ಮಕ್ಕಳ ಆನ್‌ಲೈನ್‌ ಗೇಮಿಂಗ್ ಅಡಿಕ್ಷನ್ ಕಡಿಮೆ ಮಾಡೋದು ಹೇಗೆ?

By Suvarna News  |  First Published Jun 8, 2022, 2:17 PM IST

ಇವತ್ತಿನ ಕಾಲದಲ್ಲಿ ಮಕ್ಕಳ (Children) ಕೈಲಿ ಬುಕ್ ಇರೋದಕ್ಕಿಂತಲೂ ಹೆಚ್ಚಾಗಿ ಮೊಬೈಲ್ (Mobile) ನೋಡಲು ಸಿಗುತ್ತದೆ. ಆನ್‌ಲೈನ್ ಕ್ಲಾಸ್ ಒಂದು ನೆನಪಾದರೆ ಉಳಿದಂತೆ ಎಲ್ಲಾ ಸಮಯದಲ್ಲೂ ಆನ್‌ಲೈನ್‌ ಗೇಮ್ಸ್‌ಗೆ (Online Game) ಅಡಿಕ್ಟ್ ಆಗಿರೋದನ್ನು ನೋಡಬಹುದು. ಮಕ್ಕಳಲ್ಲಿ ಹೆಚ್ಚಾಗಿರುವ ಈ ಗೇಮಿಂಗ್ ಅಡಿಕ್ಷನ್ (Addiction) ಕಡಿಮೆ ಮಾಡಲು ಇಲ್ಲಿದೆ ಕೆಲವೊಂದು ಟಿಪ್ಸ್‌.


ಮೊಬೈಲ್‌ (Mobile) ಮನುಷ್ಯನಿಗೆ ಅದೆಷ್ಟು ಅನಿವಾರ್ಯವಾಗಿ ಬಿಟ್ಟಿದೆ ಎಮದರೆ ಒಂದಿನ ಕೈಯಲ್ಲಿ ಮೊಬೈಲ್‌ ಇಲ್ಲಾಂದ್ರೆ ಸಂಪೂರ್ಣ ಅಸಹಾಯಕನಾಗಿ ಬಿಡುತ್ತಾನೆ. ಕಾಂಟ್ಯಾಕ್ಸ್ ನಂಬರ್‌ಗಳು, ಮುಖ್ಯವಾದ ಡಾಂಕ್ಯುಮೆಂಟ್‌ಗಳು, ಬ್ಯಾಂಕ್‌ ವಿವರಗಳು ಎಲ್ಲವೂ ಮೊಬೈಲ್‌ನಲ್ಲಿ ಇರುತ್ತವೆ. ಮಾತ್ರವಲ್ಲ ಇತ್ತೀಚಿಗೆ ಕೆಲಸದ ವಿಚಾರದಲ್ಲೂ ಮೊಬೈಲ್‌ ಬಳಕೆ ಅನಿವಾರ್ಯವಾಗುತ್ತಿದೆ. ಕಳೆದೆರಡು ವರ್ಷಗಳಿಂದ ಕೊರೋನಾ ಕಾಟದಿಂದ ಮಕ್ಕಳ ಕೈಗೂ ಮೊಬೈಲ್ ಸುಲಭವಾಗಿ ಸಿಗುತ್ತಿದೆ. ಆನ್‌ಲೈನ್ ಕ್ಲಾಸ್ ನೆಪವಿರುವ ಕಾರಣ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡುವಂತೆಯೂ ಇಲ್ಲ. ಇದರಿಂದಾಗಿ ಮಕ್ಕಳಲ್ಲಿ ಗೇಮ್‌ ಅಡಿಕ್ಷನ್ ಸಹ ಹೆಚ್ಚಾಗುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗ್ತಿದೆ.

