ಕ್ಯಾನ್ಸರ್‌ ರೋಗಿಗಳು ತಿನ್ನಲೇಬೇಕಾದ ಹಣ್ಣುಗಳಿವು!

By Suvarna NewsFirst Published Feb 15, 2021, 4:47 PM IST
Highlights

ಕ್ಯಾನ್ಸರ್‌ ಎಂಬ ಕಾಯಿಲೆ ದೇಹ ಮತ್ತು ಮನಸ್ಸು ಎರಡನ್ನೂ ಹಿಂಡಿಹಿಪ್ಪೆ ಮಾಡುತ್ತೆ.ಈ ಕಾಯಿಲೆಗೆ ನೀಡೋ ಚಿಕಿತ್ಸೆಯಿಂದಲೂ ಆರೋಗ್ಯದಲ್ಲಿ ಅನೇಕ ಏರುಪೇರುಗಳಾಗುತ್ತವೆ. ಆದ್ರೆ ಕೆಲವು ಹಣ್ಣುಗಳು ಹಾಗೂ ಸರಿಯಾದ ಆಹಾರ ಕ್ರಮದಿಂದ ಈ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು.

ನಾವು ಸೇವಿಸೋ ಆಹಾರ ನಮ್ಮಆರೋಗ್ಯ ನಿರ್ಧರಿಸುತ್ತೆ.ಆದಕಾರಣ ನಾವು ಸದಾ ಪೌಷ್ಟಿಕಾಂಶಯುಕ್ತ,ಆರೋಗ್ಯಕರ ಆಹಾರವನ್ನೇ ಸೇವಿಸಬೇಕು.ಕೆಲವು ಆಹಾರಗಳು ನಿರ್ದಿಷ್ಟ ಕಾಯಿಲೆಗಳಿಗೆ ಮದ್ದಾಗಿವೆ.ಹಾಗೆಯೇ ಒಂದಿಷ್ಟು ಆಹಾರಗಳಿಗೆ ರೋಗಗಳನ್ನು ತಡೆಯೋ ತಾಕತ್ತೂ ಇದೆ.ಕೆಲವು ಆಹಾರಗಳಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ಕೂಡ ಕಡಿಮೆ ಮಾಡಬಹುದು.ಅದ್ರಲ್ಲೂ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರೋರು ಕೆಲವು ಹಣ್ಣುಗಳನ್ನು ಸೇವಿಸೋದ್ರಿಂದ ಕ್ಯಾನ್ಸರ್‌ ದೇಹದ ಇನ್ನಷ್ಟು ಭಾಗಗಳಿಗೆ ಹರಡೋದನ್ನು ತಡೆಯೋ ಜೊತೆ ಚಿಕಿತ್ಸೆಯಿಂದ ಉಂಟಾಗೋ ಕೆಲವು ಅಡ್ಡಪರಿಣಾಮಗಳನ್ನು ಕೂಡ ಕಡಿಮೆ ಮಾಡಬಹುದು.

ಟೆನ್ಶನ್‌ಗೆ ಬಾಯ್ ಬಾಯ್: ಸಪೋಟದಲ್ಲಿದೆ ಸೂಪರ್ ಪವರ್..!

