India Gate: ದಳ-ಬಿಜೆಪಿ ಮೈತ್ರಿ ಮಾತುಕತೆ ಸದ್ಯಕ್ಕೆ ಸ್ಥಗಿತ..!

By Prashant Natu  |  First Published Jul 28, 2023, 10:09 AM IST

ಇನ್ನೇನು ಬಿಜೆಪಿ-ಜೆಡಿಎಸ್‌ ಮೈತ್ರಿ ಆಗಿಯೇಬಿಟ್ಟಿತು ಎಂಬ ವಾತಾವರಣ ನಿರ್ಮಾಣವಾಗಿ, ಕೊನೆಗದು ಇದ್ದಕ್ಕಿದ್ದಂತೆ ಹಿನ್ನೆಲೆಗೆ ಸರಿದಿದೆ. ‘ಬೇಕಾದರೆ ದೇವೇಗೌಡರು ಇದ್ದಾಗಲೇ ಜೆಡಿಎಸ್‌ ಪಕ್ಷ ಬಿಜೆಪಿಯೊಳಗೆ ವಿಲೀನವಾಗಲಿ, ಬರೀ ಮೈತ್ರಿಯಿಂದ ಲಾಭಕ್ಕಿಂತ ನಷ್ಟ ಹೆಚ್ಚು’ ಎಂದು ಯಡಿಯೂರಪ್ಪ, ಬಿ.ಎಲ್‌.ಸಂತೋಷ್‌, ಪ್ರಹ್ಲಾದ ಜೋಶಿ ಮತ್ತು ಬೊಮ್ಮಾಯಿ ದಿಲ್ಲಿ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟ ನಂತರ ಮೈತ್ರಿಯ ಮಾತುಕತೆಗಳು ಸದ್ಯಕ್ಕೆ ನಿಂತಿವೆ. 


ಬೆಂಗಳೂರು(ಜು.28): ಒಂದು ಕಾಲದಲ್ಲಿ ಹರಿಪ್ರಸಾದ್‌ ಕಾಂಗ್ರೆಸ್‌ ಹೈಕಮಾಂಡ್‌ಗೆ ತುಂಬಾ ಬೇಕಾದ ನಾಯಕ. ಆದರೆ ಕರ್ನಾಟಕದ ಕಾಂಗ್ರೆಸ್‌ ಹಿರಿಯಾಳುಗಳ ಜೊತೆ ಅವರ ಸಂಬಂಧ ಹಿಂದಿನಿಂದಲೂ ಅಷ್ಟಕ್ಕಷ್ಟೆ. ಈ ಬಾರಿ ಅವರನ್ನು ಮಂತ್ರಿ ಮಾಡಿ ಎಂದು ಸ್ವತಃ ಸೋನಿಯಾ ಹೇಳಿದ್ದರೂ, ಬೆಂಗಳೂರಿನ ರಾಜಕಾರಣವನ್ನು ನಿಯಂತ್ರಣದಲ್ಲಿಟ್ಟುಕೊಂಡ ನಾಯಕರಿಗೆ ಅದು ಬೇಡವಾಗಿದ್ದ ಕಾರಣಕ್ಕೆ ಹರಿಪ್ರಸಾದ್‌ ಮಂತ್ರಿಯಾಗಲು ಆಗಲಿಲ್ಲ.

