ಶಿರಹಟ್ಟಿಯಲ್ಲಿ ಭಾವೈಕ್ಯ ಸಾರಿದ ಬನ್ನಿ ಮುಡಿಯುವ ಕಾರ್ಯಕ್ರಮ

Published : Oct 09, 2019, 09:03 AM IST
ಶಿರಹಟ್ಟಿಯಲ್ಲಿ ಭಾವೈಕ್ಯ ಸಾರಿದ ಬನ್ನಿ ಮುಡಿಯುವ ಕಾರ್ಯಕ್ರಮ

ಸಾರಾಂಶ

ದಸರಾ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜ. ಫಕೀರ ಸಿದ್ದರಾಮ ಸ್ವಾಮಿಗಳು| ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆನೆ, ಕುದುರೆ ಮತ್ತು ವಾದ್ಯ ವೃಂದಗಳ ಜತೆಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಿ ಬನ್ನಿ ಮುಡಿಯುತ್ತಾ ಜನತೆಗೆ ಆಶೀರ್ವದಿಸಿದರು| ಅನೇಕ ಶತಮಾನಗಳಿಂದ ಈ ಸಂಪ್ರದಾಯ ನಡೆದು ಬಂದಿದೆ| ಪರಸ್ಪರ ದ್ವೇಷ ಹಾಗೂ ಭೇದ ಭಾವನೆ ತೊರೆದು ಹಿಂದು ಹಾಗೂ ಮುಸ್ಲಿಂಮರು ಬನ್ನಿ ಮುಡಿದು ದ್ವೇಷ ಬಿಡು ಪ್ರೀತಿ ಮಾಡು ಎಂದು ಸಾರುತ್ತಾರೆ| 

ಮಹದೇವಪ್ಪ ಎಂ. ಸ್ವಾಮಿ

ಶಿರಹಟ್ಟಿ(ಅ.9): ಶಿರಹಟ್ಟಿ ಪಟ್ಟಣ ಭಾವೈಕ್ಯಕ್ಕೆ ಹೆಸರಾಗಿದ್ದು, ದಸರಾ ಹಾಗೂ ಬನ್ನಿ ಮುಡಿಯುವ ಸಂಪ್ರದಾಯವೂ ವಿಶಿಷ್ಟವಾಗಿದೆ. ಜ. ಫಕೀರ ಸಿದ್ದರಾಮ ಸ್ವಾಮಿಗಳು ಪಟ್ಟಣದ ಕೆಳಗೇರಿ ಓಣಿಯ ಗರಿಬನ್‌ ನವಾಜ್‌ ದರ್ಗಾದ ಸಮೀಪ ಮಂಗಳವಾರ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಪ್ರಮುಖ ಬೀದಿಗಳಲ್ಲಿ ಆನೆ, ಕುದುರೆ ಮತ್ತು ವಾದ್ಯ ವೃಂದಗಳ ಜತೆಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಿ ಬನ್ನಿ ಮುಡಿಯುತ್ತಾ ಜನತೆಯನ್ನು ಆಶೀರ್ವದಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಟ್ಟಣದಲ್ಲಿ ಬನ್ನಿ ಮುಡಿಯುವ ಆಚರಣೆಗೆ ಸ್ವಾಮಿಗಳೇ ಚಾಲನೆ ನೀಡುತ್ತಾರೆ. ಅನೇಕ ಶತಮಾನಗಳಿಂದ ಈ ಸಂಪ್ರದಾಯ ನಡೆದು ಬಂದಿದೆ. ಪರಸ್ಪರ ದ್ವೇಷ ಹಾಗೂ ಭೇದ ಭಾವನೆ ತೊರೆದು ಹಿಂದು ಹಾಗೂ ಮುಸ್ಲಿಂಮರು ಬನ್ನಿ ಮುಡಿದು ದ್ವೇಷ ಬಿಡು ಪ್ರೀತಿ ಮಾಡು ಎಂದು ಸಾರುತ್ತಾರೆ. ಹಿರಿಯರು ಹೇಳುವಂತೆ ಈ ಸಂಪ್ರದಾಯಕ್ಕೆ ಅನೇಕ ದಶಕಗಳ ಇತಿಹಾಸವೇ ಇರುವುದನ್ನು ನೆನಪಿಸಿಕೊಳ್ಳುತ್ತಾರೆ.

