
ಗರ್ಭ ಧರಿಸುವ ಪ್ರಕ್ರಿಯೆ, ಗರ್ಭಧಾರಣೆಯ ಸಮಯ, ಸಂದರ್ಭ, ಸೆಕ್ಷುಯಲ್ ಪೊಸಿಶನ್ ಎಲ್ಲದರ ಬಗ್ಗೆಯೂ ಸಾಮಾನ್ಯ ಜನಗಳಲ್ಲಿ ಹಲವಾರು ಸುಳ್ಳು ನಂಬಿಕೆಗಳಿವೆ. ಇವೆಲ್ಲವೂ ಗುಟ್ಟಿನ ವಿಷಯವೆಂಬಂತಾಗಿರುವುದೇ ಈ ಮೂಢನಂಬಿಕೆಗಳು ಈ ಮಟ್ಟದಲ್ಲಿ ಹಬ್ಬಿರಲು ಕಾರಣ. ಇಂಥ ಪ್ರಗ್ನೆನ್ಸಿ ಮಿಥ್ಯಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.
ಮಿಥ್ಯ: ಪ್ರತಿ ದಿನ ಸೆಕ್ಸ್ ಮಾಡಿದರೆ ಗರ್ಭಧಾರಣೆ ಸಾಧ್ಯತೆ ಜಾಸ್ತಿ
ಮಗುವಿಗಾಗಿ ಎಂದರೆ ಮಹಿಳೆಯ ಫಲವತ್ತತೆಯ ದಿನಗಳಲ್ಲಿ ಮಾತ್ರ ಇಂಟರ್‌ಕೋರ್ಸ್ ಮಾಡಿದರೆ ಸಾಕು, ಆಗ ಕೂಡಾ ದಿನ ಬಿಟ್ಟು ದಿನ ಮಾಡಿದರೆ ಸಾಕಾಗುತ್ತದೆ. ಉಳಿದಂತೆ ನಿಮ್ಮ ಖುಷಿಗಾಗಿ ಮುಂದುವರಿಯಬಹುದಷ್ಟೇ!
ಮಿಥ್ಯ: ಗರ್ಭಧಾರಣೆಗೆ ನಿರ್ದಿಷ್ಟ ಪೊಸಿಶನ್‌ಗಳಿವೆ
ಯಾವ ಪೊಸಿಶನ್ ಆದರೂ ಸರಿಯೇ, ವೀರ್ಯ ಯೋನಿಯೊಳಗೆ ಹೋದರೆ ಸಾಕು ಗರ್ಭಧಾರಣೆಗೆ. ಅದಕ್ಕೆ ಹೀಗೇ ಇರಬೇಕು ಹಾಗೇ ಇರಬೇಕು ಎಂಬ ಯಾವುದೇ ನಿಯಮಗಳಿಲ್ಲ.
ಮಿಥ್ಯ: ಸೆಕ್ಸ್ ಬಳಿಕ ವೀರ್ಯ ಒಳ ತಲುಪಲು ಮಹಿಳೆ ತನ್ನ ಸೊಂಟವನ್ನು ಕೆಲ ಕಾಲ ಎತ್ತಿ ಹಿಡಿಯಬೇಕು
ತಪ್ಪು. ಮಹಿಳೆಯ ದೇಹವು ವೀರ್ಯವನ್ನು ತಲುಪಬೇಕಾದ ಸ್ಥಳಕ್ಕೆ ತಲುಪಿಸಲು ನೆರವಾಗುವಂತೆಯೇ ರಚನೆಯಾಗಿದೆ. ಇವೆಲ್ಲ ನೈಸರ್ಗಿಕ ಕ್ರಿಯೆಯೇ ಆಗಿರುವುದರಿಂದ ಅದಕ್ಕಾಗಿ ಆಕೆ ಸೆಕ್ಸ್ ಬಳಿಕ ಮತ್ತೊಂದು ಸಾಹಸ ಮಾಡುವ ಅಗತ್ಯವಿಲ್ಲ.
