ಹಿಂದೆ ಕರ್ನಾಟಕದ ಬಿಜೆಪಿ ನಾಯಕರಿಗೆ ಗುಜರಾತ್ ಮಾಡೆಲ್ ಅಂದರೆ ಖುಷಿಯಾಗುತ್ತಿತ್ತು. ಆದರೆ ಈಗ ಗುಜರಾತ್ ಮಾಡೆಲ್ ವ್ಯಾಖ್ಯೆ ಬದಲಾಗಿದೆ. ಕೆಲಸ ಮಾಡದವರಿಗೆ ಟಿಕೆಟ್ ನೀಡುವುದಿಲ್ಲ, 70ರ ಹತ್ತಿರ ಇರುವ ನಾಯಕರು ಹೊಸ ಮುಖಕ್ಕೆ ಅವಕಾಶ ಕೊಡಲಿ ಎಂದು ಮೋದಿ ಮತ್ತು ಶಾ ಗುಜರಾತ್‌ನಲ್ಲಿ 38 ಶಾಸಕರಿಗೆ ಟಿಕೆಟ್ ನೀಡದೆ ಮನೆಗೆ ಕಳುಹಿಸಿರುವುದು ಗುಜರಾತ್‌ನ ಹೊಸ ಮಾಡೆಲ್ ಆಗಿದೆ! ಅದು ಕರ್ನಾಟಕದಲ್ಲಿ ತಳಮಳ ಸೃಷ್ಟಿಸಿದೆ.
India Gate Column by Prashant Natu
ದಿಲ್ಲಿಯಲ್ಲಿ ಅಧಿಕಾರ ಹಿಡಿದು 8 ವರ್ಷಗಳ ನಂತರವೂ ಕೂಡ ಮೋದಿ ಜನಪ್ರಿಯತೆ ಎಳ್ಳಷ್ಟೂಕಡಿಮೆ ಆಗಿಲ್ಲ ಅನ್ನುವುದು ಗುಜರಾತ್ ಚುನಾವಣೆಯ ಸ್ಪಷ್ಟಸಂದೇಶ. ಬಣ ಗುದ್ದಾಟಗಳನ್ನು ನಿಭಾಯಿಸುವುದರ ಜೊತೆಗೆ ಮುನಿಸಿಕೊಂಡಿದ್ದ ಪಾಟಿದಾರರನ್ನು ಮನವೊಲಿಸಿ, ಅವರದೇ ಸಮುದಾಯದ ಭೂಪೇಂದ್ರ ಪಟೇಲ್‌ರನ್ನು ಮುಖ್ಯಮಂತ್ರಿ ಮಾಡಿ, ಆಡಳಿತ ವಿರೋಧಿ ಅಲೆ ಇರುವ 42 ಹಾಲಿ ಶಾಸಕರನ್ನು ಬದಲಿಸಿ, 5 ವರ್ಷ ಒಳ್ಳೆಯ ಆಡಳಿತ ನೀಡಿ ಮತದಾರರ ಬಳಿ ಹೋದಾಗ ಮೋದಿ ಫ್ಯಾಕ್ಟರ್ ಕೂಡ ಸೇರಿಕೊಂಡರೆ ಅಭೂತಪೂರ್ವ ಫಲಿತಾಂಶ ನೀಡಬಲ್ಲದು ಎನ್ನಲು ಗುಜರಾತ್ ಉದಾಹರಣೆ. ಅದೇ ವೇಳೆ, ಬಣ ಬಣ ಎಂದು ಗುದ್ದಾಡಿ, ಬಂಡಾಯ ಅಭ್ಯರ್ಥಿ ಹಾಕಿ, 5 ವರ್ಷ ಒಳ್ಳೆ ಆಡಳಿತ ನೀಡದೆ, ಬರೀ ಕೊನೆಯ ಗಳಿಗೆಯಲ್ಲಿ ಮೋದಿ ಮೋದಿ ಎಂದರೆ ಉಪಯೋಗ ಆಗುವುದಿಲ್ಲ ಎನ್ನಲು ಹಿಮಾಚಲ ಫಲಿತಾಂಶ ಉದಾಹರಣೆ.
