'ಫೈವ್‌ಸ್ಟಾರ್ ಜೈಲು' ಎಂದು ಕುಖ್ಯಾತವಾಗಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈಗ ಶಿಸ್ತಿನ ಪರ್ವ ಆರಂಭವಾಗಿದೆ. ಖಡಕ್ ಅಧಿಕಾರಿಗಳ ನೇಮಕದ ನಂತರ, ಜೈಲಿನೊಳಗೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದ್ದು, ಕೈದಿಗಳ ಐಷಾರಾಮಿ ಜೀವನಕ್ಕೆ ಅಂತ್ಯ ಹಾಡಲು ದಾಳಿಗಳನ್ನು ನಡೆಸಲಾಗುತ್ತಿದೆ.
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಒಂದು ಕಾಲದಲ್ಲಿ ಅಕ್ರಮಗಳು, ಐಷಾರಾಮಿ ಜೀವನ ಮತ್ತು ‘ಫೈವ್‌ಸ್ಟಾರ್ ಜೈಲು’ ಎಂಬ ಅಪಖ್ಯಾತಿಗೆ ಕಾರಣವಾಗಿತ್ತು. ಇದೀಗ ಪರಪ್ಪನ ಅಗ್ರಹಾರ ಜೈಲಿನ ಚಿತ್ರಣ ಸಂಪೂರ್ಣವಾಗಿ ಬದಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಖಡಕ್ ಅಧಿಕಾರಿಗಳ ನೇಮಕದ ಬಳಿಕ ಜೈಲಿನೊಳಗಿನ ಅಕ್ರಮಗಳಿಗೆ ಕಡಿವಾಣ ಬೀಳುತ್ತಿದ್ದು, ಶಿಸ್ತು ಹಾಗೂ ನಿಯಮಾವಳಿಗಳ ಕಟ್ಟುನಿಟ್ಟಿನ ಜಾರಿಗೆ ಚಾಲನೆ ದೊರೆತಿದೆ.
25
ಜೈಲಿನೊಳಗೆ ನಿಷೇಧಿತ ವಸ್ತುಗಳ ಬಳಕೆ
ಈ ಹಿಂದೆ ಜೈಲಿನೊಳಗೆ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ವರದಿಗಳು ಪ್ರಕಟವಾಗಿದ್ದವು. ಕೈದಿಗಳ ಕಳ್ಳಾಟ, ಹಣದ ಲೇವಾದೇವಿ, ಜೈಲಿನೊಳಗೆ ನಿಷೇಧಿತ ವಸ್ತುಗಳ ಬಳಕೆ ಬಹಿರಂಗವಾಗಿ ಚರ್ಚೆಗೆ ಗ್ರಾಸವಾಗಿತ್ತು. ಕೆಲ ಕೈದಿಗಳು ತಮ್ಮ ಸೆಲ್‌ಗಳನ್ನು ಐಷಾರಾಮಿ ಕೊಠಡಿಗಳಂತೆ ರೂಪಿಸಿಕೊಂಡು, ಅಡುಗೆ ಪಾತ್ರೆಗಳು, ಅಡುಗೆ ಸಾಮಗ್ರಿಗಳು, ಹೆಚ್ಚುವರಿ ಬಟ್ಟೆಗಳು, ಶೂಗಳು, ಬೆಡ್ಶೀಟ್‌ಗಳು, ದಿಂಬುಗಳು ಸೇರಿದಂತೆ ದಿನನಿತ್ಯದ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಸಂಗ್ರಹಿಸಿಕೊಂಡಿದ್ದರು. ಇದಲ್ಲದೆ ಮೊಬೈಲ್ ಫೋನ್, ಸಿಮ್ ಕಾರ್ಡ್, ಚಾರ್ಜರ್, ಇಯರ್‌ಫೋನ್‌ಗಳ ಬಳಕೆ, ಕುಳಿತುಕೊಳ್ಳಲು ಚೇರ್, ಮನರಂಜನೆಗಾಗಿ ಟಿವಿ ವ್ಯವಸ್ಥೆಯೂ ಇದ್ದದ್ದು ಬೆಳಕಿಗೆ ಬಂದಿತ್ತು. ಕೈದಿಗಳಿಂದ ಹಣ ಪಡೆದು ಜೈಲಾಧಿಕಾರಿಗಳು ಹಾಗೂ ಸಿಬ್ಬಂದಿಗಳು ‘ರಾಜಾತಿಥ್ಯ’ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿದ್ದವು.
