ಕೈಗಾರಿಕೆ ತರಬೇತಿ ಶಿಕ್ಷಣ (ITI)ಅಭಿವೃದ್ಧಿಗೆ 5,000 ಕೋಟಿ ರೂ. ವೆಚ್ಚ: ಡಿಸಿಎಂ

By Suvarna News  |  First Published Mar 2, 2021, 3:11 PM IST

ಶಿಕ್ಷಣ ಕ್ಷೇತ್ರದಲ್ಲಿ ಕೈಗಾರಿಕೆ ತರಬೇತಿ ಶಿಕ್ಷಣ (ITI) ತನ್ನದೇ ಮೌಲ್ಯವನ್ನು ಹೊಂದಿದೆ. ಇದೀಗ ಇದರ ಅಭಿವೃದ್ಧಿಗೆ ಸರ್ಕಾರ 5,000 ಕೋಟಿ ರೂ. ವೆಚ್ಚ ಮಾಡುತ್ತಿದೆ.


ಬೆಂಗಳೂರು, (ಮಾ.02): ಕೈಗಾರಿಕೆ ತರಬೇತಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ರಾಜ್ಯದಲ್ಲಿನ  150 ಐಟಿಐ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು 5,000 ಕೋಟಿ ರೂ.ಗಳನ್ನು ರಾಜ್ಯ ಸರಕಾರ ವೆಚ್ಚ ಮಾಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು. 

ಬೆಂಗಳೂರಿನಲ್ಲಿ ಮಂಗಳವಾರ 'ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021' ಯನ್ನು ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು; "ಕೇವಲ ಅಕೆಡಿಮಿಕ್‌ ಶಿಕ್ಷಣಕ್ಕೆ ಒತ್ತು ಕೊಡುವುದಲ್ಲ, ಕೈಗಾರಿಕೆ ಹಾಗೂ ಪ್ರಗತಿಗೆ ಪೂರಕವಾದ ಕೈಗಾರಿಕಾ ತರಬೇತಿ ಶಿಕ್ಷಣಕ್ಕೆ ಸರಕಾರ ಮಹತ್ವ ಕೊಡುತ್ತಿದೆ. ಆ ಮೂಲಕ ಕೈಗಾರಿಕೆಗಳಿಗೆ ಕುಶಲತೆಯುಳ್ಳ ಮಾನವ ಸಂಪನ್ಮೂಲವನ್ನು ಸ್ಥಳೀಯವಾಗಿಯೇ ಒದಗಿಸುವುದು ಗುರಿಯಾಗಿದೆ. ಜ್ಞಾನ ಮತ್ತು ಕುಶಲತೆಯಷ್ಟೇ ನಮ್ಮ ಭವಿಷ್ಯವಾಗಿದೆ. ಈ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಇಷ್ಟು ಮೊತ್ತದಷ್ಟು ಹಣವನ್ನು ಐಟಿಐ ಸಂಸ್ಥೆಗಳಿಗಾಗಿ ವೆಚ್ಚ ಮಾಡಲಾಗುತ್ತಿದೆ" ಎಂದರು. 

Tap to resize

Latest Videos

ಒಂದೆಡೆ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021ನ್ನು ರೂಪಿಸಿರುವ ಬೆನ್ನಲ್ಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಗೆ ಬರುತ್ತಿದೆ. ಈ ಮೂಲಕ ಇಡೀ ಶಿಕ್ಷಣ ವ್ವವಸ್ಥೆಯೇ ಆಮೂಲಾಗ್ರವಾಗಿ ಬದಲಾವಣೆ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು. 

ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ: ಡಿಸಿಎಂ ಘೋಷಣೆ 

ಶೈಕ್ಷಣಿಕ ಸಂಸ್ಥೆಗಳಾಗಿಯೇ ಉಳಿದರೆ ಉಪಯೋಗವಿಲ್ಲ: 
ಹೊಸ ಐಟಿಐ ಸಂಸ್ಥೆಗಳ ಸ್ಥಾಪನೆಯೂ ಸೇರಿದಂತೆ ಈಗಾಗಲೇ ಇರುವ ಎಲ್ಲ ಐಟಿಐಗಳನ್ನು ಜಾಗತಿಕ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು. ಗುಣಮಟ್ಟದ ಬೋಧನೆ-ಕಲಿಕೆಯ ಉದ್ದೇಶವಿಟ್ಟುಕೊಂಡು ಈ ಪ್ರಯತ್ನ ಕೈಗೊಳ್ಳಲಾಗಿದೆ. ಭಾರತೀಯ ಕುಶಲತೆ ಮಾನದಂಡಕ್ಕೆ ತಕ್ಕಂತೆ ಇವೆಲ್ಲ ಮರುರೂಪ ಪಡೆಯಲಿವೆ. ಕೇವಲ ಶೈಕ್ಷಣಿಕ ಸಂಸ್ಥೆಗಳಾಗಿಯೇ ಇವು ಉಳಿದರೆ ಉದ್ಯಮ ಕ್ಷೇತ್ರಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದರು ಉಪ ಮುಖ್ಯಮಂತ್ರಿ. 

