ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶ್ರದ್ಧೆಯಿಂದ ಆಚರಿಸಲಾಯಿತು.
ಹನುಮಸಾಗರ (ಜು.30) : ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶ್ರದ್ಧೆಯಿಂದ ಆಚರಿಸಲಾಯಿತು.
ಮುಸ್ಲಿಮರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಈ ಹಬ್ಬದಲ್ಲಿ ಭಾಗಿಯಾಗಿದ್ದರು. ಹರಕೆ ಹೊತ್ತಿರುವವರು ಫಕೀರರಾಗಿ, ಹುಲಿ ವೇಷ ಧರಿಸಿ, ಕಳ್ಳಳ್ಳಿ ವೇಷ ಧರಿಸಿ ತಮ್ಮ ಹರಕೆಯನ್ನು ತೀರಿಸಿಕೊಂಡರು. ಅಲ್ಲದೇ ವಿಶಿಷ್ಟರೀತಿಯ ಹೆಜ್ಜೆ ಕುಣಿತ, ಗೆಜ್ಜೆ ಕುಣಿತ, ಹಲಗೆ ಬಾರಿಸುವುದು, ಹುಲಿ ಕುಣಿತ, ರಿವಾಯತ ಪದಗಳು ಮುಂತಾದವುಗಳು ಆಕರ್ಷಣೀಯವಾಗಿದ್ದವು. ವಿವಿಧ ಜನಾಂಗಗಳ ಯುವಕರ ವಿಶಿಷ್ಟಹೆಜ್ಜೆ ಕುಣಿತ ಗಮನ ಸೆಳೆದಿದ್ದವು.
ಮೊಹರಂ ಕೊನೆಯ ದಿನ ಬೆಳಗ್ಗೆ ಮತ್ತು ಸಾಯಂಕಾಲ ವಿವಿಧ ಅಲಾಯಿ ದೇವರುಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಲಾಯಿ ದೇವರುಗಳು ಪ್ರಮುಖ ಬೀದಿಗಳಲ್ಲಿ ಭೇಟಿ ಕೊಡುವುದು, ಬೆಂಕಿಯಲ್ಲಿ ಕುಣಿಯುವುದು, ಮೈದುಂಬಿ ಸುತ್ತುವರಿಯುವುದು ಆಕರ್ಷಣೀಯವಾಗಿತ್ತು.
ಭಾವೈಕ್ಯ ಭಾರತದ ಪ್ರತಿಬಿಂಬ ಮೊಹರಂ..!
ಗ್ರಾಮದಲ್ಲಿ ಏಳು ಸ್ಥಳಗಳಲ್ಲಿ ದೇವರುಗಳನ್ನು ಕೂರಿಸಲಾಗುತ್ತದೆ. ಒಂದು ದೇವರಿಗೆ 5 ಚಿಕ್ಕ ದೇವರುಗಳಂತೆ ಮೆರವಣಿಗೆಯಲ್ಲಿ ಹತ್ತಾರು ದೇವರುಗಳು ಪಾಲ್ಗೊಂಡಿತ್ತು. ಇಮಾಂ ಕಾಸೀಂ (ಸಾಬರ) ಅಲಾಯಿ, ಸಣ್ಣ ಲಾಲಸಾಬ್ (ಒಂಟಿ) ಅಲಾಯಿ, ದೊಡ್ಡ ಲಾಲಸಾಬ್ (ಗಂಧದ) ಅಲಾಯಿ, ಹುಸೇನ್‌ಬಾಷಾ (ಗುಡ್ಡದ) ಅಲಾಯಿ, ಹುನಗುಂದ ಲಾಲಸಾಬ್ (ಬಳಿಗಾರ ರಾಜಪ್ಪನ) ಅಲಾಯಿ, ಕೊರವರ ದುರುಗಪ್ಪನ ಅಲಾಯಿ, ಪತ್ತಾರ (ಗಿಲಗಿಲಿ) ಅಲಾಯಿ ಹೀಗೆ ವಿವಿಧ ಕಡೆಗಳಲ್ಲಿ ವಿಶಿಷ್ಟರೀತಿಯ ಅಲಾಯಿ ದೇವರುಗಳನ್ನು ಸ್ಥಾಪಿಸಿದ್ದು, ಅವುಗಳಲ್ಲಿ ಗುಡ್ಡದ, ಗಂಧದ ಮತ್ತು ಒಂಟಿ ಅಲಾಯಿ, ಕೊರವರ ದುರಗಪ್ಪನ ಅಲಾಯಿ ದೇವರುಗಳು ಮೈದುಂಬಿ ರಸ್ತೆಗಳ ಮಧ್ಯದಲ್ಲಿ ಸುತ್ತುವರಿಯುತ್ತವೆ.
ಹರಕೆ ಹೊತ್ತಿರುವ ಭಕ್ತರ ಮನೆಗೆ ತೆರಳಿ ಪೂಜೆ ಸ್ವೀಕರಿಸುತ್ತವೆ. ಇದನ್ನೆಲ್ಲ ವೀಕ್ಷಿಸಲು ಜಾತಿ ಭೇದವಿಲ್ಲದೇ ಸಾವಿರಾರು ಜನ ಆಗಮಿಸಿದ್ದರು. ಪ್ರಮುಖ ಜಾತ್ರೆಗಳಂತೆ ಈ ಹಬ್ಬವು ಕಂಗೊಳಿಸುತ್ತಿರುತ್ತದೆ. ಮೊಹರಂ ಕೊನೆಯ ದಿನ ರಾತ್ರಿ ಎಲ್ಲ ಅಲಾಯಿ ದೇವರುಗಳು ‘ಹೊಳೆಗೆ ಹೋಗುವ’ ಕಾರ್ಯಕ್ರಮ ವಿಶಿಷ್ಟರೀತಿಯಲ್ಲಿ ಜರುಗಿತು.
ಬಾಗಲಕೋಟೆ: ಮುಸ್ಲಿಮರೇ ಇಲ್ಲದ ಊರಲ್ಲಿ ಹಿಂದುಗಳಿಂದ ಮೊಹರಂ ಆಚರಣೆ..!
ಮುಸಲ್ಮಾನರೇ ಇಲ್ಲದ ಗಡಚಿಂತಿ, ಹೊಸಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿಯೂ ಮೊಹರಂ (ಅಲಾಯಿ) ಹಬ್ಬ ವಿಜೃಂಭಣೆಯಿಂದ ಆಚರಿಸಿದ್ದು ಭಾವೈಕ್ಯತೆಯನ್ನು ಮೆರೆಸಿತ್ತು.