ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ವೃತ್ತಿಪರ ಸೈನ್ಯವನ್ನು ಬೆಳೆಸುವ ಬದಲು, ಪಿಂಚಣಿ ಹಣವನ್ನು ಉಳಿಸಲು ಒಪ್ಪಂದದ ಮೇಲೆ ಸೈನಿಕರನ್ನು ನೇಮಕ ಪ್ರಸ್ತಾಪಿಸುವ ಈ ಅಗ್ನಿಪಥ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇರಿ ದೇಶದ ಹಲವೆಡೆ ಪ್ರತಿಭಟನೆಗಳು ತೀವ್ರಗೊಂಡಿವೆ. ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು, ಹಲವೆಡೆ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಸಿಖಂದರಾಬಾದಿನಲ್ಲಿ ಕಾಲ್ತುಳಿತದಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಹಲವೆಡೆ ಪರಿಸ್ಥಿತಿ ಕೈಮೀರಿ ಹೋಗಿದೆ. ಪ್ರತಿಭಟನೆಯ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

04:04 PM (IST) Jun 17
ಅಗ್ನಿಪಥ ಯೋಜನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. "ರೈತರ ಬದುಕು ನಾಶ ಮಾಡಲು ಕರಾಳ ಕೃಷಿ ಕಾಯ್ದೆಗಳನ್ನು ತಂದಿದ್ದ ಕೇಂದ್ರ ಸರ್ಕಾರಕ್ಕೆ ದೇಶದ ಜನ ಪಾಠ ಕಲಿಸಿದ್ದಾರೆ. ಈಗ ಯುವಜನರ ಬದುಕು ನಾಶದ ಜೊತೆಯಲ್ಲಿ ಸೈನಿಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವವರಿಗೂ ಪಾಠ ಕಲಿಸಲು ದೇಶದ ಜನತೆ ಮುಂದಾಗಬೇಕು," ಎಂದು ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್‌ನಲ್ಲಿ ಸಿದ್ದರಾಮಯ್ಯ "ಹೊಸಸೇನಾ ನೇಮಕಾತಿ ಅಗ್ನಿಪಥ್ ಕೇವಲ ಸೇನಾ ನೇಮಕಾತಿಗಷ್ಟೇ ಸೀಮಿತವಾಗಲಾರದು. ಸೈನಿಕರ ಅನ್ನ ಕಸಿಯಲು ಹೊರಟಿರುವ ಈ ದೇಶದ್ರೋಹಿ, ಜನವಿರೋಧಿ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಇತರ ಸರ್ಕಾರಿ ಉದ್ಯೋಗಗಳ ಮೇಲೆಯೂ ಸವಾರಿ ಮಾಡಲು ಹೊರಡುವುದು ಖಚಿತ. ಎಚ್ಚೆತ್ತುಕೊಳ್ಳಲು ಇದು ಸಕಾಲ!," ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
03:26 PM (IST) Jun 17
ಸೇನೆಗೆ ಗೂಂಡಾಗಳು ಬೇಡ, ಸಾರ್ವಜನಿಕ ಆಸ್ತಿಗಳಿಗೆ ಬೆಂಕಿ ಹಚ್ಚುತ್ತಿರುವವರು ಸೇನೆಗೆ ಅನ್‌ಫಿಟ್: ಸೇನಾ ಮುಖ್ಯಸ್ಥ: "ಪ್ರತಿಭಟನೆ ಹೆಸರಲ್ಲಿ ಗೂಂಡಾಗಿರಿ ಮಾಡುತ್ತಿರುವ ಯಾರೂ ಸೇನೆ ಸೇರಲು ಅರ್ಹರಲ್ಲ. ಬಸ್ಸು, ರೈಲು ಬೋಗಿಗಳಿಗೆ ಬೆಂಕಿ ಹಚ್ಚುತ್ತಿರುವ ಕಿಡಿಗೇಡಿಗಳು ಸೇನೆಗೆ ಖಂಡಿತ ಬೇಡ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಬೆಂಕಿ ಹಚ್ಚುವಂತಾ ವ್ಯಕ್ತಿಗಳನ್ನು ಸೇನೆ ಎಂದಿಗೂ ಸೇರಿಸಿಕೊಳ್ಳುವುದಿಲ್ಲ," ಎಂದು ಸೇನಾ ಮುಖ್ಯಸ್ಥ ಜನರಲ್ ವಿಪಿ ಮಲಿಕ್ ಹೇಳಿದ್ದಾರೆ.
