ಹಾವೇರಿ ಮೆಡಿಕಲ್‌ ಕಾಲೇಜು ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಪೂರಕ: ಸಿಎಂ ಯಡಿಯೂರಪ್ಪ

First Published | Nov 14, 2020, 2:37 PM IST

ಹಾವೇರಿ(ನ.14): ಹಾವೇರಿ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡಕ್ಕೆ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.  

ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಿಂದ ವರ್ಚುವಲ್‌ ಫ್ಲಾಟ್‌ಫಾರ್ಮ್‌ ಮೂಲಕ 478 ಕೋಟಿ ರು. ಅಂದಾಜು ವೆಚ್ಚದ ಹಾವೇರಿ ಸರ್ಕಾರಿ ಮೆಡಿಕಲ್‌ ಕಾಲೇಜು ಕಟ್ಟಡಕ್ಕೆ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ.
ಉನ್ನತ ವೈದ್ಯಕೀಯ ಸೌಲಭ್ಯ ಒಳಗೊಂಡಂತೆ ಸುಸಜ್ಜಿತ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಸಿ.ಎಂ. ಉದಾಸಿ ಅವರ ಪರಿಶ್ರಮದಿಂದ ನೂತನ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭದಿಂದ ಜಿಲ್ಲೆಯಲ್ಲಿ ಉನ್ನತ ವೈದ್ಯಕೀಯ ಸೌಲಭ್ಯಗಳ ಜೊತೆಗೆ 890 ವೈದ್ಯಕೀಯ ಮತ್ತು ವೈದ್ಯಕೇತರ ಸಿಬ್ಬಂದಿ ಸೇವೆ ಜಿಲ್ಲೆಗೆ ದೊರಕಲಿದೆ. ವೈದ್ಯಕೀಯ ಕಾಲೇಜು ನಿರ್ಮಾಣದಿಂದ ಅತ್ಯುನ್ನತವಾದ ವೈದ್ಯಕೀಯ ಸೇವೆಗಳು ಇಲ್ಲಿಯೇ ಲಭ್ಯವಾಗಲಿದೆ. ಜತೆಗೆ ಜಿಲ್ಲೆಯ ಆರ್ಥಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದ ಯಡಿಯೂರಪ್ಪ
Tap to resize

2021-22ನೇ ಶೈಕ್ಷಣಿಕ ಸಾಲಿನಿಂದ ಕಾಲೇಜು ತರಗತಿಗಳು ಆರಂಭಿಸಲಾಗುವುದು. ಪ್ರತಿ ವರ್ಷ 150 ವೈದ್ಯಕೀಯ ವಿದ್ಯಾರ್ಥಿಗಳು ಪ್ರವೇಶಾವಕಾಶ ಕಲ್ಪಿಸಲಾಗುವುದು. ವೈದ್ಯಕೀಯ ಕಾಲೇಜಿಗೆ ಈಗಾಗಲೇ 56.10 ಎಕರೆ ಜಮೀನನ್ನು ದೇವಗಿರಿ ಯಲ್ಲಾಪುರದಲ್ಲಿ ಮಂಜೂರು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ 478.75 ಕೋಟಿ ರು. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲಾಗುವುದು. ಈಗಾಗಲೇ ಸರ್ಕಾರ 37.23 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದ ಸಿಎಂ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರ ಕಲ್ಯಾಣವನ್ನು ಬಯಸುತ್ತದೆ. ಆರೋಗ್ಯ ಕ್ಷೇತ್ರಕ್ಕೆ ಈ ಹಿಂದೆ ಜಿಡಿಪಿಯಲ್ಲಿ ಶೇ.1ಕ್ಕಿಂತ ಕಡಿಮೆ ಅನುದಾನ ನೀಡಲಾಗುತ್ತಿತ್ತು. ಈಗ ಆರೋಗ್ಯ ಕ್ಷೇತ್ರಕ್ಕೆ ಶೇ.1.5ರಷ್ಟುಅನುದಾನ ನೀಡಲಾಗುತ್ತಿದೆ. ಪ್ರತಿ ವರ್ಷ 36 ಬಿಲಿಯನ್‌ ಅನುದಾನವನ್ನು ಆರೋಗ್ಯ ಸೇವೆಗೆ ಒದಗಿಸಲಾಗುತ್ತಿದೆ. ಸಾರ್ವಜನಿಕರ ಆರೋಗ್ಯವನ್ನು ಆಂದೋಲನದ ರೂಪದಲ್ಲಿ ನಡೆಸಲಾಗುತ್ತಿದೆ. ಕಳೆದ 6 ವರ್ಷಗಳಲ್ಲಿ ಕೇಂದ್ರ ಸರ್ಕಾರ 167 ಮೆಡಿಕಲ್‌ ಕಾಲೇಜಿಗೆ ಅನುಮತಿ ನೀಡಿದೆ. ಪೋಲಿಯೋ ಮುಕ್ತ ಭಾರತವಾಗಿರುವಂತೆ 2025ರ ವೇಳೆಗೆ ಟಿಬಿ ಮುಕ್ತ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನೆರೆ ಹಾಗೂ ಕೊರೋನಾದ ಸವಾಲಿನ ನಡುವೆಯೂ ರಾಜ್ಯ ಅಭಿವೃದ್ಧಿಗೆ ಒತ್ತು ನೀಡಿದೆ. ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ಮುಂದಿದೆ. ಕೊರೋನಾ ನಿಯಂತ್ರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಟ್ಟಕ್ರಮ ಕೈಗೊಂಡಿದ್ದರ ಪರಿಣಾಮವಾಗಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ರಾಜ್ಯ ಸರ್ಕಾರ ನಿತ್ಯ ಕೋವಿಡ್‌ ಪರೀಕ್ಷೆಗೆ 8 ಕೋಟಿ ರು. ಖರ್ಚು ಮಾಡುತ್ತಿದೆ. ಪ್ರತಿ ದಿನ 1.20 ಲಕ್ಷ ಕೊರೋನಾ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಮಾತನಾಡಿ, ರಾಜ್ಯದಲ್ಲಿ ಇದೇ ವರ್ಷ 4 ಹೊಸ ಮೆಡಿಕಲ್‌ ಕಾಲೇಜು ಆರಂಭಿಸುತ್ತಿದೆ. ರಾಜ್ಯದಲ್ಲಿ ವೈದ್ಯರ ಕೊರತೆಯಿದ್ದು, ಡಿಸೆಂಬರ್‌ ಒಳಗಾಗಿ 2500 ವೈದ್ಯರನ್ನು ನೇಮಕಾತಿ ಮಾಡಲಾಗುವುದು. ಅಲ್ಲದೇ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 800 ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಡಲು ಸರ್ಕಾರ ಬದ್ಧವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಪಿಎಚ್‌ಸಿಗಳಲ್ಲಿ ದಿನದ 24 ಗಂಟೆಯೂ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬದಲಾವಣೆ ಕಾಲ ಬಂದಿದೆ ಎಂದರು.
ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸಿದ್ದರು. ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಎಸ್‌.ವಿ.ಸಂಕನೂರ ಇತರರು ಇದ್ದರು.

Latest Videos

click me!