ಕೋವಿಡ್ ಕಾಲದಲ್ಲಿ ಆನ್‌ಲೈನ್ ತರಗತಿಗಳ ಆರಂಭದೊಂದಿಗೆ, ಮಕ್ಕಳಲ್ಲಿ (Children) ಮೊಬೈಲ್ ಫೋನ್ ಬಳಕೆ ಕೂಡ ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕು. ಆದರೆ ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯು ಮಕ್ಕಳಲ್ಲಿ ವಿವಿಧ ಆರೋಗ್ಯ ಸಮಸ್ಯೆ (HealtH Problem)ಗಳಿಗೆ ಕಾರಣವಾಗಬಹುದು. ಕೆಲವು ಆನ್‌ಲೈನ್ ಆಟಗಳು ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೊಸ ಬೆದರಿಕೆಯಾಗಿ ಪರಿಣಮಿಸಿವೆ. ಈ ಹಿಂದೆ ಕೆಲವು ಆಟಗಳು ಮಕ್ಕಳ ಜೀವಕ್ಕೆ ಅಪಾಯವನ್ನುಂಟುಮಾಡಿದಾಗ ಅವುಗಳನ್ನು ನಿಷೇಧಿಸಲಾಗಿತ್ತು. ಆದರೆ ಈಗ ಹತ್ತಾರು ಹೊಸ ಆನ್‌ಲೈನ್ ಆಟ (Online game)ಗಳು ಬಂದಿದ್ದು, ಮಕ್ಕಳು ಸುಲಭವಾಗಿ ಅಂಥವುಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ.

Tap to resize

Latest Videos

ಚೆನ್ನೈ: ಆನ್‌ಲೈನ್ ರಮ್ಮಿಯಲ್ಲಿ ಲಕ್ಷಗಟ್ಟಲೆ ಹಣ ಕಳೆದುಕೊಂಡ ಮಹಿಳೆ ಆತ್ಮಹತ್ಯೆ

ಮಕ್ಕಳಿಗೆ ಡೇಂಜರ್ (Danger) ಮೊಬೈಲ್ ಗೇಮ್ 
ಮೊಬೈಲ್ ಗೇಮ್ ಮಕ್ಕಳ ಮಾನಸಿಕ ಸ್ಥಿತಿಗತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಅದು ಹೇಗೆ ಎನ್ನುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಮೊಬೈಲ್ ಗೇಮ್ ಆಡುವಾಗ ಮಕ್ಕಳ ದೇಹದಲ್ಲಿ ಡೊಪಮೈನ್ (Dopamine) ಎನ್ನುವ ಹಾರ್ಮೋನ್ (Harmone) ಬಿಡುಗಡೆಯಾಗುತ್ತದೆ. ಇದು ಖುಷಿಗೆ ಕಾರಣವಾಗುವ ಹಾರ್ಮೋನ್. ಮನುಷ್ಯ ಖುಷಿಯಾಗಿರುವುದು ಮುಖ್ಯ. ಆದರೆ, ಅತ್ಯಧಿಕ ಪ್ರಮಾಣದಲ್ಲಿ ಡೊಪಮೈನ್ ಬಿಡುಗಡೆಯಾದರೂ ಸಮಸ್ಯೆ ತಪ್ಪಿದ್ದಲ್ಲ.

ಕೇವಲ 3-4 ನಿಮಿಷಗಳ ಕಾಲ ಮೊಬೈಲ್ ಗೇಮ್ ಆಡಿದರೆ 5 ನಿಮಿಷದಲ್ಲಿ ಸುಮಾರು 10 ಸಿಗರೇಟು ಸೇದಿದಾಗ ಬಿಡುಗಡೆಯಾಗುವಷ್ಟು ಡೊಪಮೈನ್ ಬಿಡುಗಡೆಯಾಗುತ್ತದೆ. ಅಂದರೆ, ಇಷ್ಟೆಲ್ಲ ಹಾರ್ಮೋನ್ ಖಂಡಿತವಾಗಿ ದೇಹಕ್ಕೆ ಬೇಕಾಗುವುದಿಲ್ಲ. ಇದರಿಂದಾಗಿ ಒಂದು ರೀತಿಯ ಥ್ರಿಲ್ (Thrill) ಆಗುತ್ತಿರುತ್ತದೆ. ಮಕ್ಕಳ ಸಾಮಾನ್ಯ ಚಟುವಟಿಕೆಗಳಾದ ಆಟ, ಬೇರೆ ಬೇರೆ ಕೆಲಸ ಮಾಡುವುದರಲ್ಲಿ ಅವರಿಗೆ ಆಸಕ್ತಿ ಇರುವುದಿಲ್ಲ. ಬೋರೆನಿಸಲು ಶುರುವಾಗುತ್ತದೆ. ಮಕ್ಕಳಿಗೆ ಬೋರಾಗುತ್ತದೆ ಎಂದರೆ ಅದು ಎಚ್ಚರಿಕೆ ವಹಿಸಬೇಕಾದ ಸಂಗತಿ.