ಇನ್ನೇನು ಬಿಜೆಪಿ-ಜೆಡಿಎಸ್‌ ಮೈತ್ರಿ ಆಗಿಯೇಬಿಟ್ಟಿತು ಎಂಬ ವಾತಾವರಣ ನಿರ್ಮಾಣವಾಗಿ, ಕೊನೆಗದು ಇದ್ದಕ್ಕಿದ್ದಂತೆ ಹಿನ್ನೆಲೆಗೆ ಸರಿದಿದೆ. ‘ಬೇಕಾದರೆ ದೇವೇಗೌಡರು ಇದ್ದಾಗಲೇ ಜೆಡಿಎಸ್‌ ಪಕ್ಷ ಬಿಜೆಪಿಯೊಳಗೆ ವಿಲೀನವಾಗಲಿ, ಬರೀ ಮೈತ್ರಿಯಿಂದ ಲಾಭಕ್ಕಿಂತ ನಷ್ಟ ಹೆಚ್ಚು’ ಎಂದು ಯಡಿಯೂರಪ್ಪ, ಬಿ.ಎಲ್‌.ಸಂತೋಷ್‌, ಪ್ರಹ್ಲಾದ ಜೋಶಿ ಮತ್ತು ಬೊಮ್ಮಾಯಿ ದಿಲ್ಲಿ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟ ನಂತರ ಮೈತ್ರಿಯ ಮಾತುಕತೆಗಳು ಸದ್ಯಕ್ಕೆ ನಿಂತಿವೆ. 2004ರಲ್ಲಿ ಬಂಗಾರಪ್ಪ ಬಿಜೆಪಿಗೆ ಬಂದು ಹೋದ ಮೇಲೆ ಹಿಂದುಳಿದ ವೋಟುಗಳು ಬಂದಂತೆ ದೇವೇಗೌಡರು ಇದ್ದಾಗಲೇ ಜೆಡಿಎಸ್‌ ವಿಲೀನ ಆದರೆ ಬಿಜೆಪಿಗೆ 4ರಿಂದ 7 ಪ್ರತಿಶತ ವೋಟು ಜಾಸ್ತಿ ಆಗಿ ಉಳಿದುಕೊಳ್ಳುತ್ತವೆ. ಮೈತ್ರಿ ಆದರೆ ನಮಗಿಂತ ಜಾಸ್ತಿ ಕಾಂಗ್ರೆಸ್‌ಗೆ ಲಾಭ ಆಗಬಹುದು. ಜೊತೆಗೆ ರಾಜ್ಯ ಬಿಜೆಪಿ ನಾಯಕತ್ವವನ್ನು ನಿರ್ಧಾರ ಮಾಡದೆ ಜೆಡಿಎಸ್‌ ಜೊತೆ ಮಾತುಕತೆಗೆ ಕುಳಿತರೆ ದೇವೇಗೌಡರು ಬಿಜೆಪಿಯನ್ನು ಆಪೋಶನ ತೆಗೆದುಕೊಳ್ಳುತ್ತಾರೆ. ಇನ್ನೂ 10 ತಿಂಗಳು ಸಮಯ ಇದೆ, ತರಾತುರಿ ಬೇಡ ಎಂದು ಮನವೊಲಿಸಿದ ನಂತರ ಮೈತ್ರಿ ಮಾತುಕತೆ ನಿಂತಿದೆ. ಆದರೆ ಕುಮಾರಸ್ವಾಮಿ ಮತ್ತು ದೇವೇಗೌಡ ಏನೇ ಆದರೂ ವಿಲೀನಕ್ಕೆ ನಾವು ತಯಾರಿಲ್ಲ ಎಂಬ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ. ಈಗ ನೋಡಿದರೆ ಜಿಲ್ಲಾ ಪಂಚಾಯತ್‌ ಚುನಾವಣೆ ಮುಗಿಯುವವರೆಗೂ ಮೈತ್ರಿ ಮಾತುಕತೆ ನಡೆಯೋದು ಅನುಮಾನ.

