ಎನ್‌ಡಿಎ ಮೈತ್ರಿಕೂಟವು ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದ್ದರೂ, ಸರ್ಕಾರದ ಸ್ಥಿರತೆ ಬಗ್ಗೆ ಹಲವು ಅನುಮಾನಗಳು ಕಾಡುತ್ತಿವೆ. ಆದರೆ ಸಮ್ಮಿಶ್ರ ಪಾಲುದಾರರಲ್ಲಿ ಬಹುಪಾಲು ಸಣ್ಣ ಮತ್ತು ಕಡಿಮೆ ಪ್ರಭಾವಿ ಪಕ್ಷಗಳಾಗಿದ್ದು, ಅಧಿಕಾರ ನಡೆಸಲು ಈ ಪಕ್ಷಗಳು ಬಿಜೆಪಿಯನ್ನೇ ಹೆಚ್ಚು ಅವಲಂಬಿಸಿವೆ ಎಂಬುದು ಸುಳ್ಳಲ್ಲ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
undefined
ಬೆಂಗಳೂರು(ಜೂ.06): ಭಾರತದ ಪ್ರಜಾಪ್ರಭುತ್ವದ ಹಬ್ಬ ಎಂದೇ ಬಣ್ಣಿಸಲಾಗುವ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಳೆದ ಜೂನ್ 4ರಂದು ಪ್ರಕಟಗೊಂಡ ಫಲಿತಾಂಶವು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿಲ್ಲ. ಆದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರ ರಚನೆಗೆ ಅಗತ್ಯವಿರುವ ಬಹುಮತವನ್ನು ಪಡೆದುಕೊಂಡಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರನೇ ಅವಧಿಯನ್ನು ಮಿತ್ರಪಕ್ಷಗಳ ಬೆಂಬಲದಲ್ಲಿ ಮುನ್ನಡೆಸಲಿದ್ದಾರೆ.
ಲೋಕಸಭೆ ಚುನಾವಣೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು. ಏಪ್ರಿಲ್ 19ರಂದು ಪ್ರಾರಂಭವಾದ ಮತದಾನ ಪ್ರಕ್ರಿಯೆ, ಜೂನ್ 1ರಂದು ಮುಕ್ತಾಯ ಕಂಡಿತ್ತು. ಅದೇ ರೀತಿ ಜೂನ್ 4ರಂದು ಫಲಿತಾಂಶ ಪ್ರಕಟವಾಗಿ, ಎನ್‌ಡಿಎ ಸರ್ಕಾರ ರಚನೆಯ ಸ್ಪಷ್ಟ ಹಾದಿಯನ್ನು ತೋರಿತು.
ಐಎನ್‌ಎಸ್ ವಿಕ್ರಾಂತ್ ಹೆಗಲೇರಲಿದೆ ರಫೇಲ್ ಫೈಟರ್: ಭಾರತ-ಫ್ರಾನ್ಸ್ ಒಪ್ಪಂದಕ್ಕೆ ಹೊಸ ಖದರ್..!
ಲೋಕಸಭೆ ಚುನಾವಣೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳ ಮತ್ತು ಭದ್ರತೆಗೆ ಹೆಚ್ಚಿನ ಒತ್ತು ನೀಡಿದ್ದ ಚುನಾವಣಾ ಆಯೋಗ, ಭಾರತದ ರಾಷ್ಟ್ರೀಯ ಚುನಾವಣೆಗಳ ಒಂದು ವಿಶಿಷ್ಟವಾದ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದೆ. ಭಾರತದ ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಒಟ್ಟು 543 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ರಾಜಕೀಯ ಪಕ್ಷವು ಬಹುಮತವನ್ನು ಪಡೆಯಲು ಮತ್ತು ಸರ್ಕಾರವನ್ನು ರಚಿಸಲು ಲೋಕಸಭೆಯಲ್ಲಿ ಕನಿಷ್ಠ 272 ಸ್ಥಾನಗಳನ್ನು ಪಡೆಯಬೇಕು.
