಮೊದಲ ರಾಜ್ಯವಾಗಲಿದೆ. ಬಿಜೆಪಿ ಆಡಳಿತದ ಇತರೆ ಕೆಲವು ರಾಜ್ಯಗಳಲ್ಲೂ ಇಂಥ ಕಾನೂನು ಜಾರಿಗೆ ಚಿಂತನೆ ಇದೆ.

ಕಾಯ್ದೆ ಪರ ವಾದ ಏನು?
-ಜಾತಿ, ಧರ್ಮ ದೂರವಿಟ್ಟು ದೇಶದ ಪ್ರತಿ ಪ್ರಜೆಯನ್ನು ಒಂದೇ ಕಾನೂನಿನ ಚೌಕಟ್ಟಿಗೆ ತರುತ್ತದೆ.
-ಧರ್ಮದ ಹೆಸರಲ್ಲಿ ನಡೆಸುವ ವೋಟ್‌ ಬ್ಯಾಂಕ್‌ ರಾಜಕೀಯಕ್ಕೆ ಇದರಿಂದ ಮುಕ್ತಿ ಸಿಗುತ್ತದೆ.
-ವೈಯಕ್ತಿಕ ಕಾನೂನುಗಳು ದೇಶದ ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಾಗಿವೆ. ಇದನ್ನು ತಡೆಯುತ್ತದೆ.
-ಎಲ್ಲ ಧರ್ಮದ ಮಹಿಳೆಯರಿಗೆ ಸಮಾನ ಮತ್ತು ಹೆಚ್ಚಿನ ಹಕ್ಕುಗಳನ್ನು ಹೊಸ ಕಾಯ್ದೆ ನೀಡುತ್ತದೆ.
-ಇದು ನಿಜವಾದ ಜಾತ್ಯತೀತ ಮನೋಭಾವನೆ ಪ್ರೋತ್ಸಾಹಿಸುತ್ತದೆ. ಎಲ್ಲಾ ನಾಗರಿಕರನ್ನು ಸಮಾನವಾಗಿ ಕಾಣುತ್ತದೆ.

click me!