ಸೇಬು
ವೈದ್ಯರಿಂದ ದೂರವಿರಲು ದಿನಕ್ಕೊಂದು ಸೇಬು ತಿನ್ನಿ ಎಂಬ ಮಾತಿದೆ. ಸೇಬಿನಲ್ಲಿ ಕ್ವೆರ್ಸೆಟಿನ್‌,ಕಟೆಕಿನ್‌,ಫ್ಲೋರಿಝಿನೆ ಹಾಗೂ ಕ್ಲೋರೋಜೆನಿಕ್‌ ಆಸಿಡ್ ಸೇರಿದಂತೆ ವಿವಿಧ ಫೈಟೋಕೆಮಿಕಲ್ಸ್‌ ಇವೆ.ಇವು ಪ್ರಮುಖ ಆಂಟಿಆಕ್ಸಿಡೆಂಟ್‌ಗಳಾಗಿದ್ದು,ಕ್ಯಾನ್ಸರ್‌ ತಡೆಯಬಲ್ಲವು.ಇನ್ನುಸೇಬಿನಲ್ಲಿ ನಾರಿನಂಶ ಹಾಗೂ ಪಾಲಿಫೆನೊಲ್‌ ಅಂಶವಿದ್ದು,ಇವು ಕರುಳಿನಲ್ಲಿರೋ ಸೂಕ್ಷ್ಮಾಣುಜೀವಿಗಳನ್ನು ಕ್ಯಾನ್ಸರ್‌ ವಿರುದ್ಧ ಹೋರಾಡಲು ಪ್ರೇರೇಪಿಸುತ್ತವೆ.ಸೇಬು ಸೇವನೆಯಿಂದ ಸ್ತನ ಕ್ಯಾನ್ಸರ್‌ ಅಪಾಯವನ್ನು ತಗ್ಗಿಸಬಹುದು ಎಂದು ಅನೇಕ ಅಧ್ಯಯಗಳು ದೃಢಪಡಿಸಿವೆ.  

ಕಿತ್ತಳೆ
ಕಿತ್ತಳೆ ಸೇರಿದಂತೆ ಕೆಲವು ಸಿಟ್ರಸ್‌ ಹಣ್ಣುಗಳಲ್ಲಿ ದೇಹದಲ್ಲಿ ಗಡ್ಡೆಗಳು ಬೆಳೆಯದಂತೆ ತಡೆಯೋ ಅಂಶಗಳಿರುತ್ತವೆ. ಪ್ರತಿದಿನ ಸಿಟ್ರಸ್‌ ಹಣ್ಣುಗಳನ್ನುತಿನ್ನೋದ್ರಿಂದ ಶ್ವಾಸಕೋಶ,ಗುದನಾಳ ಹಾಗೂ ಹೊಟ್ಟೆ ಕ್ಯಾನ್ಸರ್‌ ಸೇರಿದಂತೆ ಕೆಲವು ಕ್ಯಾನ್ಸರ್‌ಗಳು ಬಾರದಂತೆ ತಡೆಯಬಹುದು ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಸಿಟ್ರಸ್‌ ಹಣ್ಣುಗಳಲ್ಲಿರೋ ನೊಬಿಲೆಟಿನ್‌ ಹಾಗೂ ಅಸ್ಕೋರ್ಬಿಕ್‌ ಆಸಿಡ್‌ (ವಿಟಮಿನ್‌ ಸಿ) ದೇಹದಲ್ಲಿ ಗಡ್ಡೆಗಳ ಬೆಳವಣಿಗೆ ಹಾಗೂ ಹರಡುವಿಕೆಯನ್ನು ತಡೆಯುತ್ತವೆ. 

ಕ್ರ್ಯಾನ್‌ಬೆರೀಸ್
ಕ್ರ್ಯಾನ್‌ಬೆರೀಸ್‌ನಲ್ಲಿ ಉರ್ಸೋಲಿಕ್‌ ಆಸಿಡ್‌ ಹಾಗೂ ಪ್ರೊಆಂತೋಸೈನಿಡಿನ್ಸ್‌ ಇದ್ದು,ಪ್ರತಿದಿನ ಇದನ್ನು ಸೇವಿಸೋದ್ರಿಂದ ಸ್ತನ ಕ್ಯಾನ್ಸರ್‌, ಗರ್ಭ ಕೊರಳಿನ ಕ್ಯಾನ್ಸರ್‌, ಶ್ವಾಸಕೋಶ ಕ್ಯಾನ್ಸರ್‌, ಲುಕೇಮಿಯ, ಪ್ರೋಸ್ಟೇಟ್‌ ಕ್ಯಾಸರ್, ವಸಡಿನ ಕ್ಯಾನ್ಸರ್‌ ಸೇರಿದಂತೆ ಕೆಲವು ಕ್ಯಾನ್ಸರ್‌ ಜೀವಕೋಶಗಳ ಬೆಳವಣಿಗೆಯನ್ನು ತಡೆಯಬಹುದಾಗಿದೆ. 

