ವಿಫಲ ಮದುವೆಗಳು, ಮುರಿದುಹೋದ ಮನಸುಗಳು, ಅಪ್ಪ-ಅಮ್ಮನ ಹೋರಾಟದಲ್ಲಿ ಕಂಗಾಲಾದ ಮಕ್ಕಳು, ನೆಮ್ಮದಿ ಇಲ್ಲದ ಜೀವಗಳು, ನೋವನ್ನು ಮರೆತು ಎಲ್ಲರಂತೆ ಬದುಕುವ ದೊಡ್ಡವರು ಇವೆಲ್ಲರ ಬೇರೆ ಬೇರೆ ಕತೆಯನ್ನು ಸೇರಿಸಿ ಒಂದೆಡೆ ಪೋಣಿಸಿದ ಒಂದು ಫೀಲ್ ಗುಡ್ ಸಿನಿಮಾ.
ರಾಜೇಶ್ ಶೆಟ್ಟಿ
ಜಗ್ಗೇಶ್ ಇಲ್ಲಿ ಕೇಂದ್ರ ಪಾತ್ರ. ಅವರ ಮುಖಾಂತರವೇ ಎಲ್ಲಾ ಕತೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಆರಂಭದಲ್ಲಿ ಒಂದೆರಡು ಎಂದಿನ ಡಬಲ್ ಮೀನಿಂಗ್ ಡೈಲಾಗ್ ಹೇಳುವುದು ಬಿಟ್ಟರೆ ಈ ಚಿತ್ರದ ಜಗ್ಗೇಶ್ ಬೇರೆಯೇ. ಮೌನದಲ್ಲೇ ಅವರ ಮಾತು ಜಾಸ್ತಿ. ಮನೆ ಬಿಟ್ಟು ಹೋದ ಮಗ ಅನಿರೀಕ್ಷಿತವಾಗಿ ಸಿಕ್ಕಾಗ, ಜೀವಮಾನದ ನೋವು ಎದುರಾದಾಗ ಅವರು ಕಣ್ಣೋಟದಲ್ಲೇ ಕಣ್ಣೀರು ಹಾಕಿಸುತ್ತಾರೆ. ಯಾರೋ ಕಾಟ ಕೊಟ್ಟು ಒಮ್ಮೆ ಸಿಡಿಮಿಡಿಗೊಂಡು ಕೊನೆಗೆ ಸಣ್ಣಗೆ ನಕ್ಕು ಎಲ್ಲರನ್ನೂ ನಗಿಸುತ್ತಾರೆ. ಈ ಚಿತ್ರದ ಶಕ್ತಿಯೇ ಪಾತ್ರಧಾರಿಗಳು. ನೋವನ್ನು ಅಡಗಿಸಿ ನಗುವ ಹಳ್ಳಿ ತರುಣ ಪ್ರಮೋದ್, ಸಿಗಬಾರದ ಬಾಲ್ಯವನ್ನು ಅನುಭವಿಸಿ ನೋವಲ್ಲಿ ಧುಮುಗುಡುವ ವಿವೇಕ್ ಸಿಂಹ, ಪ್ರೀತಿ ಸಿಗದ ಕಾರಣಕ್ಕೆ ಸಿಡುಕುತ್ತಾ ಆಂತರ್ಯದಲ್ಲಿ ಒದ್ದಾಡುವ ಅಸಹಾಯಕ ಹುಡುಗಿ ಹಿತಾ ಚಂದ್ರಶೇಖರ್ ನಟನೆ ಚಿತ್ರದ ಹೈಲೈಟ್. ಇವರು ನಗಿಸುತ್ತಾರೆ, ಅಳಿಸುತ್ತಾರೆ, ಅಯ್ಯೋ ಅನ್ನಿಸುತ್ತಾರೆ.
