Parenting Tips : ವರ್ಷ ನಾಲ್ಕಾದ್ರೂ ಮಗು ಬೆರಳು ಚೀಪ್ತಿದ್ಯಾ? ಇಲ್ಲಿದೆ ಟಿಪ್ಸ್

By Suvarna News  |  First Published Jun 23, 2022, 2:26 PM IST

ಮಕ್ಕಳ ಕೆಲವೊಂದು ಅಭ್ಯಾಸ ಮುಜುಗರ ತರಿಸುತ್ತದೆ. ಹಾಗೆಯೇ ಅದು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ರೆ ಮಕ್ಕಳಿಗೆ ಬೈದ್ರೆ ಯಾವುದೇ ಪ್ರಯೋಜನವಿಲ್ಲ. ಪಾಲಕರಾದವರು ತಾಳ್ಮೆಯಿಂದ ಸಮಸ್ಯೆ ಬಗೆಹರಿಸಬೇಕಾಗುತ್ತದೆ.
 


ಪ್ರತಿ ದಿನ ಮಕ್ಕಳ (Children ) ವರ್ತನೆ, ಸ್ವಭಾವದಲ್ಲಿ ನಾವು ಬದಲಾವಣೆ ಕಾಣಬಹುದು. ಕೆಲ ಮಕ್ಕಳ ಬೆಳವಣಿಗೆ ಬೇಗ ಆಗುತ್ತೆ. ಮತ್ತೆ ಕೆಲ ಮಕ್ಕಳ ಬೆಳವಣಿಗೆ (Growth) ನಿಧಾನವಾಗಿ ಆಗುತ್ತದೆ. ಹಾಗೆಯೇ ಮಕ್ಕಳು ಮೂರ್ನಾಲ್ಕು ತಿಂಗಳಿರುವಾಗ್ಲೇ ಕೈ ಬೆರಳ (Finger) ನ್ನು ಬಾಯಿಗೆ ಹಾಕಿಕೊಳ್ಳಲು ಶುರು ಮಾಡ್ತಾರೆ. ಆರಂಭದಲ್ಲಿ ಇದು ಚೆನ್ನಾಗಿಯೇ ಕಾಣುತ್ತದೆ. ಆದ್ರೆ ದಿನ ಕಳೆದಂತೆ ಮಕ್ಕಳಿಗೆ ಇದೊಂದು ಅಭ್ಯಾಸವಾಗಿ ಬಿಡುತ್ತದೆ. ಇದನ್ನು ಬಿಡಿಸೋದು ಪಾಲಕರಿಗೆ ಕಷ್ಟವಾಗುತ್ತದೆ. ಸಾಮಾನ್ಯವಾಗಿ ಮೂರು ವರ್ಷಗಳವರೆಗೆ ಮಕ್ಕಳು ಕೈ ಬೆರಳನ್ನು ಬಾಯಿಗೆ ಹಾಕಿದ್ರೆ ಅದನ್ನು ಸಾಮಾನ್ಯ ಎನ್ನಬಹುದು. ಮೂರು ವರ್ಷದ ನಂತ್ರವೂ ಮಕ್ಕಳು ಕೈ ಬೆರಳನ್ನು ಬಾಯಿಗೆ ಹಾಕ್ತಿದ್ದರೆ ಅದು ಸಹಜವೆನ್ನಿಸುವುದಿಲ್ಲ. ನೋಡಲು ಕೂಡ ವಿಚಿತ್ರವೆನ್ನಿಸುತ್ತದೆ. ಮಕ್ಕಳ ಆರೋಗ್ಯಕ್ಕೆ ಇದು ಹಾನಿಕಾರಕವೂ ಹೌದು. ಮಕ್ಕಳು ದೊಡ್ಡವರಾಗ್ತಿದ್ದಂತೆ ಅನೇಕ ವಸ್ತುಗಳನ್ನು ಮುಟ್ತಾರೆ. ಆದ್ರೆ ಕೈ ತೊಳೆಯದೆ ಅದೇ ಕೈಯನ್ನು ಬಾಯಿಗೆ ಹಾಕ್ತಾರೆ. ಇದ್ರಿಂದ ಬ್ಯಾಕ್ಟೀರಿಯಾಗಳು ದೇಹ ಸೇರುತ್ತವೆ. ಆಗಾಗಾ ಅನಾರೋಗ್ಯ ಸಮಸ್ಯೆ ಮಕ್ಕಳನ್ನು ಕಾಡಲು ಶುರು ಮಾಡುತ್ತದೆ. ಇದಲ್ಲದೆ ಇದು ಮಕ್ಕಳ ಮಾನಸಿಕ ಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಮಕ್ಕಳುಕೈ ಬೆರಳು ಬಾಯಿಗೆ ಹೋಗ್ತಿದ್ದರೆ ಆರಂಭದಲ್ಲಿಯೇ ಅದನ್ನು ಬಿಡಿಸುವುದು ಉತ್ತಮ. ಒಂದ್ವೇಳೆ ಅದು ಸಾಧ್ಯವಾಗಿಲ್ಲ ಎನ್ನುವ ಪಾಲಕರು, ಈಗಲಾದ್ರೂ ಮಕ್ಕಳ ಈ ಅಭ್ಯಾಸ ಬಿಡಿಸುವ ಪ್ರಯತ್ನ ಮಾಡಿ. ನಾವಿಂದು ಕೈ ಬೆರಳನ್ನು ಬಾಯಿಗೆ ಹಾಕುವ ಮಕ್ಕಳ ಕೆಟ್ಟ ಅಭ್ಯಾಸ ಬಿಡಿಸಲು ಕೆಲ ಟ್ರಿಕ್ಸ್ ಹೇಳ್ತೇವೆ.

