ಬಾಹ್ಯಾಕಾಶದಿಂದ ಹಿಮಾಲಯದ ಹಿಮ ಸರೋವರಗಳ ಮೇಲೆ ಕಣ್ಣಿಟ್ಟ ಇಸ್ರೋ!

By Suvarna NewsFirst Published Apr 23, 2024, 9:47 AM IST
Highlights

ಜಗತ್ತಿನಾದ್ಯಂತ ನಡೆದ ವಿವಿಧ ಸಂಶೋಧನೆಗಳ ಪ್ರಕಾರ, 18ನೇ ಶತಮಾನದಲ್ಲಿ ಔದ್ಯಮಿಕ ಕ್ರಾಂತಿ ಆರಂಭಗೊಂಡ ಬಳಿಕ, ಜಗತ್ತಿನೆಲ್ಲೆಡೆ ಹಿಮನದಿಗಳು ಕರಗುವ ಮತ್ತು ತೆಳ್ಳಗಾಗುವ ವೇಗ ಹಿಂದೆಂದೂ ಕಾಣದಷ್ಟು ಅತ್ಯಂತ ಹೆಚ್ಚಾಗಿವೆ ಎಂದು ಸೂಚಿಸಿವೆ. 

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ತಾನು ಹೊಂದಿರುವ ಅಪಾರ ಪ್ರಮಾಣದ ಹಿಮ ನದಿಗಳು (ಗ್ಲೇಸಿಯರ್‌ಗಳು) ಮತ್ತು ಮಂಜಿನ ಕಾರಣದಿಂದ, ಜಗತ್ತಿನ ಮೂರನೇ ಸ್ತಂಭ ಎಂದು ಹೆಸರಾಗಿರುವ ಹಿಮಾಲಯ ಪರ್ವತಗಳು ಜಾಗತಿಕ ಹವಾಮಾನ ಬದಲಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಹವಾಮಾನ ಬದಲಾವಣೆಗಳು ಹಿಮಾಲಯ ಪರ್ವತಗಳ ಭೌತಿಕ ವೈಶಿಷ್ಟ್ಯಗಳ ಮೇಲೆ ಮತ್ತು ಅವುಗಳ ಸುತ್ತಲೂ ವಾಸಿಸುವ ಜನರ ಮೇಲೂ ಪರಿಣಾಮ ಬೀರುತ್ತವೆ. ಜಗತ್ತಿನಾದ್ಯಂತ ನಡೆದ ವಿವಿಧ ಸಂಶೋಧನೆಗಳ ಪ್ರಕಾರ, 18ನೇ ಶತಮಾನದಲ್ಲಿ ಔದ್ಯಮಿಕ ಕ್ರಾಂತಿ ಆರಂಭಗೊಂಡ ಬಳಿಕ, ಜಗತ್ತಿನೆಲ್ಲೆಡೆ ಹಿಮನದಿಗಳು ಕರಗುವ ಮತ್ತು ತೆಳ್ಳಗಾಗುವ ವೇಗ ಹಿಂದೆಂದೂ ಕಾಣದಷ್ಟು ಅತ್ಯಂತ ಹೆಚ್ಚಾಗಿವೆ ಎಂದು ಸೂಚಿಸಿವೆ. 

ಇಂತಹ ಕರಗುವಿಕೆಗಳು ಹಿಮಾಲಯ ಪರ್ವತ ಶ್ರೇಣಿಯಲ್ಲಿ ನೂತನ ಸರೋವರಗಳನ್ನು (ಗ್ಲೇಸಿಯಲ್ ಲೇಕ್ಸ್) ಉಂಟುಮಾಡುತ್ತಿದ್ದು, ಈಗಾಗಲೇ ಇರುವ ಸರೋವರಗಳು ಇನ್ನಷ್ಟು ದೊಡ್ಡವಾಗುವಂತೆ ಮಾಡುತ್ತಿವೆ. ಈ ಸರೋವರಗಳು ಹಿಮಾಲಯದ ನದಿಗಳಿಗೆ ನೀರಿನ ಪೂರೈಕೆ ನಡೆಸುವುದರಿಂದ, ಅತ್ಯಂತ ಅವಶ್ಯಕವಾಗಿವೆ. ಆದರೆ, ಪ್ರಯೋಜನಗಳೊಡನೆ ಇಂತಹ ಸರೋವರಗಳು ವಿವಿಧ ಅಪಾಯಗಳನ್ನೂ ತಂದೊಡ್ಡುತ್ತವೆ. ಗ್ಲೇಸಿಯಲ್ ಲೇಕ್ ಔಟ್‌ಬರ್ಸ್ಟ್ ಫ್ಲಡ್ಸ್ (ಜಿಎಲ್ಒಎಫ್) ಎಂಬ ಪ್ರವಾಹಗಳು ನೀರು ಹರಿಯುವಂತಹ ಕೆಳ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ.