Tap to resize

Latest Videos

undefined

India Gate: ರಾಜ್ಯ ಬಿಜೆಪಿಯೊಳಗೆ ನಿಜಕ್ಕೂ ಏನಾಗುತ್ತಿದೆ?, ಪ್ರಶಾಂತ್‌ ನಾತು

ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ನೇಮಕಕ್ಕೆ ಅಮಿತ್‌ ಶಾ ಚರ್ಚೆ

ಕರ್ನಾಟಕದ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಶಬ್ದವೂ ಮಾತನಾಡದೆ ಸುಮ್ಮನಿದ್ದ ಅಮಿತ್‌ ಶಾ 2 ದಿನಗಳ ಹಿಂದೆ ಬಿ.ಎಲ….ಸಂತೋಷ್‌, ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ, ಜಿ.ಎಂ.ಸಿದ್ದೇಶ್ವರ, ರಮೇಶ್‌ ಜಿಗಜಿಣಗಿ ಜೊತೆ ಯಾರನ್ನು ವಿರೋಧ ಪಕ್ಷದ ನಾಯಕ ಮಾಡಿದರೆ ಸೂಕ್ತ, ಯಾರು ಅಧ್ಯಕ್ಷರಾದರೆ ಒಳ್ಳೆಯದು ಎಂದು ಚರ್ಚೆ ನಡೆಸಿದ್ದಾರೆ. ವಿಷಯ ಪರಿಣತಿ ಬೊಮ್ಮಾಯಿಗಿದೆ, ಕಾರ್ಯಕರ್ತರ ಅಭಿಪ್ರಾಯ ಯತ್ನಾಳ್‌ ಪರವಾಗಿದೆ, ಆದರೆ ಯಾರನ್ನು ಮಾಡಿದರೂ ಇನ್ನೊಬ್ಬರು ಬೇಸರಗೊಳ್ಳುತ್ತಾರೆ ಎಂದು ಯಾರೋ ಹೇಳಲು ಹೋದಾಗ ಅಮಿತ್‌ ಶಾ ಮುಂದಿನ ವಾರದಷ್ಟುಹೊತ್ತಿಗೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಕಳುಹಿಸಿದರಂತೆ. ಆಗ ಅಮಿತ್‌ ಶಾ ಜೆಡಿಎಸ್‌ ಸ್ಥಿತಿಗತಿ, ಮೈತ್ರಿ ಸಾಧಕ ಬಾಧಕ ಕುರಿತು ಕೂಡ ಅನೌಪಚಾರಿಕವಾಗಿ ಅಭಿಪ್ರಾಯ ಪಡೆದಿದ್ದಾರೆ. ಅಂದಹಾಗೆ ದಿಲ್ಲಿ ಬಿಜೆಪಿ ಮೂಲಗಳು ಹೇಳುವ ಪ್ರಕಾರ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯ ಅಧ್ಯಕ್ಷರನ್ನು ಒಂದೇ ಸಲ ಮಾಡಬೇಕೋ ಅಥವಾ ಮೊದಲು ವಿರೋಧ ಪಕ್ಷದ ನಾಯಕನನ್ನು ಘೋಷಿಸಬೇಕೋ ಎಂದು ಇನ್ನೂ ತೀರ್ಮಾನ ಆಗಿಲ್ಲವಂತೆ.