ಮಕ್ಕಳಿಗೆ ಅದ್ರ ಪರಿಣಾಮ ತಿಳಿಸಿ : ಮಕ್ಕಳು ನಾಲ್ಕೈದು ವರ್ಷದವರಾಗ್ತಿದ್ದಂತೆ ನಿಮ್ಮ ಮಾತುಗಳು ಅವರಿಗೆ ಸಂಪೂರ್ಣ ಅರ್ಥವಾಗುತ್ತವೆ. ಹಾಗಾಗಿ ನೀವು ಮಕ್ಕಳಿಗೆ ಕೈ ಬೆರಳು ತಿಂದ್ರೆ ಆಗುವ ನಷ್ಟವೇನು ಎಂಬುದನ್ನು ಹೇಳಬಹುದು. ಕೈನಲ್ಲಿರುವ ಕೊಳಕು ಹೊಟ್ಟೆ ಸೇರಿ ಹೊಟ್ಟೆಯಲ್ಲಿ ಹುಳುವಾಗುತ್ತದೆ ಎಂದು ನೀವು ಮಕ್ಕಳಿಗೆ ಹೇಳಬೇಕು. ಹೊಟ್ಟೆ ಹುಳು ನೋವಿಗೆ ಕಾರಣವಾಗಿ, ಇಂಜೆಕ್ಷನ್ ನೀಡ್ಬೇಕಾಗುತ್ತದೆ ಎಂದು ಸ್ವಲ್ಪ ಭಯಹುಟ್ಟಿಸಿ. ಮಕ್ಕಳು ಇಂಜೆಕ್ಷನ್ ಭಯಕ್ಕೆ ಈ ಅಭ್ಯಾಸದಿಂದ ಹಿಂದೆ ಸರಿಯಬಹುದು.