ಕರ್ನಾಟಕದ ಮತದಾರರ ಎದುರು ಗುಜರಾತ್ ಮಾಡೆಲ್ ಜೊತೆಗೆ ಹಿಮಾಚಲದ ಮಾಡೆಲ್ ಕೂಡ ಇದೆ. ಕನ್ನಡಿಗರು ಯಾವುದನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳುವುದು ಕಷ್ಟ. 1999ರಲ್ಲಿ ಜನತಾದಳ ಒಡೆದು ಹೀನಾಯವಾಗಿ ಚುನಾವಣೆ ಸೋತಾಗ ರಾಜಭವನಕ್ಕೆ ರಾಜೀನಾಮೆ ಕೊಡಲು ಹೋಗಿದ್ದ ಮುಖ್ಯಮಂತ್ರಿ ಜೆ.ಎಚ್.ಪಟೇಲ್‌ರನ್ನು ಒಬ್ಬ ಪತ್ರಕರ್ತ, ‘ಕರ್ನಾಟಕದ ಮತದಾರರು ನಿಮ್ಮ ಮುಖಕ್ಕೆ ಕ್ಯಾಕರಿಸಿ ಉಗಿದಿದ್ದಾರೆ, ಮುಂದೆ ಏನು ಮಾಡ್ತೀರಿ?’ ಎಂದು ಕೇಳಿದ್ದರಂತೆ. ‘ಉಗಿದ ಮೇಲೆ ಏನು ಮಾಡೋಕೆ ಆಗುತ್ತದೆ? ಕನ್ನಡಿ ಎದುರು ಹೋಗಿ ನೀಟಾಗಿ ಮುಖ ತೊಳೆದು ಕ್ರಾಪ್ ಮಾಡಿಕೊಂಡು ಮರಳಿ ಜನರ ಬಳಿಗೆ ಹೋಗುತ್ತೇನೆ’ ಎಂದಿದ್ದರಂತೆ. ಚುನಾವಣೆಯಲ್ಲಿ ಗೆದ್ದವರಿರಲಿ ಸೋತವರಿರಲಿ ಮರಳಿ ಜನರ ಬಳಿಗೆ ಹೋಗಲೇಬೇಕು. ಅದೇ ರಾಜಕಾರಣ.
ಮೋದಿ ಫ್ಯಾಕ್ಟರ್ ಅಂದರೆ ನಿಜಕ್ಕೂ ಏನು?: ಭಾರತದ ಯಾವುದೇ ಕ್ಷೇತ್ರಕ್ಕೆ ಹೋದರೂ ವೋಟು ಹಾಕುವ ಮತದಾರನ ಮಸ್ತಿಷ್ಕದ ಮೇಲೆ ಸ್ಥಳೀಯ ವ್ಯಕ್ತಿ ಜೊತೆಗೆ ಜಾತಿ ಧರ್ಮ ಭಾಷೆ ಪಾರ್ಟಿ ಸಿದ್ಧಾಂತ ರಾಜ್ಯ ನಾಯಕತ್ವ ಅಷ್ಟೇ ಅಲ್ಲದೆ ನಿರಾಯಾಸವಾಗಿ ಸಿಗುವ ದುಡ್ಡು ಕೂಡ ಕೆಲಸ ಮಾಡುತ್ತದೆ. ಹಿಂದೆ ಇಂದಿರಾ ಗಾಂಧಿ ನಂತರ ಅಟಲ್ ಹೆಸರಿನ ಮೇಲೆ ದೇಶದ ತುಂಬೆಲ್ಲ ವೋಟುಗಳು ಬೀಳುತ್ತಿದ್ದವು. ಇಂದು ಆ ಶಕ್ತಿ ಇರುವುದು ನರೇಂದ್ರ ಮೋದಿಗೆ ಮಾತ್ರ. ಯಾವುದೇ ಚುನಾವಣೆಯಲ್ಲಿ ಕೂಡ 6ರಿಂದ 8 ಪ್ರತಿಶತ ವೋಟು ತನ್ನ ಹೆಸರಿನ ಮೇಲೆ ಹಾಕಿಸುವ ಶಕ್ತಿ ಇರುವುದರಿಂದಲೇ ಮೋದಿ ಫ್ಯಾಕ್ಟರ್ ಬಗ್ಗೆ ಇಷ್ಟುಪರ-ವಿರೋಧದ ಚರ್ಚೆ ನಡೆಯುತ್ತಿರುವುದು.
