ಗಾಂಧೀಜಿ ಇರುವ, ಮೀರುವ, ಮರಳುವ ಅನನ್ಯ ಮಾದರಿ

By Web Desk  |  First Published Oct 2, 2018, 10:49 AM IST

ಗಾಂಧೀಜಿ ದೇವರು, ಧರ್ಮಗಳಲ್ಲಿ ನಂಬಿಕೆಯುಳ್ಳವರು. ಜಡವಲ್ಲದ ಹಿಂದೂ ಧರ್ಮ ನಿಷ್ಠರು. ಹಿಂದೂ ಧರ್ಮದಲ್ಲಿರುವ ಅಸ್ಪಶ್ಯತೆಯನ್ನು ಖಂಡತುಂಡವಾಗಿ ವಿರೋಧಿಸಿದವರು. ಆದರೆ ತಮ್ಮದೇ ಮಾದರಿಯ ಹಿಂದೂ ಮಾದರಿಯನ್ನು ಪ್ರತಿಪಾದಿಸುತ್ತಾ ಬಂದು   ಹಿಂದೂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದವರು. ಇವರು ಯಾವತ್ತೂ ತಮ್ಮ ಹೋರಾಟಕ್ಕೆ ಜಾತಿ ಮತ್ತು ಧರ್ಮದ ಸೋಂಕು ತಗುಲಿಸಲಿಲ್ಲ.


- ಬರಗೂರು ರಾಮಚಂದ್ರಪ್ಪ

ಗಾಧೀಜಿ ಎಂಬುದು ಕೇವಲ ಒಂದು ಹೆಸರಾಗಿ ಉಳಿದಿಲ್ಲ. ಅದು ನಮ್ಮ ನೆಲದ ಒಂದು ಮುಖ್ಯ ಮಾದರಿಯಾಗಿ ಬೆಳೆದು ನಿಂತಿದೆ. ಜನಮಾನಸದ ಸ್ಥಿರ ವಿನ್ಯಾಸಗಳ ಒಳಗಿಂದಲೇ ಹೊರಬಂದು ವಿಭಿನ್ನವಾಗಿ ನಿಲ್ಲುವ, ಮತ್ತೆ ಜನಮಾನಸದ ಒಳಹೋಗಿ ಮಾತಾಡುವ, ಮೌಲ್ಯವಾಗುವ ವಿಶಿಷ್ಟ ಚಲನಶೀಲ ಗುಣವನ್ನು ಗಾಂಧೀಜಿಯವರಲ್ಲಿ ಕಾಣಬಹುದು. ಇದು ಗಾಂಧೀಜಿಯವರನ್ನು ಒಂದು ರೀತಿಯಲ್ಲಿ ‘ನಿಮ್ಮೊಡನಿದ್ದು ನಿಮ್ಮಂತಾಗದ’ ನೆಲೆಯಲ್ಲೂ ನಿಲ್ಲಿಸಿದೆ. ಮೀರುವ ಮತ್ತು ಮರಳುವ ಮನೋಧರ್ಮದಿಂದ ಗಾಂಧಿ ಮಾದರಿಯು ವಿಶ್ವದಲ್ಲೇ ವಿಶಿಷ್ಟವೆನಿಸಿದೆ. ಧರ್ಮದೊಳಗಿದ್ದು ಅದನ್ನು ಮೀರುವ, ಮತ್ತೆ ಮರಳಿ ಮಾತಾಡುವ ಅವರ ಗುಣವು ನನ್ನ ಈ ಮಾತಿಗೆ ಒಂದು ಸಾಕ್ಷಿ. ಹಾಗೆ  ಡಿದರೆ ಗಾಂಧೀಜಿಯೇ ಭಾರತದ ಬಹುದೊಡ್ಡ ಸಾಕ್ಷಿ ಪ್ರಜ್ಞೆ. ಈ ಸಾಕ್ಷಿ ಪ್ರಜ್ಞೆಗೆ ಸಾಕ್ಷಿಗಳನ್ನು ಒದಗಿಸಿ ಸಮರ್ಥಿಸಬೇಕಾಗಿಲ್ಲ. ಆದರೆ ನಮ್ಮ ಸಂದರ್ಭ ಅಷ್ಟು ಸರಳವಾಗಿಲ್ಲ. 

ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿಗೂ ಬಲಿ ಕೇಳುವ ಇಂದಿನ ‘ಸಮೂಹ ಸನ್ನಿ ಸಂದರ್ಭ’ದಲ್ಲಿ ಗಾಂಧಿ ಎಷ್ಟರಮಟ್ಟಿಗೆ ಅರ್ಥವಾಗುತ್ತಾರೆಂದು ಹೇಳಲಾಗದು. ಹಾಗೆಂದು ಹಿಂಜರಿಯಬಾರದು. ಗಾಂಧಿಯನ್ನು ಅರ್ಥ ಮಾಡಿಕೊಳ್ಳುವ ಮತ್ತು ಅರ್ಥ ಮಾಡಿಕೊಡುವ ಅಗತ್ಯ ಹಿಂದಿಗಿಂತ ಇಂದು ಹೆಚ್ಚಾಗಿದೆ. ನಮ್ಮ ಅಸಹಿಷ್ಣು ಹಾಗೂ ಹಿಂಸಾತ್ಮಕ ಸಂದರ್ಭ ಈ ಅಗತ್ಯವನ್ನು ಅನಿವಾರ್ಯವಾಗಿಸಿದೆ. ಈಗ ಗಾಂಧೀಜಿಯವರ ಮೀರುವ ಮತ್ತು ಮರಳುವ ಮಾದರಿಯ ಅನನ್ಯತೆಯನ್ನು ನೋಡೋಣ. ಗಾಂಧಿ ಹಿಂದೂ ಧರ್ಮನಿಷ್ಠರು. ಆದರೆ ಅದರ ಜಡತೆಯನ್ನು ಮೀರಿದರು. ಹಿಂದೂ ಸಾಂಪ್ರದಾಯಿಕೆಯಲ್ಲಿ ಹೂತು ಹೋಗಲಿಚ್ಚಿಸದೆ ಹೊರಬಂದು ವಿಶ್ಲೇಷಣೆ ಮಾಡುವ ನಿಷ್ಟುರತೆಯಿದ್ದ ಗಾಂಧೀಜಿ ಹಿಂದೂಧರ್ಮವನ್ನು ನಿರಾಕರಿಸಲಿಲ್ಲ. ಹಾಗೆಂದು ಹಿಂದೂ ಮೂಲಭೂತವಾದಿಯಾಗಲಿಲ್ಲ; ಹಾಗೆಂದು ಸಾಮಾಜಿಕ ಕಳಂಕಗಳನ್ನು ಕಾರುಣ್ಯದ ನೆಲೆಯಲ್ಲಿ ನೋಡುತ್ತ ಅವುಗಳ ವಿರುದ್ಧ ಕಠಿಣ ನಿಲುವು ತಳೆದರೂ ‘ಸಾಮಾಜಿಕ ಕ್ರಾಂತಿ’ ಅವರ ಮೊದಲ ಆದ್ಯತೆಯಾಗಲಿಲ್ಲ. ಹಾಗೆಂದು ಸಾಮಾಜಿಕ ಬದಲಾವಣೆಯ ಆಶಯದಿಂದ ದೂರ ಹೋಗಲಿಲ್ಲ.