ಬಿಜೆಪಿಗೆ ಈಗಲೂ ಪುತ್ತಿಲ ಬಿಸಿತುಪ್ಪ

ತಮ್ಮದೇ ಸಂಘಟನೆಯಿಂದ ಬೆಳೆದ ಅರುಣ ಕುಮಾರ್‌ ಪುತ್ತಿಲರ ಸಿಟ್ಟು ಶಮನ ಮಾಡುವುದು ಹೇಗೆ ಎಂದು ಬಿಜೆಪಿ ಬಿಡಿ, ಸ್ವತಃ ಆರ್‌ಎಸ್‌ಎಸ್‌ಗೂ ಗೊತ್ತಾಗುತ್ತಿಲ್ಲ. 20 ದಿನದ ಹಿಂದೆ ಪುತ್ತಿಲ ದಿಲ್ಲಿಗೆ ಹೋಗಿ ಬಿ.ಎಲ….ಸಂತೋಷ್‌ರನ್ನು ಭೇಟಿ ಆದಾಗ ಪುತ್ತಿಲಗೆ ಪಾರ್ಟಿಯಲ್ಲಿ ಏನಾದರೂ ಜವಾಬ್ದಾರಿ ಕೊಡುವುದು ಎಂದು ತೀರ್ಮಾನ ಆಯಿತು. ಬಿ.ಎಲ…. ಸಂತೋಷ್‌ ಜೊತೆಗಿನ ಮಾತುಕತೆ ನಂತರ ಪುತ್ತಿಲರನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಾಡಲು ಹೊರಟಾಗ ಪುತ್ತಿಲ ಮೊದಲು ಕೊಡೋದಾದರೆ ದಕ್ಷಿಣ ಕನ್ನಡ ಬಿಜೆಪಿಯ ಜಿಲ್ಲಾಧ್ಯಕ್ಷ ಸ್ಥಾನ ಕೊಡಬೇಕು, ಜೊತೆಗೆ ಕಟೀಲ್‌ ಬಿಟ್ಟು ತಮಗೆ ಲೋಕಸಭಾ ಟಿಕೆಟ್‌ ಕೊಡಬೇಕು ಎಂದು ಷರತ್ತು ಹಾಕಿದ್ದಾರಂತೆ. ತಮ್ಮ ಆಪ್ತ ಕಟೀಲ್‌ಗೆ ಟಿಕೆಟ್‌ ತಪ್ಪಿಸುವ ಮನಸ್ಸು ಬಿ.ಎಲ….ಸಂತೋಷ್‌ ಅವರಿಗೆ ಇಲ್ಲ. ಜೊತೆಗೆ ಬಂಡಾಯ ಎದ್ದವರನ್ನು ಅಧಿಕೃತವಾಗಿ ಕರೆದು ಪಾರ್ಟಿಯ ಜಿಲ್ಲಾಧ್ಯಕ್ಷ ಮಾಡಿದರೆ ಕೇಡರ್‌ಗೆ ತಪ್ಪು ಮೆಸೇಜ್‌ ಹೋಗುತ್ತದೆ ಎಂಬ ಆತಂಕ ಸ್ಥಳೀಯ ಮಂಗಳೂರು ಆರ್‌ಎಸ್‌ಎಸ್‌ ನಾಯಕರಿಗೆ ಇದೆ. ಹೀಗಾಗಿ ಪುತ್ತಿಲರಿಂದ ಸಂಘ ಪರಿವಾರದ ಸಮಸ್ಯೆಗಳು ಇನ್ನೂ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.

ಕಾಂಗ್ರೆಸ್‌ನಲ್ಲಿ ಏಕಾಏಕಿ ತಲ್ಲಣವೇಕೆ?