ಆಟಗಳನ್ನು ಇನ್ನೂ ಕೇವಲ ಮನರಂಜನೆಯಾಗಿ ನೋಡಿದರೆ ಅದು ದೊಡ್ಡ ಸಮಸ್ಯೆಯಾಗುವುದಿಲ್ಲ. ಆದರೆ ಅದು ಹಣ ಮಾಡುವ ಆಟವಾಗಿ ಬದಲಾದಾಗ ಸಮಸ್ಯೆಗಳು ಉದ್ಭವಿಸುತ್ತವೆ. ಮಕ್ಕಳು ಕೇವಲ ಹಣ ಖರ್ಚು ಮಾಡುವುದಕ್ಕಷ್ಟೇ ಅಲ್ಲ, ಇಂತಹ ಆಟಗಳಿಗೆ ದಾಸರಾದಾಗ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಆನ್‌ಲೈನ್‌ ಜೂಜು ನಿಷೇಧ: ಸರ್ಕಾರದ ಅಧಿಸೂಚನೆ ಕೇರಳ ಹೈಕೋರ್ಟಿಂದ ವಜಾ!

ಮಕ್ಕಳು ಆಟಕ್ಕೆ ವ್ಯಸನಿಯಾಗಿದ್ದಾರಾ ಎಂದು ತಿಳಿಯುವುದು ಹೇಗೆ ?

1. ಮಕ್ಕಳು ಯಾವಾಗಲೂ ಆಡುವ ಬಗ್ಗೆಯೇ ಮಾತನಾಡುತ್ತಿರುವುದು
2. ಹೆಚ್ಚು ಸಮಯವನ್ನು ಆಟವಾಡಲು ಕಳೆಯುವುದು
3. ಆಟಗಳಲ್ಲಿ ಕಳೆಯುವ ಸಮಯದಲ್ಲಿ ಹೇಳಿದ ಮಾತು ಕೇಳದಿರುವುದು
4. ಹಠಾತ್ ಕೋಪ, ಆತಂಕ ಮತ್ತು ನಿದ್ರಾಹೀನತೆಯ ಸಮಸ್ಯೆ
5. ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು, ಉಳಿದ ವಿಷಯಗಳ ಬಗ್ಗೆ ನಿರಾಸಕ್ತಿ

ಗೇಮ್‌ ಅಡಿಕ್ಷನ್‌ನಿಂದ ಆರೋಗ್ಯ ಸಮಸ್ಯೆಗಳು
ವಿಡಿಯೋ ಗೇಮ್ ಚಟ ಅಥವಾ ಆನ್‌ಲೈನ್ ಗೇಮ್ ಚಟವು ವಿವಿಧ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಖಿನ್ನತೆ, ಆತಂಕ ಮತ್ತು ಸಾಮಾಜಿಕ ಫೋಬಿಯಾದಂತಹ ಮಾನಸಿಕ ಸಮಸ್ಯೆಗಳು ವಯಸ್ಕರು ಮತ್ತು ಮಕ್ಕಳಲ್ಲಿ ಸಾಮಾನ್ಯವಾಗಿದೆ. ದೈಹಿಕ ಸಮಸ್ಯೆಗಳಲ್ಲಿ ದಿನನಿತ್ಯದ ಬದಲಾವಣೆಗಳು, ನಿದ್ರೆಯ ಅಸ್ವಸ್ಥತೆಗಳು, ಬೊಜ್ಜು ಮತ್ತು ಜೀರ್ಣಕಾರಿ ಸಮಸ್ಯೆಗಳು ಸೇರಿವೆ. ಇದರಿಂದ ಖಿನ್ನತೆಯ ಸಮಸ್ಯೆ ಸಹ ಕಾಣಿಸಿಕೊಳ್ಳಬಹುದು. ಬೇರೆ ಎಲ್ಲ ವ್ಯಸನಳನ್ನು ಬಿಡಲು ಮನುಷ್ಯರು ಎಷ್ಟು ಪ್ರಯತ್ನ ಪಡುತ್ತಾರೋ ಹಾಗೆಯೇ ಮೊಬೈಲ್ ವ್ಯಸನವನ್ನು ಬಿಡಲೂ ಮುಂದಾಗಬೇಕು. ಮುಖ್ಯವಾಗಿ, ಮಕ್ಕಳು ಈ ವ್ಯಸನಕ್ಕೆ ತುತ್ತಾಗದಂತೆ ಪೋಷಕರು ನೋಡಿಕೊಳ್ಳಬೇಕು.

