ನಾವು ಬದುಕೋಕೆ ಏನೆಲ್ಲ ಅಗತ್ಯವೆಂದು ಭಾವಿಸೆದ್ದೆವೋ ಅವೆಲ್ಲ ಭ್ರಮೆಯಷ್ಟೇ ಎಂಬುದನ್ನು ಸಾಬೀತು ಪಡಿಸಿದೆ ಕೊರೋನಾ ಕಾರಣದಿಂದ ಹೇರಲಾದ ಲಾಕ್‌ಡೌನ್. ಈಗ ಬಟ್ಟೆಯ ಚಿಂತೆಯಿಲ್ಲ. ಕೇವಲ ಹೊಟ್ಟೆಯ ಚಿಂತೆಯಷ್ಟೇ. ಹಾಗಿದ್ದೂ ಜಗತ್ತಿನ ಒಂದೊಂದು ದೇಶಗಳಲ್ಲಿ ಕೆಲವೊಂದು ಅಚ್ಚರಿಯ ವಸ್ತುಗಳು ಮೂಲಭೂತ ಅಗತ್ಯಗಳಾಗಿ, ಸರ್ಕಾರದ ಅನುಮತಿಯ ಮೇರೆಗೆ ಅಲ್ಲಿನ ಜನರಿಗೆ ದೊರೆಯುತ್ತಿವೆ. ಅವು ಕೇವಲ ಊಟ ಹಾಗೂ ಮೆಡಿಸಿನ್ಸ್ ಅಲ್ಲ. ಅವೇನೆಂದು ತಿಳಿದರೆ ಅಚ್ಚರಿಯಾಗುತ್ತದೆ.
ನಾವು ಬದುಕೋಕೆ ಏನೆಲ್ಲ ಅಗತ್ಯವೆಂದು ಭಾವಿಸೆದ್ದೆವೋ ಅವೆಲ್ಲ ಭ್ರಮೆಯಷ್ಟೇ ಎಂಬುದನ್ನು ಸಾಬೀತು ಪಡಿಸಿದೆ ಕೊರೋನಾ ಕಾರಣದಿಂದ ಹೇರಲಾದ ಲಾಕ್‌ಡೌನ್. ಈಗ ಬಟ್ಟೆ, ಬಾರ್, ಸಂಗೀತ ಕಾರ್ಯಕ್ರಮ, ಜಿಮ್ಗೋ ಹೋಗುವುದು, ಹೋಟೆಲ್, ಸುತ್ತಾಟ ಇತ್ಯಾದಿಗಳೆಲ್ಲ ಕೇವಲ ಲಕ್ಷುರಿಗಳಷ್ಟೇ ಎಂಬುದು ಅರಿವಾಗುತ್ತಿದೆ. ಮೂರು ಹೊತ್ತು ಊಟ, ಒಂದಿಷ್ಟು ಮನರಂಜನೆ, ಇಂಟರ್ನೆಟ್- ಇಷ್ಟಿದ್ದರೆ ಲಾಕ್‌ಡೌನ್ ಸಂದರ್ಭದಲ್ಲಿ ಬದುಕಬಹುದು ಎಂಬುದನ್ನು ಬಹುತೇಕರು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಜನರ ಅಗತ್ಯಕ್ಕೆ ತಕ್ಕಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಮೆಡಿಕಲ್ ಸ್ಟೋರ್ಸ್ ಹಾಗೂ ದಿನಸಿ ಅಂಗಡಿಗಳಿಗೆ ಮಾತ್ರ ತೆರೆಯಲು ಅವಕಾಶವಿದೆ. ಪೋಲೀಸ್, ವೈದ್ಯಕೀಯ ಸೇವೆಗಳು, ಅತ್ಯಗತ್ಯ ಬ್ಯಾಂಕಿಂಗ್ ಸೇವೆ, ಕೆಲ ಸರ್ಕಾರಿ ಸೇವೆಗಳು, ಆಹಾರ ಪೂರೈಕೆ ಚೈನ್ಸ್ ಹೀಗೆ- ಇಂಥವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂಬುದಕ್ಕಷ್ಟೇ ಪ್ರಾಮುಖ್ಯತೆ.