India Gate: ಮೋದಿ, ಶಾ ಬರ್ತಾರೆ, ಎಲ್ಲ ಸರಿ ಮಾಡ್ತಾರೆ!
ಕಳೆದ 8 ವರ್ಷಗಳಲ್ಲಿ ಬಿಜೆಪಿಗೆ ಮೋದಿ ಕಾರಣದಿಂದ ಒಂದು ಕಡೆ ದೊಡ್ಡ ಸಂಖ್ಯೆಯಲ್ಲಿ ಹೊಸ ಮತದಾರರು ಶಿಫ್‌್ಟಆದರೆ, ಬೇರೆ ಬೇರೆ ಕಾರಣಗಳಿಂದ ಬಿಜೆಪಿಯ ಶಾಸಕ, ಸಂಸದ, ಸರ್ಕಾರ, ಪಾರ್ಟಿ ಮೇಲೆ ಮುನಿಸಿಕೊಂಡ ಮತದಾರ ಕೂಡ ವೋಟು ಹಾಕುವಾಗ ಮೋದಿ ಕಾರಣದಿಂದ ಬಿಜೆಪಿ ಬಿಟ್ಟು ಬೇರೆ ಕಡೆ ವೋಟು ಹಾಕಲು ಮನಸ್ಸು ಮಾಡುತ್ತಿಲ್ಲ ಎನ್ನುವುದು ಬಿಜೆಪಿಗೆ ದೊಡ್ಡ ಚುನಾವಣಾ ಲಾಭವನ್ನು ತಂದಿದೆ. ಸ್ಥಳೀಯ ರಾಜ್ಯ ನಾಯಕರು ಒಳ್ಳೆಯ ಆಡಳಿತ ನೀಡಿದ ಗುಜರಾತ್, ಉತ್ತರ ಪ್ರದೇಶ, ಅಸ್ಸಾಂ, ಹರ್ಯಾಣ, ಮಹಾರಾಷ್ಟ್ರದಂಥ ರಾಜ್ಯದಲ್ಲಿ ಮೋದಿ ಫ್ಯಾಕ್ಟರ್ ಕೂಡ ಸೇರಿಕೊಂಡು ಅದ್ಭುತ ಫಲಿತಾಂಶಗಳನ್ನು ಬಿಜೆಪಿಗೆ ತಂದಿದ್ದರೆ, ಬಣ ರಾಜಕಾರಣದ ಅತಿರೇಕಗಳು ಮತ್ತು ಸಮಾಧಾನಕರ ಆಡಳಿತ ನೀಡದ ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ, ಹಿಮಾಚಲಗಳಲ್ಲಿ ಮೋದಿ ಫ್ಯಾಕ್ಟರ್ ಇದ್ದರೂ ಕೂಡ ಜನ ಮುಲಾಜಿಲ್ಲದೇ ಬಿಜೆಪಿಯನ್ನು ಮನೆಗೆ ಕಳುಹಿಸಿದ್ದಾರೆ.
