ಮೂರು ಹೊತ್ತೂ ಐಸ್‌ಕ್ರೀಂ ಕೇಳ್ತಿದ್ದ 99ರ ಅಜ್ಜ!

By Kannadaprabha News  |  First Published May 3, 2020, 10:20 AM IST

ಕೋವಿಡ್‌ ವಾರ್ಡ್‌ನಲ್ಲಿ ವೈದ್ಯೆಯಾಗಿ ಕೆಲಸ ಮಾಡಿ, ನಂತರ ನಾನೇ ಸೋಂಕು ತಗಲಿಸಿಕೊಂಡು ಕುಳಿತಿದ್ದಾಗ ಇದನ್ನು ಬರೆದಿದ್ದೇನೆ. ಸುಮಾರು ಎರಡು ವಾರಗಳ ಕಾಲ ಮನೆಯಲ್ಲೇ ಇದ್ದು ಶುಶ್ರೂಷೆಗೆ ಒಳಗಾಗಿದ್ದೇನೆ. ಅದೃಷ್ಟವಶಾತ್‌ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಮತ್ತೆ ಅನಾರೋಗ್ಯಪೀಡಿತರ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಒಂದು ದಿನ ಜಗತ್ತು ಈ ಬಿಕ್ಕಟ್ಟಿನಿಂದ ಹೊರಬರುತ್ತದೆ. ಆದರೆ, ನಮ್ಮ ನೆನಪು ಸಣ್ಣದು. ಮುಂದೆ ಹೊಸ ಜಗತ್ತಿನಲ್ಲಿ ಮೊಮ್ಮಕ್ಕಳು ಕೊರೋನಾ ವೈರಸ್‌ ಬಿಕ್ಕಟ್ಟು ಅಂದರೇನೆಂದು ಕೇಳಿದರೆ ಹೇಳಲು ಬೇಕಲ್ಲ, ಹಾಗಾಗಿ ನನ್ನ ಅನುಭವಗಳನ್ನು ದಾಖಲಿಸಿಟ್ಟಿದ್ದೇನೆ.


ಡಾ| ಜ್ಯೋತಿ ಏಡನ್‌ವಾಲಾ
ಸಾಮಾನ್ಯ ವೈದ್ಯಕೀಯಾ ವೃದ್ಧರ ಆರೋಗ್ಯ ತಜ್ಞೆ, ಕಾರ್ಡಿಫ್‌, ಯುನೈಟೆಡ್‌ ಕಿಂಗ್‌ಡಮ್‌

ಬ್ರಿಟನ್ನಿನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್‌)ಯಲ್ಲಿ ನಾನು ವೈದ್ಯೆ. ಮಾಚ್‌ರ್‍ 18ರಂದು ನನಗೆ ಕೋವಿಡ್‌ ಸೇವೆಗೆ ಕರೆ ಬಂತು. ಸಣ್ಣ ಆಸ್ಪತ್ರೆಯಿಂದ ದೊಡ್ಡ ಆಸ್ಪತ್ರೆಗೆ ನನ್ನ ಕೆಲಸ ಬದಲಾಯಿತು. ಬಹುಶಃ ಎನ್‌ಎಚ್‌ಎಸ್‌ ಆರಂಭವಾದ ಮೇಲೆ ಇಂತಹದ್ದೊಂದು ವಿಪತ್ತನ್ನು ಅದು ಕಂಡಿರಲಿಲ್ಲ. ಹೀಗಾಗಿ ಸಾಮಾನ್ಯ ದಿನಗಳಲ್ಲಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಗಳೆಲ್ಲ ಬಂದ್‌ ಆಗಿ, ದೊಡ್ಡ ಪ್ರಮಾಣದಲ್ಲಿ ಕೊರೋನಾಪೀಡಿತ ರೋಗಿಗಳನ್ನು ಎದುರು ನೋಡತೊಡಗಿದವು. ನಿತ್ಯದ ಆ್ಯಂಬುಲೆನ್ಸ್‌ಗಳ ಸದ್ದು

