ಬುದ್ಧ ಎಂದರೆ 'ಎಚ್ಚರಗೊಂಡವನು' ಅಥವಾ 'ಪ್ರಬುದ್ಧ'. ವೈಶಾಖ ಪೂರ್ಣಿಮೆಯಂದು ಬುದ್ಧ ಜಯಂತಿ ಹಾಗೂ ಆತನಿಗೆ ಜ್ಞಾನೋದಯವಾದ ದಿನವನ್ನು ಆಚರಿಸಲಾಗುತ್ತದೆ. ಬುದ್ಧನ ಕತೆಗಳಿಂದ ಜೀವನಕ್ಕೆ ಪ್ರೇರಣೆ ಪಡೆದು ಸರಿ ಹಾದಿಯಲ್ಲಿ ನಡೆದರೆ ಅದಕ್ಕಿಂತ ಉತ್ತಮ ಆಚರಣೆ ಮತ್ತೇನಿದೆ?
ಬುದ್ಧನು ಸಿದ್ಧಾರ್ಥ ಗೌತಮನಾಗಿ ಐಷಾರಾಮಿ ಮತ್ತು ಸಂಪತ್ತು ತುಂಬಿದ ರಾಜ್ಯದಲ್ಲಿ ವೈಶಾಖ ಪೂರ್ಣಿಮೆಯಂದು ಜನಿಸಿದನು. ಆತ ತನ್ನೆಲ್ಲ ಬಂಧುಬಳಗ, ರಾಜ್ಯಕೋಶ ಬಿಟ್ಟು ಹೋಗಿ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯ ಹೊಂದಿದನು. ನಂತರದಲ್ಲಿ ಈ ಜಗತ್ತಿಗೆ ಸರಿಯಾದ ದಾರಿ ತೋರುವ ಆಧ್ಯಾತ್ಮ ಶಿಕ್ಷಕನಂತೆ ಬುದ್ಧನ ವರ್ತನೆ ಹಾಗೂ ಬೋಧನೆಗಳಿದ್ದವು. ಈ ಎರಡರಿಂದಲೂ ಹಲವಾರು ಪ್ರೇರಣಾದಾಯಕ ಬುದ್ಧನ ಕತೆಗಳು ಹೊಮ್ಮಿದವು. ಇದೀಗ ಬುದ್ಧ ಜಯಂತಿ ಹಿನ್ನೆಲೆಯಲ್ಲಿ ಬುದ್ಧನಿಗೆ ಸಂಬಂಧಿಸಿದ ಪ್ರೇರಣಾದಾಯಕ ಕತೆ ತಿಳಿದು ಬದುಕಿನ ಪಾಠ ಕಲಿಯೋಣ.
ಇಂದಿನ ಜಗತ್ತಿನ ನಕಾರಾತ್ಮಕತೆ, ಒತ್ತಡ, ಅಹಂಕಾರ, ದುರಾಶೆ, ಹತಾಶೆಗಳೆಲ್ಲವುಗಳಿಂದ ಮುಕ್ತರಾಗಿ ಬದುಕಲು ಬುದ್ಧನ ಬೋಧನೆಗಳು ನಮಗೆ ಸಹಾಯ ಮಾಡುತ್ತವೆ.
ಬುದ್ಧನ ಕ್ಷಮೆ
ಒಂದು ದಿನ ಬುದ್ಧನು ತನ್ನ ಶಿಷ್ಯರೊಂದಿಗೆ ಒಂದು ಹಳ್ಳಿಗೆ ಹೋದನು. ಬುದ್ಧನ ಭೇಟಿಯನ್ನು ಕೇಳಿದ ಅನೇಕ ಗ್ರಾಮಸ್ಥರು ಅವನ ಆಶೀರ್ವಾದ ಪಡೆಯಲು ಹೋದರು. ತನ್ನ ಮಕ್ಕಳೊಂದಿಗೆ ವ್ಯಾಪಾರ ನಡೆಸುತ್ತಿದ್ದ ಒಬ್ಬ ವ್ಯಾಪಾರಿ ಬುದ್ಧನ ಮೇಲೆ ಕೋಪಗೊಂಡನು. ಬುದ್ಧ ಏನನ್ನೂ ಮಾಡದೆ ತನ್ನ ಮಕ್ಕಳನ್ನು ಮತ್ತು ಹಳ್ಳಿಯ ಇತರ ಜನರನ್ನು ಧ್ಯಾನ ಮಾಡಲು ಸೆಳೆಯುವ ಮೂಲಕ ತಪ್ಪು ಮಾಡುತ್ತಿದ್ದಾನೆ ಎಂದು ಅವನು ಭಾವಿಸಿದನು.
