ಕೋಲ್ಕತ್ತಾದಲ್ಲಿ ಮೊದಲ ಶಂಕಿತ Monkeypox ಪ್ರಕರಣ, ಯುವಕ ಆಸ್ಪತ್ರೆಗೆ ದಾಖಲು

By Suvarna NewsFirst Published Jul 9, 2022, 8:26 AM IST
Highlights

ದೇಶಾದ್ಯಂತ ಒಂದೆಡೆ ಕೊರೋನಾ (Corona) ಪ್ರಕರಣಗಳು ಹೆಚ್ಚಾಗ್ತಿದೆ, ಇನ್ನೊಂದೆಡೆ ಮಂಕಿಪಾಕ್ಸ್ (Monkeypox) ಭೀತಿ ಕಾಣಿಸಿಕೊಂಡಿದೆ. ಕೋಲ್ಕತ್ತಾ (Kolkata)ದಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳಿರುವ ವಿದ್ಯಾರ್ಥಿಯೊಬ್ಬ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಆತಂಕ ಹೆಚ್ಚಾಗಿದೆ. ಆ ಬಗ್ಗೆ ಹೆಚ್ಚಿನ ಡೀಟೈಲ್ಸ್‌ ಇಲ್ಲಿದೆ. 

ಕೊರೋನಾ ಸೋಂಕು (Corona virus) ತ್ವರಿತವಾಗಿ ಹರಡುತ್ತಿರುವ ಮಧ್ಯೆ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ (Monkeypox)​ ವೇಗವಾಗಿ ಹರಡುತ್ತಿದೆ. ಸಾವಿನ ಪ್ರಮಾಣವು ಸಿಡುಬಿಗಿಂತ ತುಂಬಾ ಕಡಿಮೆಯಾದರೂ, ಇದು ಅಪಾಯಕಾರಿ (Dangerous)ಯೆಂದು ಪರಿಗಣಿಸಲಾಗಿದೆ. ಹೀಗಾಗಿ ಮಂಕಿಪಾಕ್ಸ್‌ನ್ನು ವರ್ಲ್ಡ್‌ ಹೆಲ್ತ್ ನೆಟ್‌ವರ್ಕ್‌ (WHN) ಸಾಂಕ್ರಾಮಿಕ ರೋಗ (Pandemic)ವೆಂದು ಈಗಾಗ್ಲೇ ಘೋಷಿಸಿದೆ. ಈ ಮಧ್ಯೆ ಕೋಲ್ಕತ್ತಾದ ಆಸ್ಪತ್ರೆಗೆ ಮಂಕಿಪಾಕ್ಸ್ ರೋಗಲಕ್ಷಣಗಳೊಂದಿಗೆ ಯುವಕನೊಬ್ಬ ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ. 

ಮಂಕಿಪಾಕ್ಸ್  ವೈರಸ್ ಪ್ರಪಂಚದ 40ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ. ಅದರಲ್ಲೂ ಯುರೋಪಿನಲ್ಲಿ ಹೆಚ್ಚಿನ ಸಕ್ರಿಯ ಪ್ರಕರಣಗಳು  ವರದಿಯಾಗಿವೆ. ಕಳೆದ ತಿಂಗಳವರೆಗೆ, ಮಂಕಿಪಾಕ್ಸ್ ಆಫ್ರಿಕಾದಿಂದ ಹೊರಗೆ ಹೆಚ್ಚು ಪ್ರಕರಣಗಳು ಕಂಡು ಬರಲ್ಲಿಲ್ಲ. ಹೀಗಾಗಿ ಜನರು ಸ್ಪಲ್ಪಮಟ್ಟಿಗೆ ನಿರಾಳವಾಗಿದ್ದರು. ಆದರೆ ಕಳೆದ ತಿಂಗಳು ಕಳೆದ ತಿಂಗಳು ಯುರೋಪಿನಲ್ಲಿ ಪ್ರಕರಣಗಳ ಉಲ್ಬಣವು ಸ್ಪೇನ್ ಮತ್ತು ಬೆಲ್ಜಿಯಂನಲ್ಲಿ ಹೆಚ್ಚಾದ ಪ್ರಕರಣವು ಆತಂಕಕ್ಕೆ ಕಾರಣವಾಗಿದೆ. 58 ದೇಶಗಳಲ್ಲಿ 3,417ಕ್ಕೂ ಹೆಚ್ಚು  ಮಂಕಿಪಾಕ್ಸ್​ ಪ್ರಕರಣಗಳು ವರದಿಯಾಗಿದೆ. 

ಮಂಕಿಪಾಕ್ಸ್ ಸಾಂಕ್ರಾಮಿಕ ರೋಗ, ಸಿಕ್ಕಾಪಟ್ಟೆ ಡೇಂಜರಸ್‌: ತಜ್ಞರು

ಯುರೋಪಿಯನ್ ರಾಷ್ಟ್ರದಿಂದ ಮರಳಿದ್ದ ವ್ಯಕ್ತಿ
ಕೋಲ್ಕತ್ತಾದಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳಿರುವ ವಿದ್ಯಾರ್ಥಿಯೊಬ್ಬ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮಂಗನ ಕಾಯಿಲೆ ಬಂದಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಕೋಲ್ಕತ್ತಾದ ಯುವಕನೊಬ್ಬ ದದ್ದುಗಳು ಮತ್ತು ವೈರಲ್ ಕಾಯಿಲೆಯ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪಶ್ಚಿಮ ಮಿಡ್ನಾಪುರದ ಈ ಯುವಕ ಕೆಲವು ದಿನಗಳ ಹಿಂದೆ ಯುರೋಪಿಯನ್ ದೇಶದಿಂದ ಮರಳಿದ್ದನು. ಅವರ ದೇಹದಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದ ರೋಗಲಕ್ಷಣಗಳು ಕಂಡುಬಂದಿವೆ. 