ತುರ್ತು ಪರಿಸ್ಥಿತಿ, ಇಂದಿರಾ ಹತ್ಯೆ, ಅಯೋಧ್ಯೆ ಆಂದೋಲನದಂಥ ಕೆಲ ಸಂದರ್ಭಗಳನ್ನು ಬಿಟ್ಟು ಭಾರತೀಯ ಮತದಾರರೆಲ್ಲರೂ ಯಾವತ್ತೂ ಒಂದೇ ವಿಷಯದ ಮೇಲೆ ಒಂದೇ ತೆರನಾಗಿ ವೋಟು ಮಾಡಿಲ್ಲ. ಹೀಗಾಗಿ ಗುಜರಾತ್ ಮತ್ತು ಹಿಮಾಚಲದ ಚುನಾವಣಾ ಪಾಠ ಏನು ಅಂದರೆ, ಉಳಿದೆಲ್ಲವನ್ನೂ ಸರಿ ಮಾಡಿಕೊಂಡಾಗ ಬಿಜೆಪಿಗೆ ಮೋದಿ ಕಾರಣದಿಂದ ವೋಟಿನ ಜೊತೆಗೆ ಸೀಟು ಬರುತ್ತವೆ. ಆದರೆ ಉಳಿದೆಲ್ಲವನ್ನೂ ಹದಗೆಡಿಸಿಕೊಂಡು ಕೊನೆಯ ಗಳಿಗೆಯಲ್ಲಿ ಬರೀ ಮೋದಿ ಮೋದಿ ಎಂದರೆ ಸೀಟು ಕಡಿಮೆ ಆಗುತ್ತವೆ, ಬರೀ ವೋಟು ಮಾತ್ರ ಉಳಿಯುತ್ತವೆ. ಹಿಮಾಚಲ ಮತ್ತು ದಿಲ್ಲಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಆಗಿದ್ದು ಅದೇ ತಾನೇ?
ಕರ್ನಾಟಕದಲ್ಲಿ ಮೋದಿ ಫ್ಯಾಕ್ಟರ್: ಕರ್ನಾಟಕದಲ್ಲಿ ಮೋದಿ ಮುಖ ನೋಡಿಕೊಂಡು ವೋಟು ಹಾಕುವ ದೊಡ್ಡ ಮತದಾರರ ಸಮೂಹ ಇದೆ ಎನ್ನುವುದನ್ನು 2014, 2018, 2019ರ ಮೂರು ಚುನಾವಣೆಗಳು ಸ್ಪಷ್ಟಪಡಿಸಿವೆ. ಲೋಕಸಭಾ ಚುನಾವಣೆಗಳಲ್ಲಿ ಸಹಜವಾಗಿ ಈ ವೋಟಿನ ಪ್ರಮಾಣ ಜಾಸ್ತಿ ಇದ್ದರೆ, ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಇರುತ್ತದೆ. ಹೀಗಾಗಿ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಶೇ.50ಕ್ಕಿಂತ ಜಾಸ್ತಿ ವೋಟು ಪಡೆದರೆ, ವಿಧಾನಸಭಾ ಚುನಾವಣೆಯಲ್ಲಿ ಮೋದಿ, ಯಡಿಯೂರಪ್ಪ, ಲಿಂಗಾಯತ ಕ್ರೋಢೀಕರಣ, ಕಾಂಗ್ರೆಸ್ ವಿರುದ್ಧದ ಆಡಳಿತ ವಿರೋಧಿ ಅಲೆ ಎಲ್ಲವೂ ಸೇರಿಕೊಂಡು ಕೂಡ ಬಿಜೆಪಿ ಪಡೆದಿದ್ದು 36.35 ಪ್ರತಿಶತ ವೋಟು ಮತ್ತು 104 ಸೀಟು. 2018ಕ್ಕೆ ಹೋಲಿಸಿದರೆ ಈಗ ಯಡಿಯೂರಪ್ಪನವರ ಸಕ್ರಿಯ ನಾಯಕತ್ವ ರಾಜ್ಯ ಬಿಜೆಪಿಗಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯಬೇಕಾದರೆ ಕನಿಷ್ಠ 38.5ರಿಂದ 39 ಪ್ರತಿಶತ ಮತಗಳು ಬೇಕು. ಅಂದರೆ ಕಳೆದ ಬಾರಿಗಿಂತ ಎರಡು ಪ್ರತಿಶತ ಜಾಸ್ತಿ. ಇವತ್ತಿನ ಸ್ಥಿತಿಯಲ್ಲಿ ಇದು ಸಾಧ್ಯವೇ ಅನ್ನುವುದು ಕರ್ನಾಟಕದ ಚುನಾವಣೆಯ ಕುತೂಹಲದ ಪ್ರಶ್ನೆ. ದಿಲ್ಲಿ ನಾಯಕರೊಬ್ಬರು ಹೇಳುವ ಪ್ರಕಾರ, ಕಾಂಗ್ರೆಸ್ಸನ್ನು ಏಕಾಂಗಿಯಾಗಿ ಬರದಂತೆ ತಡೆದರೂ ಕೂಡ 2024ರಲ್ಲಿ ಬಿಜೆಪಿಗೆ ಲಾಭ.