Tap to resize

Latest Videos

undefined

ನಿಂತಿತು. ಪ್ರತಿದಿನ ಎದೆನೋವು, ಕೈಕಾಲು ಮುರಿತ, ಹೊಟ್ಟೆನೋವು ಎಂದು ಬರುತ್ತಿದ್ದ ರೋಗಿಗಳೆಲ್ಲ ದಿಢೀರನೆ ಎಲ್ಲಿಗೆ ಹೋಗಿಬಿಟ್ಟರೋ ಗೊತ್ತಿಲ್ಲ. ಹಾರರ್‌ ಸಿನಿಮಾದಲ್ಲಿ ಬಹುದೊಡ್ಡ ಆಘಾತವೊಂದಕ್ಕೆ ಕಾಯುತ್ತಿರುವಾಗಿನ ನಿಶ್ಶಬ್ದದಂತೆ ನಮ್ಮ ಆಸ್ಪತ್ರೆಯೂ ಮೌನವಾಗಿಬಿಟ್ಟಿತ್ತು.

ಪಿಪಿಇ ಧರಿಸದೆ ಟೆಸ್ಟ್‌ ಮಾಡಿದ್ದೆವು!

ಮೊದಲಿಗೆ ನನ್ನ ಡ್ಯೂಟಿ ಕೊರೋನೇತರ ವಾರ್ಡ್‌ನಲ್ಲಿತ್ತು. ಆದರೆ, ಒಂದೆರಡು ದಿನಗಳಲ್ಲೇ ಹಿಂದೆ ನಾವು ಪಿಪಿಇ (ವೈಯಕ್ತಿಕ ಸುರಕ್ಷತಾ ದಿರಿಸು) ಧರಿಸದೆ ಟೆಸ್ಟ್‌ ಮಾಡಿದ್ದ ರೋಗಿಗಳಲ್ಲೇ ಕೆಲವರು ಕೊರೋನಾ ಟೆಸ್ಟ್‌ನಲ್ಲಿ ಪಾಸಿಟಿವ್‌ ಆಗತೊಡಗಿದರು! ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಅಬ್ಬರ ಹೆಚ್ಚತೊಡಗಿತು. ಸೋಷಿಯಲ್‌ ಮೀಡಿಯಾಗಳಲ್ಲಿ ಎಲ್ಲರೂ ಆರೋಗ್ಯ ತಜ್ಞರಂತೆ ಎಚ್‌ಸಿಕ್ಯು ಮಾತ್ರೆಯಿಂದ ಹಿಡಿದು ಶುಂಠಿ, ಬೆಳ್ಳುಳ್ಳಿ, ಕಾಳುಮೆಣಸು, ಅರಿಶಿಣ, ವಿಟಮಿನ್‌ ಡಿ, ಸಿ ಎಂದೆಲ್ಲ ಸಲಹೆ ನೀಡತೊಡಗಿದರು. ಈ ಮಧ್ಯೆ, ನಮಗೂ ಪಿಪಿಇ ಬಂತು. ನಾವು ಅಂತಾರಾಷ್ಟ್ರೀಯ ಮಾನದಂಡ ಅನುಸರಿಸುತ್ತಿದ್ದ ಕಾರಣ ಆರಂಭದಲ್ಲಿ ನಮಗೆ ಹೊಂದಿಕೊಳ್ಳಲು ತುಸು ಕಷ್ಟವಾಯಿತು. ಕ್ರಮೇಣ ಪಿಪಿಇಗಿಂತ ರೋಗಿಗಳ ಚಿಕಿತ್ಸೆಯೇ ನಮ್ಮೆಲ್ಲರ ಆದ್ಯತೆ ಆಯಿತು. ಈ ಸಾಂಕ್ರಾಮಿಕವನ್ನು ಬಗ್ಗುಬಡಿಯುವುದೇ ನಮ್ಮೆಲ್ಲರ ಧ್ಯೇಯವಾಯಿತು.

'ನರೇಂದ್ರ ಮೋದಿ ಸೀತಾಫಲ್ ಕುಲ್ಫೀ'ಗೆ ಭಾರೀ ಬೇಡಿಕೆ: ಗ್ರಾಹಕರಿಗೆ ವಿಶೇಷ ಆಫರ್!

