ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರಾ ಬಳಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು, ಅದರೊಳಗಿದ್ದ ಕಾರ್ಮಿಕರನ್ನು ಅದೃಷ್ಟವಶಾತ ರಕ್ಷಿಸಲಾಗಿದೆ. ಆದರೆ, ಇಂಥದ್ದೊಂದು ದುರಂತ ಸಂಭವಿಸಿದ್ದಕ್ಕೆ ದೇವರ ಮುನಿಸೇ ಕಾರಣವೇ? ಪ್ರಕೃತಿಯನ್ನು ಎದುರು ಹಾಕ್ಕೊಂಡು ಮನುಷ್ಯನಿಗೆ ಬದುಕಲು ಹೇಗೆ ಸಾಧ್ಯ ಹೇಳಿ?
-ಸುಧೀರ್ ಸಾಗರ್
ದೈವಗಳ ತಾಳ್ಮೆಯನ್ನು ಕೆಣಕಿದ್ರೆ ಏನೆಲ್ಲಾ ದುರಂತಗಳು ಸಂಭವಿಸಿಬಿಡುತ್ತವೆ ಅನ್ನೋದಕ್ಕೊಂದು ಉದಾಹರಣೆ, ದೇವಭೂಮಿ ಉತ್ತರಾಖಂಡದ ಸುರಂಗ ಕುಸಿತ ಪ್ರಕರಣ!
ಉತ್ತರಾಖಂಡದ ಯಮುನೋತ್ರಿ ಭಾಗದ ಜನರ ಆರಾಧ್ಯ ದೈವ ನಾಗದೇವ. ಎಷ್ಟೆಂದರೆ ಈ ಭಾಗದಲ್ಲಿ ಕೃಷ್ಣ, ಶಿವ ಇತ್ಯಾದಿ ದೇವರುಗಳನ್ನೂ ನಾಗದೇವನ ರೂಪದಲ್ಲಿಯೇ ಪೂಜಿಸುತ್ತಾರೆ. ಹಾಗಾಗಿ ಊರಿಗೊಂದು ನಾಗದೇವರ ದೇವಸ್ಥಾನ ನೋಡಬಹುದಿಲ್ಲಿ. ಯಮುನೋತ್ರಿ ಧಾಮದ ರಕ್ಷಣೆಯ ಉಸ್ತುವಾರಿ ಹೊತ್ತಿರೋದು ಕೂಡಾ ನಾಗದೇವನೇ ಎಂಬ ನಂಬಿಕೆ. ಹಾಗಾಗಿಯೇ ಯಮುನೋತ್ರಿಯ ನೆತ್ತಿಯ ಮೇಲಿರೋ ಪರ್ವತದ ಹೆಸರೂ ಕಾಲಾನಾಗ್ ಅಂದರೆ ಕಾಳಿಂಗ ಸರ್ಪ.
ಈಗ ಸುರಂಗ ಕುಸಿತವಾಯ್ತಲ್ಲಾ, ಅಲ್ಲಿಯ ಬಾರ್ಕೋಟಿನ ಸಿಲ್‌ಕ್ಯಾರಾ ಬಳಿಯೂ ಒಂದು ದೇವಸ್ಥಾನವಿದೆ. ಹೆಸರು ಭೌಕನಾಥ್ ನಾಗದೇವ್ ಟೆಂಪಲ್. (ಸಾಕ್ಷಾತ್ ಶ್ರೀ ಕೃಷ್ಣನೇ ನಾಗನ ರೂಪದಲ್ಲಿರೋ ದೇವಸ್ಥಾನವಿದು). ಇಲ್ಲಿಯ ಜನ ತುಂಬಾ ಭಯ ಭಕ್ತಿಯಿಂದ ಪೂಜಿಸೋ, ಈ ಭಾಗದ ಅತೀ ಪವರ್‌ಫುಲ್ ದೇವರು. ಇಲ್ಲಿನ ನಾಗದೇವರ ನಂಬಿಕೆಗೂ ಸುರಂಗಮಾರ್ಗ ಕುಸಿತಕ್ಕೂ ಏನು ಸಂಬಂಧ?
ಬೆಟ್ಟದ ಬುಡದಲ್ಲಿ ಯಾವ ಜಾಗದಲ್ಲಿ ಸುರಂಗ ಕೊರೆಯೋದು ಅಂತ ಡಿಸೈಡ್ ಮಾಡಿದ್ರೋ ಅಲ್ಲೊಂದು ಪುಟ್ಟ ದೇವಸ್ಥಾನವಿತ್ತು. ಜಾಗ ಲೆವೆಲ್ ಮಾಡಿಕೊಳ್ಳುವಾಗ ನಿರ್ಮಾಣ ಸಂಸ್ಥೆಯವರು ಅದನ್ನು ಸಂಪೂರ್ಣ ಧ್ವಂಸಗೊಳಿಸಿ ಆಚೆಗೆಸೆದು ಬಿಟ್ರು. ಆ ದೇವಸ್ಥಾನದಲ್ಲಿದ್ದ ದೇವರು ಭೌಕನಾಥ್ ನಾಗದೇವ. ದೇವಸ್ಥಾನವನ್ನು ಧ್ವಂಸಗೊಳಿಸಬೇಡ್ರೋ ಒಳ್ಳೇದಾಗಲ್ಲ ಅಂದ್ರೂ ಕೇಳದೆ, ಧ್ವಂಸಗೊಳಿಸಿಬಿಟ್ಟಿದ್ದೀರಿ, ಯಡವಟ್ಟಾಗೋ ಮೊದಲೇ ಈ ಜಾಗದಲ್ಲೊಂದು ಚಿಕ್ಕ ಗುಡಿ ಮಾಡಿ ದೇವರನ್ನಿಟ್ಟು, ನಂತರದಲ್ಲಿ ಬೇರೆ ಕಡೆ ದೇವಸ್ಥಾನ ನಿರ್ಮಿಸುತ್ತೀವಿ ಅಂತ ಹರಕೆ ಮಾಡಿಕೊಳ್ಳಿ. ಇಲ್ಲಾ ಅಂದ್ರೆ ಒಳ್ಳೇದಾಗಲ್ರೋ, ಮಹಾ ಅನಾಹುತಗಳಾಗೋಗತ್ತೆ ಅಂತೆಲ್ಲಾ ಸ್ಥಳೀಯರು ಅದೆಷ್ಟೇ ಕೇಳಿಕೊಂಡ್ರೂ ತಲೆ ಕೆಡಿಸಿಕೊಳ್ಳಲಿಲ್ಲ ನಿರ್ಮಾಣ ಸಂಸ್ಥೆ.
News Hour: ಸುರಂಗದಿಂದ ಸಾವನ್ನು ಗೆದ್ದ ಬಂದ 41 ಕಾರ್ಮಿಕರು
ಕೆಲಸ ಶುರುವಾಯ್ತು...
ಅದರ ಜೊತೆಗೇ ಒಂದರ ಹಿಂದೊಂದರಂತೆ ವಿಘ್ನಗಳು. ಯಾವಾಗ ನಿರಂತರವಾಗಿ, ಯಂತ್ರಗಳ ಹಾಳಾಗುವಿಕೆ, ಕಾರ್ಮಿಕರಿಗೆ ಏಟುಗಳು, ಒಂದೆರಡು ಬಾರಿ ಗುಡ್ಡ ಕುಸಿತಗಳೂ ಇತ್ಯಾದಿಗಳು ಶುರುವಾಗಿ ಕೆಲಸ ಮುಂದುವರಿಸೋದೇ ಅಸಾಧ್ಯವಾಗಿಬಿಡ್ತೋ, ಸ್ಥಳೀಯರನ್ನು ಕರೆಯಿಸಿದ ಸಂಸ್ಥೆಯ ಆಡಳಿತ ಮಂಡಳಿ, ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವೆಂಬಂತೆ ನಂತರದಲ್ಲಿ ಬೇರೆ ಕಡೆ ದೇವಸ್ಥಾನ ನಿರ್ಮಿಸಿ ಕೊಡೋದಾಗಿಯೂ, ಅಲ್ಲೀಯವರೆಗೆ ಸುರಂಗದ ಪ್ರವೇಶದ್ವಾರದ ಪಕ್ಕದಲ್ಲಿಯೇ ತಾತ್ಕಾಲಿಕ ಗುಡಿಯೊಂದನ್ನು ನಿರ್ಮಿಸಿ ದೇವರನ್ನು ಪ್ರತಿಷ್ಠಾಪಿಸಿ, ಪ್ರತಿನಿತ್ಯ ಇಲ್ಲೊಂದು ಪೂಜೆ ಸಲ್ಲಿಸಿಯೇ ಕೆಲಸಕ್ಕೆ ಕೈ ಹಾಕಲು ಶುರುಮಾಡಿದ ಮೇಲೆಯೇ ಎಲ್ಲವೂ ಮೊದಲಿನಂತಾಗಿದ್ದು.