ಆದರೆ, ಮತ್ತೆ ಕೆಲವರಿಗೆ ಮಧ್ಯವಿಲ್ಲದೆ ದಿನ ಮುಂದೆ ಹೋಗಲ್ಲ. ಇನ್ನು ಕೆಲವರಿಗೆ ಡ್ರಗ್ಸ್ ಬೇಕೇ ಬೇಕು, ಮಾಂಸವಿಲ್ಲದ ಊಟ ಊಟವೇ ಅಲ್ಲ ಎನ್ನುವವರು ಒಂದಿಷ್ಟು ಮಂದಿ. ಇದು ವೈಯಕ್ತಿಕ ಮಟ್ಟದಲ್ಲಾಯಿತು. ದೇಶಗಳ ಮಟ್ಟದಲ್ಲಿ, ಅಲ್ಲಿನ ನೆಲದ ಸಂಸ್ಕೃತಿಯ ಮಟ್ಟದಲ್ಲಿ ನೋಡಿದಾಗ ಲಾಕ್‌ಡೌನ್ ಸಂದರ್ಭದಲ್ಲಿ ಬದುಕಲು 'ಅತ್ಯಗತ್ಯ'ವಾದ ವಸ್ತುಗಳಲ್ಲಿ ಬಹಳ ಚಿತ್ರವಿಚಿತ್ರವಾದ ವೈಪರೀತ್ಯಗಳುಂಟು. ಕೋವಿಡ್ ಒತ್ತಡದಿಂದ ಮುಕ್ತರಾಗಲು ಗೃಹಬಂಧನದ ಸಮಯದಲ್ಲೂ ಇವು ಜನರಿಗೆ ದೊರೆಯುವಂತೆ ಆಯಾ ಸರ್ಕಾರಗಳು ನೋಡಿಕೊಳ್ಳುತ್ತಿವೆ. ಅವೇನೇನೆಂದು ತಿಳಿದರೆ ಖಂಡಿತಾ ಅಚ್ಚರಿ ಪಡುತ್ತೀರಿ.
ನೆದರ್‌ಲ್ಯಾಂಡ್ಸ್ ಇಲ್ಲಿ ಅತ್ಯಗತ್ಯ ಸೇವೆಗಳಲ್ಲಿ ಒಂದಾಗಿ ತೆರೆಯಲು ಅವಕಾಶವಿರುವುದು ಕಾಫಿ ಶಾಪ್ ಹಾಗೂ ಕೆನಬೀಸ್ ಡ್ರಗ್ ಮಾರುವ ಅಂಗಡಿಗಳಿಗೆ! ಆರಂಭದಲ್ಲಿ ಇವನ್ನು ಕೂಡಾ ಕ್ಲೋಸ್ ಮಾಡಲಾಗಿತ್ತಾದರೂ ಜನರ ಅಗತ್ಯಗಳನ್ನು ಅರಿತು ಮತ್ತೆ ತೆರೆಯಲಾಗಿದೆ. ಗಾಂಜಾ ಇಲ್ಲದೆ ಇಲ್ಲಿನವರು ದಿನ ದೂಡಲಾರರು. ಇದರೊಂದಿಗೆ ಸೈಕ್ಲಿಂಗ್ ಎಂಬುದು ಹುಚ್ಚಿನಷ್ಟು ವಿಪರೀತವಿರುವ ಈ ದೇಶದಲ್ಲಿ ಬೈಸೈಕಲ್ ಅಂಗಡಿಗಳಿಗೆ ತೆರೆಯಲು ಅವಕಾಶವಿದೆ.
ಫ್ರಾನ್ಸ್ ಫ್ರೆಂಚನ್ನರ ಗುರುತಿನ ಒಂದು ಭಾಗವೇ ಆಗಿ ಹೋಗಿದೆ ವೈನ್ ಸೇವನೆ. ಹಾಗಾಗಿ, ಇಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ವೈನ್ ಶಾಪ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಅದರೊಂದಿಗೆ ಚೀಸ್, ಮಾಂಸ, ತಂಬಾಕು ಅಂಗಡಿಗಳು ಹಾಗೂ ಡ್ರೈ ಕ್ಲೀನರ್‌ಗಳಿಗೆ ಕೂಡಾ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಬೆಲ್ಜಿಯಂ ಫ್ರೆಂಚ್ ಫ್ರೈಸನ್ನು ಜಗತ್ತಿಗೆ ನೀಡಿದ್ದು ಬೆಲ್ಜಿಯಂ. ಇಲ್ಲಿನ ಜನರು ಸಾಯುವ ಕಾಲದಲ್ಲೂ ಫ್ರೈಸ್ ಬೇಕೆನ್ನುವ ಸ್ವಭಾವದವರು. ಹಾಗಾಗಿ, ಬೆಲ್ಜಿಯಂನಲ್ಲಿ ಫ್ರೈಸ್ ತಯಾರಿಸುವ ಹೋಟೆಲ್‌ಗಳು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಹೇರ್ ಸಲೂನ್‌ಗಳು ಕೂಡಾ ಜನರಿಗೆ ಅತ್ಯಗತ್ಯವಾಗಿರುವುದರಿಂದ ಅವನ್ನು ತೆರೆಯಲು ಅನುಮತಿ ನೀಡಲು ಸರ್ಕಾರ ನಿರ್ಧರಿಸಿತ್ತು. ಆದರೆ, ಸಲೂನ್‌ನಲ್ಲಿ ಸೋಷ್ಯಲ್ ಡಿಸ್ಟೆನ್ಸಿಂಗ್ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಹೇರ್ ಸಲೂನ್ ಒಕ್ಕೂಟವೇ ಒತ್ತಾಯ ಮಾಡಿ ಅವುಗಳನ್ನು ಕ್ಲೋಸ್ ಮಾಡಿದೆ.
