ಯುಕೋ ಬ್ಯಾಂಕ್‌ನಲ್ಲಿ 820 ಕೋಟಿ ಪೇಮೆಂಟ್‌ ಸ್ಕ್ಯಾಮ್‌, 7 ನಗರಗಳಲ್ಲಿ ಸಿಬಿಐ ದಾಳಿ!

By Santosh Naik  |  First Published Mar 7, 2024, 5:26 PM IST

ಸಿಬಿಐ ಪ್ರಕಾರ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಏಳು ನಗರಗಳಲ್ಲಿ ದಾಳಿ ನಡೆಸಿದೆ. ಹಣ ಸ್ವೀಕರಿಸಿದ ವ್ಯಕ್ತಿಗಳು ಯುಕೋ ಬ್ಯಾಂಕ್‌ಗೆ ಹಣವನ್ನು ಹಿಂದಿರುಗಿಸಿಲ್ಲ ಈ ವಿಚಾರವಾಗಿ ದಾಳಿ ನಡೆದಿದೆ.
 


ನವದೆಹಲಿ (ಮಾ.7): ಯುನೈಟೆಡ್‌ ಕಮರ್ಷಿಯಲ್‌ ಬ್ಯಾಂಕ್‌ ಅಥವಾ ಯುಕೋ ಬ್ಯಾಂಕ್‌ನಲ್ಲಿ 820 ಕೋಟಿ ರೂಪಾಯಿಯ ಐಎಂಪಿಎಸ್‌ ವಹಿವಾಟಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ರಾಜಸ್ಥಾನ ಮತ್ತು ಮಹಾರಾಷ್ಟ್ರದ ಏಳು ನಗರಗಳಲ್ಲಿ 67 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಕಳೆದ ವರ್ಷ, ನವೆಂಬರ್ 10-13 ರ ನಡುವೆ 8,53,049 ಐಎಂಪಿಎಸ್‌ (ತಕ್ಷಣದ ಪಾವತಿ ವ್ಯವಸ್ಥೆ) ವಹಿವಾಟುಗಳು ನಡೆದಿವೆ, ಇದರಲ್ಲಿ 41,000 ಕ್ಕೂ ಹೆಚ್ಚು ಯುಕೋ ಬ್ಯಾಂಕ್ ಖಾತೆದಾರರ ಖಾತೆಗಳಿಗೆ 820 ಕೋಟಿ ರೂಪಾಯಿಗಳನ್ನು ತಪ್ಪಾಗಿ ಹಣ ವರ್ಗಾವಣೆ ಮಾಡಲಾಗಿತ್ತು. "ಏಳು ಖಾಸಗಿ ಬ್ಯಾಂಕ್‌ಗಳ ಸುಮಾರು 14,600 ಖಾತೆದಾರರಿಂದ ಪ್ರಾರಂಭವಾದ ಐಎಂಪಿಎಸ್‌ ಇನ್‌ವಾರ್ಡ್‌ ವಹಿವಾಟುಗಳನ್ನು 41,000 ಕ್ಕೂ ಹೆಚ್ಚು UCO ಬ್ಯಾಂಕ್ ಖಾತೆದಾರರ ಖಾತೆಗಳಲ್ಲಿ ತಪ್ಪಾಗಿ ಹಾಕಲಾಗಿತ್ತು. ಇದರ ಪರಿಣಾಮವಾಗಿ ಮೂಲ ಬ್ಯಾಂಕ್‌ಗಳಿಂದ ನಿಜವಾಗಿ ಹಣ ಡೆಬಿಟ್ ಮಾಡದೇ  UCO ಬ್ಯಾಂಕ್ ಖಾತೆಗಳಿಗೆ 820 ಕೋಟಿ ರೂಪಾಯಿ ಪಾವತಿ ಮಾಡಲಾಗಿತ್ತು' ಎಂದು ದಾಳಿಗೆ ಸಂಬಂಧಿಸಿದಂತೆ ಸಿಬಿಐ ವಕ್ತಾರರು ತಿಳಿಸಿದ್ದಾರೆ.

ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ಶೋಧ ಕಾರ್ಯವನ್ನು ನಡೆಸಲಾಗಿದೆ. ಈ ಹಣವನ್ನು ಸ್ವೀಕರಿಸಿದ ವ್ಯಕ್ತಿಗಳ ಮನೆಯ ಮೇಲೆ ದಾಳಿ ಮಾಡಲಾಗಿದೆ. ತಮ್ಮ ಖಾತೆಗೆ ಈ ಹಣ ಬಂದ ನಂತರ ಇವರುಗಳು ಇದನ್ನು ವಿತ್‌ಡ್ರಾ ಮಾಡಿದ್ದು, ಬ್ಯಾಂಕ್‌ಗೆ ವಾಪಸ್‌ ಮಾಡಿಲ್ಲ ಎಂದು ಸಿಬಿಐ ವಕ್ತಾರ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ನಡೆಸಿದ 2ನೇ ಸುತ್ತಿನ ದಾಳಿ ಇದಾಗಿದೆ. ಡಿಸೆಂಬರ್ 2023 ರಲ್ಲಿ, ಕೋಲ್ಕತ್ತಾ ಮತ್ತು ಮಂಗಳೂರಿನಲ್ಲಿ ಖಾಸಗಿ ವ್ಯಕ್ತಿಗಳು ಮತ್ತು UCO ಬ್ಯಾಂಕ್ ಅಧಿಕಾರಿಗಳನ್ನು ಒಳಗೊಂಡ 13 ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿತ್ತು.