ಹಸಿ ಅಲ್ಲ ಬೇಯಿಸಿದ ಮೊಳಕೆ ಕಾಳು ಆರೋಗ್ಯಕ್ಕೆ ಉತ್ತಮ

ಬೆರೀಸ್
ಬೆರೀಸ್‌ನಲ್ಲಿ ವಿಟಮಿನ್‌ ಎ, ಸಿ,ಇ, ಕ್ಯಾಲ್ಸಿಯಂ, ಸೆಲೆನಿಮ್‌, ಫೋಲೇಟ್‌ ಸೇರಿದಂತೆ ಅನೇಕ ಪೌಷ್ಟಿಕಾಂಶಗಳಿವೆ. ಬ್ಲ್ಯೂ ಬೆರೀಸ್‌ನಲ್ಲಿ ಆಂತೋಸೈನೋಸೈಡ್ಸ್‌ ಹಾಗೂ ರಿಸ್ವೆರಟ್ರೋಲ್‌ ಎಬ ಸಕ್ರಿಯ ಆಂಟಿಆಕ್ಸಿಡೆಂಟ್‌ಗಳಿವೆ.ಇವು ಆಂಟಿ ಕ್ಯಾನ್ಸರ್‌ ಗುಣಗಳನ್ನು ಹೊಂದಿದ್ದು,ಕ್ಯಾನ್ಸರ್‌ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ.ಕೆಂಪು ದ್ರಾಕ್ಷಿಯ ಸಿಪ್ಪೆಯಲ್ಲಿ ಕೂಡ ರಿಸ್ವೆರಟ್ರೋಲ್‌ ಇದ್ದು,ಇದು ಕೀಮೋಥೆರಪಿಟಿಕ್‌ ಗುಣಗಳನ್ನು ಹೊಂದಿದೆ. 

ಕ್ಯಾನ್ಸರ್‌ ರೋಗಿಗಳ ಡಯಟ್‌ ಹೇಗಿರಬೇಕು?
ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರೋರು ಕೂಡ ಸಮರ್ಪಕವಾದ ಡಯಟ್‌ ಮೂಲಕ ಈ ಕಾಯಿಲೆಯಿಂದ ಆರೋಗ್ಯದಲ್ಲಾಗೋ ಬದಲಾವಣೆಗಳನ್ನು ಸಮರ್ಥವಾಗಿ ನಿಭಾಯಿಸಬಹುದು.

ಹಸಿವು ಇಲ್ಲದಿರೋದು
-ಹಸಿವಿಲ್ಲ ಎನ್ನೋ ಕಾರಣಕ್ಕೆ ಆಹಾರ ಸೇವಿಸದಿದ್ರೆ ಚಿಕಿತ್ಸೆಯಿಂದ ಸಾಕಷ್ಟು ಬಳಲಿರೋ ದೇಹಕ್ಕೆ ಇನ್ನಷ್ಟು ತ್ರಾಸವಾಗುತ್ತೆ. ಒಂದೇ ಬಾರಿಗೆ ಜಾಸ್ತಿ ಆಹಾರ ಸೇವಿಸೋದು ಸಾಧ್ಯವಾಗದಿರಬಹುದು. ಹೀಗಾಗಿ ಆಗಾಗ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸಿ. ಪ್ರತಿದಿನ 5 ಅಥವಾ 6 ಬಾರಿ ಚಿಕ್ಕ ಪ್ರಮಾದಲ್ಲಿ ಆಹಾರ ಸೇವಿಸಿ. 
-ಹಸಿವು ಹೆಚ್ಚಾದಂತೆ ಪ್ರೋಟೀನ್‌ ಹೆಚ್ಚಿರೋ ಆಹಾರ ಸೇವಿಸಲು ಪ್ರಾರಂಭಿಸಿ.
-ನಿಮ್ಮಿಷ್ಟದ ಅಧಿಕ ಕ್ಯಾಲೋರಿಯ ಆಹಾರ ಹಾಗೂ ಪಾನೀಯಗಳನ್ನು ಕೈಗೆಟುಕುವ ಸ್ಥಳದಲ್ಲಿಡಿ. ಆಗಾಗ ಸ್ವಲ್ಪ ಸ್ವಲ್ಪವೇ ಸೇವಿಸಿ.
-ಆರೋಗ್ಯದಲ್ಲಿ ವ್ಯತ್ಯಯವಿದ್ರೂ ನಿಮಗೆಷ್ಟು ಸಾಧ್ಯವೋ ಅಷ್ಟು ಸಕ್ರಿಯವಾಗಿರಿ. ದೈಹಿಕವಾಗಿ ಚಟುವಟಿಕೆಯಿಂದಿದ್ದಾಗ ಸಹಜವಾಗಿ ಹಸಿವು ಕೂಡ ಹೆಚ್ಚುತ್ತೆ.

