ಅಭಿನಂದನ್ ತಂದೆ ವರ್ತಮಾನ್ ಗೂ ಮಿಗ್-21ಕ್ಕೂ ಗಾಢ ನಂಟು!

By Web DeskFirst Published Mar 2, 2019, 8:21 AM IST
Highlights

ವರ್ತಮಾನ್‌ ಕುಟುಂಬಕ್ಕೂ ಮಿಗ್‌-21 ಯುದ್ಧ ವಿಮಾನಕ್ಕೂ ಅವಿನಾಭಾವ ಸಂಬಂಧ| ತಂದೆ, ಅಜ್ಜ ಇಬ್ಬರೂ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದವರು| ತಾಯಿ ವೃತ್ತಿಯಲ್ಲಿ ವೈದ್ಯೆ, ವಿದೇಶಗಳಲ್ಲೂ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಅವರದು

ನವದೆಹಲಿ[ಮಾ.02]: ಪಾಕಿಸ್ತಾನ ವಿರುದ್ಧದ ಹೋರಾಟದ ವೇಳೆ ಮಿಗ್‌-21 ಯುದ್ಧವಿಮಾನ ಪತನಗೊಂಡು ಪಾಕ್‌ ನೆಲದಲ್ಲಿ ಅದೃಷ್ಟವಶಾತ್‌ ಬಚಾವ್‌ ಆಗಿ ಹಿಂದಿರುಗಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರ ಕುಟುಂಬಕ್ಕೂ ಮಿಗ್‌-21ಗೂ ಅವಿನಾಭಾವ ಸಂಬಂಧವಿದೆ.

ಅಭಿನಂದನ್‌ ಅವರು ಇದೇ ಯುದ್ಧ ವಿಮಾನದಲ್ಲಿ ಪಾಕಿಸ್ತಾನದ ಎಫ್‌-16 ಯುದ್ಧವಿಮಾನದ ಜೊತೆ ಸೆಣಸಿದರೆ, ಅವರ ತಂದೆ ನಿವೃತ್ತ ಏರ್‌ ಮಾರ್ಷನ್‌ ಸಿಂಹಕುಟ್ಟಿವರ್ತಮಾನ್‌ ಮಿಗ್‌-21ನಲ್ಲೇ ಹಾರಾಟ ನಡೆಸಿದ್ದರು. ವಾಯು ಸೇನೆಯ ಟೆಸ್ಟ್‌ ಪೈಲಟ್‌ ಆಗಿದ್ದ ಅವರು, ಐದುವರ್ಷಗಳ ಹಿಂದಷ್ಟೇ ನಿವೃತ್ತಿಯಾಗಿದ್ದಾರೆ. ಅವರ ಅಜ್ಜ ಕೂಡ ವಾಯು ಸೇನೆಯಲ್ಲೇ ಸೇವೆ ಸಲ್ಲಿಸಿದ್ದರು.

ಪಿಟಿಯ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಡಿಫೆನ್ಸ್‌ ಅಕಾಡೆಮಿಯ ಸಹಪಾಠಿ, ನಿವೃತ್ತ ವಿಂಗ್‌ ಕಮಾಂಡರ್‌ ಪ್ರಕಾಶ್‌ ನವಲೆ, ಇದೇ ಮೊದಲ ಬಾರಿಗೆ ಯುವ ಪೈಲಟ್‌ ಒಬ್ಬರು ಪಾಕಿಸ್ತಾನದ ಒಳಕ್ಕೆ ನುಗ್ಗಿ ಬಂದಿದ್ದಾರೆ. ಅಲ್ಲದೆ, ವರ್ತಮಾನ್‌ರನ್ನು ಮೂರು ವರ್ಷ ಪ್ರಾಯದಲ್ಲಿದ್ದಾಗಿಂದ ನೋಡುತ್ತಾ ಬಂದಿದ್ದೇನೆ. ನಾನು ಮತ್ತು ಅವರ ತಂದೆ ಹೈದರಾಬಾದ್‌ನ ಹಕೀಂ ಪೇಟ್‌ನಲ್ಲಿರುವ ಯುದ್ಧವಿಮಾನಗಳ ತರಬೇತಿ ಕೇಂದ್ರಕ್ಕೆ ಒಟ್ಟಿಗೇ ನೇಮಕವಾಗಿದ್ದೆವು. ನಾನೂ ಕೂಡ ಯುದ್ಧವಿಮಾನಗಳ ಪೈಲಟ್‌ ಆಗಿದ್ದೆ. ಬಳಿಕ ಹೆಲಿಕಾಪ್ಟರ್‌ಹೆ ವರ್ಗಾಯಿಸಲಾಯಿತು ಎಂದು ನೆನಪಿಸಿಕೊಂಡರು.

‘ಏರ್‌ ಮಾರ್ಷಲ್‌ ವರ್ತಮಾನ್‌ ಒಬ್ಬ ಜಂಟಲ್‌ಮನ್‌. ಅವರ ಪತ್ನಿ ಶೋಭಾ ಅವರು ವೈದ್ಯರಾಗಿದ್ದರು. ಅವರೂ ಗೌರವಾನ್ವಿತ ಮಹಿಳೆಯಾಗಿದ್ದರು. ನನ್ನ ಪತ್ನಿ ಗರ್ಭಿಣಿಯಾಗಿದ್ದಾಗ ಅವರು ಪ್ರತಿದಿನ ಬಂದು ಪತ್ನಿಯ ಆರೋಗ್ಯ ವಿಚಾರಿಸಿಕೊಂಡು, ಚಿಕಿತ್ಸೆ ನೀಡಿ ಹೋಗುತ್ತಿದ್ದರು. ನನ್ನ ಮಗಳು ಪೂಜಾ ಅವರ ವೈದ್ಯಕೀಯ ಸೇವೆಯಲ್ಲೇ ಬೆಳೆದವಳು. ಶೋಭಾ ಅವರು ಅನೇಕ ಸಂದರ್ಭಗಳಲ್ಲಿ ವಿದೇಶಕ್ಕೂ ತೆರಳಿ ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ,ಅನೇಕ ಯೋಧರಿಗೂ ಚಿಕಿತ್ಸೆ ನೀಡಿದ್ದರು ಎಂದು ನವಾಲೆ ವರ್ತಮಾನ್‌ ಕುಟುಂಬದ ಜತೆಗಿನ ತಮ್ಮ ಒಡನಾಟದ ಬಗ್ಗೆ ವಿವರಿಸಿದ್ದಾರೆ.

ಅಭಿನಂದನ್‌ ಅವರ ಸಹೋದರಿ ಫ್ರಾನ್ಸ್‌ ಪ್ರಜೆ ಜತೆ ವಿವಾಹವಾಗಿ, ಅಲ್ಲೇ ನೆಲೆಸಿದ್ದಾರೆ.

click me!