ಸತತ ಮೂರುದಿನಗಳಿಂದ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಬಹುತೇಕ ಕಡೆಗಳಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯುಂಟಾಗಿದೆ. ಸುಮಾರು 150ಕ್ಕೂ ಅಧಿಕ ಟ್ರೈನ್ ಸೇವೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಹತ್ತಾರು ಬಸ್‌ಗಳಿಗೆ, ಬೈಕ್‌ಗಳಿಗೆ ಮತ್ತು ರೈಲು ಬೋಗಿ ಮತ್ತು ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ. ಸುಮಾರು ಏಳು ರಾಜ್ಯಗಳಲ್ಲಿ ಪ್ರತಿಭಟನೆ ಹಿಂಸಾತ್ಮಕವಾಗಿ ಬದಲಾಗಿದೆ.
01:09 PM (IST) Jun 17
ದೇಶಾದ್ಯಂತ ಅಗ್ನಿಪಥ್ ಯೋಜನೆಯ ವಿರುದ್ಧ ಯುವ ಜನತೆ ಪ್ರತಿಭಟನೆ ಆರಂಭಿಸಿದ್ದಾರೆ. ಹಾಗಾದರೆ ಈ ಯೋಜನೆ ಏನು, ಇದಕ್ಕೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು. ಇದು ನಿಜಕ್ಕೂ ಜನರಿಗೆ ಸಮಸ್ಯೆಯಾಗಲಿದೆಯಾ? ಸೈನ್ಯದ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆಯಾ? ಇವೆಲ್ಲ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.
ಏನಿದು ಅಗ್ನಿಪಥ ಯೋಜನೆ? ಯಾರೆಲ್ಲ ಅಗ್ನಿವೀರ್ ಆಗಬಹುದು? ಅರ್ಹತೆ ಏನು? ವೇತನ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ
12:14 PM (IST) Jun 17
ನವದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ 25 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರ, ಉತ್ತರ ಪ್ರದೇಶ, ತೆಲಂಗಾಣ, ಹರಿಯಾಣ, ದೆಹಲಿ ಸೇರಿದಂತೆ ಒಂದೊಂದೇ ರಾಜ್ಯಗಳಲ್ಲಿ ಪ್ರತಿಭಟನೆ ಹೆಚ್ಚುತ್ತಿದೆ. ಪ್ರತಿಭಟನೆ ಬಹುತೇಕ ಕಡೆಗಳಲ್ಲಿ ಉದ್ವಿಘ್ನ ಸ್ಥಿತಿ ತಲುಪಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕೆಲವೆಡೆ ಟಿಯರ್ ಗ್ಯಾಸ್, ಅಶ್ರುವಾಯು ಕೂಡ ಪ್ರಯೋಗಿಸಲಾಗಿದ್ದು, ಗಾಳಿಯಲ್ಲಿ ಗಂಡು ಹಾರಿಸಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುತ್ತಿದ್ದಾರೆ.
12:06 PM (IST) Jun 17
ಬಿಹಾರ ಉಪಮುಖ್ಯಮಂತ್ರಿ ರೇಣು ದೇವಿ ಅವರ ನಿವಾಸದ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಏಕಾಏಕಿ ದಾಳಿ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ರೇಣು ದೇವಿ ಅವರ ಬೆಟ್ಟಿಯಾ ಪ್ರದೇಶದಲ್ಲಿರುವ ನಿವಾಸದಲ್ಲಿ ಹಲ್ಲೆ ಮಾಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಮಾಧ್ಯಮಕ್ಕೆ ಮಾಹಿತಿ ನೀಡಿರುವ ರೇಣು ದೇವಿ ಅವರ ಮಗ, ನಮ್ಮ ಮನೆಯ ಮೇಲೆ ದಾಳಿ ಮಾಡಲಾಗಿದೆ. ಅದೃಷ್ಟವಶಾತ್ ರೇಣು ದೇವಿ ಅವರು ಪಾಟ್ನಾದಲ್ಲಿದ್ದರು ಎಂದು ಹೇಳಿಕೆ ನೀಡಿದ್ದಾರೆ.
