ರಾಜ್ಯದಲ್ಲಿ ಈ ನಾಲ್ಕು ತರಗತಿಗಳು ಆರಂಭ?

By Kannadaprabha NewsFirst Published Feb 3, 2021, 8:13 AM IST
Highlights

ಈಗಾಗಲೇ ಹಲವು ತರಗತಿಗಳು ಪೂರ್ಣ ಪ್ರಮಾಣದಲ್ಲಿಯೇ ಆರಂಭವಾಗಿವೆ. ಇದರ ಬೆನ್ನಲ್ಲೇ 5 ರಿಂದ 8ನೇ ರಗತಿಗೂ ತರಗತಿ ಬೋಧನೆ ಆರಂಭದ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. 

 ಬೆಂಗಳೂರು (ಫೆ.03):  ಫೆಬ್ರವರಿ 1ರ ಸೋಮವಾರದಿಂದ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಿರುವ ಶಿಕ್ಷಣ ಇಲಾಖೆಯು ಇದರ ಬೆನ್ನಲ್ಲೇ 5ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೂ ತರಗತಿ ಬೋಧನೆ ಆರಂಭಿಸಲು ಚಿಂತನೆ ನಡೆಸಿದೆ.

ಇದುವರೆಗೂ ಆರಂಭಿಸಲಾಗಿರುವ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್‌ನಿಂದ ಯಾವುದೇ ಸಮಸ್ಯೆಗಳು ಉಂಟಾಗಿಲ್ಲ. ರಾಜ್ಯದ ಎಲ್ಲಾ ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಈ ನಾಲ್ಕೂ ತರಗತಿಯ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ತರಗತಿ ಬೋಧನೆಯಲ್ಲಿ ನಿತ್ಯ ಪಾಲ್ಗೊಳ್ಳುತ್ತಿದ್ದಾರೆ. ಪೋಷಕರೂ ನಿರ್ಭೀತಿಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಬಹುತೇಕ ಈ ತರಗತಿಗಳಲ್ಲಿ ಹಾಜರಾತಿ ಶೇ.70ರಿಂದ 75ರಷ್ಟುತಲುಪಿದೆ. ಈ ಎಲ್ಲಾ ಕಾರಣಗಳಿಂದ ಶಿಕ್ಷಣ ಇಲಾಖೆ ಮೂರನೇ ಹಂತದಲ್ಲಿ 5ರಿಂದ 8ನೇ ತರಗತಿ ವರೆಗಿನ ಮಕ್ಕಳಿಗೂ ತರಗತಿ ಬೋಧನೆ ಆರಂಭಿಸಲು ಆಲೋಚಿಸಿದೆ.

ಸಹಾಯಕ ಪ್ರಾಧ್ಯಾಪಕರ ಆಯ್ಕೆಯ ಎನ್ಇಟಿ ಪರೀಕ್ಷೆಗೆ ದಿನಾಂಕ ಫಿಕ್ಸ್ ..

ಈ ಸಂಬಂಧ ಫೆಬ್ರವರಿ ಎರಡನೇ ವಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಪಡೆಯಲಿದ್ದಾರೆ. ಸಚಿವರು ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿದಾಗ ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರಿಂದ ಉಳಿದ ತರಗತಿಗಳನ್ನು ಆರಂಭಿಸುವ ಸಂಬಂಧ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಸಮಿತಿಯ ಮುಂದೆ ತಿಳಿಸಲಿದ್ದಾರೆ.

ಇದರ ನಡುವೆ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರಾದ ಎಂ.ಆರ್‌.ದೊರೆಸ್ವಾಮಿ ಅವರು ಕೂಡ 5ರಿಂದ 8ನೇ ತರಗತಿ ಆರಂಭಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಹಾಗಾಗಿ ಮುಂದಿನ ಹಂತದಲ್ಲಿ ಯಾವ್ಯಾವ ತರಗತಿಗಳನ್ನು ಆರಂಭಿಸಬಹುದು ಎಂದು ಸಲಹೆ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಫೆಬ್ರವರಿ ಮಾಸಾಂತ್ಯದ ವೇಳೆಗೆ 5ರಿಂದ 8ನೇ ತರಗತಿ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

click me!