ಮಿಥ್ಯ: ಕೆಲ ನಿರ್ದಿಷ್ಟ ದಿನಗಳಲ್ಲಿ ಅಥವಾ ನಿರ್ದಿಷ್ಟ ಪೊಸಿಶನ್‌ಗಳಲ್ಲಿ ಸೆಕ್ಸ್ ನಡೆಸುವುದರಿಂದ ಮಗುವಿನ ಲಿಂಗವನ್ನು ಬೇಕಾದಂತೆ ಪಡೆಯಲು ಸಾಧ್ಯ!
ಕಾಲು ಮೇಲೆ ಕಾಲು ಹಾಕುವುದಲ್ಲ, ತಲೆ ಕೆಳಗಾಗಿ ನಿಂತರೂ ಮಗುವಿನ ಲಿಂಗವನ್ನು ನೀವು ನಿಯಂತ್ರಿಸುವುದು ಸಾಧ್ಯವಿಲ್ಲ. ಅದು ಯಾವುದೇ ದಿನವಾಗಲೀ, ಯಾವುದೇ ಗುಳಿಕ ಕಾಲವಾಗಿರಲಿ- ಎಕ್ಸ್ ಅಥವಾ ವೈ ಕ್ರೋಮೋಸೋಮ್‌ಗಳಲ್ಲಿ ಯಾವುದು ಎಗ್‌ನೊಂದಿಗೆ ಫರ್ಟಿಲೈಸ್ ಆಗಲು ಸಫಲವಾಗುವುದೋ ಅದು ಲಿಂಗವನ್ನು ನಿರ್ಧರಿಸುತ್ತದೆಯೇ ಹೊರತು ಇದನ್ನು ಜೋಡಿಯು ಬದಲಿಸಲಾರರು.
ಮಿಥ್ಯ: ಅಮವಾಸ್ಯೆಯ ದಿನ ಗರ್ಭ ಧರಿಸಿದರೆ ಅಂಗವಿಕಲ ಇಲ್ಲವೇ ವಿಶೇಷ ಚೇತನ ಮಗು ಜನನವಾಗಗುತ್ತದೆ
ಮಗುವಿನ ಯಾವುದೇ ರೀತಿಯ ಆರೋಗ್ಯದ ಮೇಲೆ ದಿನ, ಸಮಯ, ನಕ್ಷತ್ರಗಳು ಪರಿಣಾಮ ಬೀರಲಾರವು. ಜೋಡಿಯ ಉತ್ತಮ ಜೀವನಶೈಲಿ, ವಯಸ್ಸು, ಜೀನ್ಸ್ ಮುಂತಾದವು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆಯೇ ಹೊರತು ಅಮವಾಸ್ಯೆ, ಹುಣ್ಣಿಮೆಗಳಲ್ಲ.
ಮಿಥ್ಯ: ಗರ್ಭ ಧರಿಸಲು ದಿನದ ನಿರ್ದಿಷ್ಟ ಗಳಿಗೆಗಳು ಬೆಸ್ಟ್ ಟೈಂ
ಮಹಿಳೆಯು ತನ್ನ ಫಲವತ್ತತೆಯ ದಿನಗಳಲ್ಲಿದ್ದರೆ ಗರ್ಭ ಧರಿಸುವ ಸಾಧ್ಯತೆ ಹೆಚ್ಚಿರುತ್ತದೆಯೇ ಹೊರತು ಇನ್ಯಾವ ದಿನ, ಗಂಟೆ, ಕಾಲಗಳೂ ಅದನ್ನು ಬದಲಾಯಿಸಲಾರವು.
