ರೋಗಗಳನ್ನು ತಡೆಗಟ್ಟಲು ನಮ್ಮ ಸಹಾಯಕ್ಕೆ ಬರುವುದರಲ್ಲೊಂದು ಪಾನೀಯ ಆಯುರ್ವೇದಿಕ್ ಡ್ರಿಂಕ್ ಕಧ. ಇದು ಮಳೆಗಾಲದ ಇನ್ಫೆಕ್ಷನ್‌ಗಳನ್ನು ತಡೆಯುವಲ್ಲಿ ಸಹಕಾರಿ.
ಮಳೆಗಾಲ ಅಂದ್ರೆ ಶೀತ, ಕೆಮ್ಮು, ಜ್ವರಗಳೆಲ್ಲ ಸಾಮಾನ್ಯ ವ್ಯಾಧಿಗಳು. ಫ್ಲೂ, ಕಾಲೆರಾ, ಟೈಫಾಯ್ಡ್, ಡೆಂಘೆ ಹಾಗೂ ಇತರೆ ಇನ್ಫೆಕ್ಷನ್‌ಗಳೂ ಮಳೆಗಾಲದಲ್ಲೇ ಹೆಚ್ಚು. ಅಂಥದರಲ್ಲಿ ಈ ಬಾರಿ ಕೊರೋನಾ ವೈರಸ್ ಭಯ ಬೇರೆ ಸೇರಿಕೊಂಡಿದೆ. ಇಂಥ ಸಂದರ್ಭದಲ್ಲಿ ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಭಯ ಹೆಚ್ಚುತ್ತದೆ. ಹೀಗಾಗಿ, ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು ಪ್ರತಿಯೊಬ್ಬರೂ ಎಚ್ಚರ ತೆಗೆದುಕೊಳ್ಳುವುದು ಮುಖ್ಯ.
ರೋಗ ತಡೆಗಟ್ಟುವುದೇ ಎಲ್ಲಕ್ಕಿಂತ ಉತ್ತಮ ಚಿಕಿತ್ಸೆ. ಹಾಗಾಗಿ ದೇಹವನ್ನು ಫಿಟ್ ಆಗಿಟ್ಟುಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರತ್ತ ಗಮನ ಹರಿಸಬೇಕು. ಇದಕ್ಕಾಗಿ ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರ ಸೇವಿಸುವುದು, ಸೊಳ್ಳೆಗಳು ಕಚ್ಚದಂತೆ ನೋಡಿಕೊಳ್ಳುವುದು, ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕು. ಈಗಂತೂ ಮಾಸ್ಕ್ ಧರಿಸುವುದು, ಮನೆಯೊಳಗೇ ಉಳಿಯುವುದು ಕೂಡಾ ಜೀವನದ ಭಾಗವಾಗಿವೆ. ಅವನ್ನೂ ಸ್ಟ್ರಿಕ್ಟ್ ಆಗಿ ಫಾಲೋ ಮಾಡಬೇಕು.
ಹೀಗೆ ರೋಗಗಳನ್ನು ತಡೆಗಟ್ಟಲು ನಮ್ಮ ಸಹಾಯಕ್ಕೆ ಬರುವುದರಲ್ಲೊಂದು ಪಾನೀಯ ಆಯುರ್ವೇದಿಕ್ ಡ್ರಿಂಕ್ ಕಧ. ಇದು ಮಳೆಗಾಲದ ಇನ್ಫೆಕ್ಷನ್‌ಗಳನ್ನು ತಡೆಯುವಲ್ಲಿ ಸಹಕಾರಿ.
ಹರ್ಬಲ್ ಡಿಕಾಕ್ಷನ್
ಕಧ ಎಂಬುದು ಔಷಧೀಯ ಎಲೆಗಳು, ಬೇರು ಹಾಗೂ ಸಾಂಬಾರ ಪದಾರ್ಥಗಳನ್ನು ಬಳಸಿ ತಯಾರಿಸುವ ಡಿಕಾಕ್ಷನ್. ಈ ಕಷಾಯಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದ್ದು, ಪ್ರತಿ ದಿನಕ್ಕೊಮ್ಮೆ ಮಾಡಿ ಮನೆಮಂದಿಯೆಲ್ಲ ಸೇವಿಸುವುದು ಉತ್ತಮ ಅಭ್ಯಾಸ.