Tap to resize

Latest Videos

undefined

ಗಾಂಧೀಜಿ ನಡೆದು ಬಂದ ದಾರಿ

ಹೀಗೆ ಹೇಳುತ್ತಾ ಹೋದರೆ ಗಾಂಧೀಜಿಯವರ ಇರುವ, ಮೀರುವ, ಮರಳುವ ಮನೋಧರ್ಮ ಅರ್ಥವಾಗುತ್ತಾ ಹೋಗುತ್ತದೆ. ಇರುವ ಮೂಲವನ್ನು ಕಡಿದುಕೊಳ್ಳದೆ ಮೀರುವ ‘ಗಾಂಧಿಗುಣ’ವು ಅವರದೇ ಒಂದು ವಿಶಿಷ್ಟ ಮಾದರಿ. ಇದನ್ನು ಕೆಲವೊಮ್ಮೆ ವಿಘಟಿತ ಅಥವಾ ದ್ವಂದ್ವಮೂಲ ವ್ಯಕ್ತಿತ್ವವೆಂದು ತೀರ್ಮಾನಿಸುವ ಸಾಧ್ಯತೆಯೂ ಉಂಟು. ಆದರೆ ನನಗನ್ನಿಸುವುದು ಹೀಗೆ: ಯಾವುದೇ ಕ್ರಿಯಾಶೀಲ ವ್ಯಕ್ತಿತ್ವವು ರೂಪುಗೊಳ್ಳುವುದು ಒಂದು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಮತ್ತು ಆ ಸಂದರ್ಭವು ಒದಗಿಸುವ ಸವಾಲುಗಳೊಂದಿಗೆ ನಡೆಸುವ ಮುಖಾಮುಖಿ ಹಾಗೂ ಅನುಸಂಧಾನದಲ್ಲಿ. ಗಾಂಧೀಜಿಯವರ ಸ್ವಾಭಿಮಾನ ಕೆರಳಿದ್ದು ಸ್ವದೇಶಿ ಮೂಲ ಭಾವ ಸ್ಫೋಟದಲ್ಲಿ; ವೈಚಾರಿಕ ವಿಧಾನ ರೂಪುಗೊಂಡಿದ್ದು ಬ್ರಿಟಿಷ್ ವಸಾಹತುಶಾಹಿಯ ಸವಾಲುಗಳ ಮುಖಾಮುಖಿಯಲ್ಲಿ. ಆದ್ದರಿಂದ, ಗಾಂಧೀಜಿಯವರ ಚಿಂತನೆಗಳಲ್ಲಿ ಸಾಮಾಜಿಕ, ಆರ್ಥಿಕ ಸಂಗತಿಗಳಿಗೆ ಮುಖ್ಯ ಸ್ಥಾನವೊಂದು ಇದ್ದರೂ ಕೇಂದ್ರ ಪ್ರಜ್ಞೆಯಲ್ಲಿ ಇದ್ದದ್ದು ಬ್ರಿಟಿಷ್ ವಸಾಹತುಶಾಹಿಗೆ ಪ್ರತಿರೋಧ. ಅವರ ಆರ್ಥಿಕ ಚಿಂತನೆಗಳಲ್ಲಿ ಕಾಣುವ ದೇಶೀಯ ನೆಲೆಗಳಿಗೂ  ಬ್ರಿಟಿಷ್ ವಸಾಹತುಶಾಹಿ ವಿರೋಧಿ ಕ್ರಿಯೆಗೂ ಸಂಬಂಧವಿದೆ. 

ಗಾಂಧೀಜಿಯವರ ಮುಖ್ಯ ಚಿಂತನೆಗಳು ಬೆಳೆಯುವುದು ವಸಾಹತುಶಾಹಿಗೆ ಪರ್ಯಾಯವಾಗುವ ಪ್ರಜ್ಞೆಯ ಮೂಲಕ ಎಂಬುದನ್ನಿಲ್ಲಿ ಗಮನಿಸಬೇಕು. ಗಾಂಧೀಜಿಯವರ ಕಾಲದಲ್ಲಿ ಅಥವಾ ಬ್ರಿಟಿಷ್ ಬಂಡಾಯದ ಸಂದರ್ಭದಲ್ಲಿ ಮೂರು ಮುಖ್ಯ ಮಾದರಿಗಳು ಕಂಡು ಬರುತ್ತವೆ.
1. ಗಾಂಧೀಜಿ ನೇತೃತ್ವದ ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಚಳವಳಿ 
2. ಅಂಬೇಡ್ಕರ್ ನೇತೃತ್ವದ ಸಾಮಾಜಿಕ ಚಳವಳಿ 
3.ಕಮ್ಯುನಿಷ್ಟರ ಸಮತಾವಾದಿ ಚಳವಳಿ.