ಮಿಥ್ಯ: ಸೆಕ್ಸ್ ಬಳಿಕ ವೀರ್ಯ ಹೊರ ಚೆಲ್ಲಿದರೆ ಗರ್ಭ ಧರಿಸುವ ಸಾಧ್ಯತೆ ಕಡಿಮೆ
ಯೋನಿಯ ಒಳಗೆ ಹೆಚ್ಚಾದ ವೀರ್ಯ ಹೊರ ಚೆಲ್ಲಿರುತ್ತದೆಯೇ ಹೊರತು, ಸಂಪೂರ್ಣ ವೀರ್ಯವಲ್ಲ. ಹೀಗಾಗಿ, ವೀರ್ಯ ಹೊರ ಚೆಲ್ಲಿತೆಂದ ಮಾತ್ರಕ್ಕೆ ಗರ್ಭ ಕಟ್ಟುವುದಿಲ್ಲ ಎಂಬುದು ಶುದ್ಧ ಸುಳ್ಳು.
ಮಿಥ್ಯ: ಒಂದು ಮಗು ದತ್ತು ತೆಗೆದುಕೊಂಡರೆ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು
ಈ ನಂಬಿಕೆ ಬಹಳ ಸಾಮಾನ್ಯವಾದರೂ, ಸಾಮಾನ್ಯ ಜ್ಞಾನದ ಕೊರತೆಯಿಂದಷ್ಟೇ ಇಂಥ ನಂಬಿಕೆಗಳು ಹುಟ್ಟಬಹುದಷ್ಟೇ. ಮಗು ದತ್ತು ಪಡೆದಾಗಿನ ಪಾಸಿಟಿವ್ ಮನಸ್ಥಿತಿ, ಸಂತೋಷ ಕೊಂಚ ಮಟ್ಟಿಗೆ ನಿಮ್ಮ ದೇಹವನ್ನು ರಿಲ್ಯಾಕ್ಸ್ ಆಗಿಡುವುದರಿಂದ ಒಂದು ವೇಳೆ ಚಿಕಿತ್ಸೆ ಪಡೆಯುತ್ತಿದ್ದರೆ ಈ ಸಂದರ್ಭದಲ್ಲಿ ಸಹಾಯಕ್ಕೆ ಬರಬಹುದು.
ಮಿಥ್ಯ: ಪೀರಿಯಡ್ಸ್ ರೆಗುಲರ್ ಇದ್ದು, ಆರೋಗ್ಯವಂತವಾಗಿದ್ದರೆ ಪ್ರಗ್ನೆಂಟ್ ಆಗಲು ಸಮಸ್ಯೆಯಾಗಲ್ಲ
ಬಂಜೆತನಕ್ಕೆ ಯಾವುದೇ ಇಂಡಿಕೇಟರ್ ಇರುವುದಿಲ್ಲ. ಕೆಲವೊಮ್ಮೆ ಎಲ್ಲ ಸರಿಯಾಗಿದ್ದರೂ ಗರ್ಭ ಕಟ್ಟುತ್ತಿರುವುದಿಲ್ಲ. ವರ್ಷದ ಕಾಲ ಪ್ರಯತ್ನಿಸಿಯೂ ಗರ್ಭಧಾರಣೆಯಾಗುತ್ತಿಲ್ಲವೆಂದರೆ ವೈದ್ಯರನ್ನು ಕಾಣಬೇಕು.
ಮಿಥ್ಯ: ಆರಂಭದ ಕೆಲ ತಿಂಗಳಲ್ಲಿ ಗರ್ಭಧಾರಣೆಯಾಗಲಿಲ್ಲ ಎಂದರೆ ಏನೋ ಸಮಸ್ಯೆ ಇದೆ
ಆರೋಗ್ಯವಂತ ಜೋಡಿಗೆ ಮಗು ಬೇಕೆಂದು ಪ್ರಯತ್ನಿಸತೊಡಗಿದ ಬಳಿಕ ಒಂದು ವರ್ಷದವರೆಗೂ ಸಮಯ ಹಿಡಿಯಬಹುದು. ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.