
ಅಡುಗೆ ಮನೆಯ ಪಾತ್ರೆಗಳು ಆಗಾಗ ಬದಲಾಗುತ್ತಲೇ ಇರುತ್ತವೆ. ಹಿಂದೆ ಮರದ ಪಾತ್ರೆಗಳಿದ್ದವು. ಅವುಗಳ ಸ್ಥಾನವನ್ನು ತಾಮ್ರ, ಹಿತ್ತಾಳೆ, ಶಿಲಾವರ ಪಾತ್ರೆಗಳು ತುಂಬಿದವು. ಬಳಿಕ ಸ್ಟೀಲ್ ಪಾತ್ರೆಗಳು ತಮ್ಮ ಪಾರುಪಥ್ಯ ಸಾಧಿಸಿದವು. ಪ್ಲ್ಯಾಸ್ಟಿಕ್ ಕೂಡಾ ಆಕರ್ಷಕ ಮಾರು ವೇಷಗಳಲ್ಲಿ ಕಿಚನ್‌ಗೆ ನುಗ್ಗಿದವು. ನಾನ್ ಸ್ಟಿಕ್ ಪಾತ್ರೆಗಳು ಮಹಿಳೆಯರ ಮನ ಗೆದ್ದವು. ಆದರೆ, ಬಹುತೇಕರಿಗೆ ತಿಳಿಯದ್ದೇನೆಂದರೆ ಪಾತ್ರೆಗಳ ಕೆಲಸ ಕೇವಲ ಆಹಾರ ತಯಾರಿಸಿ ಅದನ್ನು ಹಿಡಿದಿಟ್ಟುಕೊಳ್ಳುವುದಲ್ಲ. ಅವು ನಮ್ಮ ಆರೋಗ್ಯದ ವಿಷಯದಲ್ಲೂ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ, ಆಹಾರದ ರುಚಿಗೂ ತಮ್ಮತನವನ್ನು ಸೇರಿಸುತ್ತವೆ. ಹಾಗಾಗಿ, ಒಮ್ಮೆ ಪಾತ್ರಾ ಪ್ರಪಂಚಕ್ಕಿಳಿದು ಸ್ಟೀಲ್‌ಗಿಂತ ಉತ್ತಮವಾದ, ಆರೋಗ್ಯಕರವಾದ ಹಲವು ಪಾತ್ರೆಗಳಿವೆ ಎಂಬುದನ್ನು ಕಂಡುಕೊಳ್ಳಿ.
ಮರದ ಪಾತ್ರೆಗಳು
ಬಹುತೇಕ ಎಲ್ಲ ವಿಷಯಗಳಲ್ಲೂ ಓಲ್ಡ್ ಈಸ್ ಗೋಲ್ಡ್ ಎಂಬುದನ್ನು ಒಪ್ಪಲೇಬೇಕು. ನಾವು ಎಷ್ಟೆಲ್ಲ ವಿಷಯಗಳನ್ನು ಟ್ರೈ ಮಾಡಿದ ಬಳಿಕವೂ ಹಿಂದಿನದ್ದೇ ಬೆಸ್ಟ್ ಎಂದು ಅವನ್ನೇ ಅಪ್ಪಿಕೊಳ್ಳುವುದು ಸಾಮಾನ್ಯ. ಪಾತ್ರೆಗಳ ವಿಷಯದಲ್ಲೂ ಇದು ಕೆಲಸ ಮಾಡುತ್ತದೆ. ಮರದ ಪಾತ್ರೆಗಳು ನೋಡಲು ಅಲಂಕಾರಿಕವೆನಿಸುವುದಷ್ಟೇ ಅಲ್ಲ, ಅವು ಉಳಿದೆಲ್ಲ ಪಾತ್ರೆಗಳಿಗಿಂತ ಸದಾ ಒಂದು ಕೈ ಮೇಲೆಯೇ. ಚಮಚ, ಸೌಟು, ಬಟ್ಟಲು, ಒಗ್ಗರಣೆ ಡಬ್ಬಿ, ಚಾಪಿಂಗ್ ಬೋರ್ಡ್ ಯಾವುದೇ ಆಗಲಿ, ಅವು ನಿಮಗೆ ಮೋಸ ಮಾಡಲು ಸಾಧ್ಯವೇ ಇಲ್ಲ. ನೈಸರ್ಗಿಕವಾದುದಲ್ಲವೇ? ನಾನ್ ಸ್ಟಿಕ್ ಪ್ಯಾನ್‌ಗಳ ಮೇಲೆ ಸ್ಟೀಲ್ ಸೌಟುಗಳನ್ನು ಬಳಸಿದಾಗ ಸ್ಕ್ರ್ಯಾಚ್ ಆಗುತ್ತದೆ. ಆದರೆ, ಮರದ ಸೌಟುಗಳಲ್ಲಿ ಈ ಭಯವಿಲ್ಲ.