2019ರ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಒಟ್ಟು 303 ಸ್ಥಾನಗಳನ್ನು ಗೆಲ್ಲುವ ಮೂಲಕ, ಪೂರ್ಣ ಬಹುಮತದ ಸರ್ಕಾರವನ್ನು ರಚಿಸಿತ್ತು. ಆದಗ್ಯೂ ಪ್ರಧಾನಿ ಮೋದಿ ಅವರು 353 ಸದಸ್ಯ ಬಲದ ಎನ್‌ಡಿಎ ಸರ್ಕಾರವನ್ನು ಮುನ್ನಡೆಸಿದ್ದರು. ಇದಕ್ಕೂ ಮೊದಲು ಅಂದರೆ 2014ರಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆಲ್ಲುವ ಮೂಲಕ ಅಗತ್ಯ ಬಹುಮತವನ್ನು ಹೊಂದಿತ್ತು. ಆದರೆ 2024ರ ಚುನಾವಣೆ ಬಿಜೆಪಿ ಪಾಲಿಗೆ ಆಘಾತ ತಂದಿದ್ದು, 240 ಸ್ಥಾನಗಳನ್ನು ಗೆಲ್ಲುವ ಮೂಲಕ ಜೆಡಿಯು ಮತ್ತು ಟಿಡಿಪಿ ಪಕ್ಷಗಳ ಹಂಗಿನಲ್ಲಿ ಸರ್ಕಾರ ರಚಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಎನ್‌ಡಿಎ ಭಾಗವಾಗಿರುವ ಇತರ ರಾಜಕೀಯ ಪಕ್ಷಗಳೂ ಈ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿಲ್ಲ. ಮೂವತ್ತಕ್ಕೂ ಹೆಚ್ಚು ಮಿತಪಕ್ಷಗಳು ಸೇರಿ ಹೆಚ್ಚುವರಿ 53 ಸ್ಥಾನಗಳನ್ನು ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿವೆ. ಎನ್‌ಡಿಎ ಮೈತ್ರಿಕೂಟವು ಒಟ್ಟು 293 ಸ್ಥಾನಗಳಲ್ಲಿ ಜಯಗಳಿಸಿದ್ದು, ಈ ಪೈಕಿ ಬಿಜೆಪಿಯೊಂದೇ 240 ಸ್ಥಾನಗಳಲ್ಲಿ ಜಯ ದಾಖಲಿಸಿದೆ.
ಎನ್‌ಡಿಎ ಮೈತ್ರಿಕೂಟವು ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದ್ದರೂ, ಸರ್ಕಾರದ ಸ್ಥಿರತೆ ಬಗ್ಗೆ ಹಲವು ಅನುಮಾನಗಳು ಕಾಡುತ್ತಿವೆ. ಆದರೆ ಸಮ್ಮಿಶ್ರ ಪಾಲುದಾರರಲ್ಲಿ ಬಹುಪಾಲು ಸಣ್ಣ ಮತ್ತು ಕಡಿಮೆ ಪ್ರಭಾವಿ ಪಕ್ಷಗಳಾಗಿದ್ದು, ಅಧಿಕಾರ ನಡೆಸಲು ಈ ಪಕ್ಷಗಳು ಬಿಜೆಪಿಯನ್ನೇ ಹೆಚ್ಚು ಅವಲಂಬಿಸಿವೆ ಎಂಬುದು ಸುಳ್ಳಲ್ಲ.