ನಮ್ಮ ಮನೆಯಿಂದ ಆಸ್ಪತ್ರೆಗೆ 1.5 ಮೈಲು. ಬೆಳಿಗ್ಗೆ ಕೈಗೆ ಸಿಕ್ಕ ಡ್ರೆಸ್‌ ಹಾಕಿಕೊಂಡು ಹೊರಟುಬಿಡುತ್ತಿದ್ದೆ. ಹೇಗಿದ್ದರೂ ಆಸ್ಪತ್ರೆಗೆ ಹೋದಮೇಲೆ ಅದನ್ನು ತೆಗೆದು ಸ್ಕ್ರಬ್‌ (ಶಸ್ತ್ರಚಿಕಿತ್ಸಕರು ಧರಿಸುವ ವಿಶಿಷ್ಟಉಡುಗೆ) ತೊಡಬೇಕಿತ್ತು. ಸ್ಟೆತಸ್ಕೋಪ್‌, ಪೆನ್‌, ಮೊಬೈಲ್‌ ಫೋನ್‌ ಹಾಗೂ ಒಂದು ಕ್ರೆಡಿಟ್‌ ಕಾರ್ಡನ್ನು ಬಟ್ಟೆಯ ಚೀಲದಲ್ಲಿ ಹಾಕಿಕೊಂಡು, ಇನ್ನೊಂದು ಚೀಲದಲ್ಲಿ ಆಸ್ಪತ್ರೆಯ ಶೂ ತುಂಬಿಕೊಂಡು ನಡೆದೇ ಆಸ್ಪತ್ರೆಗೆ ಹೋಗುತ್ತಿದ್ದೆ. ಆಸ್ಪತ್ರೆಗೆ ಹೋದ ತಕ್ಷಣ ಸ್ಕ್ರಬ್‌ ಧರಿಸಿ, ಅಲ್ಲಿನ ಶೂ ಹಾಕಿಕೊಂಡು, ಕೈಗೆ ಸಾಕಷ್ಟುಆಲ್ಕೋಹಾಲ್‌ ಸ್ಯಾನಿಟೈಸರ್‌ ಸುರಿದು ಕೆಲಸ ಆರಂಭಿಸುತ್ತಿದ್ದೆ. ಮುಂಚೆಯೆಲ್ಲ ಆಸ್ಪತ್ರೆಯಲ್ಲಿ ಮೂಲೆಯಲ್ಲಿ ಬಿದ್ದಿರುತ್ತಿದ್ದ ಸ್ಯಾನಿಟೈಸರನ್ನು ಕೇಳುವವರೂ ಇರುತ್ತಿರಲಿಲ್ಲ.

ಪಿಪಿಇ ಒಳಗೆ ತೂರಿ ನನಗೂ ಬಂತು!

ಡ್ಯೂಟಿ ಮುಗಿಸಿ ಮನೆಗೆ ಬಂದ ಮೇಲೆ ಹೊರಗೆ ನಿಂತೇ ಮಗನನ್ನು ಕರೆಯುತ್ತಿದ್ದೆ. ಒಳಗೆ ಬಂದವಳೇ ಬಟ್ಟೆಯ ಬ್ಯಾಗ್‌ನಲ್ಲಿದ್ದ ಎಲ್ಲವನ್ನೂ ಒಂದು ಮೂಲೆಯಲ್ಲಿಟ್ಟು, ಸ್ಕ್ರಬ್‌, ಬಟ್ಟೆಯ ಬ್ಯಾಗ್‌ ಮತ್ತು ನನ್ನ ಬಟ್ಟೆಯನ್ನೆಲ್ಲ ವಾಷಿಂಗ್‌ ಮಶಿನ್‌ಗೆ ಹಾಕಿ ನೇರವಾಗಿ ಸ್ನಾನಕ್ಕೆ ಹೋಗುತ್ತಿದ್ದೆ. ನಂತರ ಶೂಗೆ ಬ್ಲೀಚ್‌ ವಾಟರ್‌ ಸಿಂಪಡಿಸಿ ನಾಳೆಗೆಂದು ಒಣಗಿಹಾಕುತ್ತಿದ್ದೆ. ಸ್ಟೆತಸ್ಕೋಪ್‌, ಫೋನ್‌, ಪೆನ್‌, ಕ್ರೆಡಿಟ್‌ ಕಾರ್ಡ್‌ ಇತ್ಯಾದಿಗಳನ್ನು ಆಲ್ಕೋಹಾಲ್‌ ಸೊಲ್ಯೂಷನ್‌ನಲ್ಲಿ ಒರೆಸಿಡುತ್ತಿದ್ದೆ. ಇಷ್ಟಾಗಿಯೂ ಕೊರೋನಾ ವೈರಸ್‌ ನನ್ನ ಪಿಪಿಇಯೊಳಗೆ ತೂರಿಕೊಂಡು ಬಂದು ಯಾವುದೋ ಮಾಯದಲ್ಲಿ ನನಗೂ ಅಂಟಿಕೊಂಡಿತ್ತು!

