Latest Videos

ಎಸ್‌ಎಸ್‌ಎಲ್‌ಸಿ ನಕಲಿ ಅಂಕಪಟ್ಟಿ ದಂಧೆ: ಓದದಿದ್ರೂ ಶೇ.99 ರಷ್ಟು ಅಂಕ ಸಿಗುತ್ತೆ..!

By Kannadaprabha NewsFirst Published May 22, 2024, 11:24 AM IST
Highlights

ಕೊಪ್ಪಳ ನಗರ ಠಾಣೆಯಲ್ಲಿ ನ್ಯಾಯಾಧೀಶರ ವರದಿಯನ್ನಾಧರಿಸಿ, ಓದಲು ಬರೆಯಲು ಬಾರದಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ ಶೇ. 99.52 ಅಂಕ ಪಡೆದ ಪ್ರಕರಣ ದಾಖಲಾಗಿದ್ದು, ಇದರ ಜಾಡು ಹಿಡಿದು, ಪರಿಶೀಲಿಸಿದಾಗ ಅಘಾತಕಾರಿ ಅಂಶಗಳು ಪತ್ತೆಯಾಗುತ್ತಿವೆ. ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಸಾಗಿದೆ ಎಂಬ ಆಘಾತಕಾರಿ ಅಂಶಗಳೂ ಬಯಲಾಗುತ್ತವೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.22):  ವರ್ಷ ಪೂರ್ತಿ ಕಷ್ಟಪಟ್ಟು ಓದಿ, ಟ್ಯೂಷನ್‌ಗೆ ಹೋಗಿ, ಶಾಲೆಯ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ಬರೆದರೂ ಎಸ್ಸೆಸ್ಸೆಲ್ಸಿಯಲ್ಲಿ ಶೇ.80- 90 ಅಂಕ ಪಡೆಯಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ನಿರಂತರ ಅಭ್ಯಾಸ, ಮಾರ್ಗದರ್ಶನದ ಅಗತ್ಯವಿದೆ. ಆದರೆ ಈ ಪರೀಕ್ಷಾ ಕೇಂದ್ರಗಳಲ್ಲಿ ಕೇವಲ ಪರೀಕ್ಷೆಗೆ ಹಾಜರಾದರೆ ಸಾಕು ಶೇ.95 ರಿಂದ ಶೇ.99 ರಷ್ಟು ಅಂಕಗಳನ್ನು ಸಲೀಸಾಗಿ ಪಡೆಯಬಹುದು, ಅದೂ ಓದದೇ, ಕಷ್ಟಪಡದೇ. ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ತೇರ್ಗಡೆ ಆಗಿದ್ದಾರೆ.

ಕೊಪ್ಪಳ ನಗರ ಠಾಣೆಯಲ್ಲಿ ನ್ಯಾಯಾಧೀಶರ ವರದಿಯನ್ನಾಧರಿಸಿ, ಓದಲು ಬರೆಯಲು ಬಾರದಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ ಶೇ. 99.52 ಅಂಕ ಪಡೆದ ಪ್ರಕರಣ ದಾಖಲಾಗಿದ್ದು, ಇದರ ಜಾಡು ಹಿಡಿದು, ಪರಿಶೀಲಿಸಿದಾಗ ಅಘಾತಕಾರಿ ಅಂಶಗಳು ಪತ್ತೆಯಾಗುತ್ತಿವೆ. ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಸಾಗಿದೆ ಎಂಬ ಆಘಾತಕಾರಿ ಅಂಶಗಳೂ ಬಯಲಾಗುತ್ತವೆ.

ಎಸ್ಸೆಸ್ಸೆಲ್ಸಿಯಲ್ಲಿ 623 ಅಂಕ ಪಡೆದು ಸರ್ಕಾರಿ ನೌಕರಿಗೆ ಆಯ್ಕೆಯಾದವನಿಗೆ ಓದು, ಬರಹವೇ ಬರೊಲ್ಲ!