ನಾಲ್ಕೂವರೆ ಕಿ.ಮೀ. ದೂರದ ಸುರಂಗಮಾರ್ಗದ ಪ್ರಾಜೆಕ್ಟ್‌ನಲ್ಲಿ ಹತ್ರತ್ರ ನಾಲ್ಕು ಕಿ.ಮೀ. (ಎರಡೂ ಬದಿಯಿಂದ) ಸುರಂಗಮಾರ್ಗ ನಿರ್ಮಾಣವಾಗಿ ಬಿಟ್ಟಿತ್ತು. ಎಲ್ಲವೂ ಸರಿಯಾಗಿಯೇ ಇತ್ತು. ಆಗಲೇ ಆಗಿದ್ದು ಮತ್ತೊಂದು ಯಡವಟ್ಟು. ದೀಪಾವಳಿ ಹಬ್ಬದ ಹಿಂದಿನ ವಾರ, ಇಲ್ಲಿನ ಉಸ್ತುವಾರಿ ಹೊತ್ತಿದ್ದ ನಿರ್ಮಾಣ ಸಂಸ್ಥೆಯ ಆಡಳಿತ ಮಂಡಳಿ ಬದಲಾಗಿ ಹೊಸಬರ ಟೀಮ್ ಅಧಿಕಾರ ಕೈಗೆತ್ತಿಕೊಳ್ತು.
ಅಲ್ಲೇ ಆಗಿದ್ದು ಯಡವಟ್ಟು! ಯಾಕೆಂದರೆ, ಹೊಸದಾಗಿ ಉಸ್ತುವಾರಿ ವಹಿಸಿಕೊಂಡ ಅಧಿಕಾರಿ ವರ್ಗ ಮಾಡಿದ ಮೊದಲ ಕೆಲಸವೇ, ಪ್ರವೇಶ ದ್ವಾರದ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಪುಟ್ಟ ತಾತ್ಕಾಲಿಕ ಗುಡಿಯನ್ನು ತೆರವುಗೊಳಿಸಿ ಮೂಲೆಗೆಸೆದಿದ್ದು. ಬೇಡ ಕಣ್ರೋ, ಒಂದ್ಸಲ ತಪ್ಪು ಮಾಡಿ ಅನುಭವಿಸಿದ್ದಾಗಿದೆ. ಮತ್ತದೇ ತಪ್ಪು ಮಾಡ್ಬೇಡ್ರೋ ಮಹಾಗಂಡಾಂತರ ಆಗೋಗಿಬಿಡುತ್ತೆ ಅಂದ್ರೆ, ಇವೆಲ್ಲಾ ಮೂಢನಂಬಿಕೆಗಳನ್ನೆಲ್ಲಾ ನಾವು ನಂಬಲ್ಲ ಕಣ್ರಯ್ಯಾ ಅಂತ ಮುಖ ತಿರುಗಿಸಿಬಿಟ್ರು.
ಅಷ್ಟೇ...