ಶೀತ ಮತ್ತು ಕೆಮ್ಮನ್ನು ತಡೆಯಲು
ಒಂದು ಬಟ್ಟಲು ತಾಜಾ ತುಳಸಿ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಇದನ್ನು ಕಾಳುಮೆಣಸು ಹಾಗೂ ಶುಂಠಿಯೊಂದಿಗೆ ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಿ. ಕುದಿಯುತ್ತಿರುವ ನೀರಿಗೆ ಈ ಪುಡಿ ಹಾಕಿ 20 ನಿಮಿಷಗಳ ಕಾಲ ಕುದಿಯಲು ಬಿಡಿ. ಡಿಕಾಕ್ಷನ್ ಅರ್ಧದಷ್ಟಕ್ಕೆ ಬರುತ್ತಲೇ ಅದನ್ನು ಸೋಸಿ ಲೋಟಕ್ಕೆ ಬಗ್ಗಿಸಿ. ಕೆಲ ಹನಿ ಜೇನುರಸ ಸೇರಿಸಿ ಸೇವಿಸಿ.
ಶಕ್ತಿಗಾಗಿ
ಚಕ್ಕೆಯನ್ನು ಪುಡಿ ಮಾಡಿಟ್ಟುಕೊಳ್ಳಿ. 1 ಕಪ್ ನೀರಿಗೆ ಅರ್ಧ ಚಮಚ ಈ ಪುಡಿಯನ್ನು ಹಾಕಿ 15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. 1 ಚಮಚ ಜೇನುತುಪ್ಪ ಸೇರಿಸಿ ಸೇವಿಸಿ.
ಫ್ಲೂ ತಡೆಯಲು ಹಾಗೂ ರೋಗ ನಿರೋಧಕ ಶಕ್ತಿಗಾಗಿ
ಅಮೃತಬಳ್ಳಿಯ ಎಲೆ ಅಥವಾ ಚಕ್ಕೆಯನ್ನು ಗ್ರೈಂಡ್ ಮಾಡಿ. ಅದನ್ನು ನೀರಿಗೆ ಸೇರಿಸಿ 15 ನಿಮಿಷ ಕುದಿಸಿ. ಸ್ವಲ್ಪ ತಣ್ಣಗಾದ ಬಳಿಕ ಸೇವಿಸಿ.
ಕಧದ ಆರೋಗ್ಯ ಲಾಭಗಳು
- ಜ್ವರ ಹಾಗೂ ಮಳೆಗಾಲದ ಅಲರ್ಜಿಗಳನ್ನು ತಡೆಯಲು
ಪ್ರತಿದಿನ ಅದರಲ್ಲೂ ಮಳೆಗಾಲದಲ್ಲಿ ಕಧ ಸೇವಿಸುವುದರಿಂದ ಇನ್ಫೆಕ್ಷನ್ ಹರಡುವ ರೋಗಾಣುಗಳ ವಿರುದ್ಧ ಹೋರಾಡಲು ದೇಹ ಹೆಚ್ಚು ಶಕ್ತವಾಗುತ್ತದೆ. ಶುಂಠಿಯ ಆ್ಯಂಟಿವೈರಲ್ ಗುಣ ವೈರಸ್‌ಗಳನ್ನು ದೂರವಿಡಲು ಸಹಕಾರಿಯಾಗಿದೆ. ತುಳಸಿ, ಲವಂಗ ಮುಂತಾದವು ಆ್ಯಂಟಿ ಇನ್‌ಫ್ಲೇಮೇಟರಿ ಹಾಗೂ ಆ್ಯಂಟಿಸೆಪ್ಟಿಕ್ ಗುಣಗಳನ್ನು ಹೊಂದಿದ್ದು ಅದು ಶೀತ, ಕೆಮ್ಮು ಹಾಗೂ ಗಂಟಲ ಅಲರ್ಜಿಗಳಿಂದ ದೂರವಿಡುತ್ತದೆ.