"ದಾಳಿಯ ಸಮಯದಲ್ಲಿ ಯುಕೋ ಬ್ಯಾಂಕ್ ಮತ್ತು ಐಡಿಎಫ್‌ಸಿಗೆ ಸಂಬಂಧಿಸಿದ ಸುಮಾರು 130 ದೋಷಾರೋಪಣೆ ದಾಖಲೆಗಳು, ಹಾಗೆಯೇ 43 ಡಿಜಿಟಲ್ ಸಾಧನಗಳನ್ನು (40 ಮೊಬೈಲ್ ಫೋನ್‌ಗಳು, 2 ಹಾರ್ಡ್ ಡಿಸ್ಕ್ ಮತ್ತು 1 ಇಂಟರ್ನೆಟ್ ಡಾಂಗಲ್ ಸೇರಿದಂತೆ) ವಿಧಿವಿಜ್ಞಾನ ವಿಶ್ಲೇಷಣೆಗಾಗಿ ವಶಪಡಿಸಿಕೊಳ್ಳಲಾಗಿದೆ" ಎಂದು ವಕ್ತಾರರು ತಿಳಿಸಿದ್ದಾರೆ. ಅದೊಂದಿಗೆ, 30 ಶಂಕಿತರನ್ನು ಸಹ ಸ್ಥಳದಲ್ಲೇ ಪತ್ತೆಹಚ್ಚಲಾಗಿದೆ ಮತ್ತು ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Tap to resize

Latest Videos

Fraud case: ನಾಲ್ಕು ಜಿಲ್ಲೆಯ ರೈತರಿಗೆ ವಂಚಿಸಿದ ಬ್ಯಾಂಕ್‌ ಮ್ಯಾನೇಜರ್‌ ಸೇರಿ 3 ಮಂದಿ ಸೆರೆ

ಏನಿದು ಪ್ರಕರಣ: ಯುಕೋ ಬ್ಯಾಂಕ್‌ನ ದೂರಿನ ಮೇರೆಗೆ ನವೆಂಬರ್ 2023 ರ ಅಂತ್ಯದಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು.  ನವೆಂಬರ್ 10 ಮತ್ತು 13 ರ ನಡುವೆ, ಏಳು ಖಾಸಗಿ ಬ್ಯಾಂಕ್‌ಗಳ ಸುಮಾರು 14,600 ಖಾತೆದಾರರಿಂದ ಐಎಂಪಿಎಸ್‌ ಇನ್‌ವಾರ್ಡ್‌ ವಹಿವಾಟುಗಳನ್ನು 41,000 ಕ್ಕೂ ಹೆಚ್ಚು ಯುಕೋ  ಬ್ಯಾಂಕ್ ಖಾತೆದಾರರ ಖಾತೆಗಳಲ್ಲಿ ಹಾಕಲಾಗಿತ್ತು. ಪರಿಣಾಮವಾಗಿ, 820 ಕೋಟಿ ರೂ.ಗಳನ್ನು ಯುಕೋ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿತ್ತು. ಆದರೆ, ಮೂಲ ಬ್ಯಾಂಕ್‌ಗಳಿಂದ ಹಣವನ್ನು ವಾಸ್ತವವಾಗಿ ಡೆಬಿಟ್ ಮಾಡಲಾಗಿರಲಿಲ್ಲ.
ಯುಕೋ ಬ್ಯಾಂಕ್‌ ಪೇಮೆಂಟ್‌ ಸ್ಕ್ಯಾಮ್‌ನಲ್ಲಿ ಸಿಬಿಐ ದಾಳಿಯ ಬೆನ್ನಲ್ಲಿಯೇ ಷೇರು ಮಾರುಕಟ್ಟೆಯಲ್ಲಿ ಗುರುವಾರ ಯುಕೋ ಬ್ಯಾಂಕ್‌ನ ಷೇರುಗಳು ಶೇ. 4ರಷ್ಟು ಕುಸಿತ ಕಂಡಿದ್ದು, 57.10 ರೂಪಾಯಿಯ ಹಾಗೆ ತನ್ನ ವಹಿವಾಟನ್ನು ಮುಗಿಸಿದೆ.

ಸೈಬರ್ ವಂಚನೆ ತಡೆಗೆ ಕಠಿಣ ಕ್ರಮ; 4 ಲಕ್ಷಕ್ಕೂ ಅಧಿಕ ಪ್ರಕರಣಗಳಲ್ಲಿ1000 ಕೋಟಿ ರೂ.ವಾಪಸ್

click me!