ಪ್ರವೇಶದ್ವಾರದ ಪಕ್ಕದಲ್ಲಿದ್ದ ಪುಟ್ಟ ಗುಡಿ ಸೈಡಿಗೆಸೆದು ಎರಡೇ ಎರಡು ದಿನವೂ ಆಗಿಲ್ಲ. ತೊಪ್ಪಂತ ಕುಸಿದುಬಿದ್ದಿತ್ತು ಸುರಂಗಮಾರ್ಗ. ಇಂತದ್ದೊಂದು
ಮಹಾ ದುರಂತವಾದ ಮೇಲಾದ್ರೂ ತಪ್ಪಿನ ಅರಿವಾಯ್ತಾ? ಊಹೂಂ... ಈಗಲೂ ತಿಳಿ ಹೇಳಲು ಬಂದ ಸ್ಥಳೀಯರ ಮಾತಿಗೆ ಸೊಪ್ಪೇ ಹಾಕದೆ ತಮ್ಮದೇ ಹಠಕ್ಕೆ ಬಿದ್ದ ಆಡಳಿತ ಮಂಡಳಿ, ಇಂತಾ ಬೆಟ್ಟ ಕೊರೆದು ನಾಲ್ಕು ಕಿ.ಮೀ. ಉದ್ದದ ಸುರಂಗವನ್ನೇ ಕೊರೆದವರಿಗೆ, ಯಕಶ್ಚಿತ್ 60 ಮೀಟರ್ ಉದ್ದದ ಮತ್ತೊಂದು ಪುಟ್ಟ ಸುರಂಗ ಕೊರೆದು ಪೈಪ್ ತೂರಿಸಿ ಒಳಗಿರೋವ್ರನ್ನ ಹೊರಗ್ ತರೋದೆಲ್ಲಾ ಒಂದ್ ಮ್ಯಾಟ್ರಾ ಎಂಬ ಅಹಂ ನಲ್ಲಿಯೇ, ರಕ್ಷಣಾ ಕಾರ್ಯ ಶುರು ಮಾಡಿದ್ದರು.
ಟೀಮ್ ವರ್ಕ್‌ನ ಶ್ರೇಷ್ಠ ಉದಾಹರಣೆ, ಸಿಲ್‌ಕ್ಯಾರಾ ಸುರಂಗ ಯಶಸ್ವಿ ಕಾರ್ಯಾಚರಣೆಗೆ ಮೋದಿ ಸಂತಸ!
ಆಗ ಶುರುವಾಯ್ತು ನೋಡಿ...
ಒಳಗಿರೋವ್ರಿಗೆ ಆಹಾರ ಸರಬರಾಜು ಮಾಡೋಕಂತ ಪುಟ್ಟದೊಂದು ಪೈಪಿಗಾಗಿ ರಂಧ್ರ ಕೊರೆಯೋಕ್ ಹೋದ್ರೆ ಪದೇ ಪದೆ ಯಂತ್ರ ಕೈಕೊಟ್ಟಿದ್ದೂ ಅಲ್ಲದೆ ಕೆಲಸಮಯದಲ್ಲಿ ಯಂತ್ರವೇ ಮುರಿದುಹೋಗಿತ್ತು. ಮತ್ತೆಲ್ಲೋ ಇದ್ದಂತಹ ಯಂತ್ರ ತರಿಸೋಕ್ ಹೊರಟರೆ, ಆ ಯಂತ್ರ ಹೊತ್ತು ತರುತ್ತಿದ್ದ ಲಾರಿಯೇ ಮಗುಚಿ ಕಣಿವೆಗೆ ಬಿದ್ದು, ಲಭ್ಯವಿದ್ದ ಆ ಒಂದು ಕೊರೆಯೋ ಯಂತ್ರವೂ ಪಾತಾಳಸೇರಿತ್ತು.
ಈಗ ಆ ಯಂತ್ರವನ್ನು ದೂರದ ಗುಜರಾತಿನಿಂದ ತರಿಸಬೇಕಾದ ಸ್ಥಿತಿ ಎದುರಾಯ್ತು. ತರಿಸಿದ ಈ ಯಂತ್ರವೂ ಕೈ ಹಿಡಿಯಲಿಲ್ಲ. ನಂತರದಲ್ಲಿ ಹೈದರಾಬಾದ್ ಮಧ್ಯಪ್ರದೇಶಗಳಿಂದ ಯಂತ್ರಗಳನ್ನು ತಂದಿದ್ದಾಯ್ತು. ಕೊನೆಗೂ 60 ಮೀ ಉದ್ದದ ಒಂದು ಬೋರ್‌ವೆಲ್ ಸೈಜಿನ ರಂಧ್ರ ಕೊರೆಯೋಕೇ ಹತ್ತು ದಿನ ತೆಗೆದುಕೊಂಡು ಬಿಟ್ಟಿತ್ತು.