ಎನ್‌ಡಿಎ ಭಾಗವಾಗಿರುವ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (TDP) 16 ಸ್ಥಾನಗಳನ್ನು ಗೆದಿದ್ದು, ಬಿಹಾರದ ಜನತಾ ದಳ (ಯುನೈಟೆಡ್) 12 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಕಾರಣಕ್ಕೆ ನೂತನ ಸರ್ಕಾರದಲ್ಲಿ ಈ ಎರಡೂ ಪಕ್ಷಗಳ ಧ್ವನಿ ಗಟ್ಟಿಯಾಗಿರಲಿದೆ. ಅದೇ ರೀತಿ ಮಹಾರಾಷ್ಟ್ರದ ಏಕನಾಥ್ ಶಿಂಧೆ ಬಣದ ಶಿವಸೇನೆಯು 7 ಸ್ಥಾನಗಳನ್ನು ಪಡೆದುಕೊಂಡಿದೆ. ಈ ಕಾರಣಕ್ಕೆ ಎನ್‌ಡಿಎ ಮೈತ್ರಿಕೂಟದ ಇತರ ರಾಜಕೀಯ ಪಕ್ಷಗಳ ಚೌಕಾಸಿ ಸಾಮರ್ಥ್ಯ ಗಣನೀಯವಾಗಿ ತಗ್ಗಿದ್ದು, ಸರ್ಕಾರದ ಸ್ಥಿರತೆ ಬಗ್ಗೆ ಬಿಜೆಪಿ ಹೆಚ್ಚು ತಲೆಕೆಡದಿಸಿಕೊಳ್ಳಬೇಕಾದ ಪರಿಸ್ಥಿತಿ ಇಲ್ಲ.
ಈ ಎಲ್ಲ ಸಂಗತಿಗಳನ್ನು ಅವಲೋಕಿಸಿದರೆ ಪ್ರಧಾನಿ ಮೋದಿ ಅವರ 3.0 ಸರ್ಕಾರವು ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ. ಆದರೆ ಪಕ್ಷದ ಹಿನ್ನಡೆ ಮತ್ತು ಕುಸಿತ ಕಂಡಿರುವ ತಮ್ಮ ವ್ಯಕ್ತಿತ್ವದ ಪ್ರಭಾವದ ಕುರಿತು ಮೋದಿ ಮತ್ತು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.
ಬಿಜೆಪಿಯ ಚುನಾವಣೆ ಪೂರ್ವ ನಿರೀಕ್ಷೆಗಳನ್ನು ಹುಸಿ ಮಾಡಿರುವ ಈ ಫಲಿತಾಂಶ, ಮೂರನೇ ಅವಧಿಗೆ ಅಧಿಕಾರ ನಡೆಸಲು ಮಿತ್ರಪಕ್ಷಗಳ ಮರ್ಜಿ ಕಾಯುವಂತೆ ಮಾಡಿದೆ. 'ಮೋದಿ ಮೇನಿಯಾ' ಮೇಲಿನ ಅತಿಯಾದ ವಿಶ್ವಾಸ, ಬಿಜೆಪಿಗೆ ಈ ಚುನಾವಣೆಯಲ್ಲಿ ಆಘಾತ ನೀಡಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಚುನಾವಣಾ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಎನ್‌ಡಿಎ ಭಾರೀ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದವು. ಆದರೆ ಫಲಿತಾಂಶವು ವಿರೋಧಿ ಕೂಟ ಇಂಡಿಯನ್ ನ್ಯಾಶನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ (I.N.D.I.A) ದ ಇರುವಿಕೆಯನ್ನು ಸಾಬೀತುಪಡಿಸಿತು.