ಮೋದಿ ಬೆಂಬಲ: ದಕ್ಷಿಣ ಚೀನಾ ಸಮುದ್ರದ ಬಿಕ್ಕಟ್ಟಿನ ನಡುವೆಯೂ ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಬಲ!

ಹಿಮನದಿಗಳ ಸರೋವರಗಳಲ್ಲಿ ನೈಸರ್ಗಿಕವಾಗಿಯೇ ನೀರನ್ನು ಹಿಡಿದಿಡುವ ಒಡ್ಡುಗಳಂತೆ ಕಾರ್ಯಾಚರಿಸುವ ಕಲ್ಲುಗಳು ಅಥವಾ ಮಂಜುಗಡ್ಡೆಗಳು ಕುಸಿದು ಹೋದಾಗ ಜಿಎಲ್ಒಎಫ್‌ಗಳು ಸಂಭವಿಸುತ್ತವೆ. ಇದರ ಪರಿಣಾಮವಾಗಿ, ತಗ್ಗು ಪ್ರದೇಶಗಳಲ್ಲಿ ಕ್ಷಿಪ್ರವಾದ ಮತ್ತು ಅತ್ಯಂತ ತೀವ್ರವಾದ ಪ್ರವಾಹ ಸಂಭವಿಸುತ್ತದೆ. ಸಾಮಾನ್ಯವಾಗಿ ಕಲ್ಲುಗಳು ಅಥವಾ ಮಂಜುಗಡ್ಡೆಗಳು ಕುಸಿತ ಕಂಡಾಗ ಅಥವಾ ಭೂ ಕುಸಿತ ಉಂಟಾದಾಗ, ತೀವ್ರ ವಾತಾವರಣ ಪರಿಸ್ಥಿತಿಗಳಿಂದ ಅಥವಾ ಇತರ ಹವಾಮಾನ ಪರಿಸ್ಥಿತಿಗಳಿಂದ ಇಂತಹ ನೈಸರ್ಗಿಕ ಅಣೆಕಟ್ಟುಗಳು ಕುಸಿಯುತ್ತವೆ.

ಹಿಮಾಲಯ ಪರ್ವತ ಶ್ರೇಣಿಯನ್ನು ತಲುಪುವುದು ಅತ್ಯಂತ ಕಷ್ಟಕರವೂ, ಹಿಮಾಲಯದ ಪರ್ವತ ಪ್ರದೇಶ ಅತ್ಯಂತ ಕಠಿಣವೂ ಆಗಿರುವುದರಿಂದ, ಈ ಹಿಮ ಸರೋವರಗಳು ಹೇಗೆ ಉಂಟಾಗುತ್ತವೆ ಮತ್ತು ಹೇಗೆ ವೃದ್ಧಿಸುತ್ತವೆ ಎನ್ನುವುದರ ಸಂಶೋಧನೆ ನಡೆಸುವುದು ಪ್ರಯಾಸದ ವಿಚಾರ. ಆದರೆ ಸ್ಯಾಟಲೈಟ್ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ವಿಶಾಲ ಪ್ರದೇಶದ ವ್ಯಾಪ್ತಿಯನ್ನು ಗಮನಿಸಬಲ್ಲದಾಗಿದ್ದು, ನಿರಂತರವಾಗಿ ಆ ಪ್ರದೇಶಗಳನ್ನು ಗಮನಿಸುವುದರಿಂದ, ಈ ತಂತ್ರಜ್ಞಾನ ಹಿಮ ಸರೋವರಗಳ ಅಧ್ಯಯನಕ್ಕೆ ಪೂರಕವಾಗಿದೆ. ವಿವಿಧ ಕಾಲಮಾನಗಳಲ್ಲಿ ಹಿಮ ಸರೋವರಗಳನ್ನು ಗಮನಿಸುವುದರಿಂದ, ಅವುಗಳು ಎಷ್ಟು ವೇಗವಾಗಿ ಕರಗುತ್ತಿವೆ ಎನ್ನುವುದನ್ನು ತಿಳಿಯಲು, ಸರೋವರಗಳಿಂದ ನೀರು ಹೊರ ಧುಮುಕುವುದರಿಂದ ಉಂಟಾಗುವ ಪ್ರವಾಹದ ಅಪಾಯವನ್ನು ಅಂದಾಜಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.