ಅಂತೂ ಇದಾಯ್ತಲ್ಲ, ಇದೇ ತರ ದೊಡ್ಡದೊಂದು ರಂಧ್ರ ಕೊರೆದು ಅದರೊಳಗಿಂದಾನೇ ಕಾರ್ಮಿಕರನ್ನು ಹೊರಗ್ ತರೋದೀಗ ಅಂತ ಡಿಸೈಡ್ ಮಾಡಿ,
ನಮ್ ದೇಶದಲ್ಲಿದ್ದ ಏಕೈಕ ಅಮೆರಿಕನ್ ಮೇಡ್ 'ಆಗರ್' ಎಂಬ ರಣ ಭೀಕರ ಬೋರಿಂಗ್ ಮಿಷಿನ್ ತರೋಕ್ ಹೋದ್ರೆ, ಅದು ಬರೋ ದಾರಿಯುದ್ದಕ್ಕೂ ಲ್ಯಾಂಡ್ ಸ್ಲೈಡುಗಳಾಗಿ ಎರಡ್ಮೂರ್ ದಿನ ಬೇಕಾಯ್ತು.
ಮಿಷಿನ್ ಬಂತು ಕೊರೆಯೋಕೂ ಶುರುವಾಯ್ತು. ಎಲ್ಲವೂ ಸುಸೂತ್ರವಾಗಿ ಇನ್ನೇನು ಜಸ್ಟ್ ಹತ್ತೇ ಹತ್ತು ಮೀಟರ್ ಉಳಿದಿದೆ, ಹೆಚ್ಚಂದ್ರೆ ಎರಡ್ಮೂರು ಗಂಟೇಲಿ ಹೊರಗೆ ತಂದೇ ಬಿಟ್ವೀ ಜನರನ್ನು ಅಂದುಕೊಳ್ತಿರುವಾಗ, ಅದ್ಯಾವ್ ರೇಂಜಿಗೆ ಪ್ರಾಬ್ಲಂಗಳು ಶುರುವಾದ್ವು ಅಂದರೆ, ಆ ಯಂತ್ರಕ್ಕೆ ನಿರಂತರವಾಗಿ ಸಮಸ್ಯೆಗಳಾಗಿ ಕೊನೆಗೆ ಅದರಿಂದ ಕೊರೆಯೋದ್ ಬಿಡಿ, ಅದರ ರಿಪೇರಿ ಮಾಡೋದೂ ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ಆ ಆಗರ್ ಯಂತ್ರ ರಂಧ್ರದೊಳಗೇ ಗುಜರಿ ಆಗೋಗಿತ್ತು.
ತಪ್ಪಿನಿಂದ ಪಾಠ ಕಲಿತ ಸರ್ಕಾರ, ಸಿಲ್‌ಕ್ಯಾರಾ ಬಳಿ ನೆಲಸಮ ಮಾಡಿದ್ದ ಮಂದಿರ ನಿರ್ಮಾಣಕ್ಕೆ ತೀರ್ಮಾನ!
ಈಗ ಮತ್ತೊಂದು ಹೊಸಾ ಪ್ಲಾನ್ ಕಡೆ ಮುಖಮಾಡಬೇಕಾದ ದುಸ್ಥಿತಿ ಎದುರಾಗಿಬಿಟ್ಟಿತ್ತಲಾ.... ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋಹಾಗೆ, ಇಷ್ಟೆಲ್ಲಾ ಸಂಕಷ್ಟಗಳು ಶುರುವಾದ ನಂತರದಲ್ಲಿ ತಾವು ಅದೆಂತಾ ಮಹಾಘೋರ ತಪ್ಪು ಮಾಡಿದೀವೆಂಬ ಅರಿವಾಗಿತ್ತು ನಿರ್ಮಾಣ ಸಂಸ್ಥೆಯ ಉಸ್ತುವಾರಿ ಮಂಡಳಿಯವರಿಗೆ.