11:44 AM (IST) Jun 17
ದೇಶಾದ್ಯಂತ ಅಗ್ನಿಪಥ್ ವಿರುದ್ಧ ಪ್ರತಿಭಟನೆಯ ಕಾವು ಹೆಚ್ಚಾಗಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ದೇಶದ ಯುವಕರ ಕೂಗು ಮತ್ತು ಜನರ ಕೂಗು ಪ್ರಧಾನಿ ಮೋದಿಯವರ ಕಿವಿಗೆ ಕೇಳಿಸುವುದಿಲ್ಲ. ಕೇವಲ ಅವರ ಸ್ನೇಹಿತರ ಮಾತು ಮಾತ್ರ ಅವರಿಗೆ ಕೇಳುತ್ತದೆ ಎಂದು ಪರೋಕ್ಷವಾಗಿ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಅಗ್ನಿಪಥ್ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ. ರಾಹುಲ್ ಜೊತೆ ಧ್ವನಿಗೂಡಿಸಿರುವ ಪ್ರಿಯಾಂಕ ಗಾಂಧಿ ವಾದ್ರಾ, ಯುವಕರ ಪ್ರತಿಭಟನೆಗೆ ಅರ್ಥವಿದೆ. ಯುವಕರ ಮಾತನ್ನು ಕೇಳಿ, ಈ ಕೂಡಲೇ ಅಗ್ನಿಪಥ್ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
11:30 AM (IST) Jun 17
ಪರಿಸ್ಥಿತಿ ವಿಪರೀತ ಹಂತಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಯ ರಜೆಯನ್ನು ಹಿಂಪಡೆಯಲಾಗಿದ್ದು, ಜೂನ್ 23ರವರೆಗೂ ಪೊಲೀಸರು ರಜೆ ಪಡೆಯುವಂತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಇದೇ ನಿಯಮವನ್ನು ತೆಲಂಗಾಣ ಮತ್ತು ಬಿಹಾರ ಸರ್ಕಾರಗಳೂ ಅನುಸರಿಸುವ ಸಾಧ್ಯತೆಯಿದೆ. ನಿರುದ್ಯೋಗಿ ಯುವಕರ ಪ್ರತಿಭಟನೆ ದೇಶಾದ್ಯಂತ ನಡೆಯುತ್ತಿದೆ. ಪ್ರತಿಭಟನೆ ಎಲ್ಲೆಡೆ ಉಗ್ರ ಸ್ವರೂಪ ಪಡೆಯುತ್ತಿದ್ದು, ಹತೋಟಿಗೆ ತರಲು ಕೆಲವೆಡೆ ಅಶ್ರುವಾಯು, ಟಿಯರ್ ಗ್ಯಾಸ್ ಪ್ರಯೋಗ ಕೂಡ ಮಾಡಲಾಗುತ್ತಿದೆ. ಆದರೂ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸ್ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ.
11:25 AM (IST) Jun 17
ಹೈದರಾಬಾದಿನಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆಯ ಕಾವು ಏರುತ್ತಲೇ ಇದೆ. ಇನ್ನಷ್ಟು ಯುವಕರು ಪ್ರತಿಭಟಿನಾ ನಿರತ ಯುವಕರ ಜೊತೆಗೆ ಸೇರಿದೆ. ಇದರಿಂದ ಪರಿಸ್ಥಿತಿ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ, ಕೈಮೀರಿ ಹೋಗಿದೆ ಎಂದು ಸಿಖಂದರಾಬಾದ್ ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ಕಾರಣಕ್ಕೆ ಟಿಯರ್ ಗ್ಯಾಸ್, ಅಶ್ರುವಾಯು ಪ್ರಯೋಗ ಕೂಡ ಮಾಡಲಾಗಿದೆ. ಇನ್ನು ಉತ್ತರಪ್ರದೇಶ ಮತ್ತು ಬಿಹಾರದಲ್ಲೂ ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ. ಯಾರೂ ಊಹೆಯೂ ಮಾಡದಷ್ಟು ಜನ ಪ್ರತಿಭಟನೆಗೆ ಕೈಜೋಡಿಸುತ್ತಿದ್ದಾರೆ.