ಚುನಾವಣೆಯಲ್ಲಿ ನಿರೀಕ್ಷೆ ಮಾಡಿದಷ್ಟು ಪ್ರದರ್ಶನ ತೋರದಿರುವುದ್ದಕ್ಕೆ ಬಿಜೆಪಿ ಪಾಳೆಯದಲ್ಲಿ ಬೇಸರ ಮೂಡಿದೆ. ಅಲ್ಲದೇ ಇದಕ್ಕೆ ಕಾರಣಗಳನ್ನು ಹೆಕ್ಕಿ ತೆಗೆಯುವ ಕೆಲಸ ಈಗಾಗಲೇ ಆರಂಭವಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಪಕ್ಷದ ಹಲವು ನಾಯಕರು ಚುನಾವಣೆ ಸಮಯದಲ್ಲಿ ಮಾಡಿದ್ದಾರೆ ಎನ್ನಲಾದ ಕೋಮು ವಿಭಜಕ ಭಾಷಣಗಳು ಮತ್ತು ತಮ್ಮ ಅಭಿವೃದ್ಧಿ ಲೆಕ್ಕವನ್ನು ಜನರ ಮುಂದಿಡುವಲ್ಲಿ ಸೋತಿರುವುದರ ಕುರಿತು ಬಿಜೆಪಿ ಪಾಳೆಯದಲ್ಲಿ ಆತ್ಮಾವಲೋಕನ ಆರಂಭವಾಗಿದೆ.
ಈಗಾಗಲೇ ಹೇಳಿದಂತೆ ಸರ್ಕಾರ ನಡೆಸಲು ಮಿತ್ರಪಕ್ಷಗಳ ಮೇಲೆ ಹೆಚ್ಚಿನ ಅವಲಂಬನೆ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಅನಿವಾರ್ಯವಾಗಿದೆ. ಇದು ಆಡಳಿತದ ನೀತಿಯ ಮೇಲೂ ಪರಿಣಾಮ ಬೀರಲಿದೆ ಎಂಬುದು ಸ್ಪಷ. ಅಲ್ಲದೇ ಭವಿಷ್ಯದ ಚುನಾವಣೆಗಳಲ್ಲಿ ವಿರೋಧಿ ಮೈತ್ರಿಕೂಟದ ಕಡೆಯಿಂದ ಪ್ರಬಲ ಪೈಪೋಟಿ ಎದುರಾಗಲಿದೆ ಎಂಬ ಸತ್ಯವನ್ನೂ ಬಿಜೆಪಿ ಅರಿತುಕೊಂಡಿದೆ.
ಮುಂದಿನ 14 ತಿಂಗಳುಗಲ್ಲಿ ಮಹಾರಾಷ್ಟ್ರ, ಹರಿಯಾಣ, ದೆಹಲಿ ಮತ್ತು ಬಿಹಾರದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಈ ಕಾರಣಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ನೀತಿ ನಿರೂಪಣೆಯಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಲಿದೆ. ಬಿಜೆಪಿಗೆ ಆಡಳಿತದಲ್ಲಿ ಏಕಾಂಗಿಯಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇಲ್ಲದ ಕಾರಣ, ಮಿತ್ರಪಕ್ಷಗಳ ಬೇಡಿಕೆಗಳಿಗೆ ಮನ್ನಣೆ ನೀಡಲೇಬೇಕಿದೆ.
ಮಹಾರಾಷ್ಟ್ರದಲ್ಲಿ ಈ ಬಾರಿಯ ಲೋಕ ಸಮರದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಕಳಪೆ ಪ್ರದರ್ಶನ ನೀಡಿವೆ. ಅದೇ ರೀತಿ ಬಿಹಾರದಲ್ಲಿ ಬಿಜೆಪಿಗೆ ಹೋಲಿಸಿದರೆ ಮಿತ್ರಪಕ್ಷ ಜೆಡಿಯು ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದೆ. ಆಂಧ್ರದಲ್ಲೂ ಮಿತ್ರಪಕ್ಷ ಟಿಡಿಪಿಯ ಮರ್ಜಿಗೆ ಅನುಗುಣವಾಗಿ ಬಿಜೆಪಿ ತನ್ನ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಬಿಜೆಪಿ ಅತ್ಯಂತ ಪ್ರಬಲ ಎಂದು ಪರಿಗಣಿಸಲ್ಪಡುವ ಉತ್ತರ ಪ್ರದೇಶ ರಾಜ್ಯದಲ್ಲಿ, 'ಮೋದಿ ಅಲೆ' ಕೆಲಸ ಮಾಡಿಲ್ಲ ಎಂಬ ಸಂಗತಿ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ.