ಮಕ್ಕಳನ್ನು ಗೇಮಿಂಗ್ ಅಡಿಕ್ಷನ್‌ನಿಂದ ಬಿಡಿಸುವುದು ಹೇಗೆ ?

ಮಕ್ಕಳಲ್ಲಿರುವ ಈ ಗೇಮಿಂಗ್ ಅಡಿಕ್ಷನ್ ಕಡಿಮೆ ಮಾಡಲು ಮಕ್ಕಳಿಗೆ ಇದರಿಂದಾಗುವ ಅಪಾಯಗಳ ಬಗ್ಗೆ ತಿಳಿಸಿಕೊಡಿ. ಮಕ್ಕಳಿಗೆ ಮೊಬೈಲ್ ಬದಲು ಹೆಚ್ಚು ಪುಸ್ತಕಗಳನ್ನು ಬಳಸುವಂತೆ ಸಲಹೆ ನೀಡಿ. ಮಕ್ಕಳು ಮನೆಯ ಇತರ ಚಟುವಟಿಕೆಗಳಲ್ಲಿ ಸಕ್ರಿಯಗೊಳಿಸಿ. ಮಕ್ಕಳು ಹೆಚ್ಚಾಗಿ ಬಿಡುವಾದಾಗಲ್ಲೆಲ್ಲಾ ಮೊಬೈಲ್ ಕೈಗೆತ್ತಿಕೊಳ್ಳುತ್ತಾರೆ. ಹೀಗಾಗಿ ಹೆಚ್ಚು ಬಿಡುವಿನ ಸಮಯ ಸಿಗದಂತೆ ಡ್ಯಾನ್ಸ್, ಕರಾಟೆ ಮೊದಲಾದ ಕ್ಲಾಸ್‌ಗಳಿಗೆ ಸೇರಿಸಿ.

ಕೊರೋನಾ ಕಾಲದಲ್ಲಿ ಎಲ್ಲರಲ್ಲಿಯೂ ಮೊಬೈಲ್ ಅಡಿಕ್ಷನ್ ಹೆಚ್ಚಾಗಿದೆ. ಇದು ಎಲ್ಲರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಿಟ್ಟು, ಏಕಾಗ್ರತೆ ಕೊರತೆಯಂಥ ಮಾನಸಿಕ ಸಮಸ್ಯೆಗಳು ಕಾಮನ್ ಆಗಿವೆ. ಅಲ್ಲದೇ ಕೈಯಲ್ಲಿಯೇ ಮೊಬೈಲ್ ಹಿಡಿದು ಮನೆಯೊಳಗೇ ಇರುವುದರಿಂದ ಎಲ್ಲರೂ ದೈಹಿಕ ಆರೋಗ್ಯದ ಸಮಸ್ಯೆಯನ್ನೂ ಎದುರಿಸಬೇಕಾಗಿದೆ. ಸೋಷಿಯಲೈಸ್ ಆಗೋದು ಕಡಿಮೆ ಆಗುವುದರಿಂದ ಒಂಟಿತನ ಎಲ್ಲರನ್ನೂ ಕಾಡುತ್ತಿದೆ. ಇದು ಆತ್ಮಹತ್ಯೆಯಂಥ ಕೃತ್ಯಕ್ಕೂ ಪ್ರಚೋದಿಸಬಲ್ಲದು. ಒಂದು ನಿರ್ದಿಷ್ಟ ಅವಧಿಯ ನಂತರ ಮನೆಯಲ್ಲಿ ವೈಫೈ ಸಿಗದಂತೆ ಮಾಡಿದರೆ, ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಗತ್ಯ ಬಿದ್ದಲ್ಲ ಸೂಕ್ತ ಆಪ್ತ ಸಲಹೆ ಪಡೆದು, ಇಂಥ ಚಟಗಳಿಂದ ಮಕ್ತರಾಗಬಹುದು. 

- ಡಾ.ಸದಾನಂದ್.ಕೆ.ಸಿ, ಮನಃಶಾಸ್ತ್ರಜ್ಞರು
ಮೈಂಡ್ ಬಾಡಿ ಕೋಲ್ಡ್ ಲೇಸರ್ ಮತ್ತು ಕೌನ್ಸೆಲಿಂಗ್ ಸೆಂಟರ್, 
ಜಯನಗರ, ಬೆಂಗಳೂರು

click me!