Tap to resize

Latest Videos

ಈ ದೇಶದಲ್ಲಿ ಮಕ್ಕಳು ಮುಲಾಜಿಲ್ಲದೇ ವೈನ್ ಕುಡಿಯುತ್ತಾರೆ

 

ಕಾರಣ ತಿಳಿದು ಸಮಸ್ಯೆ ಬಗೆಹರಿಸಿ : ಕೆಲ ಮಕ್ಕಳು ಟೆನ್ಷನ್ ನಲ್ಲಿ ಬೆರಳು ಚೀಪಲು ಶುರು ಮಾಡ್ತಾರೆ. ಹಾಗಾಗಿ ಮಕ್ಕಳು ಯಾವ ಸಮಯದಲ್ಲಿ ಕೈ ಬೆರಳನ್ನು ಬಾಯಿಗೆ ಹಾಕ್ತಾರೆ ಎಂಬುದನ್ನು ಪಾಲಕರಾದ ನೀವು ಗಮನಿಸಬೇಕು. ಒಂದ್ವೇಳೆ ಟೆನ್ಷನ್ ಆದಾಗ ಮಕ್ಕಳು ಕೈ ಬೆರಳನ್ನು ಬಾಯಿಗೆ ಹಾಕಿದ್ರೆ ಅವರ ಸಮಸ್ಯೆ ತಿಳಿದುಕೊಳ್ಳಿ. ಹಾಗೆ ಅದನ್ನು ಹೇಗೆ ಬಗೆಹರಿಸಬೇಕೆಂದು ಅವರಿಗೆ ತಿಳಿಸಿ ಹೇಳಿ. ಸಮಸ್ಯೆಯಾದಾಗ ಬೆರಳನ್ನು ಚೀಪುವ ಬದಲು ಪಾಲಕರ ಮುಂದೆ ಹೇಳಿಕೊಳ್ಳುವಂತೆ ಅವರಿಗೆ ಸಾಮಾಧಾನವಾಗಿ ತಿಳಿಸಿ.

ಆಹಾರ : ಕೆಲ ಮಕ್ಕಳು ಹೊಟ್ಟೆ ಹಸಿದಾಗ ಬಾಯಿಗೆ ಬೆರಳು ಹಾಕ್ತಾರೆ. ಹಾಗಾಗಿ ಅವರ ಹೊಟ್ಟೆಯ ಬಗ್ಗೆ ಗಮನ ನೀಡಿ. ಸರಿಯಾದ ಸಮಯಕ್ಕೆ ಆಹಾರ ನೀಡಿ.

ಒಂಟಿತನ : ಒಂಟಿಯಾಗಿದ್ದಾಗ, ಮಾಡಲು ಕೆಲಸವಿಲ್ಲದೆ ಹೋದಾಗ ಮಕ್ಕಳು ಬೆರಳು ಚೀಪುತ್ತಾರೆ. ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ. ಹಾಗೆ ಖಾಲಿ ಇರಲು ಬಿಡಬೇಡಿ. ಕೈಗೆ ಏನಾದ್ರೂ ವಸ್ತು ನೀಡಿ, ಕೆಲಸ ಕೊಡುತ್ತಿರಿ.

ಆಗಾಗ ನೆಟಿಕೆ ತೆಗೀತಿದ್ರೆ ಕೈ ಬೆರಳುಗಳಲ್ಲಿ ಶಕ್ತೀನೆ ಇರಲ್ಲ !

ಮನೆ ಮದ್ದು : ನೀವು ಈ ಅಭ್ಯಾಸ ತಪ್ಪಿಸಲು ಮನೆ ಮದ್ದನ್ನು ಬಳಸಬಹುದು. ಕೈ ಬೆರಳಿಗೆ ಕಹಿ ಅಥವಾ ಹುಳಿ ಪದಾರ್ಥವನ್ನು ಹಚ್ಚಬೇಕು. ಆರೋಗ್ಯಕ್ಕೆ ಒಳ್ಳೆಯದಾದ ಪದಾರ್ಥವನ್ನೇ ಬಳಸಿ. ಹುಳಿ ಅಥವಾ ಕಹಿ ಬಾಯಿಗೆ ಹೋಗ್ತಿದ್ದಂತೆ ಮಕ್ಕಳು ಬೆರಳನ್ನು ಹೊರಗೆ ತೆಗೆಯುತ್ತಾರೆ. ನಾಲ್ಕೈದು ದಿನ ಹೀಗೆ ಮಾಡಿದ್ರೆ ಮಕ್ಕಳ ಈ ಅಭ್ಯಾಸ ಬಿಟ್ಟು ಹೋಗುತ್ತದೆ.  

click me!