ಏಮ್ಸ್ ಸರ್ವರ್ ಹ್ಯಾಕ್ ಹಿಂದೆ ಚೀನಿ ಹ್ಯಾಕರ್ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹಾಂಕಾಂಗ್‌ನಿಂದ ಹ್ಯಾಕ್ ಎಂಬ ಮಾಹಿತಿ ಲಭ್ಯವಾಗುತ್ತಿದ್ದು, ಗಣ್ಯರು ಸೇರಿ 4 ಕೋಟಿ ರೋಗಿಗಳ ಮಾಹಿತಿ ಕಳವು ಮಾಡಿದ್ದಾರೆ ಎಂದೂ ಹೇಳಲಾಗಿದೆ. ಡಾರ್ಕ್‌ವೆಬ್‌ನಲ್ಲಿ ಹಣಕ್ಕೆ ಮಾರಾಟಕ್ಕೆ ಇಟ್ಟಿರುವ ಸಂಭವವೂ ಇದೆ.
ನವದೆಹಲಿ: ದಿಲ್ಲಿಯ ಪ್ರತಿಷ್ಠಿತ ಏಮ್ಸ್ (AIIMS Delhi) ಆಸ್ಪತ್ರೆಯ ಸರ್ವರ್ ಮೇಲೆ ನಡೆದ ಸೈಬರ್ ದಾಳಿಯ (Cyber Attack) ಹಿಂದೆ ಚೀನಿ ಹ್ಯಾಕರ್‌ಗಳ (Chinese Hackers) ಕೈವಾಡ ಇರುವ ಬಗ್ಗೆ ಸಂದೇಹವಿದೆ. ಹಾಂಕಾಂಗ್‌ನಿಂದ (HongKong) ಇದು ಹ್ಯಾಕ್ ಆಗಿರುವ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ. ಅಲ್ಲದೆ 3-4 ಕೋಟಿ ರೋಗಿಗಳು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಸೇರಿದಂತೆ ವಿವಿಐಪಿಗಳ (VVIP) ಮಾಹಿತಿಯನ್ನು ಹ್ಯಾಕರ್‌ಗಳು ಕದ್ದಿದ್ದಾರೆ ಎಂದು ವರದಿಯಾಗಿದೆ. ಏಮ್ಸ್‌ನ 5 ಸರ್ವರ್‌ಗಳು ದಾಳಿಗೆ ಒಳಗಾಗಿವೆ. ಇದರಲ್ಲಿನ ಮಾಹಿತಿ ಕದ್ದಿರುವ ಹ್ಯಾಕರ್‌ಗಳು ಅದನ್ನು ಅಂತರ್ಜಾಲದಲ್ಲಿ ಗುಪ್ತಗಾಮಿನಿಯಂತೆ ಕಾರ್ಯನಿರ್ವಹಿಸುವ ಡಾರ್ಕ್ ವೆಬ್‌ನಲ್ಲಿ (Dark Web) ಮಾರಾಟ ಮಾಡಿರಬಹುದು. ಏಮ್ಸ್‌ನಿಂದ ಕಳವಾದ ಮಾಹಿತಿಗಾಗಿ ಡಾರ್ಕ್ ವೆಬ್‌ನಲ್ಲಿ 1600 ಸರ್ಚ್‌ನಲ್ಲಿ ನಡೆದಿವೆ ಎಂದು ತಿಳಿದುಬಂದಿದೆ.
ಹ್ಯಾಕರ್‌ಗಳ ಮೂಲ ಉದ್ದೇಶ ಮಾಹಿತಿ ಕದ್ದು, ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವುದಾಗಿದೆ. ಏಮ್ಸ್‌ನಿಂದಲೂ 200 ಕೋಟಿ ರೂ. ಮೌಲ್ಯದಷ್ಟು ಕ್ರಿಪ್ಟೋಕರೆನ್ಸಿಗೆ (Cryptocurrency) ಬೇಡಿಕೆ ಇಟ್ಟಿದ್ದರು ಎಂದು ಇತ್ತೀಚೆಗೆ ವರದಿಯಾಗಿತ್ತು.
ಇದನ್ನು ಓದಿ: AIIMS Delhi Server Hack: ಕ್ರಿಪ್ಟೋಕರೆನ್ಸಿಯಲ್ಲಿ 200 ಕೋಟಿ ನೀಡಿ ಎಂದ ಹ್ಯಾಕರ್‌ಗಳು!