ಕಳೆದ 30ರಿಂದ 40 ವರ್ಷಗಳ ಉಪಗ್ರಹ ಮಾಹಿತಿಗಳು ಹಿಮನದಿಗಳಿಂದ ಆವೃತವಾದ ಪ್ರದೇಶದಲ್ಲಿನ ಬದಲಾವಣೆಯ ಕುರಿತು ವಿವರಗಳನ್ನು ಒದಗಿಸಿವೆ. ಭಾರತದ ಹಿಮಾಲಯ ಪ್ರದೇಶದ ದೀರ್ಘಾವಧಿಯ, ಅಂದರೆ 1984ರಿಂದ 2023ರ ನಡುವಿನ ಉಪಗ್ರಹ ಚಿತ್ರಗಳು ಹಿಮ ಸರೋವರಗಳಲ್ಲಿನ ಪ್ರಮುಖ ಬದಲಾವಣೆಗಳನ್ನು ತೋರಿಸುತ್ತಿವೆ.

ತನ್ನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯ ಮೂಲಕ ಎಪ್ರಿಲ್ 22ರಂದು ಟ್ವೀಟ್ ಮಾಡಿದ ಇಸ್ರೋ, 2016-17ರ ಅವಧಿಯಲ್ಲಿ ಗುರುತಿಸಿದ, 10 ಹೆಕ್ಟೇರ್‌ಗೂ ಹೆಚ್ಚಿನ (24.71 ಎಕರೆ) ವ್ಯಾಪ್ತಿ ಹೊಂದಿರುವ 2,431 ಸರೋವರಗಳ ಪೈಕಿ, 676 ಸರೋವರಗಳು 1984ರ ಬಳಿಕ ಸಾಕಷ್ಟು ದೊಡ್ಡವಾಗಿವೆ. ಅದರಲ್ಲೂ ಇವುಗಳ ಪೈಕಿ ಭಾರತದ ಒಳಗಿರುವ, 130 ವೃದ್ಧಿಯಾಗುತ್ತಿರುವ ಸರೋವರಗಳು ವಿವಿಧ ನದಿ ಪಾತ್ರಗಳಲ್ಲಿ ಹಂಚಿಕೆಯಾಗಿವೆ. ಇವುಗಳಲ್ಲಿ 65 ಸರೋವರಗಳು ಸಿಂಧೂ ನದಿ ಪಾತ್ರದಲ್ಲಿದ್ದರೆ, 7 ಗಂಗಾ ನದಿ ಪಾತ್ರದಲ್ಲೂ, 58 ಬ್ರಹ್ಮಪುತ್ರಾ ನದಿ ಪಾತ್ರದಲ್ಲಿವೆ.

ಈ ಅಂಕಿ ಅಂಶಗಳನ್ನು ಆಧರಿಸಿರುವ ಒಂದು ವಿಶ್ಲೇಷಣೆಯ ಪ್ರಕಾರ, 314 ಸರೋವರಗಳು 4,000 ದಿಂದ 5,000 ಮೀಟರ್‌ಗಳಷ್ಟು ಎತ್ತರದಲ್ಲಿವೆ. ಇನ್ನೂ 296 ಸರೋವರಗಳು 5,000 ಮೀಟರ್‌ಗೂ ಹೆಚ್ಚಿನ ಎತ್ತರದಲ್ಲಿವೆ.

ಈ ಸರೋವರಗಳ ಪೈಕಿ:
* 601 ಸರೋವರಗಳ (89%) ಗಾತ್ರ ಎರಡು ಪಟ್ಟಿಗಿಂತಲೂ ಹೆಚ್ಚು ದೊಡ್ಡದಾಗಿವೆ.
* 10 ಸರೋವರಗಳು 1.5ರಿಂದ 2 ಪಟ್ಟು ದೊಡ್ಡದಾಗಿವೆ.
* 65 ಸರೋವರಗಳು 1.5 ಪಟ್ಟು ದೊಡ್ಡದಾಗಿವೆ.