ಬಹುತೇಕ ತಜ್ಞರೂ ಈಗ ಕೊರೋನಾ ವೈದ್ಯರು!

ಕೊರೋನಾ ಡ್ಯೂಟಿಗೆ ನಮ್ಮನ್ನು ನಿಯೋಜಿಸುವುದಕ್ಕಿಂತ ಮೊದಲು ಸಾಕಷ್ಟುಟ್ರೇನಿಂಗ್‌ ಕೊಟ್ಟಿದ್ದರು. ಸೋಂಕು ಹರಡುವುದು ಜೋರಾಗುತ್ತಿದ್ದಂತೆ ಮೂಳೆತಜ್ಞರು, ಸರ್ಜನ್‌ಗಳು, ಹೆಮಟಾಲಜಿಸ್ಟ್‌ಗಳು ಹೀಗೆ ಬೇರೆ ಬೇರೆ ವಿಷಯಗಳ ವೈದ್ಯರೆಲ್ಲ ಕೊರೋನಾ ವೈದ್ಯರಾಗಿಬಿಟ್ಟಿದ್ದರು. ಪ್ರತಿದಿನ ಹೊಸ ಹೊಸ ಮಾರ್ಗಸೂಚಿಗಳು ಬರುತ್ತಿದ್ದವು. ವೈದ್ಯರು, ನರ್ಸ್‌ಗಳೆಲ್ಲ ದಿನಕ್ಕೆ 12 ತಾಸು ಡ್ಯೂಟಿ ಮಾಡಿ, ಮೂರು ದಿನದ ಕೆಲಸದ ನಂತರ ಮೂರು ದಿನ ರಜೆ ತೆಗೆದುಕೊಳ್ಳುತ್ತಿದ್ದರು. ನಾನು 9-5 ಡ್ಯೂಟಿಯಲ್ಲೇ ಇದ್ದೆ. ನಮ್ಮ ಕೋವಿಡ್‌ ವಾರ್ಡ್‌ ಕೆಲವೇ ದಿನಗಳಲ್ಲಿ ತುಂಬಿತು. ಮಧ್ಯಾಹ್ನ ಊಟಕ್ಕೊಂದು ಹಾಗೂ ನಂತರ ಸಮಯವಿದ್ದರೆ ಕಾಫಿಗೊಂದು ಬ್ರೇಕ್‌ ಸಿಗುತ್ತಿತ್ತು. ಎನ್‌ಎಚ್‌ಎಸ್‌ ಸಿಬ್ಬಂದಿಯ ನಿಸ್ವಾರ್ಥ ಸೇವೆಯ ಗೌರವಾರ್ಥವಾಗಿ ಚಾರಿಟಿ ಸಂಸ್ಥೆಗಳು, ಹೋಟೆಲ್‌ಗಳು ಅನ್ನಾಹಾರ ಒದಗಿಸುತ್ತಿದ್ದವು. ಇತ್ತ, ಕೋವಿಡ್‌ ವಾರ್ಡ್‌ನ ಬಾಗಿಲು ಯಾವಾಗಲೂ ಮುಚ್ಚಿರುತ್ತಿತ್ತು. ಅದರ ಹೊರಗೆ ನಮಗಾಗಿ ಹೊಸ ಪಿಪಿಇ ಕಿಟ್‌ಗಳನ್ನು ಇರಿಸಲಾಗಿತ್ತು. ಒಬ್ಬೊಬ್ಬ ರೋಗಿಯನ್ನು ನೋಡುವಾಗಲೂ ಅದನ್ನು ಬದಲಿಸಬೇಕಿತ್ತು. ಆಕ್ಸಿಜನ್‌ ಅಗತ್ಯವಿರುವವರು, ವೆಂಟಿಲೇಟರ್‌ ಬೇಕಿಲ್ಲದವರು ಮತ್ತು ವೆಂಟಿಲೇಟರ್‌ನ ಅಗತ್ಯವಿರುವವರು ಹೀಗೆ ರೋಗಿಗಳನ್ನು ಮೂರು ವಿಭಾಗ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕಿಕಿ ಆಯ್ತು, ಡ್ರಾಗನ್ ಬ್ರೀತ್ ಬಂತು! ಏನಿದು ಹೊಸ ಚಾಲೆಂಜ್?

