ಗಣೇಶ ಚತರ್ಥಿಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಹಬ್ಬದ ಸಂದರ್ಭದಲ್ಲಿ ಯಾವೆಲ್ಲ ಖಾದ್ಯ ಮಾಡ್ಬೇಕು ಎಂಬ ಚಿಂತೆ ಅನೇಕರನ್ನು ಕಾಡುತ್ತದೆ. ಗಣಪತಿಗೆ ಯಾವುದು ಇಷ್ಟ, ಹೇಗೆ ಮಾಡ್ಬೇಕು ಎಂಬ ವಿವರ ಇಲ್ಲಿದೆ.
ಗಣೇಶ ಚತುರ್ಥಿ ಹತ್ತಿರ ಬರ್ತಿದ್ದಂತೆ ಭಕ್ತರಲ್ಲಿ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಬುದ್ಧಿವಂತ ಹಾಗೂ ಯಶಸ್ವಿ ದೇವರು ಗಣೇಶನನ್ನು ಒಲಿಸಿಕೊಳ್ಳಲು ಭಕ್ತರು ನಾನಾ ಪ್ರಯತ್ನ ಮಾಡ್ತಿದ್ದಾರೆ. ಗಣೇಶನ ವಿಗ್ರಹ ಮನೆಗೆ ತರುವುದು, ಅಲಂಕಾರ ಮಾಡಿ, ಗಣಪತಿ ಪ್ರತಿಷ್ಠಾಪನೆ ಹೇಗೆ ಮಾಡ್ಬೇಕು ಎಂಬುದರಿಂದ ಹಿಡಿದು ವಿಘ್ನ ವಿನಾಯಕನಿಗೆ ಪ್ರಿಯವಾದ ಯಾವೆಲ್ಲ ತಿಂಡಿಯನ್ನು ಮಾಡ್ಬೇಕು ಎನ್ನುವವರೆಗೆ ಎಲ್ಲ ಪ್ಲಾನ್ ನಡೆಯುತ್ತಿದೆ. ಚೌತಿ ಹಬ್ಬದಂದು ಗಣಪತಿಗೆ ಯಾವ ಖಾದ್ಯ ನೀಡ್ಬೇಕು ಹಾಗೆ ಅದನ್ನು ಮಾಡೋದು ಹೇಗೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.
ಮೋದಕ (Modak) : ಗಣಪತಿಯನ್ನು ಮೋದಕ ಪ್ರಿಯ ಎಂದೇ ವರ್ಣಿಸಲಾಗುತ್ತದೆ. ನೀವು ಚೌತಿ ಹಬ್ಬದಂದು ಮೋದಕ ಮಾಡಿಲ್ಲವೆಂದ್ರೆ ಪೂಜೆ ಅಪೂರ್ಣವಾದಂತೆ. ಅನೇಕ ರೀತಿಯ ಮೋದಕವನ್ನು ತಯಾರಿಸಿ ಬಡಿಸಲಾಗುತ್ತದೆ. ತೆಂಗಿನಕಾಯಿ, ಬೆಲ್ಲ ಹಾಕಿ ತಯಾರಿಸಿದ ಮೋದಕ ಗಣಪತಿಗೆ ಹೆಚ್ಚು ಪ್ರಿಯ ಎನ್ನಲಾಗುತ್ತದೆ. ಇದಲ್ಲದೆ ಒಣ ಹಣ್ಣುಗಳು, ಖೋಯಾ ಮತ್ತು ಅಕ್ಕಿ ಹಿಟ್ಟಿನಿಂದಲೂ ಮೋದಕವನ್ನು ತಯಾರಿಸಲಾಗುತ್ತದೆ. ಹತ್ತು ದಿನ ನೀವು ಗಣಪತಿ ಪ್ರತಿಷ್ಠಾಪನೆ ಮಾಡಿದ್ದರೆ ಒಂದೊಂದು ದಿನ ಒಂದೊಂದು ಮೋದಕವನ್ನು ನೈವೇದ್ಯ ಮಾಡಬಹುದು. ಪನ್ನೀರ್, ಕೇಸರಿ, ಚಾಕೋಲೇಟ್, ಕಡಲೆ ಹಿಟ್ಟು ಹೀಗೆ ನಾನಾ ವಿಧದ ಮೋದಕವನ್ನು ನೀವು ಗಣೇಶನಿಗೆ ಅರ್ಪಿಸಬಹುದು.