ಸಿನಿಮಾ ಬುದ್ಧಿವಂತಿಕೆ ಪ್ರದರ್ಶಿಸುವ ವೇದಿಕೆ ಅಲ್ಲ: ರಮೇಶ್ ಇಂದಿರಾ
ನಿರ್ದೇಶಕರು ಇಲ್ಲಿ ಕತೆ ಹೇಳುವ ರೀತಿಯೇ ಭಿನ್ನ. ಯಾವುದೂ ಇಲ್ಲಿ ಊಹೆಗೆ ನಿಲುಕುವುದಿಲ್ಲ. ಒಟ್ಟಾರೆ ಸಂಬಂಧಗಳನ್ನು ಅರಿಯುವುದಕ್ಕೆ ಮಾಡಿದ ಪ್ರಯತ್ನದಂತೆ ಇದೆ ಇಡೀ ಸಿನಿಮಾ. ಒಂದು ಹಂತದಲ್ಲಿ ಜಗ್ಗೇಶ್ ಮತ್ತು ಪ್ರಮೋದ್ ಹಳೇ ಪ್ರೀಮಿಯರ್ ಪದ್ಮಿನಿ ಕಾರಿನಲ್ಲಿ ಜರ್ನಿ ಹೊರಡುತ್ತಾರೆ. ಜರ್ನಿಗಳು ಪಾಠ ಕಲಿಸುವುದು ಹೊಸತೇನಲ್ಲ. ಇಲ್ಲೂ ಪಾಠ ಕಲಿಸುತ್ತದೆ. ಹಾಗೆ ಪಾಠ ಕಲಿಸುವುದಕ್ಕೆಂದೇ ಕೆಲವು ಪಾತ್ರಗಳು ಬರುತ್ತವೆ. ಆ ಪಾತ್ರಗಳ ಕತೆ ಎಷ್ಟುಬೇಕೋ ಅಷ್ಟೇ ಹೇಳಿ ಥಟ್ ಅಂತ ಮುಗಿಸಿಬಿಡುತ್ತಾರೆ. ಅದು ಅವರ ಶಕ್ತಿ. ಹೇಳುವುದಕ್ಕಿಂತ ಹೇಳದೇ ಇರುವುದೇ ಜಾಸ್ತಿ. ಕೆಲವೊಮ್ಮೆ ಜರ್ನಿಯಲ್ಲಿ ಸಿಗುವ ಎಲ್ಲಾ ಪಾತ್ರಗಳು ಪಾಠ ಹೇಳುವುದಕ್ಕಾಗಿಯೇ ಬರುತ್ತಿವೆಯೇನೋ ಎಂದು ಭಾಸವಾಗುತ್ತದೆ. ಅದು ಮಿತಿ. ಪಾತ್ರಗಳು ತನ್ನಿಂತಾನೇ ಎದುರಾದರೆ ಚೆಂದ. ಏನೋ ಹೇಳುವುದಕ್ಕಾಗಿಯೇ ಬಂದರೆ ಕಷ್ಟ.
’ಪ್ರೀಮಿಯರ್ ಪದ್ಮಿನಿ’ ಯಶಸ್ಸಿಗೆ ಥಿಯೇಟರ್‌ನಲ್ಲೇ ಹೋಮ ಮಾಡಿಸಿದ ಜಗ್ಗೇಶ್
ಸಿನಿಮಾದಲ್ಲಿ ಒಂದು ವಿಷಾದವಿದೆ. ಅದು ಸಿನಿಮಾ ಪೂರ್ತಿ ಇರುತ್ತದೆ. ಕಡೆಗೆ ಬದುಕಿನ ಜಂಜಾಟಗಳಿಂದ ಆಚೆ ಎಳೆಯುವಂತೆ ಮಾಡುವ ಇನ್‌ಸ್ಪಿರೇಷನಲ್ ಭಾಷಣದಂತೆ ಸಿನಿಮಾದ ಕೊನೆ ಇದೆ. ನೆನಪುಗಳು ಹೆಣದಂತೆ, ಹೊತ್ತುಕೊಂಡಷ್ಟುಭಾರ, ಸುಟ್ಟು ಬಿಡಬೇಕು ಎಂಬ ಮಾತು ಬರುವ ಹೊತ್ತಿಗೆ ಎಲ್ಲವೂ ಅಲ್ಲಲ್ಲಿಗೆ ಸರಿಹೋಗುತ್ತದೆ.
ಜಗ್ಗೇಶ್‌ಗೆ ಚಿತ್ರದಲ್ಲಿ ಶಾಸ್ತ್ರೀಯ ಸಂಗೀತ ಇಷ್ಟ. ಈ ಸಿನಿಮಾ ಕೂಡ ಶಾಸ್ತ್ರೀಯ ಸಂಗೀತದ ಥರ. ನಿಧಾನಕ್ಕೆ ಆವರಿಸಿಕೊಳ್ಳುತ್ತದೆ. ವೇಗಕ್ಕೆ ಇಲ್ಲಿ ಮರ್ಯಾದೆ ಕಡಿಮೆ.