11:01 AM (IST) Jun 17
ಉತ್ತರ ಪ್ರದೇಶದ ಬಲಿಯಾ ರೈಲ್ವೇ ನಿಲ್ದಾಣದಲ್ಲಿ ರೈಲಿಗೆ ಬೆಂಕಿ ಹಚ್ಚಲಾಗಿದೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ರೈಲ್ವೋ ಕೋಚ್‌ಗಳನ್ನು ಪೊಲೀಸ್ ಸಿಬ್ಬಂದಿ ಮತ್ತು ರೈಲ್ವೆ ಇಲಾಖೆ ಸಿಬ್ಬಂದಿ ತಳ್ಳಿ ಬೀಳಿಸಿದ್ದಾರೆ. ಒಂದು ಕೋಚ್‌ನಿಂದ ಇನ್ನೊಂದು ಕೋಚಿಗೆ ಬೆಂಕಿ ಹರಡುವ ಸಾಧ್ಯತೆಯಿಂದ ಸಿಬ್ಬಂದಿ ಈ ಕಾರ್ಯ ಮಾಡಿದ್ದಾರೆ. ಸ್ಥಳದಲ್ಲಿ ನೂರಾರು ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಪ್ರತಿಭಟನಾನಿರತರನ್ನು ತಡೆದು ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸುತ್ತಿದ್ದಾರೆ. ರೈಲಿಗೆ ಬೆಂಕಿ ಹಚ್ಚುವ ಮುನ್ನ, ರೈಲ್ವೆ ನಿಲ್ದಾಣದ ಆಸ್ತಿಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ.
10:51 AM (IST) Jun 17
ಮೂರನೇ ದಿನವೂ ಅಗ್ನಿಪಥ್ ಸ್ಕೀಮಿನ ವಿರುದ್ಧ ಪ್ರತಿಭಟನೆ ಮುಂದುವರೆದಿದ್ದು, ಇನ್ನೊಂದು ರೈಲಿಗೆ ಬೆಂಕಿ ಹಚ್ಚಲಾಗಿದೆ. ಗುರುವಾರ ಬಿಹಾರದಲ್ಲಿ ನಿರುದ್ಯೋಗಿ ಯುವಕರ ಗುಂಪೊಂದು ರೈಲಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿತ್ತು. ಇಂದು ಶುಕ್ರವಾರ ಉತ್ತರಪ್ರದೇಶದಲ್ಲಿ ರೈಲಿಗೆ ಬೆಂಕಿ ಹಚ್ಚಲಾಗಿದೆ. ಪಶ್ಚಿಮ ಬಂಗಾಳ, ಬಿಹಾರ ಮತ್ತು ಹೈದರಾಬಾದಿನಲ್ಲಿ ಪ್ರತಿಭಟನೆಯ ಕಾವು ಹೆಚ್ಚಿದ್ದು, ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಪಶ್ಚಿಮ ಬಂಗಾಳದಲ್ಲಿ ಬೆಳಗ್ಗೆ ರೈಲನ್ನು ತಡೆದು ಪ್ರತಿಭಟಿಸಲು ಯತ್ನಿಸಲಾಗಿತ್ತು. ದೇಶದ ಹಲವೆಡೆ ಈ ರೀತಿಯ ಪ್ರತಿಭಟನೆಗಳು ಕೇಳಿಬರುತ್ತಿವೆ. ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ದೇಶಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ. ಪ್ರತಿಭಟನೆ ಎಲ್ಲೆಡೆ ಹೆಚ್ಚಾದ ನಂತರ ಕೇಂದ್ರ ಸರ್ಕಾರ ಅಗ್ನಿಪಥ್ ವಯೋಮಿತಿಯನ್ನು 21ರಿಂದ 23ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಆದರೂ ಕೂಡ ಪ್ರತಿಭಟನೆ ಕಡಿಮೆಯಾಗುತ್ತಿಲ್ಲ. ಸದ್ಯ 17.5 ವರ್ಷದಿಂದ 23 ವರ್ಷದ ವ್ಯಕ್ತಿಗಳು ಅಗ್ನಿಪಥ್ ಯೋಜನೆಯಡಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಇದೇ ಕಾರಣಕ್ಕೆ ನಿರುದ್ಯೋಗಿಗಳು ಪ್ರತಿಭಟನೆ ಆರಂಭಿಸಿದ್ದಾರೆ.