ಹ್ಯಾಕ್ ಆದ ಬೆನ್ನಲ್ಲೇ ಸರ್ವರ್ ಡೌನ್ ಆಗಿದ್ದು, ಎಮರ್ಜೆನ್ಸಿ, ಹೊರರೋಗಿ, ಒಳರೋಗಿ ವಿಭಾಗಗಳು ಹಾಗೂ ಲ್ಯಾಬೊರೇಟರಿ ಕೆಲಸಗಳನ್ನು ಮ್ಯಾನ್ಯುಯೆಲ್ ಆಗಿ ನಿರ್ವಹಿಸಲಾಗುತ್ತಿದೆ. ಏಮ್ಸ್ ಕಂಪ್ಯೂಟರ್ ನೆಟ್‌ವರ್ಕ್ ಸ್ಯಾನಿಟೈಸೇಶನ್ ಆರಂಭಿಸಲಾಗಿದ್ದು, ಈವರೆಗೆ ಒಟ್ಟು 5000 ಕಂಪ್ಯೂಟರ್ ಪೈಕಿ 1200 ಕಂಪ್ಯೂಟರ್‌ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. 50 ಸರ್ವರ್‌ಗಳ ಪೈಕಿ 20 ಸರ್ವರ್ ಸ್ಕ್ಯಾನ್ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಇದೊಂದು ದೊಡ್ಡ ಪಿತೂರಿ, ಸಾಕಷ್ಟು ದೊಡ್ಡ ಶಕ್ತಿಗಳೇ ಇದರ ಹಿಂದಿವೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬ ನಿರ್ಣಯಕ್ಕೆ ಬರುವ ನಾವು ಸಿಇಆರ್‌ಟಿಇನ್ (CERT - In), ಎನ್‌ಐಎ (NIA) ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಏಮ್ಸ್ ಸರ್ವರ್ ಡೌನ್: ವೈರಸ್ ದಾಳಿ ಶಂಕೆ!
ದೆಹಲಿ ಪೊಲೀಸರು ಈ ಬಗ್ಗೆ ನವೆಂಬರ್ 25 ರಂದು ಪ್ರಕರಣದಲ್ಲಿ ಸುಲಿಗೆ ಮತ್ತು ಸೈಬರ್ ಭಯೋತ್ಪಾದನೆ ಪ್ರಕರಣವನ್ನು ದಾಖಲು ಮಾಡಿದ್ದರು. ತನಿಖಾ ಸಂಸ್ಥೆಗಳ ಶಿಫಾರಸಿನ ಮೇರೆಗೆ ಆಸ್ಪತ್ರೆಯಲ್ಲಿ ಕಂಪ್ಯೂಟರ್‌ಗಳಲ್ಲಿನ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಏಮ್ಸ್ ಸರ್ವರ್‌ನಲ್ಲಿ ಮಾಜಿ ಪ್ರಧಾನಿಗಳು, ಸಚಿವರು, ಹಿರಿಯ ಅಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ ಹಲವು ವಿಐಪಿಗಳ ಮಾಹಿತಿ ಸಂಗ್ರಹವಿದೆ.
ಇತ್ತೀಚೆಗೆ ಇಂಡಸ್ ಫೇಸ್ ನೀಡಿದ್ದ ಪ್ರಮುಖ ವರದಿಯಲ್ಲಿ ದೇಶದಲ್ಲಿ ಪ್ರತಿ ತಿಂಗಳು ಅಂದಾಜು 3 ಲಕ್ಷ ಸೈಬರ್ ದಾಳಿಗಳು ಭಾರತದ ಹೆಲ್ತ್‌ಕೇರ್ ವಲಯದಲ್ಲಿಯೇ ನಡೆಯುತ್ತದೆ. ಇದು ವಿಶ್ವದ 2ನೇ ಗರಿಷ್ಠ ಮಟ್ಟದ ಸೈಬರ್ ದಾಳಿ ಎನಿಸಿದೆ. ಅಮೆರಿಕದಲ್ಲಿ ಪ್ರತಿ ತಿಂಗಳು 5 ಲಕ್ಷ ಸೈಬರ್ ದಾಳಿಗಳು ಹೆಲ್ತ್ ಕೇರ್ ಸೆಕ್ಟರ್‌ನಲ್ಲಿ ನಡೆಯುತ್ತದೆ ಎಂದು ವರದಿಯಾಗಿದೆ.
ಏಮ್ಸ್‌ಗಾಗಿ ಪ್ರಧಾನಿಗೆ ವಿದ್ಯಾರ್ಥಿಗಳ ಪತ್ರ
ಬಾಗಲಕೋಟೆ: ಬಾಗಲಕೋಟೆ (Bagalkot) ತಾಲೂಕಿನ ಮುರನಾಳ ಗ್ರಾಮದ ಅಖಂಡೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಾಗಲಕೋಟೆಯಲ್ಲಿ ಏಮ್ಸ್ ಸ್ಥಾಪಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಧಾನಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದು, ಕರ್ನಾಟಕಕ್ಕೆ ಏಮ್ಸ್ ಮಂಜೂರು ಮಾಡಿದ್ದಕ್ಕೆ ಪತ್ರದ ಆರಂಭದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಜತೆಗೆ, ಬಾಗಲಕೋಟೆಯಲ್ಲಿ ಏಮ್ಸ್ ಸ್ಥಾಪನೆ ಮಾಡಿದರೆ 3 ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಅಲ್ಲದೆ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಜಿಲ್ಲೆಯಾಗಿದ್ದು, ಏಮ್ಸ್ ಸ್ಥಾಪನೆಯಿಂದ ಜಿಲ್ಲೆಯ ಬಡ ರೋಗಿಗಳಿಗೂ ಅನುಕೂಲವಾಗಲಿದೆ. ಈ ಕಾರಣಕ್ಕಾಗಿ ಬಾಗಲಕೋಟೆಯಲ್ಲಿಯೇ ಏಮ್ಸ್ ಸ್ಥಾಪಿಸಲು ಕ್ರಮವಹಿಸಬೇಕು ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.