ಹಿಮ ಸರೋವರಗಳು ಅವುಗಳು ಉಂಟಾಗುವ ರೀತಿಯ ಆಧಾರದಲ್ಲಿ ನಾಲ್ಕು ವಿಭಾಗಗಳಾಗಿ ವಿಭಜಿಸಲ್ಪಟ್ಟಿವೆ. ಅವೆಂದರೆ: ಮೊರೈನ್ ಡ್ಯಾಮ್ಡ್ ಸರೋವರಗಳು (ಬಂಡೆಗಳು ಮತ್ತು ಅವಶೇಷಗಳ ರಾಶಿಯಿಂದ ಉಂಟಾದ ಅಣೆಕಟ್ಟು), ಐಸ್ ಡ್ಯಾಮ್ಡ್ ಸರೋವರಗಳು (ಮಂಜುಗಡ್ಡಯಿಂದ ಉಂಟಾದ ಅಣೆಕಟ್ಟು), ಎರೋಶನ್ ಸರೋವರಗಳು (ಸವಕಳಿಯಿಂದ ಉಂಟಾಗುವ ಒತ್ತಡದಿಂದಾಗಿ ಉಂಟಾಗುವ ಅಣೆಕಟ್ಟುಗಳು) ಮತ್ತು ಇತರ ರೀತಿಯ ಹಿಮ ಸರೋವರಗಳು. ಬೆಳೆಯುತ್ತಿರುವ 676 ಹಿಮ ಸರೋವರಗಳ ಪೈಕಿ, ಹೆಚ್ಚಿನವು ಮೊರೈನ್ ಡ್ಯಾಮ್ಡ್ (307 ಸರೋವರಗಳು) ಆಗಿವೆ. ಇದರ ಬಳಿಕದ ಸ್ಥಾನಗಳಲ್ಲಿ ಎರೋಶನ್ (265 ಸರೋವರಗಳು), ಇತರ ರೀತಿಯ ಸರೋವರಗಳು (96 ಸರೋವರಗಳು), ಮತ್ತು ಐಸ್ ಡ್ಯಾಮ್ಡ್ ಸರೋವರಗಳು (8) ಇವೆ.

ಹಿಮಾಚಲ ಪ್ರದೇಶದಲ್ಲಿ 4,068 ಮೀಟರ್‌ಗಳಷ್ಟು ಎತ್ತರದಲ್ಲಿ, ಸಿಂಧೂ ನದಿ ಪಾತ್ರದಲ್ಲಿರುವ ಘೆಪಾಂಗ್ ಘಾಟ್ ಹಿಮ ಸರೋವರ ವರ್ಷಗಳು ಉರುಳಿದಂತೆ, ಗಣನೀಯ ಪ್ರಮಾಣದಲ್ಲಿ ವೃದ್ಧಿಸಿದೆ. 1989ರಿಂದ 2022ರ ತನಕ ಅವಲೋಕಿಸಿದರೆ, ಈ ಸರೋವರ 178% ಹೆಚ್ಚಳ ಕಂಡಿದ್ದು, 36.49 ಹೆಕ್ಟೇರ್‌ಗಳಿಂದ (ಅಂದಾಜು 90.13 ಎಕರೆ) 101.30 ಹೆಕ್ಟೇರ್‌ಗಳಿಗೆ (ಅಂದಾಜು 250.37 ಎಕರೆ) ವೃದ್ಧಿಸಿದೆ. ಈ ವೃದ್ಧಿ ಪ್ರತಿವರ್ಷವೂ ಸರಾಸರಿ 1.96 ಹೆಕ್ಟೇರ್ (ಅಂದಾಜು 4.84 ಎಕರೆ) ವಿಸ್ತಾರಕ್ಕೆ ಸಮನಾಗಿದೆ.

ಹಳೆಯದಾಗುತ್ತಿವೆ ಭಾರತದ ಮಿಗ್-21: ಹಾರಾಡುವ ಶವಪೆಟ್ಟಿಗೆಗಳಿಗೆ 2025ರಲ್ಲಿ ನಿವೃತ್ತಿ?

ಕಾಲ ಕಾಲಕ್ಕೆ ಉಪಗ್ರಹಗಳು ಕಲೆಹಾಕುವ ಮಾಹಿತಿಗಳು ಹಿಮ ಸರೋವರಗಳು ಹೇಗೆ ವರ್ತಿಸುತ್ತವೆ ಎಂಬ ಮಾಹಿತಿಗಳನ್ನು ಒದಗಿಸುತ್ತವೆ. ಇಂತಹ ಮಾಹಿತಿಗಳು, ಹವಾಮಾನದ ಪರಿಣಾಮಗಳನ್ನು ತಿಳಿಯಲು ಮತ್ತು ಜಿಎಲ್ಒಎಫ್‌ಗಳ ಅಪಾಯಗಳನ್ನು ಎದುರಿಸುವ ಸಿದ್ಧತೆ ನಡೆಸಲು, ಮತ್ತು ಹಿಮನದಿಗಳಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಗಳಿಗೆ ಹೊಂದಿಕೊಳ್ಳಲು ನೆರವಾಗುತ್ತವೆ.

click me!