ದಾವಣಗೆರೆ ತಾಲೂಕಿನ ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಪ್ಪು ಜಿಪಿಎಸ್ ಸರ್ವೆಯಿಂದಾಗಿ ಸಾವಿರಾರು ರೈತರು ಬೆಳೆವಿಮೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಒಣ ಬೇಸಾಯದ ಜಮೀನುಗಳನ್ನು ನೀರಾವರಿ ಪ್ರದೇಶವೆಂದು ನಮೂದಿಸಿದ್ದನ್ನು ಖಂಡಿಸಿ ರೈತರು ಪಂಚಾಯತಿಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ.
ದಾವಣಗೆರೆ (ಅ.19): ಒಂದೆಡೆ ಮಳೆಯಿಲ್ಲದೆ ಕಂಗಾಲಾಗಿರುವ ಅನ್ನದಾತನಿಗೆ, ಇನ್ನೊಂದೆಡೆ ಅಧಿಕಾರಿಗಳ ಬೇಜವಾಬ್ದಾರಿತನ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಧಿಕಾರಿಗಳು ಮಾಡಿದ ಒಂದೇ ಒಂದು ಯಡವಟ್ಟಿನಿಂದಾಗಿ ಸಾವಿರಾರು ರೈತರು ಬೆಳೆವಿಮೆ (Crop Insurance) ಪರಿಹಾರ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ದಾವಣಗೆರೆ ತಾಲೂಕಿನ ಐಗೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
25
ಸರ್ವೆ ಮಾಡುವಾಗ ಎಡವಟ್ಟಾಗಿದ್ದೇನು?
ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಐಗೂರು, ಬೋರಗೊಂಡನಹಳ್ಳಿ, ಲಿಂಗಾಪುರ, ಅಗಸನಕಟ್ಟೆ, ತುಂಬಿಗೆರೆ ಸೇರಿದಂತೆ ಒಟ್ಟು 7 ಗ್ರಾಮಗಳ ಸುಮಾರು 3,500ಕ್ಕೂ ಹೆಚ್ಚು ರೈತರು ಬೆಳೆವಿಮೆ ಮಾಡಿಸಿದ್ದರು. ಈ ಬಾರಿ ಭೀಕರ ಬರಗಾಲವಿದ್ದು, ಸಮರ್ಪಕವಾಗಿ ಸರ್ವೆ ನಡೆದಿದ್ದರೆ ರೈತರಿಗೆ ಬರ ಪರಿಹಾರ ಹಾಗೂ ವಿಮಾ ಮೊತ್ತ ಕೈಸೇರುತ್ತಿತ್ತು.
ಆದರೆ, ಕೃಷಿ ಮತ್ತು ಪಂಚಾಯತಿ ಅಧಿಕಾರಿಗಳು ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ, ಕೇವಲ ಬೋರ್‌ವೆಲ್‌ಗಳಿಂದ ನೀರು ಹಾಯಿಸಿಕೊಂಡಿದ್ದ ಬೆರಳೆಣಿಕೆಯ ಜಮೀನುಗಳಿಗೆ ಭೇಟಿ ನೀಡಿ ಜಿಪಿಎಸ್ (GPS) ಸರ್ವೆ ನಡೆಸಿದ್ದಾರೆ. ಪರಿಣಾಮವಾಗಿ, ಇಡೀ ಪ್ರದೇಶದ ಒಣ ಬೇಸಾಯದ (ಖುಷ್ಕಿ) ಜಮೀನುಗಳನ್ನು 'ನೀರಾವರಿ ಆಶ್ರಿತ ಪ್ರದೇಶ'ವೆಂದು ತಪ್ಪಾಗಿ ನಮೂದಿಸಿದ್ದಾರೆ. ಇದರಿಂದಾಗಿ ಮಳೆ ಕೊರತೆಯಿಂದ ಕಂಗಾಲಾಗಿದ್ದ 7 ಗ್ರಾಮಗಳ ಒಣ ಬೇಸಾಯಗಾರರಿಗೆ ವಿಮೆ ಬಾರದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.