ಪರೀಕ್ಷಾ ವರದಿ ಇನ್ನೂ ಬಂದಿಲ್ಲ
ವ್ಯಕ್ತಿಯ ದೇಹದ ದದ್ದುಗಳಿಂದ ತೆಗೆದ ದ್ರವದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ (ಎನ್‌ಐವಿ) ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಇನ್ನೂ ಬಂದಿಲ್ಲ. ರೋಗಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿದ್ಯಾರ್ಥಿಯ ಕುಟುಂಬಸ್ಥರಿಗೆ ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಮೂಲಗಳ ಪ್ರಕಾರ, ಒಬ್ಬ ವಿದ್ಯಾರ್ಥಿಯು ವಿದೇಶದಿಂದ ಹಿಂತಿರುಗಿದ್ದು, ಮಂಗನ ಕಾಯಿಲೆಯ ಲಕ್ಷಣಗಳನ್ನು ಹೊಂದಿದ್ದಾನೆ. ಅವನ ದೇಹದಲ್ಲಿದ್ದ ದದ್ದುಗಳಿಂದ ತೆಗೆದ ದ್ರವದ ಮಾದರಿಗಳನ್ನು ಸಹ ಕಳುಹಿಸಲಾಗಿದೆ. ರಾಜ್ಯದಲ್ಲಿ ಮಂಗನ ಕಾಯಿಲೆ ಶಂಕಿತರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿರುವುದು ಇದೇ ಮೊದಲು ಎನ್ನಲಾಗಿದೆ.

ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ 
ರಾಷ್ಟ್ರೀಯ ವೈರಾಣು ಸಂಸ್ಥೆಯಿಂದ ವರದಿ ಬಂದ ನಂತರವಷ್ಟೇ ಯುವಕನಿಗೆ ಮಂಗನ ಕಾಯಿಲೆ ತಗುಲಿದೆಯೇ ಎಂಬುದನ್ನು ದೃಢಪಡಿಸಬಹುದು ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಸಿದ್ಧಾರ್ಥ ನಿಯೋಗಿ ಹೇಳಿದರು. ವೈದ್ಯರು ವ್ಯಕ್ತಿಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಯುವಕನ ಇತರ ಕುಟುಂಬ ಸದಸ್ಯರಲ್ಲಿ ಯಾರೊಬ್ಬರೂ ಇದೇ ರೀತಿಯ ರೋಗಲಕ್ಷಣಗಳನ್ನು ತೋರಿಸಿಲ್ಲ, ಆದರೂ ಅವರು ಜಾಗರೂಕರಾಗಿರಲು ಮತ್ತು ಇದೇ ರೀತಿಯ ರೋಗಲಕ್ಷಣಗಳ ಯಾವುದೇ ಅನುಮಾನದ ಸಂದರ್ಭದಲ್ಲಿ ಆಸ್ಪತ್ರೆಗೆ ವರದಿ ಮಾಡಲು ಸೂಚಿಸಲಾಗಿದೆ. 

ಮಂಕಿಪಾಕ್ಸ್ v/s ಚಿಕನ್ ಪಾಕ್ಸ್: ಎರಡೂ ಸೋಂಕಿನ ಮಧ್ಯೆ ವ್ಯತ್ಯಾಸ ತಿಳಿದುಕೊಳ್ಳುವುದು ಹೇಗೆ ?

ಸಾಂಕ್ರಾಮಿಕ ರೋಗವೆಂದು ಘೋಷಿಸಿದ WHN
ವಿಶ್ವ ಆರೋಗ್ಯ ನೆಟ್‌ವರ್ಕ್ (WHN) ಮಂಕಿಪಾಕ್ಸ್ ರೋಗವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಮಂಕಿಪಾಕ್ಸ್​ ಸಾವಿನ ಪ್ರಮಾಣವು ಸಿಡುಬಿಗಿಂತ ತುಂಬಾ ಕಡಿಮೆಯಾಗಿದ್ದರೂ ಇದರ ಹರಡುವಿಕೆ ಪ್ರಮಾಣವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದೆ ಇನ್ನಷ್ಟು ಹೆಚ್ಚು ಅಪಾಯ ಎದುರಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ವೈಜ್ಞಾನಿಕ ಮತ್ತು ನಾಗರಿಕ ತಂಡಗಳ ಜಾಗತಿಕ ಸಹಯೋಗವಾದ ವರ್ಲ್ಡ್ ಹೆಲ್ತ್ ನೆಟ್‌ವರ್ಕ್ (ಡಬ್ಲ್ಯುಎಚ್‌ಎನ್) ಇದನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ.

click me!