ಸರಳ ಬಹುಮತವಿದ್ದರೂ ಆಡಳಿತ ಪಕ್ಷಕ್ಕೆ ವಿರೋಧ ಪಕ್ಷದ ಹೆದರಿಕೆ ಇದ್ದಾಗ ತೆಗೆದುಕೊಳ್ಳುವ ಯಾವುದೇ ನಿರ್ಣಾಯಗಳನ್ನು ಅಳೆದು ತೂಗಿ ತೆಗೆದುಕೊಳ್ಳಲಾಗುತ್ತದೆ. ಆದರೆ ಯಾವಾಗ ಭಾರೀ ಬಹುಮತ ಬಂದು, ವಿರೋಧ ಪಾರ್ಟಿ ದುರ್ಬಲ ಅನ್ನಿಸಲು ತೊಡಗಿ, ನಿರ್ಣಯಗಳು ಎಕಪಕ್ಷೀಯವಾಗಲು ಆರಂಭವಾಗುತ್ತವೆಯೋ, ಆಗ ಆಂತರಿಕವಾಗಿಯೇ ಸಮಸ್ಯೆಗಳು ಶುರು ಆಗುತ್ತವೆ. ಈಗ ಕರ್ನಾಟಕದ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವುದು ಇದೇ ರೀತಿಯ ಸಮಸ್ಯೆ. 1975ರ ಸಂಜಯ ಗಾಂಧಿ ಕಾಲದಿಂದಲೂ ಕಾಂಗ್ರೆಸ್‌ಗೂ ಗಾಂಧಿ ಕುಟುಂಬಕ್ಕೂ ನಿಷ್ಠರಾಗಿರುವ ಬಿ.ಕೆ.ಹರಿಪ್ರಸಾದ್‌ ತನ್ನನ್ನು ಯಾರಾದರೂ ಮಾತನಾಡಿಸಲು ಬರುತ್ತಾರೆ ಎಂದು ಕಾದು ಕಾದು ಕೊನೆಗೆ ಬೇಸರಗೊಂಡು, ನನಗೆ ಸಿಎಂ ಮಾಡೋದೂ ಗೊತ್ತು ಇಳಿಸೋದೂ ಗೊತ್ತು ಎಂದು ಅಸಮಾಧಾನ ಹೊರಹಾಕಿ, ನಾನು ಬೇಡವಾಗಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿ ಕಾಂಗ್ರೆಸ್‌ನ ಒಳ ವಲಯದಲ್ಲಿ ಒಂದು ತಲ್ಲಣ ಸೃಷ್ಟಿಸಿದ್ದಾರೆ. ಈ ಮುಜುಗರ ಸಾಕಾಗಲಿಲ್ಲವೇನೋ ಎಂಬಂತೆ ಕಾಂಗ್ರೆಸ್‌ನ ಹಿರಿಯ ಶಾಸಕರು ‘ಸಚಿವರಾರ‍ಯರೂ ಕೂಡ ಮಾತು ಕೇಳುತ್ತಿಲ್ಲ’ ಎಂದು ಮುಖ್ಯಮಂತ್ರಿಗೆ ಪತ್ರ ಬರೆದು ತರಾತುರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮಾಡಿದ್ದಾರೆ. ಬೇಗುದಿ, ಅಸಮಾಧಾನ, ಭಿನ್ನಮತ, ಬಂಡಾಯ ಇವೆಲ್ಲ ಸರ್ವ ಕಾಲಕ್ಕೂ ರಾಜಕಾರಣದಲ್ಲಿ ಇರೋದೇ. ಆದರೆ ಭರ್ಜರಿ ಬಹುಮತದ ಜನಾದೇಶ ಸಿಕ್ಕ ಎರಡು ತಿಂಗಳಲ್ಲಿ ಈ ಘಟನೆಗಳು ನಡೆದಿರುವುದು ಕಾಂಗ್ರೆಸ್‌ ಸರ್ಕಾರದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಏನಲ್ಲ.