ಪ್ಲ್ಯಾಸ್ಟಿಕ್ ಹಾಗೂ ಮರದ ಪಾತ್ರೆಗಳನ್ನು ಹೋಲಿಸಿ ನಡೆಸಿದ ಅಧ್ಯಯನದಲ್ಲಿ, ಮರದ ಪಾತ್ರೆಗಳಲ್ಲಿ ಪ್ಲ್ಯಾಸ್ಟಿಕ್ ಪಾತ್ರೆಗಳಿಗಿಂತ ಹತ್ತು ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ಸಾಯುವುದಾಗಿ ಕಂಡುಬಂದಿದೆ. ಮರವು ಆಹಾರವನ್ನು ಹೆಲ್ದಿಯಾಗಿರಿಸಿ, ಬೇಡದ ಕೀಟಾಣುಗಳನ್ನು ದೂರವಿರಿಸುತ್ತದೆ. ಅಲ್ಲದೆ, ಸ್ಟೀಲ್ ಅಥವಾ ಇನ್ಯಾವುದೇ ಸೌಟುಗಳು ಬಿಸಿಯಾಗಿ ಕೈ ಸುಡುವಂತೆ ಮರದ ಸೌಟುಗಳು ಸುಡಲಾರವು. ಅಸಿಡಿಕ್ ಆಹಾರದೊಂದಿಗೆ ಸೇರಿದಾಗ ಕೂಡಾ ನ್ಯೂಟ್ರಲ್ ಆಗಿರುವ ಗುಣ ಮರದ್ದು. ಸಾಂಬಾರು ಕುದಿವಾಗ ಮರದ ಸೌಟನ್ನಿಟ್ಟರೆ ಪಾತ್ರೆಯಲ್ಲಿನ ನೀರು ಉಕ್ಕಲಾರದು.
ಬೇಸಿಗೆ ಹತ್ರ ಬಂತು, ಈ ಸ್ಮೂಧಿಗಳನ್ನು ಟ್ರೈ ಮಾಡಿ...
ಕಾಪರ್ ಪಾತ್ರೆಗಳು
ಕಾಪರ್ ಬಾಟಲ್‌ನಲ್ಲಿ ತುಂಬಿಟ್ಟ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಇದಕ್ಕೆ ಕಾರಣ, ತಾಮ್ರವು ಸೋಂಕು ತರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲದು. ಜೊತೆಗೆ, ಕಾಪರ್‌ಗೆ ಫ್ಯಾಟ್ ಕರಗಿಸುವ ಸಾಮರ್ಥ್ಯ ಇರುವುದರಿಂದ ಕಾಪರ್ ಪಾತ್ರೆಗಳ ಬಳಕೆಯು ತೂಕ ಇಳಿಸಲು ಕೂಡಾ ಸಹಕಾರಿ. ಕಾಪರ್‌ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಚರ್ಮವನ್ನು ಬಿಗಿಯಾಗಿಟ್ಟು, ಬೇಗ ವಯಸ್ಸಾಗದಂತೆ ನೋಡಿಕೊಳ್ಳುತ್ತದೆ.
ಇನ್ನು ಕಾಪರ್ ಪಾತ್ರೆಗಳಲ್ಲಿ ಆಹಾರ ಬೇಯಿಸುವ ವಿಷಯಕ್ಕೆ ಬಂದರೆ ಇದು ಸ್ಟೀಲ್‌ಗಿಂತ ಇಪ್ಪತ್ತು ಪಟ್ಟು ಹೆಚ್ಚು ಹೀಟ್ ಎಳೆದುಕೊಂಡು ಆಹಾರವನ್ನು ಸಮವಾಗಿ, ಚೆನ್ನಾಗಿ ಬೇಯಿಸಬಲ್ಲದು. ಕಾಪರ್‌ನ ಕೀಟಾಣುವಿರೋಧಿ ಗುಣದಿಂದಾಗಿ ಕಾಪರ್ ತಟ್ಟೆ ಹಾಗೂ ಲೋಟಗಳ ಬಳಕೆ ಉತ್ತಮ.