ಈ ಮೂರು ಮಾದರಿಗಳಲ್ಲಿ ಅವರವರ ಆದ್ಯತೆಗಳು ಸ್ಪಷ್ಟವಾಗಿವೆ. ಅಷ್ಟೇ ಅಲ್ಲಿ ಈ ಆದ್ಯತೆಗಳು ಆಳದಲ್ಲಿ ಪರಸ್ಪರ ಪೂರಕವಾಗಿವೆ. ಸ್ವಾತಂತ್ರ್ಯೋತ್ತರ ಭಾರತದ ಆಶೋತ್ತರಗಳ ದಿಕ್ಸೂಚಿಯಾಗಿವೆ. ಇಲ್ಲಿ ಆದ್ಯತೆಗಳಷ್ಟೇ ಅಂತರವನ್ನು ಸೂಚಿಸುತ್ತದೆ. ಆಶಯಗಳು ಅಂತರವನ್ನು ಸೂಚಿಸುವುದಿಲ್ಲ. ಗಾಂಧೀಜಿಗೆ ಸಾಮಾಜಿಕ ಸುಧಾರಣೆಯೂ ಬೇಕು, ಅಂಬೇಡ್ಕರ್ ಆವರಿಗೆ ಸಾಮಾಜಿಕ ಕ್ರಾಂತಿಯ ಮೂಲಕ ದೇಶೀಯ ಶೋಷಣೆ ದೂರವಾದ ಸ್ವಾತಂತ್ರ್ಯ ಬೇಕು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಮೂರು ಮಾದರಿಗಳೂ ‘ಸ್ವಾತಂತ್ರ್ಯ ಚಳವಳಿ’ಗಳೇ ಆಗಿವೆ. ಇವು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ರೂಪುಗೊಂಡ ಹೋರಾಟಗಳಾಗಿವೆ.

ಹೀಗೆ ನಾವು ನಿರ್ದಿಷ್ಟ ಚಾರಿತ್ರಿಕ ಸಂದರ್ಭದ ಹೋರಾಟಗಳ ಆದ್ಯತೆ ಮತ್ತು ಆಶಯಗಳನ್ನು ಅರ್ಥ ಮಾಡಿಕೊಳ್ಳದೆ ನೇತಾರರನ್ನು ನಾಯಕ ಮತ್ತ ಖಳನಾಯಕ ಎಂದು ವಿಂಗಡಿಸಬಾರದು. ಅಂಥ ಪ್ರವೃತ್ತಿಯೊಂದು ಇಂದು ಬೆಳೆಯುತ್ತಿರುವುದು ಅನಾರೋಗ್ಯಕರ ಮನೋದೃಷ್ಟಿಯ ದ್ಯೋತಕವಾಗಿದೆ. ವಿಶೇಷವಾಗಿ ಗಾಂಧಿ ಮತ್ತು ಅಂಬೇಡ್ಕರ್ ಅವರ ವಿಷಯದಲ್ಲಿ ಈ ವಿಪರ್ಯಾಸ ಕಂಡು ಬರುತ್ತಿದೆ. ನನ್ನ ದೃಷ್ಟಿಯಲ್ಲಿ ಈ ಇಬ್ಬರೂ ಚಾರಿತ್ರಿಕ ಮಹತ್ವದ ಹೋರಾಟಗಾರರು. ಗಾಂಧೀಜಿಯವರ ಹೋರಾಟದಲ್ಲಿ ಸಂತಗುಣ ಮುಖ್ಯವಾದರೆ, ಅಂಬೇಡ್ಕರ್ ಹೋರಾಟದಲ್ಲಿ ಸ್ಫೋಟಗುಣ ಮುಖ್ಯವಾಗಿದೆ. ನನಗೆ ಗಾಂಧಿ ಮತ್ತು ಅಂಬೇಡ್ಕರ್ ಅವರ ಛಾಯಾಚಿತ್ರಗಳನ್ನು ನೋಡಿದಾಗ ಚರಿತ್ರೆಯ
ವ್ಯಾಖ್ಯಾನದ ಹೊಳಹೊಂದು ಮೂಡಿ ಬರುತ್ತದೆ. ಗಾಂಧೀಜಿ ಅರೆಬೆತ್ತಲೆಯಾಗಿದ್ದಾರೆ. ಅಂಬೇಡ್ಕರ್ ಪೂರ್ಣ ಸೂಟುಧಾರಿಯಾಗಿದ್ದಾರೆ. ಮೊದಲು ಪೂರ್ಣ ಸೂಟುಧಾರಿಯಾಗಿದ್ದ ಗಾಂಧೀಜಿ ಅರೆಬೆತ್ತಲೆಯಾದದ್ದು, ಅರೆಬೆತ್ತಲೆ ವಲಯದಲ್ಲಿ ಬೆಳೆದ ಅಂಬೇಡ್ಕರ್ ಅನಂತರ ಪೂರ್ಣ ಸೂಟುಧಾರಿಯಾದದ್ದು, ನಮ್ಮ ಚರಿತ್ರೆಯ ಚಲನಶೀಲತೆಯ ಎರಡು ಮುಖ್ಯ ಮಾದರಿಗಳೆಂದು ನಾನು ತಿಳಿದಿದ್ದೇನೆ.

