World Mental Health Day: ಮಾನಸಿಕ ಚಿಕಿತ್ಸೆ ಪಡೆಯಲು ಹಿಂಜರಿಕೆ ಏಕೆ..?

By Kannadaprabha News  |  First Published Oct 10, 2022, 12:41 PM IST

ದೈಹಿಕ ಅನಾರೋಗ್ಯದಂತೆ ಮಾನಸಿಕ ಅನಾರೋಗ್ಯ ಕೂಡ ಸರ್ವೇಸಾಮಾನ್ಯ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದರೆ ಇದನ್ನು ಗುಣಪಡಿಸಬಹುದು. ಆದರೆ ಮನಶ್ಶಾಸ್ತ್ರಜ್ಞರ ಬಳಿ ಹೋದರೆ ‘ಹುಚ್ಚ’ ಎನ್ನುತ್ತಾರೆಂದು ಕೆಲವರಿಗೆ ಭಯ. ಇಂತಹ ತಪ್ಪು ಕಲ್ಪನೆ ಹೋಗಲಾಡಿಸಲು ಇದು ಸಕಾಲ.


ಲೇಖನ ( ಡಾ.ನೇತ್ರಾವತಿ ಆರ್‌. ಬೆಂಗಳೂರು)

ಅಕ್ಟೋಬರ್‌ 10 ಅನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಎಲ್ಲರಿಗೂ ಜಾಗತಿಕ ಆದ್ಯತೆಯನ್ನಾಗಿ ಮಾಡಬೇಕೆಂಬುದು ವಿಶ್ವ ಆರೋಗ್ಯ ಸಂಸ್ಥೆಯ ಈ ವರ್ಷದ ಘೋಷವಾಕ್ಯ. ಕೋವಿಡ್‌-19 ಸಾಂಕ್ರಾಮಿಕ ಪ್ರಪಂಚದಾದ್ಯಂತ ಸಾಕಷ್ಟು ಸಾವು ನೋವು ಉಂಟುಮಾಡಿದೆ. ತಮಗೆ ಅಥವಾ ತಮ್ಮ ಮನೆಯವರಿಗೆ ಕೋವಿಡ್‌ ಬಂದು ಹೆಚ್ಚಿನ ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಪಾರ ನೋವು ಅನುಭವಿಸಿದ್ದಾರೆ. ಈ ವೈರಸ್‌ ನೀಡಿದ ಶಾಕ್‌ನಿಂದ ಇನ್ನೂ ಎಷ್ಟೋ ಜನರು ಚೇತರಿಸಿಕೊಂಡಿಲ್ಲ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ‘ನಾವು ದೈಹಿಕ ಆರೋಗ್ಯಕ್ಕೆ ನೀಡುವ ಆದ್ಯತೆಯನ್ನೇ ಮಾನಸಿಕ ಆರೋಗ್ಯಕ್ಕೂ ನೀಡಬೇಕು’ ಎಂಬ ಉದ್ದೇಶದಿಂದ ಈ ಸಲದ ಘೋಷವಾಕ್ಯವನ್ನು ರೂಪಿಸಿದೆ.

Tap to resize

Latest Videos

ಕೊರೋನಾ ವೈರಸ್‌ ಮಾನಸಿಕ ಆರೋಗ್ಯದ ವಿಷಯದಲ್ಲಿ ಜಾಗತಿಕ ಬಿಕ್ಕಟ್ಟನ್ನೇ ಸೃಷ್ಟಿಸಿದೆ. ಜನರು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಒತ್ತಡಗಳಿಗೆ ಸಿಲುಕಿದ್ದಾರೆ. ಲಕ್ಷಾಂತರ ಜನರ ಮಾನಸಿಕ ಆರೋಗ್ಯ ದುರ್ಬಲಗೊಂಡಿದೆ. ಸಾಂಕ್ರಾಮಿಕ ರೋಗದ ಮೊದಲ ವರ್ಷದಲ್ಲಿ ಆತಂಕ ಮತ್ತು ಖಿನ್ನತೆಯ ಅಸ್ವಸ್ಥತೆಗಳ ಹೆಚ್ಚಳವು 25%ಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಅದೇ ಸಮಯದಲ್ಲಿ, ಮಾನಸಿಕ ಆರೋಗ್ಯ ಸೇವೆಗಳ ವ್ಯಾಪ್ತಿ ಅಥವಾ ಲಭ್ಯತೆ ವಿಸ್ತಾರವಾಗಿಲ್ಲ. ಪರಿಣಾಮ, ಮಾನಸಿಕ ಸಮಸ್ಯೆಗಳು ಜಗತ್ತಿನಲ್ಲಿ ಹೆಚ್ಚಾಗಿದ್ದರೂ ಎಲ್ಲರಿಗೂ ಚಿಕಿತ್ಸೆ ಲಭಿಸುವ ಸಾಧ್ಯತೆಗಳಿಲ್ಲದ ಕಾರಣ ಮಾನಸಿಕ ಆರೋಗ್ಯ ಮತ್ತು ಚಿಕಿತ್ಸೆಯ ನಡುವಿನ ಅಂತರ ಹೆಚ್ಚಾಗಿದೆ.