ನೂರಾರು ವಿದ್ಯಾರ್ಥಿಗಳು ಪಾಸ್‌:

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಪ್ರಭು ಲಕ್ಷ್ಮಿಕಾಂತ ಲೋಕರೆ ಶೇ.99.58 ರಷ್ಟು ಅಂಕ ಪಡೆದ ವಿಚಾರ ಬಯಲಿಗೆ ಬಂದಿತ್ತು. ಇದೀಗ ಇಲ್ಲಿ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದು ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ಅಂಶವೂ ಬಹಿರಂಗವಾಗಿದೆ. ದೆಹಲಿ ಎಜುಕೇಶನ್‌ ಬೋರ್ಡ್‌ ಹೆಸರಿನಲ್ಲಿ ಅಂಕಪಟ್ಟಿ ನೀಡಲಾಗುತ್ತದೆ. ಪ್ರಭು ಲಕ್ಷ್ಮಿಕಾಂತ ಲೋಕರೆಗೂ ಇದೇ ಬೋರ್ಡ್ ಹೆಸರಿನಲ್ಲಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ನೀಡಲಾಗಿದೆ.
ಕನ್ನಡಪ್ರಭದೊಂದಿಗೆ ಮಾತನಾಡಿದ ಪ್ರಭು, ತಪ್ಪು ಮಾಡಿದ್ದೇನೆ ಎನ್ನುವ ಆತಂಕವೂ ಇಲ್ಲದಂತೆ ಎಲ್ಲ ಹೇಳುತ್ತಾನೆ.

ನ್ಯಾಯಾಧೀಶರು ಯಾಕೆ ನನ್ನ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೋ ಗೊತ್ತಿಲ್ಲ. ಆದರೆ, ನನ್ನಂತೆಯೇ ಅನೇಕರು ನನ್ನ ಜೊತೆಯಲ್ಲಿಯೇ ಪರೀಕ್ಷೆ ಬರೆದಿದ್ದಾರೆ ಮತ್ತು ಅಂಕಪಟ್ಟಿ ಪಡೆದು, ನ್ಯಾಯಾಲಯಗಳಲ್ಲಿ ಜವಾನರಾಗಿ ನೇಮಕವಾಗಿದ್ದಾರೆ. ಈಗ ನಾನು ಸಹ ನೇಮಕವಾಗಿದ್ದೇನೆ. ಅದರಲ್ಲಿ ತಪ್ಪೇನು ಎನ್ನುತ್ತಾನೆ.

ಓದಲು ಬರುತ್ತದೆ:

ನನಗೆ ಓದಲು ಬರುತ್ತದೆ ಮತ್ತು ಬರೆಯಲು ಬರುತ್ತದೆ. ನಾನು ಪರೀಕ್ಷೆ ಬರೆದೇ ಪಾಸಾಗಿದ್ದೇನೆ. 2018ನೇ ಸಾಲಿನಲ್ಲಿಯೇ ಪಾಸಾಗಿದ್ದೇನೆ ಎನ್ನುತ್ತಾನೆ. ಈತನಷ್ಟೇ ಅಲ್ಲ, ಈ ಹಿಂದೆಯೂ ರಾಜ್ಯದ ನಾನಾ ಕೋರ್ಟ್‌ಗಳಲ್ಲಿ, ಅಷ್ಟೇ ಯಾಕೆ, ರಾಜ್ಯದ ಹೈಕೋರ್ಟ್‌ನಲ್ಲಿಯೂ ನೇಮಕವಾಗಿರುವ ಜವಾನರು ಇದೇ ಬೋರ್ಡ್‌ನಲ್ಲಿ ಅಂಕ ಪಟ್ಟಿ ಪಡೆದಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ಸಮಗ್ರ ತನಿಖೆಯಾದಾಗಲೇ ಸತ್ಯ ಬೆಳಕಿಗೆ

ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಮಗ್ರ ತನಿಖೆ ನಡೆಸಬೇಕು. ಅಂದಾಗಲೇ ಸತ್ಯ ಬೆಳಕಿಗೆ ಬರುತ್ತದೆ. ಬನಹಟ್ಟಿ ಸೇರಿದಂತೆ ರಾಜ್ಯಾದ್ಯಂತ ಈ ರೀತಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಕೇಂದ್ರಗಳು ಇವೆ ಎನ್ನಲಾಗುತ್ತದೆ. ಎಲ್ಲ ಕಡೆ ದೆಹಲಿ ಬೋರ್ಡ್ ಆಫ್ ಎಜುಕೇಶನ್ ಎನ್ನುವ ಹೆಸರಿನಲ್ಲಿಯೇ ಅಂಕಪಟ್ಟಿ ನೀಡಲಾಗುತ್ತದೆ.

ಎಸ್‌ಎಸ್‌ಎಲ್‌ಸಿ: ಮುಂಜಾನೆ ಪತ್ರಿಕೆ ವಿತರಣೆ ಮಾಡಿ ಕರ್ನಾಟಕಕ್ಕೆ 7ನೇ ಸ್ಥಾನ ಪಡೆದ ಶಂಕರ್‌

ಹಿಂದೊಂದು ಪ್ರಕರಣ

ಕೊಪ್ಪಳ ನಗರದ ನ್ಯಾಯಾಲಯದಲ್ಲಿ ಈ ಹಿಂದೆಯೂ ಇಂಥದ್ದೆ ಪ್ರಕರಣ ನಡೆದಿದೆ. ಎಸ್‌ಡಿಎ ಹುದ್ದೆಗೆ ಕರೆದಿದ್ದ ಅರ್ಜಿಗಳಲ್ಲಿ ಪಿಯುಸಿ ಅಂಕಪಟ್ಟಿಯಲ್ಲಿ ಶೇ. 99ರಷ್ಟು ಅಂಕ ಪಡೆದಿದ್ದ ವಿದ್ಯಾರ್ಥಿಗಳ ಮೇಲೆಯೂ ಅನುಮಾನ ಬಂದಿತ್ತು. ಆಗ, ಸರ್ಕಾರಕ್ಕೆ ಪತ್ರ ಬರೆದು, ದೆಹಲಿಯಲ್ಲಿ ಇರುವ ಪಿಯುಸಿ ಬೋರ್ಡ್ ವಿಳಾಸ ಪತ್ತೆಗೆ ಸೂಚಿಸಲಾಗಿತ್ತು. ಆಗ ವಿಳಾಸವೇ ಪತ್ತೆಯಾಗಲೇ ಇಲ್ಲ, ಅದು ಬೋಗಸ್ ಎಂದು ಗೊತ್ತಾದಾಗ ಆಯ್ಕೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕರೆಯಿಸಿ, ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಆದರೆ, ಇದೆಲ್ಲವನ್ನು ಅತ್ಯಂತ ಗೌಪ್ಯವಾಗಿಯೇ ಮಾಡಿ, ಕೈ ಚೆಲ್ಲಲಾಯಿತು.

ನಾನು ಪರೀಕ್ಷೆ ಬರೆದು ಪಾಸಾಗಿದ್ದೇನೆ, ನ್ಯಾಯಾಧೀಶರು ಯಾಕೆ ಕೇಸ್ ಮಾಡಿದ್ದಾರೋ ನನಗೆ ಗೊತ್ತಿಲ್ಲ. ನಾನಷ್ಟೇ ಅಲ್ಲ, ಅನೇಕರು ಬನಹಟ್ಟಿ ಪರೀಕ್ಷಾ ಕೇಂದ್ರದ ಮೂಲಕವೇ ತೇರ್ಗಡೆಯಾಗಿದ್ದಾರೆ ಎಂದು ಪ್ರಭು ಲಕ್ಷ್ಮಿಕಾಂತ ಲೋಕರೆ ತಿಳಿಸಿದ್ದಾರೆ. 

click me!