ಬದಲಾವಣೆ ಕಾಣಲಿದೆಯೇ ವಿದೇಶಾಂಗ ನೀತಿ?
ಪ್ರಧಾನಿ ಮೋದಿ ಅವರ ಈ ಹಿಂದಿನ ಎರಡು ಅವಧಿಯಲ್ಲಿ, ಸರ್ಕಾರದ ವಿದೇಶಾಂಗ ನೀತಿಯು ಜಾಗತಿಕವಾಗಿ ಚರ್ಚೆಗೆ ಕಾರಣವಾಗಿತ್ತು. ಭಾರತವನ್ನು ವಿಶ್ವ ವೇದಿಕೆಯೆಯಲ್ಲಿ ಅತ್ಯಂತ ಸಮರ್ಥವಾಗಿ ಪ್ರತಿನಿಧಿಸುವ ಮೋದಿ ಅವರ ಚಾಕಚಕ್ಯತೆ ಹಲವು ಧನಾತ್ಮಕ ಫಲಿತಾಂಶವನ್ನು ನೀಡಿತ್ತು. ಆದರೆ ಈ ಬಾರಿ ಮೋದಿ ಅವರು ಸಮ್ಮಿಶ್ರ ಸರ್ಕಾರ ಮುನ್ನಡೆಸಬೇಕಿರುವುದರಿಂದ, ವಿದೇಶಾಂಗ ನೀತಿಯ ವಿಷಯದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಸರ್ಕಾರದ ವಿದೇಶಾಂಗ ನೀತಿಯಲ್ಲಿ ಹೆಚ್ಚಿನ ಬದಲಾವಣೆ ಕಾಣದು ಎಂದೂ ಹಲವು ರಾಜನೀತಿ ತಜ್ಞರು ಅಂದಾಜಿಸಿದ್ದಾರೆ.
ಮೋದಿ ಸರ್ಕಾರದ ವಿದೇಶಾಂಗ ನೀತಿಯು ಜಾಗತಿಕವಾಗಿ ಗಮನ ಸೆಳೆದಿದ್ದರೂ, ಚುನಾವಣೆಯಲ್ಲಿ ಇದು ಚರ್ಚೆಯ ವಿಷಯವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಜಿ-20 ಶೃಂಗಸಭೆಯ ಆಯೋಜನೆ ಮೂಲಕ ನರೇಂದ್ರ ಮೋದಿ ಅವರನ್ನು ಜಾಗತಿಕ ನಾಯಕ ಎಂದು ಬಿಂಬಿಸುವ ಬಿಜೆಪಿ ಪ್ರಯತ್ನ ಅಷ್ಟು ಫಲ ನೀಡಿಲ್ಲ. ಚುನಾವಣೆಯಲ್ಲಿ ಮತದಾರ ಸ್ಥಳೀಯ ಸಂಗತಿಗಳಿಗೆ ಹೆಚ್ಚಿನ ಮಹತ್ವ ನೀಡಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.
ಪ್ರಸ್ತುತ ಜಾಗತಿಕ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ, ಭಾರತವು ತನ್ನ ಅಂತಾರಾಷ್ಟ್ರೀಯ ಸಂಬಂಧದಲ್ಲಿ ಸಮತೋಲನ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕಾಗಿದೆ. ಅದರಲ್ಲೂ ಪ್ರಮುಖವಾಗಿ ತನ್ನ ವಿರುದ್ಧ ಸದಾ ಕತ್ತಿ ಮಸೆಯುವ ನೆರೆಯ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳ ಮೇಲೆ, ಭಾರತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬೇಕಿದೆ.