ಇದನ್ನು ಓದಿ: World Mental health day: ವಿಶ್ವ ಮಾನಸಿಕ ಆರೋಗ್ಯ ದಿನದ ಇತಿಹಾಸ, ಮಹತ್ವ ಹೀಗಿದೆ!

ಮಾನಸಿಕ ಅಸ್ವಾಸ್ಥ್ಯಕ್ಕೆ ಕಾರಣಗಳು
ಬೆಳೆಯುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು, ದೀರ್ಘಕಾಲದ ಘರ್ಷಣೆಗಳು, ಹಿಂಸಾಚಾರ ಮತ್ತು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳು ಇಡೀ ಜನಸಂಖ್ಯೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಜಗತ್ತಿನಲ್ಲಿ ಕಾಲಕಾಲಕ್ಕೆ ಎದುರಾಗುವ ಇಂತಹ ಆರೋಗ್ಯ ಬಿಕ್ಕಟ್ಟು ಮಾನವನ ಪ್ರಗತಿಗೂ ಅಡ್ಡಗಾಲು ಹಾಕುತ್ತವೆ. 
2021ರಲ್ಲಿ ವಿಶ್ವದಾದ್ಯಂತ 8.4 ಕೋಟಿ ಜನರು ಬಲವಂತವಾಗಿ ಸ್ಥಳಾಂತರಗೊಂಡರು. ಹುಟ್ಟಿದ ಊರನ್ನು ಬಿಟ್ಟು ಕಂಡುಕೇಳರಿಯದ ಜಾಗಕ್ಕೆ ಹೋಗಿ ಬದುಕು ಕಟ್ಟಿಕೊಳ್ಳಬೇಕು ಎಂಬುದು ಮನುಷ್ಯನ ಮನಸ್ಸಿನ ಮೇಲೆ ಬಹಳ ಒತ್ತಡ ಹಾಕುತ್ತದೆ. ಇದು ಮಾನಸಿಕ ಅನಾರೋಗ್ಯಕ್ಕೂ ನಮ್ಮನ್ನು ನೂಕಬಹುದು. ಹೀಗಾಗಿ ವ್ಯಕ್ತಿಗಳು, ಸಮುದಾಯಗಳು ಮತ್ತು ಸರ್ಕಾರಗಳು ಮಾನಸಿಕ ಆರೋಗ್ಯಕ್ಕೆ ನೀಡುವ ಮೌಲ್ಯ ಮತ್ತು ಬದ್ಧತೆಯನ್ನು ಆಳಗೊಳಿಸಬೇಕು. ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ಮತ್ತು ಎಲ್ಲಾ ವಲಯಗಳಾದ್ಯಂತ ಎಲ್ಲಾ ಪಾಲುದಾರರಿಂದ ಹೆಚ್ಚಿನ ಬದ್ಧತೆ, ತೊಡಗಿಸಿಕೊಳ್ಳುವಿಕೆ ಮತ್ತು ಹೂಡಿಕೆಯೊಂದಿಗೆ ಆ ಮೌಲ್ಯವನ್ನು ಹೊಂದಿಸಬೇಕು.