ಲವಂಗ, ಹಾಲು ಜೊತೆಯಾಗಿ ಬೆರೆತರೆ ಅರೋಗ್ಯಕ್ಕೆ ಹಲವು ಲಾಭ

ವಾಕರಿಕೆ ಹಾಗೂ ವಾಂತಿ
ಕ್ಯಾನ್ಸರ್‌ ಚಿಕಿತ್ಸೆಗೊಳಗಾಗುತ್ತಿರೋರಲ್ಲಿ ವಾಕರಿಕೆ ಹಾಗೂ ವಾಂತಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳೋದು ಕಾಮನ್. ಹೀಗಾಗಿ ಆಗಾಗ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸಬೇಕು. ಆದಷ್ಟು ದ್ರವಾಹಾರ ಸೇವಿಸಿ. ಅಧಿಕ ಕೊಬ್ಬಿನಾಂಶ, ಖಾರ, ಸಿಹಿ ಹಾಗೂ ಎಣ್ಣೆಯಂಶವಿರೋ ಆಹಾರ ತ್ಯಜಿಸಿ. ಹೆಚ್ಚು ಪರಿಮಳ ಹೊಂದಿರೋ ಆಹಾರದಿಂದ ಆದಷ್ಟು ದೂರವಿರಿ. ಪಾನೀಯಗಳನ್ನು ಊಟದ ಜೊತೆ ಸೇವಿಸೋ ಬದಲು ಊಟಕ್ಕಿತ ಸ್ವಲ್ಪ ಮೊದಲು ಅಥವಾ ನಂತರ ಸೇವಿಸಿ.

ಆಯಾಸ
ಚಿಕಿತ್ಸೆಯ ಪರಿಣಾಮ ವಿಪರೀತ ಸುಸ್ತು ಕಾಡಬಹುದು. ಎಷ್ಟು ಸಾಧ್ಯವೋ ಅಷ್ಟು ನೀರು, ಜ್ಯೂಸ್‌ ಸೇರಿದಂತೆ ದ್ರವಾಹಾರ ಸೇವಿಸಿ. ನಿರ್ಜಲೀಕರಣದಿಂದ ಸುಸ್ತು ಹೆಚ್ಚುತ್ತೆ. ಹಾಗಾಗಿ ಆಗಾಗ ದ್ರವಾಹಾರ ಸೇವಿಸಿ.

ಅತಿಸಾರ
ನೀರು, ಜ್ಯೂಸ್‌, ಸೂಪ್‌  ಸೇರಿದಂತೆ ದ್ರವಾಹಾರವನ್ನು ಹೆಚ್ಚೆಚ್ಚು ಸೇವಿಸಬೇಕು.ಬಾಳೆಹಣ್ಣು,ಸೇಬು, ಓಟ್ಸ್ನಂತಹ ಆಹಾರ ಸೇವಿಸಿ. ಮೃದುವಾದ, ಖಾರವಿರದ ಆಹಾರ, ದ್ರವಾಹಾರಗಳನ್ನು ಸೇವಿಸೋದ್ರಿಂದ ಅತಿಸಾರದ ನಿಯಂತ್ರಣ ಸಾಧ್ಯ. 

click me!