India@75: ದ.ಭಾರತದ ಜಲಿಯನ್‌ ವಾಲಾಬಾಗ್‌ ವಿದುರಾಶ್ವತ್ಥ , ಸ್ವತಂತ್ರ ಹೋರಾಟಕ್ಕೆ ಶಕ್ತಿ ತುಂಬಿದ ನೆಲ

By Suvarna News  |  First Published Jun 5, 2022, 10:53 AM IST

ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನದ ಮೂಲಕ ಹೋರಾಡಿ ಹುತಾತ್ಮರಾದವರ ನೆನಪಿಗಾಗಿ ವಿದುರಾಶ್ವತ್ಥದಲ್ಲಿ ಭವ್ಯವಾದ ವೀರಸೌಧ ನಿರ್ಮಿಸಲಾಗಿದೆ. ದುರಂತದ ಸ್ಥಳದಲ್ಲಿ ಹುತಾತ್ಮರ ಸ್ಮಾರಕ ಸ್ಥಾಪಿಸಿ ಅದರ ಮೇಲೆ ಬ್ರಿಟಿಷರ ಗುಂಡೇಟಿಗೆ ಎದೆಕೊಟ್ಟವೀರ ಸೇನಾನಿಗಳ ಹೆಸರು ಕೆತ್ತನೆ ಮಾಡಲಾಗಿದೆ.


ಚಿಕ್ಕಬಳ್ಳಾಪುರ (ಜೂ. 05): ದೇಶದ ಸ್ವಾತಂತ್ರ್ಯ ಚಳವಳಿಯ ವೇಳೆ ಪಂಜಾಬ್‌ನಲ್ಲಿ ನಡೆದ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ಬಗ್ಗೆ ಎಲ್ಲರಿಗೂ ಗೊತ್ತು. ಬ್ರಿಟಿಷರ ಕ್ರೌರ್ಯಕ್ಕೆ ಸಾಕ್ಷಿಯಾದ ಆ ನೆಲದಲ್ಲಿ 1919ರ ಏಪ್ರಿಲ್‌ 13ರಂದು ಸಾವಿರಾರು ದೇಶಭಕ್ತರು ಪ್ರಾಣತ್ಯಾಗ ಮಾಡಿದ್ದರು. ಅದೇ ರೀತಿಯ ಘಟನೆ ನಡೆದ ಸ್ಥಳ ರಾಜ್ಯದಲ್ಲೂ ಇದೆ. ಅದು ದಕ್ಷಿಣ ಭಾರತದ ಜಲಿಯನ್‌ ವಾಲಾಬಾಗ್‌ ಎಂದೇ ಪ್ರಖ್ಯಾತಿ ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ವಿದುರಾಶ್ವತ್ಥ. ಇದು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೆಚ್ಚು ಶಕ್ತಿ ತುಂಬಿದ ನೆಲ. 1938ರ ಏಪ್ರಿಲ್‌ 25ರಂದು ಇಲ್ಲಿ ನಡೆದ ನರಮೇಧದಲ್ಲಿ ಸುಮಾರು 32 ಮಂದಿ ಹುತಾತ್ಮರಾದರು.

India@75: ರೈತ ಹೋರಾಟಕ್ಕೆ ಸಾಕ್ಷಿ ಬಾವುಟ ಗುಡ್ಡೆ, 2 ವಾರ ಇಲ್ಲಿ ಹಾರಾಡಿತ್ತು ಸ್ವತಂತ್ರ ಧ್ವಜ!

Latest Videos

undefined

ಸಂತೆ ದಿನ ಸತ್ಯಾಗ್ರಹ:

ಮದ್ದೂರಿನ ಶಿವಪುರ ಧ್ವಜ ಸತ್ಯಾಗ್ರಹದಿಂದ ಪ್ರಭಾವಿತರಾದ ವಿದುರಾಶ್ವತ್ಥದ ಆಸುಪಾಸಿನ ಗ್ರಾಮಸ್ಥರು ಸಂತೆ ದಿನವನ್ನು ಬಳಸಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಧ್ವಜ ಸತ್ಯಾಗ್ರಹವನ್ನು ಸಂಘಟಿಸಿದ್ದರು. ಆ ವೇಳೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಬ್ರಿಟಿಷರು ಸತ್ಯಾಗ್ರಹ ಹತ್ತಿಕ್ಕಲು ಸಾಕಷ್ಟುಪ್ರಯತ್ನಪಟ್ಟರೂ ಹೋರಾಟಗಾರರು ಜಗ್ಗಲಿಲ್ಲ. ಈ ವೇಳೆ ಸಾಕಷ್ಟುಜನ ಸೇರಿದ್ದರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿತ್ತು.