ಒಂಬತ್ತು ದಿನ ದೇವಿಯ ಘಟಸ್ಥಾಪನೆ 

ಒಂಬತ್ತು ದಿನ ದೇವಿಯ ಘಟಸ್ಥಾಪನೆ ಮಾಡಿ, ಮಡಿಯಿಂದ ಪೂಜೆ ಸಲ್ಲಿಸಿ ಕೊನೆಯ ದಿನ ಆಯುಧ ಪೂಜೆ ಹಾಗೂ ಮಾರನೆ ದಿನ ವಿಜಯ ದಶಮಿಯನ್ನು ವಿಜೃಂಭಣೆಯಿಂದ ಆಚರಿಸುವುದು ರೂಢಿ. ವಿಜಯ ದಶಮಿಯ ಸಡಗರಕ್ಕೆ ನಗರವೆಲ್ಲ ಶೃಂಗಾರಗೊಂಡಿತ್ತು. ದೀಪಾಲಂಕಾರ-ತಳೀರು ತೋರಣಗಳಿಂದ ಬೀದಿಗಳು ಝಗಮಗಿಸುತ್ತಿದ್ದವು.

ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದ ಹರ್ಷಿತರಾಗಿರುವ ತಾಲೂಕಿನ ರೈತಾಪಿ ಸೇರಿದಂತೆ ಎಲ್ಲ ವರ್ಗದ ಜನತೆ ಹಿಂಗಾರು ಹಂಗಾಮಿನ ಕೃಪೆಗಾಗಿ ಪ್ರಾರ್ಥಿಸುತ್ತಲೇ ದೇವಿ ಆರಾಧನೆ ದಸರಾ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಸ್ವಾಮಿಗಳಿಂದ ಬನ್ನಿ ಮುಡಿಯುವ ಕಾರ್ಯಕ್ರಮ ಪ್ರಾರಂಭಗೊಂಡ ನಂತರ ಜನತೆ ಬನ್ನಿಕೊಟ್ಟು ಬಂಗಾರದಂತೆ ಬಾಳೋಣ ಎಂದು ಸ್ನೇಹಿತರು, ಬಂಧುಗಳು, ಹಿರಿ-ಕಿರಿಯರು ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯ ದಶಮಿ ಸಂಭ್ರಮದಲ್ಲಿ ಮಿಂದೆದ್ದರು. ಪರಸ್ಪರ ಬನ್ನಿ ಕೊಟ್ಟು ನಾವು- ನೀವು ಬಂಗಾರದಂಗ್‌ ಇರೋಣ ಎಂಬ ಶುಭಹಾರೈಕೆಯೊಂದಿಗೆ ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಿದರು.

ದೇವಿ ಆರಾಧನೆ

ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿತ್ತು. ಮಹಿಳೆಯರು ಪೂಜೆ ಸಲ್ಲಿಸಿ ದೇವಿಯನ್ನು ಆರಾಧಿಸಿದರು. ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ ಸುಮಂಗಲೆಯರಿಗೆ ಉಡಿ ತುಂಬಿದರು. ಸಂಜೆ ನೆರೆ ಹೊರೆ ಮನೆಗಳಿಗೆ ತೆರಳಿ ಬನ್ನಿ ವಿನಿಮಯ ಮಾಡಿಕೊಂಡರು.

ಆಯುಧ ಪೂಜೆ

ಹಬ್ಬದ ನಿಮಿತ್ತ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಆದಿಶಕ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆಯುಧಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ವ್ಯಾಪಾರ-ಉದ್ಯಮ ಇನ್ನಷ್ಟುಹೆಚ್ಚಾಗಲಿ ಎಂದು ಪ್ರಾರ್ಥಿಸಿದರು. ಬನ್ನಿಹಬ್ಬದ ದಿನವಾದ ಮಂಗಳವಾರವೂ ಖರೀದಿ ಭರಾಟೆ ಜೋರಾಗಿತ್ತು. ಶುಭ ಸಂದರ್ಭದಲ್ಲಿ ಖರೀದಿಸುವ ವಸ್ತುಗಳು ಮನೆಗಳನ್ನು ಬೆಳಗುತ್ತವೆ ಎಂಬ ನಂಬಿಕೆಯಿಂದ ಜನತೆ ವಿವಿಧ ಬಗೆಯ ವಸ್ತುಗಳನ್ನು ಕೊಂಡರು.
ಮರಾಠಾ ಸಮಾಜದ ಅಧ್ಯಕ್ಷ ಪರಮೇಶ ಪರಬ, ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಉಪನ್ಯಾಸಕ ದೇವಪ್ಪ ಪವಾರ, ಅನೀಲ ಮಾನೆ, ಅಶೋಕ ಕಲಬುರ್ಗಿ ಸೇರಿದಂತೆ ಅನೇಕ ಸಮಾಜದ ಮುಖಂಡರು ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಿದರು.
 

PREV
click me!

Recommended Stories

ಗದಗ ಪೌಲ್ಟ್ರಿಫಾರ್ಮ್‌ ದುರ್ವಾಸನೆ: ನೂರಾರು ಕೋಳಿ, ಸಾವಿರಾರು ಮೊಟ್ಟೆ ಹೊತ್ತಯ್ದ ಗ್ರಾಮಸ್ಥರು!
ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವೆ: ಸಚಿವ ಮಧು ಬಂಗಾರಪ್ಪ