ಕಿತ್ತೆಸೆಯಲಾಗಿದ್ದ ಗುಡಿಯನ್ನು ಮರಳಿ, ಎಲ್ಲಿಂದ ಎತ್ತೊಗೆಯಲಾಗಿತ್ತೋ, ಸುರಂಗಮಾರ್ಗದ ಪ್ರವೇಶ ದ್ವಾರದ ಪಕ್ಕದ ಅದೇ ಜಾಗದಲ್ಲಿ ಪುನರ್ ಪ್ರತಿಷ್ಠಿಸಿ, ನಾಗದೇವನಿಗೆ ಪೂಜೆ ಸಲ್ಲಿಸಿ, ಮೂಲ ಭೌಕನಾಥ ದೇವಸ್ಥಾನದಿಂದ ಭೌಕನಾಗನ ಉತ್ಸವಮೂರ್ತಿಯನ್ನೂ ಪಲ್ಲಕ್ಕಿಯಲ್ಲಿ ಹೊತ್ತು ತಂದು ಪ್ರತಿಷ್ಠಾಪಿಸಿ, ಹೋಮ ಹವನಗಳನ್ನು ಮಾಡಿ ತಪ್ಪಾಯ್ತು ಕ್ಷಮಿಸಿಬಿಡು ನಾಗಪ್ಪಾ ಎಂದು ಮಂಡಿಯೂರಿದ ಮೇಲೆಯೇ, ಮೊದಲಿಗೆ ಆರು ಇಂಚಿನ ರಂಧ್ರ ಕೊರೆದು ಒಳಗಿದ್ದವರ ಜೊತೆ ಸಂಪರ್ಕ ಸಾಧಿಸಿ ಅವರೊಂದಿಗೆ ಸಂವಹನ ಸಾಧ್ಯವಾಗಿ, ಆಹಾರ ಔಷಧಿಗಳೆಲ್ಲಾ ಕಳುಹಿಸುವಂತಾಗಿದ್ದು. ಈಗ ಕೊನೆಗೂ ಅವರೆಲ್ಲರನ್ನೂ ಸುರಕ್ಷಿತವಾಗಿ ಹೊರತರುವಲ್ಲಿ ಯಶಸ್ವಿಯಾಗುವಂತಾಗಿದ್ದು. ಹಾಗಾಗಿಯೇ... ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಲು ದೂರದ ಯುರೋಪಿನ ನಾರ್ವೆ ದೇಶದಿಂದ ಬಂದಂತಹ ಪ್ರೊಫೆಸರ್ ಅರ್ನಾಲ್ಡ್ ಡಿಕ್ಸ್ (International Tunnelling and Underground Space Association ಅಧ್ಯಕ್ಷ) ಹಾಗೂ ಆತನ ತಂಡವೂ ಕೂಡಾ, ಘಟನಾ ಸ್ಥಳದ ಬಳಿ ಬಂದ ಕೂಡಲೇ ಮೊದಲು ಮಾಡಿದ ಕೆಲಸವೇ, ಪಕ್ಕದಲ್ಲಿದ್ದ ನಾಗದೇವನ ಗುಡಿಗೆ ಅಡ್ಡ ಬಿದ್ದಿದ್ದು. ನಿನ್ನೆಯೂ ಕೂಡಾ ಬೆಳಿಗ್ಗೆಯಿಂದಲೂ ಈತ ದೇವರ ಮುಂದೆಯೇ ಪ್ರಾರ್ಥಿಸುತ್ತಾ ಕುಳಿತುಬಿಟ್ಟಿದ್ದ!
ಈತನಷ್ಟೇ ಅಲ್ಲ, ಇಲ್ಲಿಗ್ ಆಗಮಿಸುತ್ತಿದ್ದ ಮುಖ್ಯಮಂತ್ರಿ ಪುಷ್ಕರ್ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್ ಆದಿಯಾಗಿ, ಪ್ರತಿಯೊಬ್ಬನೂ ಕೂಡಾ ಇಲ್ಲಿದ್ದ ಭೌಕನಾಗನಿಗೆ ತಲೆಬಾಗಿಯೇ ಮುಂದುವರಿಯುತ್ತಿದ್ದದ್ದು. ರಕ್ಷಣಾ ಕಾರ್ಯ ಸಫಲವಾಗುತ್ತಲೇ ಮುಖ್ಯಮಂತ್ರಿ ಪುಷ್ಕರ್ ಧಾಮಿಯೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಮೊದಲ ಧನ್ಯವಾದ ಸಮರ್ಪಿಸಿದ್ದು ಕೂಡಾ ಇದೇ ಭೌಕನಾಗನಿಗೆ.