ಆರೋಗ್ಯಕ್ಕೆ ಒಳ್ಳೇದಲ್ಲ, ಆದ್ರೂ ಭಾರತದಲ್ಲಿ ಈ ಫಾಸ್ಡ್‌ಫುಡ್ ಸಖತ್ ಫೇಮಸ್
ಸತೋರಿ : ಗಣಪತಿ (Ganapati) ಹಬ್ಬದ ದಿನ ಎಳ್ಳುಂಡೆ, ಪಂಚಕಜ್ಜಾಯ ಮಾಡೋದು ಬೇಡ ಸ್ವಲ್ಪ ಡಿಫರೆಂಟ್ ಇರಲಿ ಎನ್ನುವವರು ಮಹಾರಾಷ್ಟ್ರದ ಖಾದ್ಯವನ್ನು ಟ್ರೈ ಮಾಡಬಹುದು. ಮಹಾರಾಷ್ಟ್ರದ ಸಾಂಪ್ರದಾಯಿಕ ಖಾದ್ಯಗಳಲ್ಲಿ ಇದೂ ಒಂದಾಗಿದೆ. ಇದನ್ನು ಖೋಯಾ ಅಥವಾ ಮಾವಾ, ತುಪ್ಪ, ಬೇಳೆ, ಹಿಟ್ಟು ಮತ್ತು ಹಾಲಿನಿಂದ ತಯಾರಿಸಲಾಗುತ್ತದೆ.
ಶ್ರೀಖಂಡ : ಶ್ರೀಖಂಡ್ ಮೊಸರಿನಿಂದ ಮಾಡಿದ ಭಾರತೀಯ ಸಿಹಿಯಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಹೆಚ್ಚು ಜನಪ್ರಿಯವಾಗಿದೆ. ಗಟ್ಟಿ ಮೊಸರಿಗೆ ಒಣ ಹಣ್ಣು, ಕೇಸರಿಯನ್ನು ಸೇರಿಸಿ ಇದನ್ನು ತಯಾರಿಸಿ ಗಣೇಶನಿಗೆ ಅರ್ಪಿಸಿ.
ಬಾಳೆ ಹಣ್ಣಿನ ಶಿರಾ : ಬಾಳೆಹಣ್ಣಿನ ಶೀರಾ ಮಾಡೋದು ಸುಲಭ. ರುಚಿಕರವಾದ ಸಿಹಿ ಭಕ್ಷ್ಯ ಇದಾಗಿದ್ದು, ನೀವಿದನ್ನು ಗಣೇಶನಿಗೆ ನೈವೇದ್ಯ ಮಾಡಬಹುದು. ಇದನ್ನು ಹಿಸುಕಿದ ಬಾಳೆಹಣ್ಣು, ರವೆ ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ.
ಕರ್ಜಿಕಾಯಿ : ಇದನ್ನು ಕರಿಗಡಬು ಎಂದೂ ಕರೆಯಲಾಗುತ್ತದೆ. ಇದನ್ನು ಮಾಡುವುದು ಕೂಡ ಸುಲಭ. ತೆಂಗಿನ ತುರಿ, ಎಳ್ಳು, ಬೆಲ್ಲ ಅಥವಾ ಸಕ್ಕರೆ, ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟಿನಿಂದ ನೀವು ಇದನ್ನು ತಯಾರಿಸಬೇಕು. ಚೌತಿ ಹಬ್ಬದಲ್ಲಿ ಗಣೇಶನ ನೈವೇದ್ಯಕ್ಕೆ ನೀವಿದನ್ನು ನೀಡಬಹುದು.