ಪೂರ್ಣ ಸೂಟುಧಾರಿಯಾಗಿದ್ದ ಗಾಂಧೀಜಿಯವರಿಗೆ ಬಟ್ಟೆಯಿಲ್ಲದ ದೀನ ದಲಿತರನ್ನು ಕಂಡಾಗ ಕಾಡಿದ್ದು ಪಾಪಪ್ರಜ್ಞೆ ಅವರು ಮೇಲರಿಮೆಯ ಪೊರೆ ಕಳಚುವಂತೆ ಸೂಟನ್ನು ಕಿತ್ತೆಸೆದರು. ಆದರೆ ಅಂಬೇಡ್ಕರ್ ಅನುಭವಿಸಿದ್ದು ಅರೆಬೆತ್ತಲೆಯ ಸಾಮಾಜಿಕ ಸಂಕಟ. ಬೆಳೆದದ್ದು ಕಿತ್ತು ಎನ್ನುವ ಕೀಳರಿಮೆಯ ಕತ್ತಲಲೋಕ. ಆದ್ದರಿಂದ ಕೀಳರಿಮೆಯನ್ನು ಕಿತ್ತೆಸೆದು, ಅರೆಬೆತ್ತಲೆಯನ್ನು ಬದಿಗೊತ್ತಿ ಸೂಟುಧಾರಿಯಾಗುವುದು ಸ್ವಾಭಿಮಾನದ ಸಂಕೇತ; ಜಾಗೃತ ಪ್ರಜ್ಞೆಯ ಒಂದು ಮಾದರಿ. ಇರುವುದನ್ನು ಬಿಟ್ಟ ಗಾಂಧೀಜಿಯ ಪಾಪಪ್ರಜ್ಞೆ ಮತ್ತು ಇಲ್ಲದುದನ್ನು ಪಡೆದ ಅಂಬೇಡ್ಕರ್ ಅವರ ಜಾಗೃತ ಪ್ರಜ್ಞೆ-ಎರಡೂ ನಮ್ಮ ಚಾರಿತ್ರಿಕ ಸಂದರ್ಭದ ಮುಖ್ಯ ಮಾದರಿಗಳು; ಸಾರ್ಥಕ ಸಂಕೇತಗಳು. ಪಾಪಪ್ರಜ್ಞೆಯಿಂದ ನರಳಿ ಕೆಳಗಿಳಿಯುವ ಗಾಂಧಿ ಸಾರ್ಥಕತೆ, ಜಾಗೃತ ಪ್ರಜ್ಞೆಯಿಂದ ಕೆರಳಿ ಮೇಲೇರುವ ಅಂಬೇಡ್ಕರ್ ಪ್ರತಿರೋಧಾತ್ಮಕತೆ- ಈ ಎರಡೂ ಕ್ರಿಯೆಗಳು ನಮ್ಮ ಸಾಮಾಜಿಕ ವಾಸ್ತವದ ಕಟು ಸತ್ಯಗಳ ದರ್ಶನ ಮೂಡಿಸುತ್ತದೆ. ಇಲ್ಲಿ ಕೆಳಗಿಳಿದವರು ಸಣ್ಣವರಾಗಲಿಲ್ಲ. ಮೇಲೇರಿದವರು ಹುಸಿ ಪ್ರತಿಷ್ಟೆಯವರಾಗಲಿಲ್ಲ. ನಮ್ಮ ಸಾಮಾಜಿಕ ವೈರುಧ್ಯಗಳಲ್ಲಿ ಹುಟ್ಟಿ ಬೆಳೆದ ಈ ಇಬ್ಬರಲ್ಲಿ ಗಾಂಧೀಜಿ ಆತ್ಮನಿರೀಕ್ಷೆಗೆ ಮತ್ತು
ಅಂಬೇಡ್ಕರ್ ಆತ್ಮಗೌರವಕ್ಕೆ ಪ್ರತೀಕವಾದರು. ಈ ಉಡುಪಿನ ಉದಾಹರಣೆಯನ್ನು ಸಾಂಕೇತಿಕ ಅರ್ಥದಲ್ಲಿ ಸ್ವೀಕರಿಸಬೇಕೇ ಹೊರತು ಅದರಾಚೆಗಿನ ಚರ್ಚೆಗಳಿಗಲ್ಲ ಎಂದು ಹೇಳಬಯಸುತ್ತೇನೆ. 