10:04 AM (IST) Jun 17
ಕೊರೋನಾ ವೈರಸ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಭಾರತೀಯ ರಕ್ಷಣಾ ಇಲಾಖೆಗೆ ಸೂಕ್ತ ನಿಯೋಜನೆ ಆಗಿಲ್ಲ. ಈಗ ಎಲ್ಲವೂ ಸರಿ ಹೋಯಿತು, ಇನ್ನಾದರೂ ಸೇನೆಗೆ ಸೇರಬಹುದು ಎಂದು ಕಾಯುತ್ತಾ ಕುಳಿತ ಯುವಕರಿಗೆ ಸರಕರಾದ ಹೊಸ ಯೋಜನೆ ಆಘಾತ ತಂದಿದೆ. ಅಷ್ಟಕ್ಕೂ ಈ ಯೋಜನೆಯಿಂದ ಆಗುವ ನಷ್ಟವೇನು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏನು ಹೇಳ್ತಾರೆ ಕೇಳಿ.
ಅಗ್ನಿಪಥ್‌ನಿಂದ ಸ್ಥಿರ ಭವಿಷ್ಯವಿಲ್ಲ
10:04 AM (IST) Jun 17
ಕೊರೋನಾ ವೈರಸ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಭಾರತೀಯ ರಕ್ಷಣಾ ಇಲಾಖೆಗೆ ಸೂಕ್ತ ನಿಯೋಜನೆ ಆಗಿಲ್ಲ. ಈಗ ಎಲ್ಲವೂ ಸರಿ ಹೋಯಿತು, ಇನ್ನಾದರೂ ಸೇನೆಗೆ ಸೇರಬಹುದು ಎಂದು ಕಾಯುತ್ತಾ ಕುಳಿತ ಯುವಕರಿಗೆ ಸರಕರಾದ ಹೊಸ ಯೋಜನೆ ಆಘಾತ ತಂದಿದೆ. ಅಷ್ಟಕ್ಕೂ ಈ ಯೋಜನೆಯಿಂದ ಆಗುವ ನಷ್ಟವೇನು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏನು ಹೇಳ್ತಾರೆ ಕೇಳಿ.
ಅಗ್ನಿಪಥ್‌ನಿಂದ ಸ್ಥಿರ ಭವಿಷ್ಯವಿಲ್ಲ
09:52 AM (IST) Jun 17
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿರುವ ಸೇನಾ ನಿಯೋಜನೆ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಪಿಂಚಣಿ ಉಳಿಸಲು ಕೇಂದ್ರ ಸರಕಾರ ಗುತ್ತಿಗೆ ಆಧಾರದ ಮೇಲೆ ಸೈನಿಕರನ್ನು ನಿಯೋಜಿಸಲು ಮುಂದಾಗಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ, ಸೇನಾ ನಿಯೋಜನೆ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. ಏನದು?
ಅಗ್ನಿಪಥ್ ವಿರುದ್ಧ ಎಲ್ಲೆಡೆ ಪ್ರತಿಭಟನೆ: ಕೇಂದ್ರ ಸರಕಾರ ನೀಡಿರುವ ಸ್ಪಷ್ಟನೆ ಏನು?