ಕೊನೆಗೂ, ನಾಗದೇವ ಕೋಪ ತಣಿದು ಶಾಂತವಾಗಿದ್ದಾನೆ, ಆದ ತಪ್ಪುಗಳನ್ನೆಲ್ಲಾ ಕ್ಷಮಿಸಿ, ಅಂತೂ ಇಂತೂ 17ನೇ ದಿನ ಅಷ್ಟೂ ಕಾರ್ಮಿಕರನ್ನು ಸುರಂಗವೆಂಬ ಹುತ್ತದೊಳಗಿಂದ ಹೊರಗಡೆ ಬಿಟ್ಟುಕೊಟ್ಟಿದ್ದಾನೆ.
ಗಮನಿಸಬೇಕಾದ ಅಂಶ ಏನ್ ಗೊತ್ತಾ?
ಇಷ್ಟೆಲ್ಲಾ ಆದರೂ ಒಳಗಿದ್ದ 41 ಕಾರ್ಮಿಕರಿಗೆ ಯಾವುದೇ ಸಮಸ್ಯೆಗಳಾಗಿಲ್ಲ. ಇಂತಹದ್ದೊಂದು ರಣಭೀಕರ ಭೂಕುಸಿತವಾದರೂ ಗಾಳಿಯ ಓಡಾಟಕ್ಕಿದ್ದ ಪೈಪಿಗಾಗ್ಲಿ, ನೀರು ವಿದ್ಯುತ್ ಇತ್ಯಾದಿ ವ್ಯವಸ್ಥೆಗಾಗ್ಲೀ ಏನೂ ಆಗಿರಲಿಲ್ಲ. ಕುಸಿತವಾಗಿದ್ದು ಪ್ರವೇಶದ್ವಾರದ ಮೊದಲ ಭಾಗದಲ್ಲಿ. ಹಾಗಾಗಿ ಒಳಗೆ ಒಂದೂವರೆ ಕಿ.ಮೀ.ನಷ್ಟು ಉದ್ದದ ಜಾಗವಿದ್ದ ಕಾರಣ ಓಡಾಡಲು ಅಥವಾ ಮಲ ಮೂತ್ರ ಇತ್ಯಾದಿಗಳ ವಿಸರ್ಜನೆಗೂ ಯಾವುದೇ ಸಮಸ್ಯೆಯಾಗಿರಲಿಲ್ಲ.
Uttarkashi Tunnel Rescue: ಕಾರ್ಮಿಕರ ರಕ್ಷಣೆಗೆ ನೆರವಾಯ್ತು ನಿಷೇಧಿತ Rat Hole ಮೈನಿಂಗ್, ಇದಕ್ಕೆ ನಿಷೇಧ ಯಾಕೆ?
ಹಾಗಾಗಿಯೇ ಬರೋಬ್ಬರಿ ಹದಿನೇಳು ದಿನವಾದರೂ ಯಾವುದೇ ಅಪಾಯವಾಗದೆ, ಹೊರಬರುವಾಗಲೂ ಈಗಿನ್ನೂ ಒಳಹೊಕ್ಕಿ ಬಂದವರಂತೆ ಆರೋಗ್ಯವಂತರೂ ಮತ್ತು ನಿರಾಳವಾಗಿದ್ದರು ಅಷ್ಟೂ 41ಜನರೂ ಕೂಡಾ. ಯಾಕೆಂದರೆ ದೇವರಿಗೆ ಅವರ ಮೇಲೆ ಯಾವುದೇ ಕೋಪವಿರಲಿಲ್ವಲ್ಲ?
ಇದೇ ಮೊದಲೇನಲ್ಲ...
ಈ ಹಿಂದೆ ಇದೇ ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಸಂಭವಿಸಿದ ಮಹಾ ಜಲಪ್ರಳಯಕ್ಕೂ ಕೂಡಾ ದೇವರನ್ನು ಕೆಣಕೋ ಇಂತದ್ದೇ ವಿಚಾರವೊಂದು ಕಾರಣವಾಗಿತ್ತು. ನಾನು ದೈವವನ್ನು ನಂಬುತ್ತೇನೆ. ಹಾಗಾಗಿ ದೈವದ ಕರುಣೆ ಪ್ರೀತಿಯ ಜೊತೆ ಜೊತೆಗೆ ದೈವದ ಕೋಪವನ್ನೂ ನಂಬುತ್ತೇನೆ.