- ಲಿವರ್ ಹಾಗೂ ಕಿಡ್ನಿಯ ಆರೋಗ್ಯ
ಉತ್ತಮ ಆರೋಗ್ಯಕ್ಕೆ ಚೆನ್ನಾಗಿ ಕೆಲಸ ಮಾಡುವ ಲಿವರ್ ಹಾಗೂ ಕಿಡ್ನಿಗಳ ಅಗತ್ಯವಿದೆ. ಇವುಗಳ ಆರೋಗ್ಯ ನೋಡಿಕೊಳ್ಳದಿದ್ದರೆ ಜಾಂಡೀಸ್, ಅಜೀರ್ಣ, ಹಸಿವಿಲ್ಲದಿರುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಷಾಯ ಸೇವನೆಯು ಕಿಡ್ನಿ ಹಾಗೂ ಲಿವರ್ ಆರೋಗ್ಯವನ್ನು ಕಾಪಾಡುತ್ತದೆ.
- ಅಸಿಡಿಟಿ, ತಲೆನೋವು ದೂರ
ಸಾಮಾನ್ಯ ಸಮಸ್ಯೆಗಳಾದ ಅಸಿಡಿಟಿ, ತಲೆನೋವು, ಗ್ಯಾಸ್ಟಿಕ್, ಸಂಕಟ ಮುಂತಾದ ಸಮಸ್ಯೆಗಳನ್ನು ಕಧ ಪರಿಹರಿಸಬಲ್ಲದು. ಕಧಕ್ಕೆ ದೇಹವನ್ನು ತಂಪಾಗಿರಿಸುವ ಗುಣವಿರುವುದರಿಂದ ಇಂಥ ಸಮಸ್ಯೆಗಳು ದೂರವಾಗುತ್ತವೆ.
- ಮೂತ್ರ ನಾಳ ಸೋಂಕಿನಿಂದ ರಕ್ಷಣೆ
ಆಯುರ್ವೇದಿಕ್ ಡಿಕಾಕ್ಷನ್‌ಗಳು ಮೂತ್ರ ನಾಳ ಸೋಂಕು, ಮೂತ್ರನಾಳದಲ್ಲಿ ಕಲ್ಲು, ಉರಿಯೂತ ಮುಂತಾದ ಸಮಸ್ಯೆಗಳನ್ನು ತಡೆಯುತ್ತವೆ.
- ಮೂಳೆ ಹಾಗೂ ಸ್ನಾಯುಗಳ ಆರೋಗ್ಯ
ಕಧದಿಂದ ಮೂಳೆಗಳ ಆರೋಗ್ಯ ಕೂಡಾ ಸುಧಾರಿಸುವುದನ್ನು ಅಧ್ಯಯನಗಳು ಕಂಡುಕೊಂಡಿವೆ.
ಕಧ ತಯಾರಿಕೆಗೆ ಮೇಲೆ ಕೊಟ್ಟ ಸಾಮಗ್ರಿಗಳಷ್ಟೇ ಅಲ್ಲದೆ, ಜೇಷ್ಠಮಧು, ಜೀರಿಗೆ, ಕೊತ್ತಂಬರಿ, ತುಳಸಿ, ಪುದೀನಾ, ಅರಿಶಿನ, ಕಾಲುಮೆಣಸು, ಮೆಂತ್ಯೆ, ಅಶ್ವಗಂಧ, ಸೋಂಪು, ಸುಗಂಧಿ ಬೇರು, ವೀಳ್ಯದೆಲೆ, ದೊಡ್ಡಪತ್ರೆ, ಕೊತ್ತಂಬರಿ ಸೊಪ್ಪು, ಲಿಂಬೆ, ಏಲಕ್ಕಿ ಮುಂತಾದವನ್ನು ಬಳಸಬಹುದು.