ಸರ್ವೆ ಆಫ್ ಇಂಡಿಯಾದ ಅಧೀಕ್ಷಕ ಅಧಿಕಾರಿ ದೇವಸಿಂಗ್ ಮೆಹರ್ ಹಾಗೂ ಸರ್ವೆ ಅಧಿಕಾರಿ ಪಿ. ಪ್ರೇಮಕುಮಾರ್ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಅಂತರ ರಾಜ್ಯದ ಗಡಿಗುರುತನ್ನು ಪತ್ತೆ ಹಚ್ಚಿದರು.
ಸುಗ್ಗಲಮ್ಮ ದೇವಸ್ಥಾನ, ಒಎಂಸಿ ಗಣಿಗಾರಿಕೆ ಪ್ರದೇಶದಲ್ಲಿ ಓಡಾಡಿ ಗಡಿಗುರುತು ಕಾರ್ಯ ನಡೆಸಿದ ಅಧಿಕಾರಿಗಳ ತಂಡ, ಈ ಹಿಂದಿನ ಗಡಿಗುರುತುಗಳನ್ನು ಸಹ ಪರಿಶೀಲನೆ ನಡೆಸಿತು.
ಆಂಧ್ರಪ್ರದೇಶ ಹಾಗೂ ಸಂಡೂರು ತಾಲೂಕು ಗಡಿಯಿಂದ ವಿವಾದಿತ 4 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ 12 ಅಡಿಗೆ ಒಂದರಂತೆ ಗಡಿಗುರುತು ಅಳವಡಿಸುವ ಹಾಗೂ ಹದ್ದುಬಸ್ತು ಹಾಕುವ ಕಾರ್ಯ ನಡೆಯಿತು.
ಸರ್ವೆ ಆಫ್ ಇಂಡಿಯಾ, ಭೂಮಾಪನಾ ಇಲಾಖೆ, ಅರಣ್ಯ, ಕಂದಾಯ ಸೇರಿದಂತೆ ಎರಡು ರಾಜ್ಯಗಳ 45ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಗಡಿಗುರುತು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಂದಾಲ್ ಗೆಸ್ಟ್ ಹೌಸ್‌ನಲ್ಲಿ ಉಳಿದುಕೊಂಡಿರುವ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನದ ವರೆಗೆ ಸಭೆ ನಡೆಸಿ, ಬಳಿಕ ನಿಗದಿತ ಸ್ಥಳಕ್ಕೆ ತೆರಳಿತು.
ಭೂಮಾಪನಾ ಇಲಾಖೆಯ ಉಪ ನಿರ್ದೇಶಕಿ ಸುಮಾ ನಾಯಕ್, ಸಹಾಯಕ ನಿರ್ದೇಶಕ ಉದಯಶಂಕರ್ ಸೇರಿದಂತೆ ಕಂದಾಯ, ಸರ್ವೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ಒಟ್ಟು 45 ದಿನಗಳ ಕಾಲ ಸರ್ವೆ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.