ಕಾಂಗ್ರೆಸ್‌ನ ಸವಾಲುಗಳೇನು?: ಗುಜರಾತ್ ಕಾಂಗ್ರೆಸ್‌ಗೂ ಕರ್ನಾಟಕದ ಕಾಂಗ್ರೆಸ್‌ಗೂ ಹೋಲಿಕೆ ಅರ್ಥವಿಲ್ಲದ ಮಾತು. ಏಕೆಂದರೆ ಇಲ್ಲಿ ಕಾಂಗ್ರೆಸ್ ಬಳಿ 38 ಪ್ರತಿಶತ ಪಕ್ಕಾ ವೋಟ್‌ಬ್ಯಾಂಕ್ ಇದೆ. ತಳಮಟ್ಟದಲ್ಲಿ ಸಂಘಟನೆ ಇದೆ. ಸಿದ್ದು, ಡಿ.ಕೆ.ಶಿವಕುಮಾರ್, ಖರ್ಗೆ, ಪರಮೇಶ್ವರ್‌ರಂಥ ಜಾತಿ ವೋಟು ತರುವ ಅಗ್ರೆಸ್ಸಿವ್ ಸಕ್ರಿಯ ನಾಯಕರಿದ್ದಾರೆ. ಸತತ ಅಧಿಕಾರ ಅನುಭವಿಸಿರುವುದರಿಂದ ಸಂಪನ್ಮೂಲ ಕ್ರೋಢೀಕರಣದ ಶಕ್ತಿಯೂ ಇದೆ. ಆದರೆ ಕಾಂಗ್ರೆಸ್‌ನ, ಅದರಲ್ಲೂ ಸಿದ್ದು ಮತ್ತು ಡಿ.ಕೆ.ಶಿವಕುಮಾರ್ ಅವರ ಸಮಸ್ಯೆ ಎಂದರೆ ಮುಖ್ಯಮಂತ್ರಿ ಆಗಲು ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರಬೇಕು. ಎದುರಿಗೆ ಇರುವ ವಿರೋಧ ಪಕ್ಷಗಳು ಒಡೆಯದೇ ಕಾಂಗ್ರೆಸ್ ಬರೀ ಶೇ.38 ಮತಗಳೊಂದಿಗೆ ಬಹುಮತ ಪಡೆಯುವುದು ಕಷ್ಟ.
ಬಿಜೆಪಿ ಮತಗಳು 2013ರಲ್ಲಿ ಆದಂತೆ ವಿಭಜನೆ ಆಗದೇ ಇದ್ದರೆ ಬಹುಮತ ಪಡೆಯಲು ಕಾಂಗ್ರೆಸ್ ಕನಿಷ್ಠ 42 ಪ್ರತಿಶತ ವೋಟು ಪಡೆಯಬೇಕು. ಅಂದರೆ ಸರ್ಕಾರದ ಮೇಲೆ ಮುನಿಸಿಕೊಂಡು 3ರಿಂದ 4 ಪ್ರತಿಶತ ಮತದಾರರು ಕಾಂಗ್ರೆಸ್‌ಗೆ ಶಿಫ್‌್ಟಆಗಬೇಕು. ಆದರೆ ಹೀಗೆ ಶಿಫ್‌್ಟಆಗುವುದನ್ನು ತಡೆಯುವ ಶಕ್ತಿ ಮೋದಿ ಅವರಿಗಿದೆ! ಸರಳವಾಗಿ ಹೇಳುವುದಾದರೆ, 2018ರಲ್ಲಿ ಪಡೆದಷ್ಟೇ ಮತಗಳನ್ನು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಡೆದುಕೊಂಡರೆ ಮರಳಿ 2023ರಲ್ಲಿ ಅತಂತ್ರ ವಿಧಾನಸಭೆ ಬರುವ ಸಾಧ್ಯತೆ ಹೆಚ್ಚು. ಅಂಕಗಣಿತ ಸ್ಥಳೀಯ ಕಾರಣಗಳಿಂದ ಏನಾದರೂ ಬದಲಾದರೆ ಮಾತ್ರ ಸ್ಪಷ್ಟಫಲಿತಾಂಶವನ್ನು ಕರ್ನಾಟಕದಲ್ಲಿ ನಿರೀಕ್ಷಿಸಬಹುದು. ಆದರೆ ರಾಜಕಾರಣದಲ್ಲಿ 5 ತಿಂಗಳಲ್ಲಿ ಏನು ಬೇಕಾದರೂ ಬದಲಾಗಬಹುದು ಬಿಡಿ.