ಯಾವಾಗಲೂ ಕಣ್ಣು ಮುಚ್ಚಿರುವ ಬುದ್ಧನನ್ನು ನೋಡುವುದರಲ್ಲಿ ಸಮಯ ಕಳೆಯುವುದು ಸಂಪೂರ್ಣ ಸಮಯ ವ್ಯರ್ಥ, ಬದಲಾಗಿ, ಅವನ ಮಕ್ಕಳು ಹೆಚ್ಚು ಹಣವನ್ನು ಗಳಿಸಲು ಅವನ ವ್ಯಾಪಾರಕ್ಕೆ ಸಹಾಯ ಮಾಡಬೇಕು ಎಂಬ ನಿಲುವು ವ್ಯಾಪಾರಿಯದಾಗಿತ್ತು.
ಬುದ್ಧನ ಪ್ರತಿಮೆ ಮನೆಯಲ್ಲಿಡ್ತೀರಾ? ಹಾಗಿದ್ರೆ ವಾಸ್ತು ನಿಯಮ ಪಾಲಿಸಿ
ಹೀಗಾಗಿ ಇವತ್ತು ನಾನು ಬುದ್ಧನಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಕೋಪದಿಂದ ಬುದ್ಧನ ಕಡೆಗೆ ಹೋದನು. ಬುದ್ಧನ ಹತ್ತಿರ ಬಂದ ಕೂಡಲೇ ಆತ ಸ್ವಲ್ಪ ವ್ಯತ್ಯಾಸವನ್ನು ಅನುಭವಿಸಿದನು. ಆದರೆ ಅವನಲ್ಲಿದ್ದ ಸಿಟ್ಟು ಕರಗಲಿಲ್ಲ. ಏನೂ ಮಾತಾಡಲು ತೋಚದೆ ಸೀದಾ ಹೋಗಿ ಬುದ್ಧನ ಕೆನ್ನೆಗೆ ಬಾರಿಸಿದನು. ಪ್ರತಿಯಾಗಿ ಬುದ್ಧನು ಅವನತ್ತ ಮುಗುಳ್ನಕ್ಕನು.
ಇದನ್ನು ಕಂಡ ಬುದ್ಧನ ಶಿಷ್ಯರು ಹಾಗೂ ಗ್ರಾಮಸ್ಥರು ಉದ್ಯಮಿಯ ಮೇಲೆ ಆಕ್ರೋಶ ಹೊಂದಿದರು. ಆದರೆ ಬುದ್ಧನ ಸಮ್ಮುಖದಲ್ಲಿ, ಅವರು ತಮ್ಮ ಭಾವನೆಗಳನ್ನು ನಿಯಂತ್ರಿಸಿದರು ಮತ್ತು ಮೌನವಾಗಿದ್ದರು. ತನ್ನ ಈ ಕ್ರಮವು ಸುತ್ತಮುತ್ತಲಿನ ಜನರಿಂದ ಯಾವುದೇ ಪ್ರತಿಕ್ರಿಯೆಯನ್ನು ಪಡೆಯದಿರುವುದನ್ನು ಉದ್ಯಮಿ ಗಮನಿಸಿದನು. ಮತ್ತು ಮುಂದೇನು ಮಾಡಲು ತೋಚದೆ ಅಲ್ಲಿಂದ ತೆರಳಿದನು.
ಅವನು ತನ್ನ ಮನೆಗೆ ಹಿಂದಿರುಗಿದನು. ನಗುತ್ತಿರುವ ಬುದ್ಧನ ಚಿತ್ರ ಅವನ ಮನಸ್ಸನ್ನು ಆಕ್ರಮಿಸಿತು. ಅವನ ಜೀವನದಲ್ಲಿ ಮೊದಲ ಬಾರಿಗೆ, ಅಗೌರವದ ಕ್ರಿಯೆಗಾಗಿ ತನ್ನ ಭಾವನೆಗಳನ್ನು ನಿಯಂತ್ರಿಸುವ ವ್ಯಕ್ತಿಯನ್ನು ಭೇಟಿಯಾಗಿದ್ದನು.