ಅಮೆರಿಕ ಕೊರೋನಾ ವೈರಸ್ ಕ್ರೈಸಿಸ್ ಏನೇ ಇರಲಿ, ಅಮೆರಿಕದಲ್ಲಿ ಗನ್ ಸ್ಟೋರ್‌ಗಳು ಅತ್ಯವಶ್ಯಕ ಪಟ್ಟಿಗೆ ಬಂದಿರುವುದು ಅಚ್ಚರಿಯೇನಲ್ಲ. ಅದರಲ್ಲೂ ಮಾರ್ಚ್‌ನಲ್ಲಿ ಅತಿ ಹೆಚ್ಚು ಗನ್‌ಗಳು ಮಾರಾಟವಾಗಿವೆ. ಸೋಷ್ಯಲ್ ಡಿಸ್ಟೆನ್ಸ್ ನಿಭಾಯಿಸುತ್ತಲೇ ಆಡಬಹುದಾದ ಆಟ ಗಾಲ್ಫ್‌ಗೆ ಕೂಡಾ ಇಲ್ಲಿ ರಿಯಾಯಿತಿ ಸಿಕ್ಕಿದೆ. ಡ್ರಗ್ಸ್, ಗಾಂಜಾಗಳು ಕೂಡಾ ಜನರ ಅತ್ಯಗತ್ಯವೇ ಆಗಿವೆ ಎಂದು ಪರಿಗಣಿಸಿ ಅವುಗಳ ಮಾರಾಟಕ್ಕೆ ಕೂಡಾ ಅನುಮತಿ ನೀಡಲಾಗಿದೆ. ಇಂಥ ಕಷ್ಟದ ಸಂದರ್ಭದಲ್ಲಿ ಮದ್ಯವಿಲ್ಲದೆ ಬದುಕುವುದು ಸಾಧ್ಯವಿಲ್ಲ ಎಂದು ಪರಿಗಣಿಸಿರುವ ಅಮೆರಿಕ ಸರ್ಕಾರ ಅದರ ಮಾರಾಟಕ್ಕೂ ಅವಕಾಶ ನೀಡಿದೆ.
ಯುಕೆ ಬಾರ್ ಹಾಗೂ ಪಬ್‌ಗಳು ಯುಕೆಯಲ್ಲಿ ಕ್ಲೋಸ್ ಆಗಿದ್ದರೂ, ಲೈಸೆನ್ಸ್ ರಹಿತ ಮದ್ಯ ಮಾರಾಟ ಮಳಿಗೆಗಳು ದೇಶಾದ್ಯಂತ ತೆರೆದಿದ್ದು ಜನರಿಗೆ ಕಷ್ಟಕಾಲದಲ್ಲಿ ಕೈ ಹಿಡಿಯುತ್ತಿವೆ. ಬೈಸೈಕಲ್ ಶಾಪ್‌ಗಳು ಕೂಡಾ ತೆರೆದಿವೆ.
ಬ್ರೆಜಿಲ್ ಜನರ ಉಳಿವು, ಆರೋಗ್ಯ ಹಾಗೂ ಸುರಕ್ಷತೆಗೆ ಚರ್ಚ್ ಸೇವೆ ಇರಲೇಬೇಕು ಎಂದು ನಂಬಿದ್ದಾರೆ ಬ್ರೆಜಿಲ್ ಅಧ್ಯಕ್ಷ್ಯ. ಹಾಗಾಗಿಯೇ ಇಲ್ಲಿನ ಚರ್ಚ್‌ಗಳು ಲಾಕ್‌ಡೌನ್ ಸಂದರ್ಭದಲ್ಲಿ ಕೂಡಾ ತೆರೆದಿವೆ.
ಭಾರತ ಪಶ್ಚಿಮ ಬಂಗಾಳದ ಜನರಿಗೆ ಸ್ವೀಟ್ ಮೀಟ್ ಇಲ್ಲದೆ ಬದುಕಲಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಸರ್ಕಾರ ಅವರಿಗಾಗಿ ಮಿಶ್ಟಿ ಶಾಪ್‌ಗಳನ್ನು ತೆರೆಯಲು ಅವಕಾಶ ನೀಡಿದೆ. ಇದರೊಂದಿಗೆ ಮೀನುಗಳು ಇಲ್ಲಿನವರ ಪ್ರತಿನಿತ್ಯದ ಊಟದ ಭಾಗವಾಗಿರುವುದರಿಂದ ಅವನ್ನು ಆ್ಯಪ್ ಮುಖಾಂತರ ಮಾರಲು ಅನುಮತಿಯಿದೆ. ಕೇರಳದಲ್ಲಿ ಮದ್ಯವಿಲ್ಲದೆ ವಿಥ್‌ಡ್ರಾವಲ್ ಸಿಂಪ್ಟಮ್ ತೋರುವವರಿಗೆ ಮಾತ್ರ ಮತಿಯಲ್ಲಿ ಆಲ್ಕೋಹಾಲ್ ನೀಡಲಾಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.