ಗದಗ ಜಿಲ್ಲಾಸ್ಪತ್ರೆಗೆ ಸಚಿವ ಶ್ರೀರಾಮುಲು ಭೇಟಿ: ಚಿಕಿತ್ಸೆ ಕುರಿತು ರೋಗಿಗಳ ಜೊತೆ ಚರ್ಚೆ

By Web DeskFirst Published Nov 4, 2019, 12:30 PM IST
Highlights

ಸರ್ಕಾರಿ ಆಸ್ಪತ್ರೆಗಳ ಮೇಲ್ದರ್ಜೆಗೇರಿಸಲು ಕ್ರಮ| ಗದಗ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು| ರೋಗಿಗಳ ಜೊತೆ ಚರ್ಚೆ|ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಶೀಘ್ರವೇ ಕ್ರಮ|

ಗದಗ[ನ.4]: ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಮೇಲ್ದರ್ಜೆಗೇರಿಸಲು ಸರ್ವ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ.

ಅವರು ಭಾನುವಾರ ಸಂಜೆ ಗದಗ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ರೋಗಿಗಳ ಆರೋಗ್ಯ ಮತ್ತು ಅವರಿಗೆ ನೀಡಲಾಗುತ್ತಿರುವ ವೈದ್ಯಕೀಯ ಚಿಕಿತ್ಸೆಗಳ ಕುರಿತು ವಿಚಾರಿಸಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಶೀಘ್ರವೇ ಕ್ರಮ ಜರುಗಿಸಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯದ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ, ಸಿಟಿ ಸ್ಕ್ಯಾ‌ನಿಂಗ್‌ ಯಂತ್ರಗಳನ್ನು ಒದಗಿಸಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ಯಾವುದೇ ಖರ್ಚಿಲ್ಲದೇ ಸೌಲಭ್ಯ ಪಡೆಯುವಂತಾಗುವ ಯೋಜನೆ ರೂಪಿಸಲಾಗುವುದು. ಗ್ರಾಮೀಣ ಭಾಗದ ಜನರ ಆರೋಗ್ಯವಂತರಾಗಿರಲು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸುಸ್ಥಿತಿಯಲ್ಲಿರಬೇಕು. ಈ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾದರಿ ಆರೋಗ್ಯ ಕೇಂದ್ರಗಳನ್ನಾಗಿಸಲು ಗುರಿ ನಿಗದಿಪಡಿಸಲಾಗಿದೆ.

ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ನೆಲದ ಮೇಲೆ ಚಿಕಿತ್ಸೆ ನೀಡದೆ ಹಾಸಿಗೆ ಮೇಲೆ ಚಿಕಿತ್ಸೆ ನೀಡಬೇಕು. ಈ ನಿಟ್ಟಿನಲ್ಲಿ ಹೆಚ್ಚುವರಿ ಹಾಸಿಗೆ, ಅಗತ್ಯದ ಸಲಕರಣೆ ಖರೀದಿಸಲು ಅನುದಾನ ಲಭ್ಯವಿದ್ದು, ಅದನ್ನು ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಗದಗ ಜಿಲ್ಲಾ ಆಸ್ಪತ್ರೆಗೆ ಈಗಾಗಲೇ ಅನುದಾನ ಒದಗಿಸಿದ್ದು, ಇದನ್ನು ಬಳಸಿಕೊಂಡು ಆಸ್ಪತ್ರೆಗೆ ಬೇಕಾಗಿರುವ ಅಗತ್ಯದ ಸೌಲಭ್ಯಗಳನ್ನು ಪಡೆದ ನಂತರ ಮತ್ತೆ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಭೂಸರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿರೂಪಾಕ್ಷರೆಡ್ಡಿ ಮಾದಿನೂರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಜಿ.ಎಸ್‌. ಪಲ್ಲೇದ, ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಬಿಜೆಪಿ ಮುಖಂಡ ಅನಿಲ್‌ ಮೆಣಸಿನಕಾಯಿ ಉಪಸ್ಥಿತರಿದ್ದರು.

click me!