ಅವನು ಮಲಗಲು ಹೋದನು. ಆದರೆ ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಅವನು ನಡುಗುತ್ತಿದ್ದ. ಉದ್ಯಮಿಗೆ ಇಡೀ ಜಗತ್ತು ತಲೆ ಕೆಳಗಾದಂತೆ ಭಾಸವಾಗಿತ್ತು. ತಾನು ಇಷ್ಟು ದಿನ ನೋಡಿದ ಜಗತ್ತೇ ಬೇರೆಯಾಗಿತ್ತು. ಮರುದಿನ, ಅವನು ಬುದ್ಧನ ಬಳಿಗೆ ಹೋಗಿ ಅವನ ಪಾದಗಳಿಗೆ ಬಿದ್ದು, 'ದಯವಿಟ್ಟು ನನ್ನ ಕೃತ್ಯಕ್ಕಾಗಿ ನನ್ನನ್ನು ಕ್ಷಮಿಸು' ಎಂದನು.
ಪ್ರತಿಯಾಗಿ ಬುದ್ಧ 'ನಾನು ನಿನ್ನನ್ನು ಕ್ಷಮಿಸಲಾರೆ' ಎಂದನು.
ಬುದ್ಧನ ಉತ್ತರವನ್ನು ಕೇಳಿ ಅವನ ಶಿಷ್ಯರು ಮತ್ತು ಗ್ರಾಮಸ್ಥರು ಬೆಚ್ಚಿಬಿದ್ದರು. ಬುದ್ಧನು ಕ್ಷಮಾಗುಣವನ್ನು ಬೋಧಿಸಿದವನು. ಸಾಲದೆಂಬಂತೆ ಉದ್ಯಮಿ ಹೊಡೆದಾಗಲೂ ಮುಗುಳ್ನಕ್ಕವನು. ಇದೀಗ ಹೀಗೆ ಹೇಳುತ್ತಿದ್ದಾನಲ್ಲ ಎಂದು ಎಲ್ಲರಿಗೂ ಆಘಾತವಾಯಿತು.
ವೃಷಭ- ವೃಶ್ಚಿಕ ರಾಶಿಯ ಅಪರೂಪದ ಹೊಂದಾಣಿಕೆಯಲ್ಲಿದೆ ವಿರುಷ್ಕಾ ಜೋಡಿಯ ಸುಖ ದಾಂಪತ್ಯದ ಗುಟ್ಟು!
ಎಲ್ಲರ ಆಘಾತವನ್ನು ಗ್ರಹಿಸಿದ ಬುದ್ಧ, 'ನೀವು ಏನನ್ನೂ ಮಾಡದೆ ಇರುವಾಗ ನಾನು ನಿಮ್ಮನ್ನು ಏಕೆ ಕ್ಷಮಿಸಬೇಕು?' ಎಂದು ಕೇಳಿದನು.
ಉದ್ಯಮಿ ಉತ್ತರಿಸಿದನು, 'ನಿನ್ನೆ ನಾನು ನಿನ್ನ ಮುಖದ ಮೇಲೆ ಹೊಡೆದಿದ್ದೇನೆ.'
ಬುದ್ಧ ಹೇಳಿದ, 'ಆ ವ್ಯಕ್ತಿ ಈಗ ಇಲ್ಲ. ನೀವು ಕಪಾಳಮೋಕ್ಷ ಮಾಡಿದ ವ್ಯಕ್ತಿಯನ್ನು ನಾನು ಎಂದಾದರೂ ಭೇಟಿಯಾದರೆ, ನಾನು ಅವನನ್ನು ಕ್ಷಮಿಸುತ್ತೇನೆ. ಈಗ ಈ ಕ್ಷಣದಲ್ಲಿ ಇಲ್ಲಿರುವ ವ್ಯಕ್ತಿಯಾಗಿ ನೀವು ಅದ್ಭುತವಾಗಿದ್ದೀರಿ ಮತ್ತು ನೀವು ಯಾವುದೇ ತಪ್ಪು ಮಾಡಿಲ್ಲ' ಎಂದು ಬುದ್ಧ ಹೇಳಿದನು.
ನಾವು ಒಬ್ಬ ವ್ಯಕ್ತಿಯನ್ನು ಕ್ಷಮಿಸಿದಾಗ, ಆ ವ್ಯಕ್ತಿಗೆ ತಾನು ತಪ್ಪಿತಸ್ಥನೆಂಬ ಭಾವನೆ ಮೂಡಿಸಬಾರದು. ತಪ್ಪಿನ ಬಗ್ಗೆ ನೆನಪಿಸುತ್ತಾ ಹೋಗಬಾರದು. ಆಗ ಅದು ನಿಜವಾದ ಕ್ಷಮೆಯಲ್ಲ. ಕ್ಷಮೆ ತಪ್ಪಿತಸ್ಥನಿಗೆ ಶಾಂತಿಯನ್ನು ನೀಡಬೇಕು.