ಈಗ ಹೊಸ ಗುಜರಾತ್ ಮಾಡೆಲ್!: ಕರ್ನಾಟಕದ ಬಿಜೆಪಿ ನಾಯಕರಿಗೆ ಮೊದಲು ಮೋದಿ, ಗುಜರಾತ್ ಮಾಡೆಲ್ ಅಂದರೆ ಖುಷಿಯಾಗುತ್ತಿತ್ತು. ತಾವು ಕ್ಷೇತ್ರದಲ್ಲಿ ಏನು ಮಾಡಿದ್ದೇವೆ ಎಂದು ಹೇಳುವುದು ಬಿಟ್ಟು ‘ನೋಡಿ, ಮೋದಿ ಹೇಗೆ ಗುಜರಾತ್‌ನಲ್ಲಿ ಅಭಿವೃದ್ಧಿ ಮಾಡಿದ್ದಾರೆ’ ಎಂದು ಹೇಳಿ ವೋಟು ಪಡೆಯುತ್ತಿದ್ದರು. ಆದರೆ ಈಗ ಗುಜರಾತ್ ಮಾಡೆಲ್ ವ್ಯಾಖ್ಯೆ ಬದಲಾಗಿದೆ. ಕೆಲಸ ಮಾಡದವರಿಗೆ ಟಿಕೆಟ್ ನೀಡುವುದಿಲ್ಲ, 70ರ ಹತ್ತಿರ ಇರುವ ನಾಯಕರು ಹೊಸ ಮುಖಕ್ಕೆ ಅವಕಾಶ ಕೊಡಲಿ ಎಂದು ಮೋದಿ ಮತ್ತು ಶಾ ಗುಜರಾತ್‌ನಲ್ಲಿ 38 ಶಾಸಕರಿಗೆ ಟಿಕೆಟ್ ನೀಡದೆ ಮನೆಗೆ ಕಳುಹಿಸಿರುವುದು ಗುಜರಾತ್‌ನ ಹೊಸ ಮಾಡೆಲ್ ಆಗಿದೆ! ಅದು ಇಲ್ಲಿ ತಳಮಳ ಸೃಷ್ಟಿಸಿದೆ.
India Gate: ಸಿದ್ದರಾಮಯ್ಯ ಕೊರಳಿಗೆ ಡಿಕೆಶಿ ಗಂಟೆ..!