ಒಂದು ಸಣ್ಣ ಸಂಗತಿಯೂ ಹೇಗೆ ಸಾಮಾಜಿಕ ಚರಿತ್ರೆಯ ಒಳಸುಳಿಗಳ ಭಾಗವಾಗಲು ಸಾಧ್ಯವೆಂದು ವಿವರಿಸಲು ಈ ಉಡುಪಿನ ವ್ಯಾಖ್ಯಾನ ಮಾಡಿದ್ದೇನೆ. ಇದು ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಅರ್ಥ ಮಾಡಿಕೊಳ್ಳುವ ಒಂದು ಒತ್ತಾಸೆಯಾಗಬಲ್ಲದು. ಗಾಂಧೀಜಿಯವರ ಸತ್ಯಾಗ್ರಹ ಪರಿಕಲ್ಪನೆಯು ಪ್ರತಿರೋಧದ ಒಂದು ಮಾದರಿಯಾಗಿದ್ದರೂ ಗಾಂಧೀಜಿ ದೇವರು, ಧರ್ಮಗಳಲ್ಲಿ ನಂಬಿಕೆಯುಳ್ಳವರು. ಜಡವಲ್ಲದ ಹಿಂದೂ ಧರ್ಮ ನಿಷ್ಠರು. ಹಿಂದೂ ಧರ್ಮದಲ್ಲಿರುವ ಅಸ್ಪಶ್ಯತೆಯನ್ನು ಖಂಡತುಂಡವಾಗಿ ವಿರೋಧಿಸಿದವರು. ಆದರೆ ತಮ್ಮದೇ ಮಾದರಿಯ ಹಿಂದೂ ಮಾದರಿಯನ್ನು ಪ್ರತಿಪಾದಿಸುತ್ತಾ ಬಂದು ಹಿಂದೂಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದವರು.

ಇವರು ಯಾವತ್ತೂ ತಮ್ಮ ಹೋರಾಟಕ್ಕೆ ಜಾತಿ ಮತ್ತು ಧರ್ಮದ ಸೋಂಕು ತಗುಲಿಸಲಿಲ್ಲ. ಇರುವ, ಮೀರುವ, ಮರಳುವ ಅನನ್ಯ ಮಾದರಿ
ಆತ್ಮನಿರೀಕ್ಷೆಯ ಸಾಧನವಾಗಿಯೂ ಬಳಕೆಯಾಗಿದೆ; ತಮ್ಮನ್ನು ತಾವೇ ದಂಡಿಸಿಕೊಳ್ಳುತ್ತ, ಪ್ರತಿರೋಧ ಒಡ್ಡುವ ವಿನೂತನ ವಿಧಾನಕ್ಕೆ ಗಾಂಧಿಗೆ ಗಾಂಧಿಯೇ ಸಾಟಿ. ಉಪವಾಸ ವ್ರತದ ಪರಂಪರೆಯೊಂದು ನಮ್ಮಲ್ಲಿ ಇದೆಯಾದರೂ ಅದು ‘ವ್ರತ’ವೇ ಹೊರತು ‘ಸತ್ಯಾಗ್ರಹ’ ಅಲ್ಲ. ಆದ್ದರಿಂದ ‘ಉಪವಾಸ ಸತ್ಯಾಗ್ರಹ’ವೆನ್ನುವುದು ಗಾಂಧೀಜಿಯವರ ಶೋಧ. 