ಕ್ಯಾಸ್ಟ್ ಐರನ್ ಪಾತ್ರೆಗಳು(ಎರಕ ಹೊಯ್ದ ಕಬ್ಬಿಣ)
ನಿಮ್ಮ ಅಜ್ಜಅಜ್ಜಿ ಬಳಸಿದ ಕಬ್ಬಿಣದ ಕಾವಲಿ ಹಾಗೂ ಇತರೆ ಪಾತ್ರೆಗಳು ಮನೆಯಲ್ಲಿದ್ದರೆ ಅವನ್ನು ನೀವು ಕೂಡಾ ಬಳಸಲು ಆರಂಭಿಸಿ. ಸುಮಾರು 2000 ವರ್ಷಗಳಿಂದಲೂ ಕಬ್ಬಿಣ ಅಡುಗೆ ಮನೆಯ ಸರಕಾಗಿ ಉಳಿದುಬಂದದ್ದು ಸುಮ್ಮನೆಯಲ್ಲ. ಸುರಕ್ಷತೆ ಹಾಗೂ ಬಾಳಿಕೆಯ ದೃಷ್ಟಿಯಲ್ಲಿ ನೋಡಿದರೆ ಕಬ್ಬಿಣಕ್ಕೆ ಸರಿಗಟ್ಟುವ ಮತ್ತೊಂದು ಪಾತ್ರೆ ಸಿಗಲಿಕ್ಕಿಲ್ಲ. ಚೆನ್ನಾಗಿ ಎಣ್ಣೆ ಹಚ್ಚಿ ಬಳಸಿದಿರಾದರೆ, ನಾನ್ ಸ್ಟಿಕ್ ಪ್ಯಾನ್‌ಗೆ ಸ್ಪರ್ಧೆ ನೀಡುತ್ತದೆ ಕಬ್ಬಿಣದ ಬಾಣಲೆ. ಜೊತೆಗೆ, ಇದರಲ್ಲಿ ಅಡುಗೆಗಾಗಿ ಅತಿ ಕಡಿಮೆ ಎಣ್ಣೆ ಸಾಕಾಗುತ್ತದೆ. ಕಾಪರ್‌ಗಿಂತ ಅತಿ ಕಡಿಮೆ ಬೆಲೆಗೆ ಸಿಗುವ ಇವು ಗುಣದಲ್ಲಿ ಬಿಟ್ಟುಕೊಡುವುದಿಲ್ಲ.
ವರ್ಷದ ಕೂಸಿಗೆ ಹರ್ಷ ನೀಡುವ ಫುಡ್ ಪಟ್ಟಿ, ನಿಮ್ಮ ಮಗುವಿಗೆ ಏನ್‌ಕೊಡ್ತಿದ್ದೀರಾ?...
ಹಿತ್ತಾಳೆ ಪಾತ್ರೆಗಳು
ನಿಮ್ಮ ಸ್ಟ್ರೆಂತ್ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಎಲ್ಲ ಹಾದಿಗಳನ್ನು ಹಿಡಿಯುವವರು ನೀವಾದರೆ ಕಿಚನ್‌ನ ಪಾತ್ರೆಗಳನ್ನು ಹಿತ್ತಾಳೆ ಪಾತ್ರೆಗಳಿಗೆ ಬದಲಿಸಿ. ಇವುಗಳಲ್ಲಿರುವ ಮಿನರಲ್ಸ್ ನಿಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಿ ಚರ್ಮಕ್ಕೆ ಕಾಂತಿ ನೀಡುತ್ತವೆ. ಕಾಪರ್‌ನಂತೆಯೇ ಹಿತ್ತಾಳೆ ಪಾತ್ರೆಗಳಲ್ಲಿ ನೀರನ್ನು ಹಿಡಿದಿಟ್ಟು ಕುಡಿಯುವುದರಿಂದ ದೇಹಕ್ಕೆ ಹೆಚ್ಚು ಮಿನರಲ್ಸ್ ಹಾಗೂ ನ್ಯೂಟ್ರಿಯೆಂಟ್ಸ್ ಸಿಕ್ಕು ಆರೋಗ್ಯ ಹೆಚ್ಚುತ್ತದೆ.
ಮಣ್ಣಿನ ಪಾತ್ರೆಗಳು
ಮಣ್ಣಿನ ಪಾತ್ರೆಗಳಲ್ಲಿ ತಯಾರಿಸುವ ಆಹಾರಕ್ಕಿರುವ ಘಮವನ್ನು ಸವಿದೇ ತೀರಬೇಕು. ಇದು ಮಾಯಿಶ್ಚರ್ ಹಾಗೂ ಉಷ್ಣತೆಯನ್ನು ಪಾತ್ರೆಯ ಎಲ್ಲ ಭಾಗಗಳಿಗೆ ಸಮನಾಗಿ ಹರಿಸುವ ಗುಣ ಹೊಂದಿರುವುದರಿಂದ ಆಹಾರವು ಸಮನಾಗಿ ಬೇಯುವ ಜೊತೆಗೆ ಸೂಪರ್ ಹೆಲ್ದೀಯಾಗಿರುತ್ತದೆ. ಇದರಲ್ಲಿ ತಯಾರಿಸಿದ ಆಹಾರದ ಫ್ಲೇವರ್ ಹಾಗೂ ಪರಿಮಳ ಹೆಚ್ಚು. ಇದು ನಿಮ್ಮ ಆಹಾರಕ್ಕೆ ಮೆಗ್ನೀಶಿಯಂ, ಸಲ್ಫರ್ ಹಾಗೂ ಕ್ಯಾಲ್ಶಿಯಂ ಸೇರಿಸುತ್ತದೆ. ಮನೆಯ ಕುಡಿವ ನೀರನ್ನು ಮಣ್ಣಿನ ಪಾತ್ರೆಗಳಲ್ಲಿ ತುಂಬಿಡುವುದರಿಂದ ನೀರು ಫ್ರಿಡ್ಜ್‌ನಲ್ಲಿರಿಸಿದಂತೆ ತಣ್ಣಗಿರುವ ಜೊತೆಗೆ ನ್ಯೂಟ್ರಿಯೆಂಟ್‌ಗಳನ್ನು ನೀರಿಗೆ ಸೇರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.