ಕುಟುಂಬಸ್ಥರೇ ಇಲ್ಲದೆ ಜನ ಕಣ್ಮುಚ್ಚುತ್ತಿದ್ದರು

ನನ್ನ ಡ್ಯೂಟಿಯ ಮೊದಲ ದಿನವೇ ಒಬ್ಬ ರೋಗಿ ಸಾವನ್ನಪ್ಪಿದ್ದ. ಅವನಿಗೆ 79 ವರ್ಷವಾಗಿತ್ತು. ಡಯಾಬಿಟಿಸ್‌ ಇತ್ತು. ಇನ್ನೊಬ್ಬ 53 ವರ್ಷದ ರೋಗಿ ವೆಂಟಿಲೇಟರ್‌ನಲ್ಲಿದ್ದವನು ನಿಧಾನವಾಗಿ ಗುಣವಾಗುತ್ತಿದ್ದ. ಒಬ್ಬೊಬ್ಬ ರೋಗಿಯೂ ಚಿಕಿತ್ಸೆಯ ವಿಭಿನ್ನ ಹಂತಗಳಲ್ಲಿದ್ದರು. ಯಾರಿಗೂ ಮನೆಯವರ ಭೇಟಿಗೆ ಅವಕಾಶವಿರಲಿಲ್ಲ. ಕುಟುಂಬಸ್ಥರಿಲ್ಲದ ಕೊರತೆ ನೀಗಲು ಆರೋಗ್ಯ ಸೇವಾ ಸಿಬ್ಬಂದಿ ಶಕ್ತಿಮೀರಿ ಪ್ರಯತ್ನಿಸುತ್ತಿದ್ದರು. ಉದಾಹರಣೆಗೆ, 99 ವರ್ಷದ ರೋಗಿಯೊಬ್ಬನ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಆದರೆ, ಆತ ಮೂರು ಹೊತ್ತೂ ಐಸ್‌ಕ್ರೀಂ ಕೇಳುತ್ತಿದ್ದ. ಅದು ಆರೋಗ್ಯಕ್ಕೆ ಸೂಕ್ತ ಅಲ್ಲವಾದರೂ, ನರ್ಸ್‌ಗಳು ಅವನ ಕೊನೆಗಾಲ ಖುಷಿಯಾಗಿರಲೆಂದು ಬಯಸಿ ಆತನ ಇಷ್ಟಾರ್ಥ ಈಡೇರಿಸುತ್ತಿದ್ದರು.