ಲಾಠಿಚಾರ್ಜ್, ಗೋಲಿಬಾರ್‌:

ತಾಳ್ಮೆ ಕಳೆದುಕೊಂಡ ಪೊಲೀಸರು ಬ್ರಿಟಿಷ್‌ ಅಧಿಕಾರಿಗಳ ಆದೇಶದ ಮೇರೆಗೆ ಸ್ವಾತಂತ್ರ್ಯ ಸೇನಾನಿಗಳ ಗುಂಪಿನ ಮೇಲೆ ಲಾಠಿ ಪ್ರಹಾರ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಧರಣಿ ನಿರತರ ಮೇಲೆ ಗುಂಡಿನ ಸುರಿಮಳೆಗೈದರು. ಪರಿಣಾಮ 32 ಮಂದಿ ಸ್ಥಳದಲ್ಲೇ ಪ್ರಾಣತ್ಯಾಗ ಮಾಡಿದರು. ಆ ಕಾರಣಕ್ಕಾಗಿಯೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನಕ್ಕೆ ಸಾಕ್ಷಿಯಾದ ಕರ್ನಾಟಕದ ಜಲಿಯನ್‌ ವಾಲಾಬಾಗ್‌ ಎಂದು ವಿದುರಾಶ್ವತ್ಥ ಕರೆಸಿಕೊಂಡಿದೆ.

India@75:ಜಾಡೋನಾಂಗ್ ಎಂಬ ಈಶಾನ್ಯ ಭಾಗದ ಮೊದಲ ಸ್ವಾತಂತ್ರ ಹೋರಾಟಗಾರ

ಸ್ಮಾರಕ ಸ್ಥಾಪನೆ:

ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನದ ಮೂಲಕ ಹೋರಾಡಿ ಹುತಾತ್ಮರಾದವರ ನೆನಪಿಗಾಗಿ ವಿದುರಾಶ್ವತ್ಥದಲ್ಲಿ ಭವ್ಯವಾದ ವೀರಸೌಧ ನಿರ್ಮಿಸಲಾಗಿದೆ. ದುರಂತದ ಸ್ಥಳದಲ್ಲಿ ಹುತಾತ್ಮರ ಸ್ಮಾರಕ ಸ್ಥಾಪಿಸಿ ಅದರ ಮೇಲೆ ಬ್ರಿಟಿಷರ ಗುಂಡೇಟಿಗೆ ಎದೆಕೊಟ್ಟವೀರ ಸೇನಾನಿಗಳ ಹೆಸರು ಕೆತ್ತನೆ ಮಾಡಲಾಗಿದೆ. ಜೊತೆಗೆ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವ ಚಿತ್ರಪಟಗಳ ಗ್ಯಾಲರಿ ನಿರ್ಮಿಸಲಾಗಿದೆ. ಅತ್ಯಾಧುನಿಕವಾದ ಡಿಜಿಟಲ್‌ ಗ್ರಂಥಾಲಯ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಸಂಶೋಧನೆಗೆ ಪೂರಕವಾಗಿ ಅಮೂಲ್ಯವಾದ ಗ್ರಂಥಗಳು, ಕೃತಿಗಳನ್ನು ಇಡಲಾಗಿದೆ.

ತಲುಪುವುದು ಹೇಗೆ?

ವಿದುರಾಶ್ವತ್ಥವು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದಿಂದ 7 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ 80 ಕಿ.ಮೀ. ದೂರದಲ್ಲಿರುವ ಗೌರಿಬಿದನೂರಿಗೆ ಬಸ್ಸು, ರೈಲುಗಳ ವ್ಯವಸ್ಥೆಯಿದೆ. ಅಲ್ಲಿಂದ ವಿದುರಾಶ್ವತ್ಥಕ್ಕೆ ಬಸ್‌ ಮೂಲಕ ತಲುಪಬಹುದು.

- ಕಾಗತಿ ನಾಗರಾಜಪ್ಪ, ಚಿಕ್ಕಬಳ್ಳಾಪುರ

click me!