ಊಟಿ: ತಮಿಳುನಾಡಿದ ನೀಲಗಿರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಗಿರಿಧಾಮ ಊಟಿಗೆ ಕಾಲಿಟ್ಟಿರುವ ಶಿತಮಾರುತವು ಶನಿವಾರ ಅಲ್ಲಿನ ತಾಪಮಾನವನ್ನು 4.4 ಡಿಗ್ರಿ ಸೆಲ್ಷಿಯಸ್‌ಗೆ ಕುಸಿಯುವಂತೆ ಮಾಡಿದೆ. ಜನರೆಲ್ಲಾ ಚಳಿಯಲ್ಲಿ ನಡುಗುವಂತಾಗಿದೆ.
ಶುಕ್ರವಾರ ಇದು 2 ಡಿಗ್ರಿಗೆ ತಗ್ಗಿತ್ತು ಎಂದು ವರದಿಯಾಗಿದೆ. ಇದರ ನಡುವೆಯೂ ಕರ್ನಾಟಕ, ಕೇರಳದಂತಹ ನೆರೆಯ ರಾಜ್ಯಗಳಿಂದ ಜನ ಊಟಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಸವಿಯುವುದನ್ನು ಮುಂದುವರಿಸಿದ್ದಾರೆ.
ಮುಂಜಾನೆ ವೇಳೆ ಕಂದಾಲ್, ಗ್ಲೆನ್‌ಮೋರ್ಗನ್ ಮತ್ತು ತಲೈಕುಂದಾದಂತಹ ತಗ್ಗು ಪ್ರದೇಶಗಳಲ್ಲಿನ ರಸ್ತೆ, ಹುಲ್ಲುಹಾಸುಗಳೆಲ್ಲಾ ಬಿಳಿಯ ಹಿಮದ ಹೊದಿಕೆಯಲ್ಲಿ ಕಂಗೊಳಿಸುತ್ತಿದ್ದು, ಅದನ್ನು ಕರಗಿಸಲು ಕೆಲ ಕಡೆಗಳಲ್ಲಿ ನೀರನ್ನು ಚಿಮುಕಿಸಲಾಗುತ್ತಿದೆ.
ಅತ್ತ ಚಳಿಯಿಂದ ರಕ್ಷಿಸಿಕೊಳ್ಳಲೆಂದು ಜನ ಉಣ್ಣೆಯ ಟೋಪಿ, ಕೈಗವಸುಗಳಂತಹ ಬೆಚ್ಚಗಿನ ಚಳಿಗಾಲದ ಉಡುಪುಗಳನ್ನು ಖರೀದಿಸಲು ಮುಗಿಬೀಳುತ್ತಿದ್ದು, ಅವುಗಳ ವ್ಯಾಪಾರ ಹೆಚ್ಚಿದೆ.