ನಾವು ಏನು ಮಾಡಬೇಕು?
ಕಳಂಕ ಮತ್ತು ತಾರತಮ್ಯವು ಸಾಮಾಜಿಕ ಸೇರ್ಪಡೆಗೆ ಮತ್ತು ಸರಿಯಾದ ಕಾಳಜಿಯ ಪ್ರವೇಶಕ್ಕೆ ತಡೆಗೋಡೆಯಾಗುತ್ತದೆ. ಮುಖ್ಯವಾಗಿ, ಮಾನಸಿಕ ಆರೋಗ್ಯವನ್ನು ಯಾವ ಮಧ್ಯಸ್ಥಿಕೆಗಳ ಮೂಲಕ ಸುಧಾರಿಸಬಹುದು ಎಂಬುದರ ಕುರಿತು ಜಾಗೃತಿಯನ್ನು ಹೆಚ್ಚಿಸುವಲ್ಲಿ ನಾವೆಲ್ಲರೂ ನಮ್ಮ ಪಾತ್ರವನ್ನು ನಿಭಾಯಿಸಬಹುದು ಮತ್ತು ವಿಶ್ವ ಮಾನಸಿಕ ಆರೋಗ್ಯ ದಿನವು ಅದನ್ನು ಒಟ್ಟಾಗಿ ಮಾಡಲು ಒಂದು ಅವಕಾಶವಾಗಿದೆ. ಮಾನಸಿಕ ಆರೋಗ್ಯವನ್ನು ಮೌಲ್ಯೀಕರಿಸುವ, ಉತ್ತೇಜಿಸುವ ಮತ್ತು ರಕ್ಷಿಸುವ ಜಗತ್ತನ್ನು ನಾವು ರೂಪಿಸಬೇಕಿದೆ. ಅಲ್ಲಿ ಮಾನಸಿಕ ಆರೋಗ್ಯವನ್ನು ಆನಂದಿಸಲು ಮತ್ತು ಅವರ ಮಾನವ ಹಕ್ಕುಗಳನ್ನು ಚಲಾಯಿಸಲು ಎಲ್ಲರಿಗೂ ಸಮಾನ ಅವಕಾಶವಿರಬೇಕು. ಆಗ ಪ್ರತಿಯೊಬ್ಬರೂ ಅವರಿಗೆ ಅಗತ್ಯವಿರುವ ಮಾನಸಿಕ ಆರೋಗ್ಯ ರಕ್ಷಣೆಯನ್ನು ಪಡೆಯಬಹುದು.

ಮಾನಸಿಕ ಸಮಸ್ಯೆ ನಿರ್ಲಕ್ಷಿಸಬೇಡಿ
ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಎಲ್ಲರಿಗೂ ಜಾಗತಿಕ ಆದ್ಯತೆಯನ್ನಾಗಿ ಮಾಡುವುದು ಎಂಬ ವಿಷಯದ ಸುತ್ತ ಅಭಿಯಾನವನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ. ಮಾನಸಿಕ ಆರೋಗ್ಯ ಹೊಂದಿರುವ ಜನರು, ವಕೀಲರು, ಸರ್ಕಾರಗಳು, ಉದ್ಯೋಗದಾತರು, ಉದ್ಯೋಗಿಗಳು ಮತ್ತು ಇತರ ಪಾಲುದಾರರು ಈ ಕ್ಷೇತ್ರದಲ್ಲಿ ಪ್ರಗತಿಯನ್ನು ಗುರುತಿಸಲು ಮತ್ತು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಾವು ಏನು ಮಾಡಬೇಕು ಎಂಬುದರ ಕುರಿತುಧ್ವನಿಗೂಡಿಸಲು ಇದು ಒಂದು ಅವಕಾಶವಾಗಿದೆ.

ಇದನ್ನೂ ಓದಿ: ಎಂಜಾಯ್ ಮಾಡ್ಕೊಂಡು ವ್ಯಾಯಾಮ ಮಾಡಿ! 

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಕಾರಣಗಳಿಗೆ ಯುವಕರು ಮತ್ತು ಯುವತಿಯರು ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಮಾನಸಿಕ ಆರೋಗ್ಯದ ಜೊತೆಗೆ ಅವರ ಕುಟುಂಬದವರ ಮಾನಸಿಕ ನೆಮ್ಮದಿಯೂ ಕೆಡುತ್ತದೆ. ಮಾನಸಿಕ ಒತ್ತಡವೆಂಬುದು ಈಗಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ತೊಂದರೆಯಾಗಿದೆ. ಆದರೆ ಇದು ಸಾಮನ್ಯವಾಗಿ ಬರುವ ತೊಂದರೆ ಎಂದು ನಿರ್ಲಕ್ಷಿಸುವ ಬದಲಿಗೆ ಇದಕ್ಕೆ ತಕ್ಷಣವೇ ಮಾನಸಿಕ ಆರೋಗ್ಯ ವೈದ್ಯರನ್ನೂ ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು.

ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲು ಸರ್ಕಾರ ಹಾಗೂ ಪ್ರಜ್ಞಾವಂತ ಜನ ಸಮುದಾಯಗಳು ಮುಂದಾಗಬೇಕು. ಮಾನಸಿಕ ಅನಾರೋಗ್ಯ ಎಂಬುದು ಕಳಂಕವಲ್ಲವೆ ಎಂಬುದನ್ನು ಎಲ್ಲರಿಗೂ ಅರ್ಥ ಮಾಡಿಸಬೇಕು. ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುವುದರ ಮೂಲ ಉದ್ದೇಶವೂ ಇದೇ ಆಗಿದೆ.

click me!