ಇದು ಮನೋಶುದ್ಧಿಯ ಒಂದು ಕ್ರಮವೆಂದು ಕೆಲವೊಮ್ಮೆ ಕರೆದುಕೊಂಡರೂ ಎದುರಾಳಿಯ ಮನೋಪರಿವರ್ತನೆಗಾಗಿ ನಡೆಸುವ ಸ್ವಯಂ ದಂಡನೆಯ ಕ್ರಮವಾಗಿ ಮುಖ್ಯವಾಗುತ್ತದೆ. ಸತ್ಯಾಗ್ರಹದ ಮೂಲಕ ವಿರೋಧಿ ಪಾಳಯದಲ್ಲಿ ಪಾಪಪ್ರಜ್ಞೆಯನ್ನು ಮೂಡಿಸುವ ಒತ್ತಡವಾಗುತ್ತದೆ. ಪಾಪಪ್ರಜ್ಞೆ ಮತ್ತು ಜಾಗೃತಪ್ರಜ್ಞೆಗಳ ನಡುವೆ ಅರ್ಥಪೂರ್ಣ ಸೇತುವಾಗುವುದು ಗಾಂಧೀಜಿಯವರ ವಿಶಿಷ್ಟ ವಿಧಾನ.

ಇನ್ನೊಂದು ಮುಖ್ಯಮಾದರಿಯನ್ನು ಇಲ್ಲಿ ಹೇಳಬೇಕು. ಗಾಂಧೀಜಿ ದೇವರು, ಧರ್ಮಗಳಲ್ಲಿ ನಂಬಿಕೆಯುಳ್ಳವರು. ಜಡವಲ್ಲದ ಹಿಂದೂ ಧರ್ಮ ನಿಷ್ಠರು. ಹಿಂದೂ ಧರ್ಮದಲ್ಲಿರುವ ಅಸ್ಪಶ್ಯತೆಯನ್ನು ಖಂಡತುಂಡವಾಗಿ ವಿರೋಧಿಸಿದವರು. ಆದರೆ ತಮ್ಮದೇ ಮಾದರಿಯ ಹಿಂದೂ  ಮಾದರಿಯನ್ನು ಪ್ರತಿಪಾದಿಸುತ್ತಾ ಬಂದು ಹಿಂದೂಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದವರು. ಇವರು ಯಾವತ್ತೂ ತಮ್ಮ ಹೋರಾಟಕ್ಕೆ ಜಾತಿ ಮತ್ತು ಧರ್ಮದ ಸೋಂಕು ತಗುಲಿಸಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಬಳಸಿದ್ದು ಉಪ್ಪು, ಚರಕ ಮತ್ತು ಖಾದಿ ಎಂಬ ಸಂಕೇತಗಳು. ಉಪ್ಪು, ಚರಕ, ಖಾದಿ ಯಾವ ಜಾತಿಗೂ ಸೇರಿಲ್ಲ. ಯಾವ ಧರ್ಮಕ್ಕೂ ಸೇರಿಲ್ಲ. ಇವು ನಿಜಾರ್ಥದಲ್ಲಿ ಜಾತ್ಯತೀತ, ಧರ್ಮಾತೀತ. ಈ ಸಂಕೇತಗಳ ಮೂಲಕ ಹೋರಾಟದ ಹೊಸ ಮಾದರಿಯನ್ನು ರೂಪಿಸಿದ ಗಾಂಧೀಜಿ ಸತ್ಯನಿಷ್ಠ ಜಾತ್ಯತೀತ ಮಾದರಿ. ಧರ್ಮದೊಳಗಿದ್ದು ಧರ್ಮವನ್ನು ಮೀರಿದ ಸ್ವಾತಂತ್ರ್ಯಹೋರಾಟಗಾರ. ಇದೇ ಗಾಂಧೀಜಿಯವರ ವ್ಯಕ್ತಿತ್ವದ ವಿಶಿಷ್ಟ ವಿನ್ಯಾಸ. 
 

click me!