ಪ್ರತಿದಿನ ನಾವು ವೈರಸ್‌ ಕುರಿತು ಹೊಸ ಹೊಸ ಪಾಠ ಕಲಿಯುತ್ತಿದ್ದೆವು. ಅವುಗಳಲ್ಲಿ ಒಂದಷ್ಟುಸರಿಯಿರುತ್ತಿದ್ದವು, ಇನ್ನೊಂದಷ್ಟುತಪ್ಪಿರುತ್ತಿದ್ದವು. ಐಸೋಲೇಶನ್‌, ಲಾಕ್‌ಡೌನ್‌, 2 ಮೀಟರ್‌ ಅಂತರ, ಮಾಸ್ಕ್‌ಗಳು ಜನಜೀವನದ ಅಂಗವಾದವು. ಸೂಪರ್‌ಮಾರ್ಕೆಟ್‌ಗಳಲ್ಲಿ ಕಂಡು ಬಂದ ಪ್ಯಾನಿಕ್‌ ಬೈಯಿಂಗ್‌ ನಿಧಾನವಾಗಿ ಸರಿಹೋಯಿತು. ಮನುಷ್ಯ ಎಲ್ಲದಕ್ಕೂ ಎಷ್ಟುಬೇಗ ಹೊಂದಿಕೊಳ್ಳುತ್ತಾನಲ್ಲ ಎಂದು ನನಗೆ ಅಚ್ಚರಿಯಾಗುತ್ತದೆ. ಒಂದು ರಾತ್ರಿ ಇಡೀ ದೇಶ ನಮಗಾಗಿ ಚಪ್ಪಾಳೆ ಹೊಡೆಯಿತು. ಆಗ ನಮ್ಮೆಲ್ಲರ ಉತ್ಸಾಹ ಹಲವು ಪಟ್ಟು ಹೆಚ್ಚಿತು. ನಾವು ಕೂಡ ಜನರು ಮನೆಯಲ್ಲಿದ್ದು ಸಹಕರಿಸಿದ್ದಕ್ಕೆ ಚಪ್ಪಾಳೆ ಹೊಡೆದೆವು. ನನ್ನ ಮಗನಿಗೂ ಚಪ್ಪಾಳೆ ಹೊಡೆಯಲು ಹೇಳಿದ್ದೆ. ಆದರೆ, ಅವನು ಲ್ಯಾಪ್‌ಟಾಪ್‌ನಲ್ಲಿ ಬ್ಯುಸಿಯಾಗಿದ್ದನಂತೆ! ಈಗೆಲ್ಲ ಆರೋಗ್ಯ ಸಿಬ್ಬಂದಿಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಲು ಇಡೀ ದೇಶ ಪ್ರತಿ ಗುರುವಾರ ರಾತ್ರಿ 8 ಗಂಟೆಗೆ ಚಪ್ಪಾಳೆ ತಟ್ಟುತ್ತದೆ.

ಬದುಕಲು ಇಷ್ಟೇ ಸಾಕು

ನನಗೆ ಜಂಗಲ್‌ ಬುಕ್‌ನ ಹಾಡು ನೆನಪಾಗುತ್ತದೆ. ಮನುಷ್ಯನಿಗೆ ಬದುಕಲು ಬೇಕಾದ ಮೂಲಭೂತ ಅಗತ್ಯಗಳು ಬಹಳ ಕಡಿಮೆಯಿವೆ. ಒಂದಿಡೀ ದಿನ ಕಳೆಯಲು ನಮಗೆ ಹೆಚ್ಚು ವಸ್ತುಗಳು ಬೇಕಾಗುವುದಿಲ್ಲ ಎಂಬುದೀಗ ನನಗೆ ಅರ್ಥವಾಗಿದೆ. ಸುಲಭವಾಗಿ ತೊಳೆದು ಹಾಕಬಹುದಾದ ಒಂದು ಬಟ್ಟೆಯ ಬ್ಯಾಗ್‌, ಇಡೀ ಪರ್ಸ್‌ ಬದಲು ಒಂದು ಕ್ರೆಡಿಟ್‌ ಕಾರ್ಡ್‌, ದಿನ ಬಿಟ್ಟು ದಿನ ಶಾಪಿಂಗ್‌ ಮಾಡುವ ಬದಲು ಇಡೀ ವಾರಕ್ಕೆ ಬೇಕಾಗುವಷ್ಟನ್ನು ಒಮ್ಮೆಲೇ ಕೊಳ್ಳುವುದು... ಮನುಷ್ಯ ಅತ್ಯಂತ ಸರಳವಾಗಿ ಬದುಕಲು ಸಾಧ್ಯವಿದೆ.