ಎಂಜಿನಿಯರಿಂಗ್‌ ಇಂಟರ್ನ್‌ನ್‌ಶಿಪ್‌ ಅವಧಿ ಹೆಚ್ಚಳ: 
ಉಳಿದಂತೆ ದಿಪ್ಲೊಮೋ ತರಗತಿಗಳ ಪಠ್ಯವನ್ನು ಆಮೂಲಾಗ್ರವಾಗಿ ಪರಿಷ್ಕರಣೆ ಮಾಡಲಾಗಿದೆ. ಈಗಾಗಲೇ ಮೊದಲ ವರ್ಷದ ವಿದ್ಯಾರ್ಥಿಗಳು ಪರಿಷ್ಕೃತ ಪಠ್ಯದಲ್ಲೇ ಕಲಿಯುತ್ತಿದ್ದಾರೆ. ಇನ್ನು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಇಂಟರ್ನ್‌ನ್‌ಶಿಪ್‌ ಅವಧಿ 9 ತಿಂಗಳಿನಿಂದ 1 ವರ್ಷಕ್ಕೆ ವಿಸ್ತರಿಸಿ, ಅದನ್ನು ಕೈಗಾರಿಕೆಗಳಲ್ಲಿಯೇ ಮುಗಿಸುವ ಯೋಜನೆ ರೂಪಿಸಲಾಗಿದೆ. ಇದು ಕಡ್ಡಾಯವೂ ಹೌದು.  ವಿದ್ಯಾರ್ಥಿಗಳ ಇಂಟ್ರನ್‌ಶಿಪ್‌ಗೆ ಉದ್ಯಮಿಗಳು ಮುಕ್ತವಾಗಿ ಅವಕಾಶ ನೀಡಬೇಕು ಎಂದು ಡಿಸಿಎಂ ಕೋರಿದರು. 

ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಡಾ.ಅಶ್ವತ್ಥನಾರಾಯಣ; ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಮೊದಲ ಸ್ಥಾನದಲ್ಲೂ ಇದೆ. ಈ ಹಿನ್ನೆಲೆಯಲ್ಲಿ ʼಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021ʼ ಯನ್ನು ರೂಪಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದರು. 

ರಾಜ್ಯದ್ದು ಶೇ.40ರಷ್ಟು ಪಾಲು: 
ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ರಾಜ್ಯದ ಪಾಲು ಶೇ.40ರಷ್ಟು, ಅಂದರೆ; ದೇಶದಲ್ಲಿ ವಾರ್ಷಿಕ 30 ಶತಕೋಟಿ ಡಾಲರ್‌ ವಹಿವಾಟು ನಡೆಯುತ್ತಿದೆ. ಅದನ್ನು 100 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಹೆಗ್ಗುರಿಯೂ ಸರಕಾರಕ್ಕಿದೆ ಎಂದ ಡಿಸಿಎಂ, ವೈಮಾಂತರಿಕ್ಷ ಮತ್ತು ರಕ್ಷಣೆ, ವಾಹನ-ವಾಹನ ಬಿಡಿಭಾಗಗಳು-ವಿದ್ಯುತ್ ಚಾಲಿತ ವಾಹನ, ಜೈವಿಕ ತಂತ್ರಜ್ಞಾನ, ಔಷಧ ಮತ್ತು ವೈದ್ಯಕೀಯ ಉಪಕರಣ-ಸಾಧನಗಳು, ಅರೆ ವಾಹಕಗಳು, ದೂರಸಂಪರ್ಕ, ಎಲೆಕ್ಟ್ರಾನಿಕ್‌ ವ್ಯವಸ್ಥೆ ಮತ್ತು ಅಭಿವೃದ್ಧಿ ನಿರ್ವಹಣೆ (ಇ.ಎಸ್.ಡಿ.ಎಂ.) ಹಾಗೂ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಇದಕ್ಕೆ ಪೂರಕವಾಗಿ ಹೊಸ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದರು. 

ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಕಲ್ಪನೆಯಂತೆ ಈ ನೀತಿ ರೂಪುಗೊಂಡಿದೆ. ನಮಗೆ ಅಗತ್ಯವಾದ ಎಲ್ಲ ವಸ್ತುಗಳನ್ನು ನಮ್ಮಲ್ಲಿಯೇ ಉತ್ಪಾದನೆ ಮಾಡಿಕೊಳ್ಳುವ ಕಾರ್ಯಕ್ರಮ ಇದು. ಎಲ್ಲ ಕ್ಷೇತ್ರದಲ್ಲಿ ಸ್ವಾವಲಂಭನೆ ಸಾಧಿಸಬೇಕು ಎಂಬುದು ಗುರಿಯಾಗಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!