ಗೌರಿ, ಗಣೇಶ ಪೂಜೆ ಮಾಡುವಾಗ ಲಕ್ಷಣವಾಗಿ ರೆಡಿ ಆದರೆ ಎಷ್ಟು ಚೆಂದ ಅಲ್ವಾ?
ಲಡ್ಡಿಗೆ : ಉತ್ತರ ಕನ್ನಡ ಸೇರಿದಂತೆ ಕರ್ನಾಟಕದ ಕೆಲವು ಭಾಗದಲ್ಲಿ ಚೌತಿ ಹಬ್ಬದ ಸಂದರ್ಭದಲ್ಲಿ ಮಾಡುವ ಕಜ್ಜಾಯದಲ್ಲಿ ಇದು ಕೂಡ ಸೇರಿದೆ. ಇದನ್ನು ಮಾಡುವುದು ಬಹಳ ಸುಲಭ. ಕಡಲೆ ಹಿಟ್ಟನ್ನು ನೀರಿನಲ್ಲಿ ಮಿಕ್ಸ್ ಮಾಡಿ, ದೋಸೆ ಹಿಟ್ಟಿನ ಹದಕ್ಕೆ ಅದನ್ನು ಸಿದ್ಧಪಡಿಸಿ ಅದನ್ನು ಕಾಳುಗಳಾಗಿ ಕರಿಯಬೇಕು. ನಂತ್ರ ಅದನ್ನು ಮಿಕ್ಸಿಗೆ ಹಾಕಿ ತರಿ ತರಿ ಮಾಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಪಾಕ ಬರುವವರೆಗೆ ಕುದಿಸಬೇಕು. ಪಾಕ ಬಂದ್ಮೇಲೆ ಅದಕ್ಕೆ ಕರಿದ ಕಡಲೆಹಿಟ್ಟಿನ ಕಾಳುಗಳನ್ನು ಹಾಕಿ ಮಿಕ್ಸ್ ಮಾಡಿ ಉಂಡೆ ತಯಾರಿಸಿ, ನೈವೇದ್ಯಕ್ಕೆ ನೀಡಿ.
ಬಾಳೆ ಹಣ್ಣಿನ ಮುಳುಕ : ಹಬ್ಬಕ್ಕೆ ಬಾಳೆ ಹಣ್ಣು ತಂದೇ ತರ್ತೇವೆ. ಅದ್ರಲ್ಲಿಯೇ ನೀವು ಮುಳುಕ ಮಾಡಿ ಗಣಪತಿಗೆ ನೀಡ್ಬಹುದು. ಬಾಳೆ ಹಣ್ಣು, ಗೋದಿ ಹಿಟ್ಟು, ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಏಲಕ್ಕಿ ಪುಡಿ, ಬೆಲ್ಲ, ಎಣ್ಣೆ ಬಳಸಿ ನೀವು ಇದನ್ನು ತಯಾರಿಸಬೇಕು. ಬಾಳೆ ಹಣ್ಣು, ತೆಂಗಿನ ತುರಿ, ಬೆಲ್ಲ, ಎಲಕ್ಕಿ ಹಾಕಿ ರುಬ್ಬಿಕೊಂಡು, ಅದಕ್ಕೆ ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಮಿಶ್ರಣ ಎಣ್ಣೆಗೆ ಬಿಡುವಂತಿರಬೇಕು. ಎಣ್ಣೆ ಕಾದ ಮೇಲೆ ಅದಕ್ಕೆ ಅರ್ಧ ಟೇಬಲ್ ಸ್ಪೂನ್ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ ತೆಗೆದ್ರೆ ಬಾಳೆ ಹಣ್ಣಿನ ಮುಳಕ ಸಿದ್ಧವಾಗುತ್ತದೆ.