35
ಐಪಿಎಸ್ ಅಧಿಕಾರಿ ಅನ್ಶುಕುಮಾರ್ ಖಡಕ್ ನಿಯಮ
ಈ ಎಲ್ಲಾ ಅಕ್ರಮಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಸರ್ಕಾರ ಖಡಕ್ ಅಧಿಕಾರಿಗಳನ್ನು ಜೈಲಿಗೆ ನಿಯೋಜಿಸಿತು. ಐಪಿಎಸ್ ಅಧಿಕಾರಿಯಾಗಿ ಅನ್ಶುಕುಮಾರ್ ಅವರನ್ನು ನೇಮಕ ಮಾಡಲಾಗಿದ್ದು, ಕಾರಾಗೃಹ ಡಿಜಿಪಿಯಾಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ಜೈಲಿನೊಳಗಿನ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಅಧಿಕಾರಿಗಳ ಕಟ್ಟುನಿಟ್ಟಿನ ನಿರ್ದೇಶನದಂತೆ ಜೈಲಿನಲ್ಲಿ ನಿರಂತರ ದಾಳಿ (ರೇಡ್) ಕಾರ್ಯಾಚರಣೆ ಆರಂಭವಾಗಿದೆ.
ಇತ್ತೀಚೆಗೆ ಜೈಲು ಸಿಬ್ಬಂದಿಗಳು ಕೈದಿಗಳ ಸೆಲ್‌ಗಳ ಮೇಲೆ ದಾಳಿ ನಡೆಸಿ, ಅವರು ಬಳಸುತ್ತಿದ್ದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಾತ್ರೆಗಳು, ಅಡುಗೆ ಸಾಮಗ್ರಿಗಳು, ಚೇರ್‌ಗಳು ಸೇರಿದಂತೆ ಅನಧಿಕೃತವಾಗಿ ಇಟ್ಟುಕೊಂಡಿದ್ದ ವಸ್ತುಗಳನ್ನು ಸಂಗ್ರಹಿಸಿ ಜೈಲು ಆವರಣದಲ್ಲೇ ಡಂಪ್ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು ಎರಡು ಟ್ರ್ಯಾಕ್ಟರ್ ಲೋಡ್ ವಸ್ತುಗಳನ್ನು ತೆಗೆದುಕೊಂಡು ಹೋಗಿ ಜೈಲು ಆವರಣದಲ್ಲಿ ರಾಶಿ ರಾಶಿಯಾಗಿ ಹಾಕಲಾಗಿದೆ. ಬಕೆಟ್‌ಗಳು, ಬೆಡ್ಶೀಟ್‌ಗಳು, ಪಾತ್ರೆಗಳು, ಅಡುಗೆ ಸಾಮಗ್ರಿಗಳು, ಚೇರ್‌ಗಳು ಸೇರಿದಂತೆ ಜೈಲಿನ ನಿಯಮಗಳಿಗೆ ವಿರುದ್ಧವಾಗಿ ಇಡಲಾಗಿದ್ದ ವಸ್ತುಗಳ ದೊಡ್ಡ ರಾಶಿ ಜೈಲು ಆವರಣದಲ್ಲಿ ಕಾಣಿಸಿಕೊಂಡಿದೆ.
55
ಸಿಬ್ಬಂದಿಗಳ ಮೇಲೂ ಕಟ್ಟುನಿಟ್ಟಿನ ನಿಗಾ
ಖಡಕ್ ಅಧಿಕಾರಿಗಳ ನೇಮಕದ ಬಳಿಕ ಪರಪ್ಪನ ಅಗ್ರಹಾರ ಜೈಲಿನ ವಾತಾವರಣದಲ್ಲಿ ಸ್ಪಷ್ಟ ಬದಲಾವಣೆ ಕಂಡುಬರುತ್ತಿದ್ದು, ಕೈದಿಗಳ ಮೇಲೆ ನಿಯಮಾನುಸಾರ ನಿಯಂತ್ರಣ, ಸಿಬ್ಬಂದಿಗಳ ಮೇಲೂ ಕಟ್ಟುನಿಟ್ಟಿನ ನಿಗಾವಹಿಸುವ ಕ್ರಮ ಜಾರಿಯಲ್ಲಿದೆ. ‘ಫೈವ್‌ಸ್ಟಾರ್ ಜೈಲು’ ಎಂಬ ಟೀಕೆಗೆ ಕಾರಣವಾಗಿದ್ದ ಅಕ್ರಮಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಈ ಕ್ರಮಗಳು ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಜೈಲಿನಲ್ಲಿ ಶಿಸ್ತು ಮತ್ತು ಪಾರದರ್ಶಕ ಆಡಳಿತ ಕಾಪಾಡುವ ಗುರಿಯೊಂದಿಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂಬ ಸಂದೇಶವನ್ನು ಅಧಿಕಾರಿಗಳು ನೀಡಿದ್ದಾರೆ.