ಇತಿಹಾಸದಲ್ಲಿ ಏನು ನಡೆದಿತ್ತು? ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದ ಅಮೆರಿಕ ಬದಲಾಗಿದ್ದು ಏಕೆ?

ಹರಿಪ್ರಸಾದ್‌ ಮುನಿಸು ಯಾಕೆ?

ರಾಜಕಾರಣ ಎಷ್ಟು ವಿಚಿತ್ರ ನೋಡಿ, 40 ವರ್ಷಗಳ ಕಾಲ ಗಾಂಧಿ ಕುಟುಂಬದ ಸಂದೇಶ ವಾಹಕನಾಗಿ ದೇಶದ ತುಂಬೆಲ್ಲ ಓಡಾಡಿದ ಬಿ.ಕೆ.ಹರಿಪ್ರಸಾದ್‌ ಈಗ ತಾವೇ ಮುನಿಸಿಕೊಂಡು ಕುಳಿತಿದ್ದಾರೆ. ಅವರ ಬೇಸರಕ್ಕೆ ಕಾರಣ ತಮ್ಮ ಸೀನಿಯಾರಿಟಿ, ಪಾರ್ಟಿ ನಿಷ್ಠೆಯನ್ನು ಕೂಡ ಗಣನೆಗೆ ತೆಗೆದುಕೊಳ್ಳದೆ ಕೆಲ ರಾಜ್ಯ ನಾಯಕರಿಗೆ ಬೇಡ ಅನ್ನೋ ಕಾರಣಕ್ಕೆ ರಣದೀಪ್‌ ಸುರ್ಜೇವಾಲಾ ತಮ್ಮನ್ನು ಮಂತ್ರಿ ಪಟ್ಟಿಯಿಂದ ದೂರ ಇಟ್ಟಿದ್ದು. ಮಂತ್ರಿ ಮಾಡದೇ ಇದ್ದರೆ ಹೋಗಲಿ, ಒಂದೂವರೆ ತಿಂಗಳಾದರೂ ಕೂಡ ಖರ್ಗೆ ಆಗಲಿ, ವೇಣುಗೋಪಾಲ್‌, ಸುರ್ಜೇವಾಲಾ ಸೇರಿದಂತೆ ಯಾರೂ ಕೂಡ ಮಾತನಾಡಿಸುವ ಸೌಜನ್ಯ ಕೂಡ ತೋರಿಸಲಿಲ್ಲ ಎನ್ನುವುದು ಹರಿಪ್ರಸಾದ್‌ ಬೇಸರಕ್ಕೆ ಮುಖ್ಯ ಕಾರಣ. ತಮಗೆ ಶಾಸಕ ಸ್ಥಾನ ಕೂಡ ಬೇಡ, ರಾಜೀನಾಮೆ ಕೊಡುತ್ತೇನೆ ಎಂದು ಹರಿಪ್ರಸಾದ್‌ ದಿಲ್ಲಿ ಆಪ್ತರ ಬಳಿ ಹೇಳಿಕೊಂಡ ನಂತರ ಕೆ.ಸಿ.ವೇಣುಗೋಪಾಲ್‌ ಫೋನ್‌ ಮಾಡಿ ಡಿ.ಕೆ.ಶಿವಕುಮಾರ್‌, ಮುನಿಯಪ್ಪ, ಪರಮೇಶ್ವರ್‌ರನ್ನು ಕಳುಹಿಸಿ ಹರಿಪ್ರಸಾದ್‌ಗೆ ರಾಜೀನಾಮೆ ಕೊಡೋದು ಬೇಡ, ಪಾರ್ಟಿಗೆ ಮುಜುಗರ ಆಗುತ್ತದೆ, ದಿಲ್ಲಿಗೆ ಹೋಗಿ ಭೇಟಿ ಆಗಿ ಎಂದು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಹರಿಪ್ರಸಾದ್‌ ಸುಮ್ಮನೆ ಇರುವ ಮೂಡ್‌ನಲ್ಲಿ ಇಲ್ಲ. ಸೋನಿಯಾ ಗಾಂಧಿ ಅವರು ಸ್ವತಃ ರಾಹುಲ್‌ ಗಾಂಧಿಗೆ ತಮ್ಮನ್ನು ‘ಒಳಕ್ಕೆ ತೆಗೆದುಕೊಳ್ಳಿ’ ಎಂದು ಹೇಳಿದ್ದರು. ರಾಹುಲ್‌ ಕೂಡ ಒಪ್ಪಿದ್ದರು. ಆದರೆ ಸುರ್ಜೇವಾಲಾ ಮೂಲಕ ಕೆಲವರು ತಮ್ಮ ಹೆಸರು ಖರ್ಗೆ ನಿವಾಸಕ್ಕೆ ತಲುಪದಂತೆ ನೋಡಿಕೊಂಡರು. ನಿಮ್ಮದು ಆಗುತ್ತಿಲ್ಲ ಎಂದು ಹೇಳುವ ಸೌಜನ್ಯವನ್ನೂ ತೋರಿಸೋದಿಲ್ಲ ಅಂದರೆ ಹೇಗೆ ಎಂದು ಹರಿಪ್ರಸಾದ್‌ ಬೇಸರ ತೋಡಿಕೊಂಡಿದ್ದಾರೆ. 34 ಮಂತ್ರಿಗಳನ್ನು ತೆಗೆದುಕೊಂಡು ಆಗಿದೆ, ಸಮಾಧಾನದಿಂದ ಇರಿ, ಬೇಕಾದರೆ ಕಾರವಾರದಿಂದ ಲೋಕಸಭೆಗೆ ನಿಲ್ಲಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿ ಬಂದಿದ್ದಾರಾದರೂ ಸ್ವಭಾವತಃ ಸ್ವಲ್ಪ ಅಗ್ರೆಸ್ಸಿವ್‌ ಆಗಿರುವ ಹರಿಪ್ರಸಾದ್‌ ಕೇಳಿಸಿಕೊಳ್ಳುವ ಮೂಡ್‌ನಲ್ಲಿ ಇಲ್ಲ. ಅಂದಹಾಗೆ ಹರಿಪ್ರಸಾದ್‌ರನ್ನು ಕರೆದು ಮಾತನಾಡಿಸಿ ಎಂದು ವೇಣುಗೋಪಾಲ್‌ ಹೇಳಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಹೌದು ಹರಿ ಹೆಸರು ನನ್ನ ಪಟ್ಟಿಯಲ್ಲಿ ಇರಲಿಲ್ಲ. ಆದರೆ ನಾನು ಅವರನ್ನು ಮಂತ್ರಿ ಮಾಡಬೇಡಿ ಅಂದಿಲ್ಲ. ಖರ್ಗೆ, ಡಿ.ಕೆ.ಶಿವಕುಮಾರ್‌ ತಮ್ಮ ಕೋಟಾದಲ್ಲಿ ಮಂತ್ರಿ ಮಾಡಿಸಬಹುದಿತ್ತು, ನಾನೇನು ಬೇಡ ಅನ್ನುತಿದ್ದೆನಾ’ ಎಂದು ಹೇಳಿಬಿಟ್ಟಿದ್ದಾರೆ.

