ಬೆಳಗಾವಿ: ಕೊರೋನಾ ಕರಿನೆರಳು, ಸರಳವಾಗಿ ನಡೆದ ಕಿತ್ತೂರು ಉತ್ಸವ

First Published | Oct 24, 2020, 9:28 AM IST

ಚನ್ನಮ್ಮನ ಕಿತ್ತೂರು(ಅ.24): ಕೋವಿಡ್‌-19 ಕರಿನೆರಳಿನ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹೆಮ್ಮೆಯ ಕಿತ್ತೂರು ಉತ್ಸವವನ್ನು ಜಿಲ್ಲಾಡಳಿತದಿಂದ ಸರಳವಾಗಿ ಆಚರಿಸಲಾಯಿತು.
 

ಬೈಲಹೊಂಗಲದ ಚನ್ನಮ್ಮಾಜಿ ಸಮಾಧಿಯಿಂದ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸ್ಥಳೀಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿ ವೃತ್ತಕ್ಕೆ ಆಗಮಿಸಿದ ಚನ್ನಮ್ಮಾಜಿ ವೀರಜ್ಯೋತಿಗೆ ಶಾಸಕ ಮಹಾಂತೇಶ ದೊಡ್ಡಗೌಡರ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಬೈಲೂರಿಗೆ ನಿಜಗುಣಾನಂದ ಸ್ವಾಮೀಜಿ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೇರಿದಂದೆ ಅಧಿಕಾರಿಗಳು, ಊರಿನ ಗಣ್ಯರು ಪೂಜೆ ಸಲ್ಲಿಸಿ ಸ್ವಾಗತಿಸಿದರು.
ನಂತರ ಚನ್ನಮ್ಮ ವೃತ್ತದಲ್ಲಿ ಸ್ವಾಮೀಜಿಗಳು, ಕಿತ್ತೂರ ಸಂಸ್ಥಾನದ ಲಾಂಛನವಾಗಿದ್ದ ನಂದಿ ಧ್ವಜಾರೋಹಣ ನೆರವೇರಿಸಿದರು. ಪ್ರವೇಶ ಮಹಾದ್ವಾರ ಬಳಿಯ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಮೂರ್ತಿಗೂ ಮಾಲಾರ್ಪಣೆ ಮಾಡಲಾಯಿತು. ಮೆರವಣಿಗೆ ಮುಖಾಂತರ ಸಾಗಿದ ಜ್ಯೋತಿಯು ಪಟ್ಟಣದ ಮುಖ್ಯ ಬೀದಿಗುಂಟ ಸಾಗಿ ನಿಚ್ಚಣಕಿ ಮಡಿವಾಳೇಶ್ವರ ಮಠಕ್ಕೆ ತೆರಳಿ ಸಮಾಪ್ತಗೊಂಡಿತು.
Tap to resize

ಇದಕ್ಕೂ ಮುನ್ನ ಬೆಳಗ್ಗೆ 6 ಗಂಟೆಗೆ ಸೋಮವಾರ ಪೇಟೆಯಲ್ಲಿನ ಚನ್ನಮ್ಮಾಜಿ ಮೂರ್ತಿಗೆ ಕೊರೋನಾ ವಾರಿಯ​ರ್ಸ್‌ ತಂಡದ ವತಿಯಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಶಿವಾನಂದ ಮಾಸ್ತಿಹೊಳಿ ಅವರು ಪೂಜೆ ಸಲ್ಲಿಸಿ ನಂದಿ ಧ್ವಜಾರೋಹಣ ನೆರವೇರಿಸಿದರು. ನಂತರ ಐತಿಹಾಸಿಕ ಗಡಾದ ಮರಡಿಯಲ್ಲಿ ಕೊರೋನಾ ವಾರಿಯ​ರ್ಸ್‌ ಪೊಲೀಸ್‌ ಅಧಿಕಾರಿ ಕುಸುಗಲ್ಲ ಅವರು ನಂದಿ ಧ್ವಜ ನೆರವೇರಿಸಿದರು. ಪಪಂ ಕಾರ್ಮಿಕರು ಕೋಟೆ ಆವರಣದಲ್ಲಿನ ಬತೇರಿಯಲ್ಲಿ ನಂದಿ ಧ್ವಜಾರೋಹಣ ನೆರವೇರಿಸಿದರು.
ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಕುಸ್ತಿ ಹಬ್ಬ, ಕ್ರೀಡಾ ಸ್ಪರ್ಧೆಗಳು, ವಿಚಾರ ಸಂಕಿರಣ ಸೇರಿದಂತೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರಲಿಲ್ಲ.

Latest Videos

click me!