ಶ್ರೀರಾಮ ಮಂದಿರ ಎಂದ ಕೂಡಲೇ ನೆನಪಾಗೋದು ಇಷ್ಟು ವರ್ಷಗಳ ನಡುವಿನ ಹೋರಾಟ. ಆದರೆ, ರಾಮಮಂದಿರ ನಿರ್ಮಾಣ ಆರಂಭವಾಗಬೇಕು ಎಂದಾಗ ಮೊದಲಿಗೆ ಎಲ್ಲರಲ್ಲೂ ಬಂದ ಹೆಸರು ಚಂಪತ್ ರೈ. ವೃತ್ತಿಯಲ್ಲಿ ರಸಾಯನಶಾಸ್ತ್ರದ ಪ್ರೊಫೆಸರ್ ಆಗಿದ್ದ ಚಂಪತ್ ರೈ, ಇಷ್ಟು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಿದ್ದೇ ಒಂದು ಸಾಹಸ.
ನವದೆಹಲಿ (ಜ.9): ಅದು 1975ರ ಇಸವಿ. ಉತ್ತರ ಪ್ರದೇಶದ ಬಿಜ್ನೋರ್‌ನ ಡಿಗ್ರಿ ಕಾಲೇಜಿನಲ್ಲಿ ಪ್ರೊಫೆಸರ್ ಒಬ್ಬರು ರಸಾಯನಶಾಸ್ತ್ರ ಕಲಿಸುತ್ತಿದ್ದರು. ಹೀಗಿರುವಾಗ ಕಾಲೇಜಿನ ಆವರಣದಲ್ಲಿ ಅಚಾನಕ್ ಆಗಿ ಭಯಭೀತ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದ ಪ್ರೊಫೆಸರ್ ಹೊರಬಂದು ನೋಡಿದಾಗ, ಕಾಲೇಜಿನ ಗೇಟಿನ ಎದುರು ಪೊಲೀಸ್ ಪಡೆ ನಿಂತಿತ್ತು. ಪೊಲೀಸರಲ್ಲಿ ಕೆಲವು ಹಿರಿಯ ಅಧಿಕಾರಿಗಳು ಸೀದಾ ಕಾಲೇಜಿನ ಪ್ರಿನ್ಸಿಪಾಲ್ ಬಳಿ ತೆರಳಿದರು. ಅದಾದ ಕೆಲ ಹೊತ್ತಿಗೆ ಕಾಲೇಜಿನ ಜವಾನ ಪ್ರೊಫೆಸರ್ ಕಲಿಸುತ್ತಿದ್ದ ತರಗತಿಯ ಬಳಿ ಬಂದು, ನಿಮ್ಮನ್ನು ಪ್ರಿನ್ಸಿಪಾಲ್ ಕರೆಯುತ್ತಿದ್ದಾರೆ ಎಂದು ತಿಳಿಸಿದ. ತಕ್ಷಣವೇ ಆ ಪ್ರೊಫೆಸರ್, ಪ್ರಿನ್ಸಿಪಾಲ್ ಕೋಣೆಯತ್ತ ಸಾಗಿದರು. ಈ ವೇಳೆ ಪೊಲೀಸರು ಅವರಿಗೆ ನಾವು ನಿಮ್ಮನ್ನು ಬಂಧಿಸಲು ಬಂದಿದ್ದೇವೆ ಎಂದು ತಿಳಿಸಿದರು. ಇದೇ ಹಂತದಲ್ಲಿ ತಮ್ಮ ಕಂಚಿನ ಕಂಠದಲ್ಲಿಯೇ ಪೊಲೀಸರಿಗೆ ತಿಳಿಸಿದ ಅವರು, ನಾನೀಗ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೇನೆ. ನೀವು ಈಗ ಇಲ್ಲಿಂದ ಹೊರಡಿ. ತರಗತಿ ಮುಗಿದ ಬಳಿಕ ನಾನೇ ಪೊಲೀಸ್ ಸ್ಟೇಷನ್‌ಗೆ ಬರುತ್ತೇನೆ ಎಂದು ಧೈರ್ಯದಿಂದ ತಿಳಿಸಿದ್ದರು. ಪೊಲೀಸರು ತಕ್ಷಣವೇ ಅಲ್ಲಿಂದ ಹೊರಟರು. ಕೊಟ್ಟ ಮಾತಿನಂತೆ ಆ ಪ್ರೊಫೆಸರ್, ತರಗತಿ ಮುಗಿದ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದರು. ಪೊಲೀಸರು ಅಲ್ಲಿಯೇ ಅವರನ್ನು ಬಂಧಿಸಿ ಜೈಲಿನಟ್ಟಿದ್ದರು. ಹೀಗೆ ಅವರು ಜೈಲಿನಲ್ಲಿ ಉಳಿದಿದ್ದು 18 ತಿಂಗಳು. ಆ ಪ್ರೊಫೆಸರ್‌ನ ಹೆಸರು ಚಂಪತ್ ರೈ. ಇಂದು ಶ್ರೀರಾಮಮಂದಿರಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯ ಕಥೆ ಇದು.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗೀನಾ ತಹಸಿಲ್‌ನ ಮೊಹಲ್ಲಾ ಸರೈಮರ್‌ನ ನಿವಾಸಿ ರಾಮೇಶ್ವರ ಪ್ರಸಾದ್ ಬನ್ಸಾಲ್ ಅವರ ಕುಟುಂಬದಲ್ಲಿ 1946 ರಲ್ಲಿ ಜನಿಸಿದ ಚಂಪತ್ ರೈ, ಬಾಲ್ಯದಿಂದೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಜೊತೆ ನಂಟು ಹೊಂದಿದ್ದರು. ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಧಂಪುರದ ಆಶ್ರಮ ಪದವಿ ಕಾಲೇಜಿನಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾದರು.
1977ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ಚಂಪತ್ ರೈ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. "18 ದೀರ್ಘ ತಿಂಗಳುಗಳ ಕಾಲ ಅವರು ಜೈಲಿನಲ್ಲಿದ್ದರು. ಚಿತ್ರಹಿಂಸೆಕೊಟ್ಟರು. ವಿವಿಧ ಜಿಲ್ಲೆಗಳಿಗೆ ಸ್ಥಳಾಂತರ ಮಾಡಿದರು ಎಂದು ರಾಮಜನ್ಮಭೂಮಿ ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದ್ದಾರೆ. ಆ 18 ತಿಂಗಳಲ್ಲಿ ಅವರು ಸಂಪೂರ್ಣವಾಗಿ ಬದಲಾಗಿ ವಿಭಿನ್ನ ವ್ಯಕ್ತಿಯಾದರು. ಅಲ್ಲಿಂದ ಬಿಡುಗಡೆಯಾದ ಬಳಿಕ ತಮ್ಮ ಇಡೀ ಜೀವನವನ್ನೇ ಅಯೋಧ್ಯೆಗೆ ಮುಡಿಪಾಗಿರುವ ನಿರ್ಧಾರ ಮಾಡಿದರು ಎಂದಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ, 1980ರಲ್ಲಿ ವಿಶ್ವ ಹಿಂದು ಪರಿಷತ್‌ಗೆ ಸೇರಿಕೊಂಡ ಚಂಪತ್ ರೈ, ಸಮಾಜಕ್ಕಾಗಿ ತಮ್ಮ ಕೆಲಸವನ್ನು ಮುಂದುವರಿಸಿದರು.
ಚಂಪತ್ ರೈ ಶಾಂತವಾಗಿ ಎಲ್ಲಾ ಕೆಲಸವನ್ನು ನಡೆಸಿಕೊಡುವಂಥ ವ್ಯಕ್ತಿ, ತಮ್ಮ ಇಡೀ ಜೀವನವನ್ನೇ ಅವರು ಈ ಮಂದಿರಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅದರಲ್ಲೂ ಕಳೆದ 35 ವರ್ಷಗಳಿಂದ ರಾಮಜನ್ಮಭೂಮಿಯ ಹೋರಾಟದಲ್ಲಿ ಇವರ ಹೆಸರಿತ್ತು ಅನ್ನೋದೇ ಹೆಚ್ಚಿನವರಿಗೆ ಮರೆತು ಹೋಗಿದೆ. ಇಡೀ ಹೋರಾಟಕ್ಕೆ ಅಶೋಕ್ ಸಿಂಘಾಲ್ ಪ್ರಮುಖ ಮುಖವಾಗಿದ್ದರೆ, ಅವರ ಹಿಂದೆ ನಿಂತು ಇಡೀ ಮಂದಿರ ಹೋರಾಟವನ್ನು ಕಾರ್ಯಗತಗೊಳಿಸಿದವರು ಚಂಪತ್ ರೈ ಎನ್ನುತ್ತಾರೆ ಅಯೋಧ್ಯೆಯ ಸಾಕಸ್ಟು ಹಿರಿಯ ಪತ್ರಕರ್ತರು.
ಅಯೋಧ್ಯೆ ತಲುಪಿದ ರಾಜಸ್ಥಾನದ ಶಿಲ್ಪಿ ಕೆತ್ತಿದ ಶ್ರೀರಾಮ ಮೂರ್ತಿ, ಅರುಣ್ ಯೋಗಿರಾಜ್ ಶಿಲ್ಪವೇ ಫೈನಲ್ ಎಂದ ಕಲಾವಿದ!
ಅಶೋಕ್ ಸಿಂಘಾಲ್ ನಿಧನದ ಬಳಿಕ ರಾಮಮಂದಿರ ಹೋರಾಟದ ಸಂಪೂರ್ಣ ಅಭಿಯಾನದ ಜವಾಬ್ದಾರಿ ಹೊತ್ತವರು ಚಂಪತ್ ರೈ. 2020ರ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭವ್ಯ ಮಂದಿರದ ನಿರ್ಮಾಣಕ್ಕೆ ಚಾಲನೆ ನೀಡಿದಾಗ, ಕಾರ್ಯಕ್ರಮದ ರೂಪುರೇಷೆಗಳನ್ನು ರೂಪಿಸಿ ಅದರ ಅನುಷ್ಠಾನಕ್ಕೆ ಚಾಲನೆ ನೀಡಿದವರು ಚಂಪತ್ ರೈ, ತಮ್ಮ ಬದುಕಿನಲ್ಲಿ ರಾಮ ಬಿಟ್ಟರೆ ಬೇರೇನೂ ಇಲ್ಲ, ರಾಮ ಮಂದಿರ ಒಂದಾಗಿಬಿಟ್ಟರೆ ತಮ್ಮ ಈವರೆಗಿನ ಬದುಕು ಸಾರ್ಥಕ ಎಂದಿರುವ ಚಂಪತ್ ರೈ, ರಾಮಮಂದಿರ ಹೋರಾಟ, ಜೈಲುವಾಸಗಳ ಕಾರಣಕ್ಕಾಗಿಯೇ ಜೀವಮಾನ ಪೂರ್ತಿ ಅವಿವಾಹಿತರಾಗಿಯೇ ಉಳಿಯುವ ತೀರ್ಮಾನ ಮಾಡಿದ್ದರು.
ಇಲ್ಲಿದೆ ಸಾಕ್ಷಿ, ದೇಶದ ಅತಿದೊಡ್ಡ ತೀರ್ಥಕ್ಷೇತ್ರ-ಪ್ರವಾಸಿ ಸ್ಥಳವಾಗುವ ಹಾದಿಯಲ್ಲಿ ಅಯೋಧ್ಯೆ!