ಒಂದು ಕಾಲದ ಹೈಕಮಾಂಡ್‌ ಮ್ಯಾನ್‌

ಹರಿಪ್ರಸಾದ್‌ ಮೊದಲು ಸುದ್ದಿಗೆ ಬಂದಿದ್ದು ಸಂಜಯ್‌ ಗಾಂಧಿ ಅವರಿಗೆ ನಿಷ್ಠರಾಗಿ ದೇವರಾಜ್‌ ಅರಸರನ್ನು ವಿರೋಧಿಸುತ್ತಾ ಗುಂಡೂರಾವ್‌ರ ನೀಲಿ ಕಣ್ಣಿನ ಹುಡುಗನಾಗಿ. ಆಗ ಬೆಂಗಳೂರಿನ ರಾಜಕಾರಣ ಹರಿಪ್ರಸಾದ್‌ ಹೇಳಿದ ಹಾಗೆ ನಡೆಯುತ್ತಿದ್ದ ಕಾಲ. ನಂತರ ರಾಜೀವ್‌ ಗಾಂಧಿ ಕಾಲದಲ್ಲಿ ಆಸ್ಕರ್‌ ಅಣ್ಣನ ಮೂಲಕ ದಿಲ್ಲಿ ತಲುಪಿದ ಹರಿಪ್ರಸಾದ್‌ ಎಐಸಿಸಿ ಖಜಾಂಚಿ ಆಗಿದ್ದ ಸೀತಾರಾಮ ಕೇಸರಿ ಕಣ್ಣಿಗೆ ಬಿದ್ದರು. ಗೋವಾ ಇರಲಿ, ಗುಜರಾತ್‌ ಇರಲಿ, ಶಿಲ್ಲಾಂಗ್‌ ಇರಲಿ, ದಿಲ್ಲಿಯಿಂದ ಚುನಾವಣೆಗೋಸ್ಕರ ಕಳುಹಿಸಿದ ಹಣ ತಲುಪಿಸಬೇಕಾದರೆ ಹರಿಯನ್ನು ಕರೆಯಿರಿ ಅನ್ನಲಾಗುತ್ತಿತ್ತು. ಆ ವಿಷಯದಲ್ಲಿ ಹರಿಪ್ರಸಾದರ ಕೈ ವ್ಯವಹಾರ ಶುದ್ಧ. ಆದರೆ ಕರ್ನಾಟಕದ ವಿಷಯಕ್ಕೆ ಬಂದರೆ ಹರಿಪ್ರಸಾದ್‌ ಕಾಯಂ ಭಿನ್ನಮತೀಯ ನಾಯಕ. ಅದು ಅರಸರಿರಲಿ, ಬಂಗಾರಪ್ಪ ಇರಲಿ, ಎಸ್‌.ಎಂ.ಕೃಷ್ಣರಿಂದ ಈಗ ಸಿದ್ದರಾಮಯ್ಯವರೆಗೆ ಹರಿಪ್ರಸಾದ್‌ ಸಂಬಂಧ ಯಾರೊಂದಿಗೂ ಚೆನ್ನಾಗಿರಲಿಲ್ಲ. ಅದಕ್ಕೆ ಕಾರಣ ಬೆಂಗಳೂರು ಪೊಲಿಟಿಕ್ಸ್‌. ಕೆ.ಜೆ.ಜಾಜ್‌ರ್‍ ಬಂಗಾರಪ್ಪಗೆ ಕ್ಲೋಸ್‌ ಆಗಿದ್ದರು. ಹೀಗಾಗಿ ಹರಿಪ್ರಸಾದ್‌ ಸ್ವಜಾತಿ ನಾಯಕನಿಗೆ ವಿರುದ್ಧ ಆದರು. ಈಗ ದಿನೇಶ್‌ ಗುಂಡೂರಾವ್‌, ಜಾಜ್‌ರ್‍, ಎಂ.ಆರ್‌.