35
ಪಂಚಾಯತಿಗೆ ಬೀಗ ಜಡಿದು ರೈತರ ಆಕ್ರೋಶ:
ಅಧಿಕಾರಿಗಳ ಈ ಎಡವಟ್ಟು ತಿಳಿಯುತ್ತಿದ್ದಂತೆ ನೂರಾರು ರೈತರು ಒಗ್ಗೂಡಿ ಐಗೂರು ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿದರು. ಕಚೇರಿಗೆ ಬೀಗ ಜಡಿದ ರೈತರು, ಪಿಡಿಒ (PDO) ಹಾಗೂ ಕಾರ್ಯದರ್ಶಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 'ಮಳೆಯಿಲ್ಲದೆ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಹೀಗಿರುವಾಗ ನೀರಾವರಿ ಬೆಳೆ ಎಂದು ನಮೂದಿಸಿ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದೀರಾ? ನಮಗೆ ನ್ಯಾಯ ಸಿಗುವವರೆಗೂ ಬೀಗ ತೆಗೆಯುವುದಿಲ್ಲ' ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅತ್ತ ಬಿಸಿಲಲ್ಲಿ ರೈತರ ಆಕ್ರೋಶ.. ಇತ್ತ ಎಸಿ ಕಾರಲ್ಲಿ ತಣ್ಣಗೆ ಕುಳಿತ ಆರ್‌ಐ!
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪರಿಸ್ಥಿತಿ ತಿಳಿಗೊಳಿಸಲು ದಾವಣಗೆರೆ ತಹಶೀಲ್ದಾರ್ ಸಿ. ರಾಜೇಶ್‌ಕುಮಾರ್ ಅವರು ಸ್ಥಳಕ್ಕೆ ದೌಡಾಯಿಸಿದರು. ತಹಶೀಲ್ದಾರ್ ಜೊತೆಯಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ (ಆರ್‌ಐ) ಸಿದ್ದೇಶ್ ಕೂಡ ಆಗಮಿಸಿದ್ದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ರಾಜೇಶ್‌ಕುಮಾರ್ ಅವರು ವಾಹನದಿಂದ ಕೆಳಗಿಳಿದು, ಉರಿಬಿಸಿಲಿನಲ್ಲಿ ನಿಂತಿದ್ದ ಅನ್ನದಾತರ ಮನವೊಲಿಸಲು ಹರಸಾಹಸ ಪಡುತ್ತಿದ್ದರು.
ಆದರೆ, ಅವರ ಜೊತೆಗೆ ಬಂದಿದ್ದ ಆರ್‌ಐ ಸಿದ್ದೇಶ್ ಅವರ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಹಶೀಲ್ದಾರ್ ರೈತರೊಂದಿಗೆ ಚರ್ಚಿಸುತ್ತಿದ್ದರೆ, ಇತ್ತ ಆರ್‌ಐ ಸಿದ್ದೇಶ್ ಮಾತ್ರ ಪಾರ್ಕ್ ಮಾಡಿದ್ದ ಸರ್ಕಾರಿ ವಾಹನದಲ್ಲಿ ಎಸಿ (AC) ಆನ್ ಮಾಡಿಕೊಂಡು ಹಾಯಾಗಿ ಕುಳಿತುಕೊಂಡಿದ್ದರು.
55
ಮರು ಸರ್ವೆ ಮಾಡುವಂತೆ ಆಗ್ರಹ
ರೈತರ ಕಷ್ಟದ ನಡುವೆಯೂ ಅಧಿಕಾರಿಯೊಬ್ಬರು ತೋರಿದ ಈ 'ಸಾಹೇಬಗಿರಿ' ಮತ್ತು ಬೇಜವಾಬ್ದಾರಿತನ ಸ್ಥಳೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು. ತಕ್ಷಣವೇ ತಪ್ಪಾದ ಸರ್ವೆಯನ್ನು ರದ್ದುಗೊಳಿಸಿ, ಮರು ಸರ್ವೆ ನಡೆಸಿ ಅರ್ಹ ರೈತರಿಗೆ ಬೆಳೆವಿಮೆ ಸಿಗುವಂತೆ ಮಾಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.