ನಾನೇನೋ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಆದರೆ, ಮನೆಯ ಯಾರೊಬ್ಬರನ್ನೂ ನೋಡಲು ಸಾಧ್ಯವಿಲ್ಲದೆ ಡಾಕ್ಟರ್‌ ಹಾಗೂ ನರ್ಸ್‌ಗಳನ್ನೇ ನೋಡುತ್ತ, ಬರೀ ಫೋನ್‌ನಲ್ಲೇ ಕೊನೆಯ ದಿನಗಳನ್ನು ಕಳೆದು ಪ್ರಾಣ ಬಿಟ್ಟವರನ್ನು ನೆನೆದರೆ ದುಃಖವಾಗುತ್ತದೆ. ಕ್ಯಾನ್ಸರ್‌, ಹೃದಯಾಘಾತ, ಪಾಶ್ರ್ವವಾಯು ಮುಂತಾದ ಇನ್ನೂ ಹಲವು ಗಂಭೀರ ರೋಗಗಳಿಗೆ ತುತ್ತಾಗಿ, ಕೊರೋನಾ ಕಾರಣದಿಂದಾಗಿ ಚಿಕಿತ್ಸೆ ಸಿಗದೆ ಪರಿತಪಿಸುತ್ತಿರುವವರು ಎಷ್ಟಿದ್ದಾರೋ ಯಾರಿಗೆ ಗೊತ್ತು?

ಸೂರ್ಯ ಮತ್ತೆ ಹುಟ್ಟುತ್ತಾನೆ

ಕೊರೋನಾದಿಂದಾಗಿ ನಮ್ಮ ಬದುಕು ತಲೆಕೆಳಗಾಗಿದೆ. ನನ್ನ ಮನೆಯವರು, ಸ್ನೇಹಿತರು ಮತ್ತು ಹತ್ತಿರದ ಬಂಧುಗಳು ಸುರಕ್ಷಿತವಾಗಿದ್ದಾರೆ ಎಂಬುದಷ್ಟೇ ಈ ಕ್ಷಣದ ಸಮಾಧಾನ. ನನಗೆ ಜೋರು ನಡುಕ ಶುರುವಾಗಿ ಟೆಸ್ಟ್‌ ಮಾಡಿಸಿಕೊಂಡಾಗ ಕೊರೋನಾ ಪಾಸಿಟಿವ್‌ ಬಂದಿತ್ತು. ಆರಂಭದಲ್ಲಿ ಜ್ವರ ಕೂಡ ಇರಲಿಲ್ಲ. ನಂತರ ಬಂದಿತ್ತು. ನನ್ನ ಚಿಕಿತ್ಸೆಯುದ್ದಕ್ಕೂ ಪ್ರತಿದಿನ ತೆಗೆದುಕೊಂಡಿದ್ದು ಪ್ಯಾರಾಸಿಟಮಾಲ್‌ ಹಾಗೂ ಗ್ಯಾಲನ್‌ಗಟ್ಟಲೆ ಬಿಸಿ ನೀರು. ಕೊರೋನಾ ಬಂದವರ ಬಾಯಿ ಒಣಗಿ ಮರುಭೂಮಿಯಂತಾಗುತ್ತದೆ. ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಲು ತುಂಬಾ ನೀರು ಕುಡಿಯಬೇಕಾಗುತ್ತದೆ.

ಎಲ್ಲ ದೇಶಗಳಿಗೂ ಆಗಿರುವಂತೆ ಬ್ರಿಟನ್ನಿನ ಎನ್‌ಎಚ್‌ಎಸ್‌ಗೂ ಹಣದ ಕೊರತೆ ಎದುರಾಗಿದೆ. 99 ವರ್ಷದ ಕ್ಯಾ.ಟಾಮ್‌ ಮೂರ್‌ ಎಂಬ ಮಾಜಿ ಯೋಧ ತನ್ನ ಮನೆಯ ಗಾರ್ಡನ್‌ನಲ್ಲಿ ಅತ್ತಿಂದಿತ್ತ ಓಡಾಡುತ್ತಲೇ ಇಲ್ಲಿಯವರೆಗೆ 2.5 ಕೋಟಿ ಪೌಂಡ್‌ ನಿಧಿ ಸಂಗ್ರಹಿಸಿ ಕೊಟ್ಟಿದ್ದಾರೆ. ಅವರೇ ನಮಗೆಲ್ಲ ಸ್ಫೂರ್ತಿ. ‘ಸೂರ್ಯ ಮತ್ತೆ ಹುಟ್ಟುತ್ತಾನೆ, ಮೋಡಗಳು ಮರೆಯಾಗುತ್ತವೆ’ ಎಂಬ ಅವರ ಮಾತಿನಲ್ಲಿ ನನಗೆ ಅಪಾರ ನಂಬಿಕೆಯಿದೆ.

click me!