ಇಲ್ಲಿಯವರೆಗೆ ಆರ್‌ಎಸ್‌ಎಸ್‌ನ ಹಿರಿಯ ನಾಯಕರೊಬ್ಬರು ಮಾತ್ರ ಕರ್ನಾಟಕದಲ್ಲೂ ಟಿಕೆಟ್ ಬದಲಾವಣೆ ಆಗುತ್ತದೆ ಎಂದು ಹೇಳಿರುವುದು ಬಿಟ್ಟರೆ ಯಡಿಯೂರಪ್ಪ, ಬೊಮ್ಮಾಯಿ, ಕಟೀಲ್, ಪ್ರಹ್ಲಾದ ಜೋಶಿ ಜೊತೆ ದಿಲ್ಲಿ ನಾಯಕರು ಏನೂ ಚರ್ಚೆ ನಡೆಸಿಲ್ಲ. ಒಂದು ಸಮಸ್ಯೆ ಎಂದರೆ ಗುಜರಾತ್‌ನ 182 ಕ್ಷೇತ್ರಗಳಲ್ಲಿ ಇದ್ದಂತೆ ಕರ್ನಾಟಕದಲ್ಲಿ ಬಿಜೆಪಿಗೆ ತುಂಬಾ ಮಜಬೂತ್ ಸಂಘಟನೆ ಇಲ್ಲ. ಕರ್ನಾಟಕದಲ್ಲಿ ಜಾತಿ ಕ್ರೋಢೀಕರಣ ಮತ್ತು ದುಡ್ಡು ಖರ್ಚು ಮಾಡುವ ಸಾಮರ್ಥ್ಯ ಇರುವ ನಾಯಕರ ಸಂಖ್ಯೆ ಜಾಸ್ತಿ. ಬೆಂಗಳೂರು, ಮೈಸೂರು, ಕರಾವಳಿ, ಮಲೆನಾಡು, ಹುಬ್ಬಳ್ಳಿ ಧಾರವಾಡ, ಬಾಗಲಕೋಟೆ, ದಾವಣಗೆರೆ, ವಿಜಯಪುರದ ನಗರ ಭಾಗಗಳಲ್ಲಿ ಸಂಘ ಪರಿವಾರದ ಹಿನ್ನೆಲೆಯಿಂದ ಬಂದ ಕಾರ್ಯಕರ್ತರನ್ನು ಬಿಟ್ಟರೆ ಗ್ರಾಮೀಣ ಭಾಗಗಳಲ್ಲಿ ಹಳೆಯ ಜನತಾ ದಳದಿಂದ ವಲಸೆ ಬಂದಿರುವ ಕಾರ್ಯಕರ್ತರು ಬಿಜೆಪಿಯಲ್ಲಿ ಜಾಸ್ತಿ ಇದ್ದಾರೆ.
ಹೀಗಾಗಿ ಸತತವಾಗಿ ಗೆದ್ದಿರುವವರಿಗೆ ಟಿಕೆಟ್ ನೀಡದೆ ಇರುವ ನಿರ್ಣಯವನ್ನು ಸಂಘಟನೆ ಗಟ್ಟಿಇರುವ, ಅಭ್ಯರ್ಥಿ ಯಾರಾಗಿದ್ದರೂ ಯಾವುದೇ ಪ್ರಭಾವ ಬೀಳದ ಕ್ಷೇತ್ರಗಳಲ್ಲಿ ಮಾಡುವುದು ಸುಲಭವೇ ಹೊರತು, ಬರೀ ಜಾತಿ, ದುಡ್ಡು ಆಧಾರದ ಮೇಲಿನ ಕ್ಷೇತ್ರಗಳಲ್ಲಿ ಪ್ರಯೋಗ ಮಾಡುವುದು ಸುಲಭ ಇಲ್ಲ. ಗುಜರಾತ್‌ನಲ್ಲೇನೋ ಈ ಪ್ರಯೋಗ ಯಶಸ್ವಿ ಆಯಿತು, ಆದರೆ ಹಿಮಾಚಲದಲ್ಲಿ ಇದನ್ನು ಮಾಡಲು ಹೋಗಿ 21 ಬಂಡಾಯ ಅಭ್ಯರ್ಥಿಗಳು ನಿಂತಿದ್ದು ಬಿಜೆಪಿ ಸೋಲಲು ಕಾರಣವಾಯಿತು. ಗುಜರಾತ್ ಇರಲಿ, ಹಿಮಾಚಲ ಇರಲಿ, ಕರ್ನಾಟಕ ಇರಲಿ ಎಲ್ಲವೂ ಪ್ರತ್ಯೇಕ ಯುದ್ಧಭೂಮಿಗಳು. ಒಂದೇ ಅಳತೆಯ ಅಂಗಿ ಹೊಲಿದು ಎಲ್ಲರಿಗೂ ತೊಡಿಸಲು ಆಗುವುದಿಲ್ಲ ನೋಡಿ.