ಚೀನಾವು ಗಡಿ ವಿಚಾರದಲ್ಲಿ ಭಾರತಕ್ಕೆ ಯಾವುದೇ ರಿಯಾಯಿತಿಗಳನ್ನು ನೀಡಲು ಸಿದ್ಧವಿಲ್ಲ. ಹೀಗಾಗಿ ಭಾರತವು ಕ್ವಾಡ್‌ನಂತಹ ಅಂತಾರಾಷ್ಟ್ರೀಯ ಪಾಲುದಾರಿಕೆಯಲ್ಲಿ ಹೆಚ್ಚಿನ ಜವಾಬ್ದಾರಿ ನಿರ್ವಹಿಸಬೇಕಿದೆ. ಪಾಶ್ಚಿಮಾತ್ಯ ಜಗತ್ತು ಮತ್ತು ಅಮೇರಿಕಾದೊಂದಿಗಿನ ತನ್ನ ಬಲವಾದ ಸಂಬಂಧಗಳನ್ನು ನಿರ್ವಹಿಸುವುದು, ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಲಿದೆ ಎಂಬುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.
ಟರ್ಬ್ಯುಲೆನ್ಸ್ ದುರಂತ: ಸಿಂಗಾಪುರ್ ಏರ್‌ಲೈನ್ಸ್ ಘಟನೆ ಮತ್ತು ವಿಮಾನಯಾನದ ಭವಿಷ್ಯ
ವಿದೇಶಾಂಗ ನೀತಿಯ ವಿಷಯದಲ್ಲಿ ಹಿಂದಿನ ಡಾ. ಮನಮೋಹನ್ ಸಿಂಗ್ ನೇತೃತದ ಯುಪಿಎ ಸರ್ಕಾರ ಅನೇಕ ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಿ ಬಂದಿತ್ತು. ಅದರಲ್ಲೂ ಕಮ್ಯುನಿಸ್ಟ್ ಪಕ್ಷಗಳ ಒತ್ತಡದಿಂದಾಗಿ ಅಮೇರಿಕಾದೊಂದಿಗಿನ ದ್ವಿಪಕ್ಷೀಯ ಸಂಬಂಧ ಸುಧಾರಿಸುವಲ್ಲಿ ಡಾ. ಸಿಂಗ್ ಸರ್ಕಾರ ಸೋತಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಪ್ರಸ್ತುತ ಮೋದಿ ಸರ್ಕಾರವು ಈ ಪ್ರಮುಖ ವಿಷಯಗಳಲ್ಲಿ ಹೆಚ್ಚಿನ ಆಂತರಿಕ ಭಿನ್ನಾಭಿಪ್ರಾಯವನ್ನು ಎದುರಿಸುವುದಿಲ್ಲ. ಹೀಗಾಗಿ ಭಾರತ ಮತ್ತು ಅಮೇರಿಕಾ ನಡುವಣ ಪರಮಾಣು ಒಪ್ಪಂದ ಅಬಾಧಿತವಾಗಿ ಮುಂದುವರೆಲಿದೆ.
ಮೋದಿ ಸರ್ಕಾರವು ತನ್ನ ವಿದೇಶಾಂಗ ನೀತಿಯ ಕ್ರಮಗಳಲ್ಲಿ ಹೆಚ್ಚಿನ ಜಾಗರೂಕತೆ ಮತ್ತು ಸಂಯಮವನ್ನು ಪ್ರದರ್ಶಿಸಲಿದೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಸರ್ಕಾರವು ವ್ಯಾಪಕವಾದ ಬಾಹ್ಯ ಕಾರ್ಯಸೂಚಿಗೆ ಆದ್ಯತೆ ನೀಡದಿರುವ ಸಾಧ್ಯತೆಯೂ ಇದೆ. ಅಂದರೆ ಮೋದಿ ಸರ್ಕಾರದ ವಿದೇಶಾಂಗ ನೀತಿಯು, ಭವಿಷ್ಯದ ಚುನಾವಣೆಗಳಲ್ಲಿ ಅದು ನೀಡಬಹುದಾದ ಪ್ರಯೋಜನೆಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳಬಹದು.