90ರ ದಶಕದ ಮಂಡಲ ಹೋರಾಟದ ಬಳಿಕ ಮತ್ತೆ ದೇಶದಲ್ಲೀಗ ‘ಜಾತಿ ಹೋರಾಟ’ದ ಸುಳಿವು?

By Suvarna News  |  First Published Sep 4, 2021, 12:34 PM IST

ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ಜನಸಂಖ್ಯೆ, ಲಿಂಗಾನುಪಾತ, ಸಾಕ್ಷರತೆ, ಧರ್ಮ ಅಳೆಯಲು ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಮಾಡಿಸುತ್ತವೆ. ಬ್ರಿಟಿಷರು ಮಾಡಿಸುತ್ತಿದ್ದ ಜನಗಣತಿಯಲ್ಲಿ 1931ರ ವರೆಗೂ ಜಾತಿವಾರು ಜನಗಣತಿ ನಡೆದಿದೆ. 


ಬೆಂಗಳೂರು (ಸೆ. 04): 2013ರ ವರೆಗೆ ಗುಜರಾತ್‌ನಲ್ಲಿ ಹಿಂದೂ ಹೃದಯ ಸಾಮ್ರಾಟ ಎಂದು ಗುರುತಿಸಿಕೊಳ್ಳುತ್ತಿದ್ದ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಆದಕೂಡಲೇ ನಾನು ಹಿಂದುಳಿದ ಜಾತಿಯಿಂದ ಬಂದವನು ಎಂದು ಹೇಳಿಕೊಂಡಿದ್ದರು. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಂತೂ ನರೇಂದ್ರ ಮೋದಿ ಉರುಳಿಸಿದ ಬ್ಯಾಕ್‌ವರ್ಡ್‌ ದಾಳಕ್ಕೆ ಮಂಡಲ ಚಳವಳಿಯ ಫಲಾನುಭವಿಗಳಾದ ಲಾಲು ಯಾದವ್‌, ಮಾಯಾವತಿ, ಮುಲಾಯಂ ಸಿಂಗ್‌, ನಿತೀಶ್‌ ಕುಮಾರ್‌ ತರಗೆಲೆಗಳಂತೆ ಕೊಚ್ಚಿಹೋಗಿದ್ದರು.

ಆದರೆ ಈಗ ಯುಪಿ ಚುನಾವಣೆಗೆ 6 ತಿಂಗಳು ಇರುವಾಗ 2021ರಲ್ಲಿ ಜಾತಿ ಜನಗಣತಿ ಮಾಡಿಸಿ ಎಂದು ಹಿಂದುಳಿದ ವರ್ಗದ ನಾಯಕರು ಒತ್ತಾಯ ಶುರು ಮಾಡಿರುವುದು ಕೇಂದ್ರ ಸರ್ಕಾರಕ್ಕೆ ಒಂದು ರೀತಿ ಬಿಸಿ ತುಪ್ಪ. 2010ರಲ್ಲಿ ಯುಪಿಎ ಸರ್ಕಾರ ಇದ್ದಾಗ ಜಾತಿ ಜನಗಣತಿ ಮಾಡಿಸಬೇಕೆಂದು ಪಟ್ಟು ಹಿಡಿದಿದ್ದ ಬಿಜೆಪಿ ಈಗ ಅಧಿ​ಕಾರದಲ್ಲಿರುವಾಗ ಎಸ್‌ಸಿ, ಎಸ್‌ಟಿ ಬಿಟ್ಟರೆ ಉಳಿದವರ ಜಾತಿಗಣತಿ ಅವಶ್ಯಕತೆ ಇಲ್ಲ ಎಂದು ಹೇಳಿದೆ. 2011ರಲ್ಲಿ ಜಾತಿಗಣತಿ ಬೇಡ ಎಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್‌ ಈಗ ಮೋದಿ ಸರ್ಕಾರಕ್ಕೆ ಜಾತಿಗಣತಿ ಮಾಡಿಸಲು ಅಡ್ಡಿ ಏನು ಎಂದು ವರಾತ ತೆಗೆದಿದೆ.

Tap to resize

Latest Videos

ವಿಪಕ್ಷಗಳು ಗದ್ದಲ ಮಾಡಿದರೆ ಸರ್ಕಾರಕ್ಕೇ ಲಾಭ, ಆದರಿದು ರಾಹುಲ್ ಅಂಡ್ ಟೀಮ್‌ಗೆ ತಿಳಿಯುತ್ತಿಲ್ಲ!

ಆಶ್ಚರ್ಯ ಎಂದರೆ ಬಿಹಾರದ ನಿತೀಶ್‌ ಕುಮಾರ್‌ ಮತ್ತು ತೇಜಸ್ವಿ ಯಾದವ್‌ ಜಾತಿಗಣತಿ ವಿಷಯದಲ್ಲಿ ಒಟ್ಟಿಗೆ ಬಂದಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ನಿತೀಶ್‌ ಎಲ್ಲಿ ಬಿಜೆಪಿ ಸಖ್ಯ ತೊರೆಯುತ್ತಾರೋ ಎಂದು ಸುದ್ದಿಯಾಗುವಷ್ಟು. 90ರ ಮಂಡಲ ರಾಜಕಾರಣದ ನಂತರ ಮತ್ತೊಮ್ಮೆ ಉತ್ತರ ಭಾರತದ ರಾಜಕಾರಣದಲ್ಲಿ ಜಾತಿಗಣತಿ ಮೀಸಲಾತಿ ವಿಷಯದ ಬಿಸಿಬಿಸಿ ಚರ್ಚೆ ಶುರು ಆಗಿದೆ.

ಜಾತಿ ಗಣತಿಯ ಪರ ವಾದ

ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ಜನಸಂಖ್ಯೆ, ಲಿಂಗಾನುಪಾತ, ಸಾಕ್ಷರತೆ, ಧರ್ಮ ಅಳೆಯಲು ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಮಾಡಿಸುತ್ತವೆ. ಬ್ರಿಟಿಷರು ಮಾಡಿಸುತ್ತಿದ್ದ ಜನಗಣತಿಯಲ್ಲಿ 1931ರ ವರೆಗೂ ಜಾತಿವಾರು ಜನಗಣತಿ ನಡೆದಿದೆ. ಅಲ್ಲಿಂದ ಮುಂದೆ 1941ರಲ್ಲಿ ಜಾತಿವಾರು ಗಣತಿ ನಡೆದರೂ ಅದು ಪ್ರಕಟ ಆಗಲಿಲ್ಲ. ದೇಶ ಸ್ವಾತಂತ್ರ್ಯ ಪಡೆದ ನಂತರ ನಡೆದ 1951ರ ಗಣತಿಯಲ್ಲಿ ಕೇವಲ ದಲಿತರು ಮತ್ತು ಆದಿವಾಸಿಗಳ ಸಂಖ್ಯೆ ಎಣಿಸಲಾಯಿತೇ ಹೊರತು ಉಳಿದವರ ಸಂಖ್ಯೆ ಲೆಕ್ಕ ಹಾಕುವ ಗೊಡವೆಗೆ ಹೋಗಲಿಲ್ಲ.

ಇವತ್ತಿಗೂ ದಲಿತರನ್ನು ಹೊರತುಪಡಿಸಿ ಉಳಿದ ಜಾತಿಗಳ ನಾಯಕರು ಹೇಳುವ ಸಂಖ್ಯೆ 1931ರ ಗಣತಿಯ ಆಧಾರದ್ದು. 1931ರ ಗಣತಿ ಪ್ರಕಾರ ಹಿಂದುಳಿದ ವರ್ಗಗಳ ಜನಸಂಖ್ಯೆ 52 ಪ್ರತಿಶತ. ಜಾತಿಗಣತಿ ಸಮರ್ಥಕರ ಪ್ರಕಾರ ‘ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪ್ರತಿವರ್ಷ ಕೋಟ್ಯಂತರ ಹಣ ಖರ್ಚು ಮಾಡುತ್ತದೆ. ಆದರೆ ಸರ್ಕಾರದ ಬಳಿ ಹಿಂದುಳಿದ ವರ್ಗಗಳ ಉಪಜಾತಿಗಳ ಜನಸಂಖ್ಯೆ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಏನೂ ಅಧಿ​ಕೃತ ಮಾಹಿತಿ ಇಲ್ಲ.

ಕರ್ನಾಟಕದ ರಾಜಕಾರಣಿಗೆ ದೆಹಲಿಯಲ್ಲೀಗ ಪ್ರಹ್ಲಾದ್ ಜೋಶಿ ಆಪತ್ಪಾಂಧವ

ಜಾತಿ ಒಂದು ರೋಗ ಅಂದುಕೊಂಡರೂ ಅದರ ಗುಣಲಕ್ಷಣ, ಸಂಖ್ಯೆ ಅಳೆಯದೆ ಜಾತಿ ವಿನಾಶ ಹೇಗೆ ಸಾಧ್ಯ’ ಎಂಬ ಅಭಿಪ್ರಾಯವಿದೆ. ಅಮೆರಿಕದಲ್ಲಿ ಇದೇ ವರ್ಷ ನಡೆದ ಗಣತಿಯಲ್ಲಿ ಬಿಳಿ ವರ್ಣದವರು ಎಷ್ಟು, ಕಪ್ಪು ವರ್ಣೀಯರು ಎಷ್ಟು, ಹಿಸ್ಪಾನಿಕ್ಸ್‌ಗಳೆಷ್ಟುಎಂದು ಲೆಕ್ಕ ಹಾಕುವಾಗ, ಸಂವಿಧಾನಬದ್ಧವಾಗಿ ಜಾತಿ ವ್ಯವಸ್ಥೆ ಒಪ್ಪಿಕೊಂಡು ಅನುದಾನ ಕೊಡುವ ಭಾರತದಲ್ಲಿ ಮಾಡಲು ಅಡ್ಡಿ ಏನು ಎಂಬ ತರ್ಕ ಎದ್ದಿದೆ. ಹಿಂದುಳಿದ ವರ್ಗದ ಪಟ್ಟಿತಯಾರಿಸುವ ಅಧಿ​ಕಾರವನ್ನು ರಾಜ್ಯಗಳಿಗೆ ಕೊಟ್ಟು ನೀಟ್‌ ಪರೀಕ್ಷೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡಲು ಹೊರಟಿರುವ ಕೇಂದ್ರ ಸರ್ಕಾರ ಜಾತಿ ಜನಗಣತಿಗೆ ಮಾತ್ರ ಮನಸ್ಸು ಮಾಡುತ್ತಿಲ್ಲ.

ಜಾತಿ ಗಣತಿಗೆ ವಿರೋಧ ಏಕಿದೆ?

ಇಲ್ಲಿಯವರೆಗೆ ದಲಿತರು ಮತ್ತು ಅಲ್ಪಸಂಖ್ಯಾತರನ್ನು ಬಿಟ್ಟರೆ ಹಿಂದೂ ಧರ್ಮದ ಉಳಿದ ಜಾತಿಗಳ ನಿಖರ ಸಂಖ್ಯೆ ಎಷ್ಟುಎಂದು ಯಾರಿಗೂ ಗೊತ್ತಿಲ್ಲ. 1931ರ ಪ್ರಕಾರ ಹಿಂದುಳಿದವರು ಶೇ.52 ಇದ್ದರು. ಈಗ ಅದು ಕಡಿಮೆ ಆಗಿ 45ಕ್ಕೆ ಇಳಿದಿದೆ ಎಂಬ ಅಂಕಿಸಂಖ್ಯೆ ಬಂದರೆ ಹಿಂದುಳಿದ ಜಾತಿಗಳ ಮೀಸಲಾತಿ ಕಡಿಮೆ ಮಾಡಿ ಎಂಬ ಹೋರಾಟ ಶುರು ಆಗಬಹುದು. ಒಂದು ವೇಳೆ ಹಿಂದುಳಿದ ಜಾತಿಗಳ ಸಂಖ್ಯೆ 52ಕ್ಕಿಂತ ಹೆಚ್ಚಾಗಿ 60ರ ಆಸುಪಾಸು ತಲುಪಿದರೆ ಈಗಿನ ಮೀಸಲಾತಿ ಸಾಕಾಗೋದಿಲ್ಲ, ಜಾಸ್ತಿ ಮಾಡಿ ಎಂಬ ಹೋರಾಟ ಶುರು ಆಗಬಹುದು. ಜೊತೆಗೆ ಜಾಸ್ತಿ ಸಂಖ್ಯೆ ಇರುವ ಜಾತಿಗಳು ನಮಗೆ ಜಾಸ್ತಿ ಒಳಮೀಸಲಾತಿ ಕೊಡಿ ಎಂದು ಹೋರಾಟ ಮಾಡಬಹುದು.

ಒಟ್ಟಾರೆ ಸಮಾಜದಲ್ಲಿ ಅಲ್ಲೋಲ ಕಲ್ಲೋಲ. ಇದು ಬಿಜೆಪಿಯ ಹಿಂದುತ್ವ ಆಧಾರಿತ ವೋಟ್‌ ಬ್ಯಾಂಕ್‌ ಮೇಲೆ ಪರಿಣಾಮ ಬೀರಬಹುದು ಎನ್ನುವುದು ಆಡಳಿತಾರೂಢರ ಆತಂಕ. ಜೊತೆಗೆ ಮೀಸಲಾತಿಯ ಕೇಂದ್ರದ ಮತ್ತು ರಾಜ್ಯದ ಹಿಂದುಳಿದ ಪಟ್ಟಿಯಲ್ಲಿ ಸಾಕಷ್ಟುವ್ಯತ್ಯಾಸಗಳಿವೆ. ಜಾತಿಗಣತಿ ಹೊರಗೆ ಬಂದರೆ ಅದನ್ನು ಪರಿಷ್ಕರಿಸುವುದು ಒಂದು ದೊಡ್ಡ ತಲೆನೋವು.

ಬಿಜೆಪಿಗಿರುವ ಆತಂಕ ಎಂದರೆ ಬಹುತೇಕ ರಾಜ್ಯಗಳಲ್ಲಿ ಬಲಾಢ್ಯ ಹಿಂದುಳಿದ ಜಾತಿಗಳು ಮತ್ತು ಜಮೀನುದಾರ ಜಾತಿಗಳು ಬಿಜೆಪಿಯ ಜೊತೆ ಇಲ್ಲ. ಮೋದಿ ಮತ್ತು ಆರ್‌ಎಸ್‌ಎಸ್‌ ಜೊತೆ ಇರುವುದು ಸಣ್ಣ ಸಣ್ಣ ಹಿಂದುಳಿದ ಜಾತಿಗಳು. ಪುನರಪಿ ಜಾತಿಗಣತಿಯಿಂದ ಆ ಜಾತಿಗಳ ಹಿತಕ್ಕೆ ಧಕ್ಕೆ ಆಗಿ ವೋಟ್‌ ಬ್ಯಾಂಕ್‌ ಛಿದ್ರಗೊಂಡರೆ ಎಂಬ ಆತಂಕವೂ ಇದೆ. ಮುಂದಿನ ಯುಪಿ ಚುನಾವಣೆವರೆಗೆ ಜಾತಿ ಗಣತಿ ಮೋದಿ ಪರ ಮತ್ತು ಮೋದಿ ವಿರೋ​ಧಿಗಳ ಶರಂಪರ ಚರ್ಚೆಗೆ ವಸ್ತು ಆಗಲಿದೆ.

ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಬೊಮ್ಮಾಯಿ ಒಲ್ಲೆ ಎಂದರೂ ಸ್ಥಾನ ಪಡೆದಿದ್ಹೇಗೆ ಶಶಿಕಲಾ ಜೊಲ್ಲೆ?

ಸಿದ್ದರಾಮಯ್ಯ ವರಸೆಯ ಗುಟ್ಟು

ಕರ್ನಾಟಕದಲ್ಲಿ ಹಾವನೂರು ವೆಂಕಟಸ್ವಾಮಿ ಮತ್ತು ಚಿನಪ್ಪ ರೆಡ್ಡಿ ವರದಿಗಳು ಬಂದಿದ್ದರೂ ರಾಜ್ಯದಲ್ಲಿ ಎಲ್ಲ ಜಾತಿಗಳ ನಿರ್ದಿಷ್ಟನಿಶ್ಚಿತ ಸಂಖ್ಯೆ ಇಲ್ಲಿವರೆಗೂ ಗೊತ್ತಿಲ್ಲ. 2004ರಲ್ಲಿ ಧರ್ಮಸಿಂಗ್‌ ರಾಜ್ಯದ ಎಲ್ಲ ಜಾತಿಗಳ ಆರ್ಥಿಕ ಸಾಮಾಜಿಕ ಸರ್ವೇಕ್ಷಣೆಗೆ 18 ಕೋಟಿ ರು. ಹಣವನ್ನು ಬಜೆಟ್‌ನಲ್ಲಿ ಕೊಟ್ಟರೂ ಏಕಾಏಕಿ ಅಧಿ​ಕಾರ ಕಳೆದುಕೊಂಡರು. ನಂತರ ಬಂದ ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದಗೌಡ, ಜಗದೀಶ್‌ ಶೆಟ್ಟರ್‌ ಇದಕ್ಕೆ ಕೈಹಚ್ಚಲಿಲ್ಲ. ಸಿದ್ದರಾಮಯ್ಯ ಸಾಮಾಜಿಕ ಆರ್ಥಿಕ ಸರ್ವೇಕ್ಷಣೆಗೆ 180 ಕೋಟಿ ರು. ಹಣ ಕೊಟ್ಟರು.

ವರದಿ ಕೂಡ ತಯಾರಾಯಿತು. ಆದರೆ ಬಿಡುಗಡೆ ಆಗಲಿಲ್ಲ. ಸಿದ್ದು ಆಪ್ತರ ಪ್ರಕಾರ ಕಾಂಗ್ರೆಸ್‌ನಲ್ಲಿದ್ದ ಲಿಂಗಾಯತ, ಒಕ್ಕಲಿಗ ಮತ್ತು ದಲಿತ ನಾಯಕರು ವರದಿ ಬಿಡುಗಡೆ ಮಾಡೋದು ಬೇಡ ಎಂದು ದಿಲ್ಲಿಯಿಂದ ಒತ್ತಡ ತರಿಸಿದ್ದರಂತೆ. ಆದರೆ ಈಗ ಮರಳಿ ಸಿದ್ದರಾಮಯ್ಯ ವರದಿ ಬಿಡುಗಡೆ ಮಾಡಿ ಎಂದು ಓಡಾಡುತ್ತಿದ್ದಾರೆ. ತನ್ನಿಂದ ಸ್ವಲ್ಪ ಮಟ್ಟಿಗೆ ದೂರ ಸರಿದು ಬಿಜೆಪಿಯತ್ತ ವಾಲಿರುವ ಕುರುಬೇತರ ಹಿಂದುಳಿದ ಸಮುದಾಯಗಳು ತಮ್ಮಲ್ಲಿಗೆ ಮರಳಲಿ ಎಂಬುದು ಕೂಡ ಸಿದ್ದು ನಿಲುವಿನ ಹಿಂದಿನ ಕಾರಣ ಇರಬಹುದು.

ಸವರ್ಣ ಮತ್ತು ದಲಿತರ ವಿರೋಧ

ಕರ್ನಾಟಕದ ರಾಜಕಾರಣದಲ್ಲಿ ಲಿಂಗಾಯತರು 16, ಒಕ್ಕಲಿಗರು 11, ಕುರುಬರು 8, ಈಡಿಗರು 3 ಪ್ರತಿಶತ ಇದ್ದಾರೆ ಎಂದೆಲ್ಲಾ ಲೆಕ್ಕ ಹಾಕಲಾಗುತ್ತದೆ. ಆದರೆ ನಿಶ್ಚಿತ ಸಂಖ್ಯೆ ಯಾರಿಗೂ ಗೊತ್ತಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಕಾರಣಗಳ ಜೊತೆಗೆ ಸಂಖ್ಯಾತ್ಮಕ ಪ್ರಾಬಲ್ಯದ ಕಾರಣದಿಂದ ಉತ್ತರ ಮತ್ತು ಮೈಸೂರು ಕರ್ನಾಟಕದ ಮೀಸಲು ಅಲ್ಲದ ಕ್ಷೇತ್ರಗಳಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಟಿಕೆಟ್‌ ಪಡೆಯೋದು ರೂಢಿ. ಆದರೆ ಒಂದು ವೇಳೆ ಜಾತಿ ಸಂಖ್ಯೆ ಗೊತ್ತಾದರೆ ಆ ಲೆಕ್ಕಾಚಾರ ಬದಲಾಗಬಹುದು ಎಂಬ ಆತಂಕವೂ ಇದ್ದೇ ಇದೆ.

ಜೊತೆಗೆ ಒಂದು ವೇಳೆ ಸಾಮಾಜಿಕ ಮತ್ತು ಆರ್ಥಿಕ ಸರ್ವೇಕ್ಷಣೆ ಬಿಡುಗಡೆಯಾದರೆ ಕೂಡಲೇ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿ ಮರು ವರ್ಗೀಕರಣದ ಜೊತೆಗೆ ದಲಿತರಲ್ಲಿ ಕೂಡ ವರ್ಗೀಕರಣ ಆಗಬೇಕು ಎಂಬ ಕೂಗಿಗೆ ಬಲ ದೊರೆಯಬಹುದು ಎಂಬ ಚಿಂತೆಯೂ ಎಲ್ಲ ಪಕ್ಷಗಳ ಸ್ಥಾಪಿತ ನಾಯಕರಲ್ಲಿ ಇದ್ದೇ ಇದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಜಾತಿ ಗಣತಿ ಒಂದು ಜೇನುಗೂಡು. ಅದರಲ್ಲಿ ಕೆಲ ತಳ ಸಮುದಾಯಗಳಿಗೆ ಸಿಹಿಯೂ ಇದೆ, ಕೆಲ ಸ್ಥಾಪಿತ ಸಮುದಾಯಗಳ ಮಹತ್ವಾಕಾಂಕ್ಷೆಗೆ ತಡೆಯೂ ಇದೆ. ಆದರೆ ಇವತ್ತಿಲ್ಲ ನಾಳೆ ಪ್ರಜಾಪ್ರಭುತ್ವದ ಫಲ ಅತ್ಯಂತ ತಳ ಸಮುದಾಯಗಳಿಗೆ ತಲುಪಿಸಲು ಜಾತಿಗಳ ಆರ್ಥಿಕ ಸಾಮಾಜಿಕ ಸ್ಥಿತಿಗತಿಯ ಅಧ್ಯಯನದ ನಂತರ ಮೀಸಲಾತಿಯ ಮರು ವರ್ಗೀಕರಣ ಅನಿವಾರ್ಯ ಆಗಬಹುದು.

ಶೋಭಾ ಕರಂದ್ಲಾಜೆಗೆ ರಾಜಕೀಯ ಪುನರ್ಜನ್ಮ, ಮೋದಿ ಸಂಪುಟ ಸರ್ಜರಿ ಹಿಂದಿನ ಸತ್ಯಗಳು

ದೇಶದಲ್ಲಿ ಜನಗಣತಿಯ ಇತಿಹಾಸ

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಜನಗಣತಿ ಬಗ್ಗೆ ಕೆಲ ಉಲ್ಲೇಖಗಳಿವೆ. ಆದರೆ ಅದರ ಮುಖ್ಯ ಉದ್ದೇಶ ಇದ್ದದ್ದು ಕಂದಾಯ. ಅದೇ ರೀತಿ ಮೊಘಲರ ಅಕ್ಬರನ ಕಾಲದಲ್ಲಿ ಜನಸಂಖ್ಯೆ, ಗೃಹ ಕೈಗಾರಿಕೆಗಳು, ತಲಾ ಆದಾಯದ ಉಲ್ಲೇಖ ‘ಐನ್‌-ಎ ಅಕ್ಬರಿ’ಯಲ್ಲಿವೆ. ಆದರೆ ಭಾರತದ ಸಾವಿರಾರು ಜಾತಿಗಳ ಆಧಾರದಲ್ಲಿ ಸಂಖ್ಯೆ ಎಣಿಸಿ ಜಾತಿ ಪದ್ಧತಿಗೊಂದು ಸ್ಥಾಯಿ ಭಾವ ಕೊಟ್ಟಿದ್ದು ಮಾತ್ರ ಬ್ರಿಟಿಷರು. 1881ರಲ್ಲಿ ಲಾರ್ಡ್‌ ಮೇಯೋ ಕಾಲದಲ್ಲಿ ಭಾರತದಲ್ಲಿ ಮೊದಲ ವೈಜ್ಞಾನಿಕ ಗಣತಿ ನಡೆಯಿತು ಎಂದು ಹೇಳಲಾಗುತ್ತದೆ. ಬ್ರಿಟಿಷರ ಜಾತಿಗಣತಿ ನಂತರ ನಮ್ಮ ಜಾತಿ ಪದ್ಧತಿ ಬೇರುಗಳು ಇನ್ನಷ್ಟು ಜಟಿಲವಾದವು.

ಅಲ್ಲಿಯವರೆಗೆ ಜಾತಿಗಳು ಹೆಚ್ಚು ಚಲನಶೀಲವಾಗಿದ್ದವು ಎಂದು ಹೇಳಲಾಗುತ್ತದೆ. ಆದರೂ ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. 1931ರ ಜನಗಣತಿ ನಂತರ 1941ರಲ್ಲಿ ಜಾತಿ ಆಧಾರದ ಮೇಲೆ ಗಣತಿ ನಡೆದರೂ ಅದರಲ್ಲಿ ತಪ್ಪುಗಳಾಗಿವೆ ಎಂದು ಬ್ರಿಟಿಷರು ಪ್ರಕಟ ಮಾಡಲಿಲ್ಲ. 1953ರಲ್ಲಿ ಪಂಡಿತ್‌ ನೆಹರು ನೇಮಿಸಿದ ಕಾಕಾ ಕಾಲೇಲ್ಕರ್‌ ಸಮಿತಿ ಹಿಂದುಳಿದ ವರ್ಗಗಳ ಗುರುತಿಸುವಿಕೆಗೆ ಆಯಾ ಜಾತಿಗಳ ಸಾಮಾಜಿಕ ಪರಿಸ್ಥಿತಿಯೇ ಆಧಾರ, ಆರ್ಥಿಕ ಪರಿಸ್ಥಿತಿ ಅಲ್ಲ ಎಂದು ಹೇಳಿ, ಜೊತೆಗೆ 70 ಪ್ರತಿಶತ ಮೀಸಲಾತಿಯ ಪ್ರಸ್ತಾವನೆ ಇಟ್ಟಾಗ ಆಗಿನ ನೆಹರು ಸರ್ಕಾರ ವರದಿ ಒಪ್ಪಿಕೊಳ್ಳಲಿಲ್ಲ.

ನಂತರ 1978ರಲ್ಲಿ ಮೊರಾರ್ಜಿ ದೇಸಾಯಿ ನೇಮಿಸಿದ ಬಿ.ಪಿ.ಮಂಡಲ್‌ ವರದಿಯಲ್ಲಿ ಹಿಂದುಳಿದ ವರ್ಗಗಳಿಗೆ 27 ಪ್ರತಿಶತ ಉದ್ಯೋಗದಲ್ಲಿ ಮೀಸಲಾತಿ ಕೊಡುವ ಒಂದು ಶಿಫಾರಸನ್ನು ಹತ್ತು ವರ್ಷಗಳ ನಂತರ 1991ರಲ್ಲಿ ವಿ.ಪಿ.ಸಿಂಗ್‌ ಜಾರಿಗೆ ತಂದಾಗ ದೇಶದಲ್ಲಿ ಅಲ್ಲೋಲಕಲ್ಲೋಲ ಆಯಿತು. 1931ರ ಜನಗಣತಿ ಆಧಾರ ಇಟ್ಟುಕೊಂಡು ಮಂಡಲ ಆಯೋಗ 3743 ಜಾತಿಗಳನ್ನು ಹಿಂದುಳಿದವು ಎಂದು ಗುರುತಿಸಿತ್ತು. ಮುಂದೆ ಇಂದಿರಾ ಸಹಾನಿ ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದಾಗ 11 ನ್ಯಾಯಮೂರ್ತಿಗಳ ಪೀಠ ‘ಒಟ್ಟು ಜಾತಿ ಆಧಾರಿತ ಮೀಸಲಾತಿ ಪ್ರಮಾಣ ಶೇ.50 ಮೀರಬಾರದು’ ಎಂಬ ಐತಿಹಾಸಿಕ ತೀರ್ಪು ನೀಡಿತು.

ಆದರೆ ಮಂಡಲ ವರದಿ ಉತ್ತರ ಭಾರತದ ರಾಜಕಾರಣವನ್ನೇ ಬದಲಿಸಿತು. ಮಾಯಾವತಿ, ಮುಲಾಯಂ, ಲಾಲು, ನಿತೀಶ್‌ ಮಂಡಲದ ಫಲಾನುಭವಿಗಳಾದರೆ, ಇದಕ್ಕೆ ಪರ್ಯಾಯವಾಗಿ ರಾಮ ಮಂದಿರದ ಆಂದೋಲನ ಶುರು ಮಾಡಿದ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕೂಡ ಜಾಣತನದಿಂದ ಮುಂದೆ ಮಾಡಿದ್ದು ಕಲ್ಯಾಣ್‌ ಸಿಂಗ್‌, ಉಮಾಭಾರತಿ, ಗೋಪಿನಾಥ್‌ ಮುಂಡೆ ತರಹದ ಹಿಂದುಳಿದ ವರ್ಗದ ನಾಯಕರನ್ನು. 2010ರಲ್ಲಿ ಮನಮೋಹನ ಸಿಂಗ್‌ ಸರ್ಕಾರ ಜಾತಿ ಆಧಾರಿತ ವರದಿ ತಯಾರು ಮಾಡಲು ಹೇಳಿತಾದರೂ ಅದನ್ನು ಪ್ರಕಟ ಮಾಡಲಿಲ್ಲ. ಈಗ ಮೋದಿ ಸರ್ಕಾರದ ಸರದಿ. ಸದ್ಯಕ್ಕಂತೂ ಕೇಂದ್ರ ಸರ್ಕಾರ ಜಾತಿ ಗಣತಿ ಬೇಡ ಎಂಬ ನಿರ್ಧಾರ ತೆಗೆದುಕೊಂಡಿದೆ.

 - ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

'ಇಂಡಿಯಾ ಗೇಟ್' ದೆಹಲಿಯಿಂದ ಕಂಡ ರಾಜಕಾರಣ

click me!