ಸಾಲಿಗ್ರಾಮದ ತೋಡುಕಟ್ಟುವಿನಲ್ಲಿ ಸ್ವರ್ಗದಂತೆ ಕಾಣುವ ಈ ಸ್ಥಳಕ್ಕೆ ಬೃಂದಾವನ ಎಂಬ ನಾಮಫಲಕವಿದೆ. ಇತ್ತೀಚೆಗಷ್ಟೇ ಸೇವಾ ನಿವೃತ್ತಿ ಪಡೆದ ಬಿಸಿಎಂ ಇಲಾಖೆಯ ಕುಂದಾಪುರ ತಾಲೂಕು ವಿಸ್ತರಣಾಧಿಕಾರಿ ಬಿ.ಎಸ್. ಮಾದರ ಅವರ ಪರಿಸರಪ್ರೇಮ ಹಾಗೂ ಪಕ್ಷಿಪ್ರೇಮದ ಪ್ರತೀಕವಿದು.
ಮನೆಯ ಮುಂದೆ ವಿವಿಧ ಬಗೆಯ ಔಷಧೀಯ ಸಸ್ಯಗಳ ತೋಟಕ್ಕೆ ಬೃಂದಾವನ ಎಂಬ ಹೆಸರಿಟ್ಟು ಆ ಗಿಡಗಳನ್ನೆಲ್ಲಾ ಸ್ವತಃ ಪೋಷಿಸಿಕೊಂಡು ಬರುತ್ತಿರುವ ಬಿ.ಎಸ್. ಮಾದರ ಅವರ ಕಾಯಕಕ್ಕೆ ಅವರ ಪತ್ನಿ, ಮಕ್ಕಳ ಸಹಯೋಗವಿದೆ. ಹಕ್ಕಿಗಳೊಂದಿಗೆ ಸಮಯ ಕಳೆಯುವ ಬಿ.ಎಸ್. ಮಾದರ ಅವರಿಗೆ ಹಕ್ಕಿಗಳೆಂದರೆ ಪಂಚಪ್ರಾಣ.
ಈ ಪುಟ್ಟಮನೆಯ ಮೇಲೊಂದು ಅತಿಥಿಗೃಹ. ತೋಟದೊಳಗೆ ಎರಡು ಬಾಡಿಗೆ ಮನೆಗಳು. ಮನೆಯ ಮುಂದೆಯೇ ಅಲ್ಲಲ್ಲಿ ಗೂಡುಗಳಲ್ಲಿರುವ ಲವ್ ಬರ್ಡ್ಸ್, ಚಿಟ್ಗುಬ್ಬಿ, ಪಾರಿವಾಳ, ಗಿಳಿ, ವಿವಿಧ ಥಳಿಯ ಬೆಕ್ಕುಗಳು, ಬಾತುಕೋಳಿ, ಮೊಲ ಮೊದಲಾದ ಪ್ರಾಣಿ-ಪಕ್ಷಿಗಳು.
ಅಡಕೆ, ತೆಂಗು, ಬಸಳೆ, ಬಣ್ಣಬಣ್ಣದ ಹೂವಿನ ಗಿಡಗಳು, ವಿವಿಧ ಬಗೆಯ ಔಷಧೀಯ ಸಸ್ಯಗಳನ್ನು ನೆಟ್ಟು ಪೋಷಿಸಿಕೊಂಡು ಬಂದಿರುವ ಮಾದರ ಪಕ್ಷಿಗಳಂತೆ ಸಸ್ಯಗಳನ್ನೂ ಸಲಹುತ್ತಿದ್ದಾರೆ.
ಮೂಲತಃ ಬಿಜಾಪುರದವರಾದ ಮಾದರ 40 ವರ್ಷಗಳಿಗೂ ಮಿಕ್ಕಿ ಬಿಸಿಎಂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಮೊನ್ನೆಯಷ್ಟೆಸೇವಾ ನಿವೃತ್ತಿ ಪಡೆದಿದ್ದಾರೆ. ಪತ್ನಿ ಉಷಾದೇವಿ ಸರ್ಕಾರಿ ಶಾಲೆ ಶಿಕ್ಷಕಿ. ಹಿರಿಯ ಪುತ್ರ ಕಾರ್ತಿಕ್ ರಾಷ್ಟ್ರ ಮಟ್ಟದ ತ್ರಿವಿಧ ಜಿಗಿತಗಾರ. ಸದ್ಯ ಕ್ರೀಡಾ ಕೋಟಾದಡಿ ರೈಲ್ವೆ ಇಲಾಖೆಯಲ್ಲಿ ದೂರದ ರಾಜಧಾನಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಡಿಗೆ ಮನೆ ನಿರ್ಮಿಸುವಾಗ ಅಡಚಣೆಯಾಗುತ್ತಿದ್ದ ಅಡಕೆ ಮರವನ್ನು ಕತ್ತರಿಸದೆ ಹೆಂಚಿನ ಮಾಡಿನ ಮಧ್ಯೆಯೇ ಅಡಕೆ ಮರ ಚಿಗುರೊಡೆಯಲು ಅವಕಾಶ ಮಾಡಿಕೊಟ್ಟಿರುವುದು ಬಿ.ಎಸ್. ಮಾದರ ಅವರ ಪರಿಸರ ಕಾಳಜಿ ಎತ್ತಿ ತೋರಿಸುತ್ತದೆ.
ವಿವಿಧ ಪಕ್ಷಿಗಳು ಮನೆಯ ಸುತ್ತಲೇ ಓಡಾಡಿಕೊಂಡಿರುತ್ತವೆ
ಪರಿಸರ ದಿನಾಚರಣೆಯ ದಿನ ನಾವು ಹೊರಗಿನ ಫೋಟೋ ತೆಗೆದು ಹಾಕಲ್ಲ. ಮನೆಯೊಳಗಿನ ಗಿಡಗಳ ಫೆäಟೋ ತೆಗೆದು ಹಾಕುತ್ತೇವೆ. ಮನೆಯಲ್ಲಿ ಬೆಳೆದ ಬಸಳೆ ಸೊಪ್ಪನ್ನು ಒಂದು ದಿನವೂ ಕತ್ತರಿಸಿ ಸಾಂಬಾರು ಮಾಡಿದ್ದಿಲ್ಲ. ಅಪ್ಪನ ಕಣ್ಣಿಗೆ ಅದು ಅಲ್ಲೇ ಚೆನ್ನಾಗಿ ಕಾಣಿಸಬೇಕು ಅನ್ನೋದು. ಅವರ ದಾರಿಗೆ ನಾವ್ಯಾವತ್ತೂ ಅಡ್ಡ ಬಂದಿಲ್ಲ ಎಂದುಮಾದರ ಮಕ್ಕಳು ಕಾರ್ತಿಕ್, ಜ್ಯೋತಿ, ಬಿ.ಎಸ್ ತಿಳಿಸಿದ್ದಾರೆ.