ಸೀತಾರಾಮ್‌, ರಾಮಲಿಂಗಾರೆಡ್ಡಿ ಹೀಗೆ ಎಲ್ಲಾ ಹರಿಪ್ರಸಾದ್‌ ವಿರೋಧಿಗಳು ಸಿದ್ದರಾಮಯ್ಯ ಜೊತೆ ಆಪ್ತರು. ಸಿದ್ದರಾಮಯ್ಯಗೂ ಇವರಾರ‍ಯರನ್ನೂ ಬಿಟ್ಟು ಬೆಂಗಳೂರು ಪೊಲಿಟಿಕ್ಸ್‌ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನ ಕಾಂಗ್ರೆಸ್‌ ಹಿರಿಯರಿಗೆ ಹರಿಪ್ರಸಾದ್‌ ಮಂತ್ರಿ ಆಗೋದು ಬೇಡವಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಅವರು ಈಡಿಗ ಕೋಟಾದಿಂದ ಡಿ.ಕೆ.ಶಿವಕುಮಾರ್‌ ಬಣದ ಮಧು ಬಂಗಾರಪ್ಪ ಅವರನ್ನು ಮಂತ್ರಿ ಮಾಡಲು ಕೂಡಲೇ ಒಪ್ಪಿಕೊಂಡರು. ಅಲ್ಲಿಗೆ ಹರಿಪ್ರಸಾದ್‌ರ ಹೆಸರು ಪಕ್ಕಕ್ಕೆ ಸರಿಯಿತು. ಸಮಸ್ಯೆ ಎಂದರೆ ಅಹ್ಮದ್‌ ಪಟೇಲ್‌ಗೆ ಆತ್ಮೀಯರಾಗಿದ್ದ ಹರಿಪ್ರಸಾದ್‌ ಎಂದರೆ ಸೋನಿಯಾ ಗಾಂಧಿಗೆ ಇಷ್ಟ, ಆದರೆ ರಾಹುಲ್‌ ಗಾಂಧಿಯವರ ಅಕ್ಕಪಕ್ಕ ಇರುವ ಜೈರಾಂ ರಮೇಶ್‌ ಮತ್ತು ಸುರ್ಜೇವಾಲಾಗೆ ಅಷ್ಟಕಷ್ಟೆ. 3 ವರ್ಷದ ಹಿಂದೆ ಹರಿಪ್ರಸಾದ್‌ ದಿಲ್ಲಿಗೆ ಹೋಗಿ ಎಂ.ಆರ್‌.ಸೀತಾರಾಂರನ್ನು ವಿಧಾನ ಪರಿಷತ್‌ ಸದಸ್ಯ ಮಾಡಬೇಡಿ ಎಂದು ಹೇಳಿದ್ದರಂತೆ. ಆಗ ಅಹ್ಮದ್‌ ಪಟೇಲ್‌ ಎದುರು ಸೋನಿಯಾ ಗಾಂಧಿಯವರು ಹರಿಯನ್ನೇ ಮಾಡಿಬಿಡೋಣ ಎಂದಾಗ ಇವರೂ ಒಪ್ಪಿಕೊಂಡರಂತೆ. ರಾಜಕಾರಣ ಇರಲಿ, ಜೀವನವಿರಲಿ, ಕೆಳಗಿನಿಂದ ಮೇಲೆ ಹೋಗುವಾಗ ಎಲ್ಲವೂ ಒಳ್ಳೆಯ ಅನುಭವ, ಆದರೆ ಮೇಲಿನಿಂದ ಕೆಳಗೆ ಬರುವಾಗ ವಿಪರೀತ ಮುಜುಗರ.

click me!