8ನೇ ತರಗತಿ ಮಕ್ಕಳಿಗೆ ಈ ವರ್ಷವೂ ಸೈಕಲ್‌ ಇಲ್ಲ

By Kannadaprabha NewsFirst Published Aug 29, 2021, 7:58 AM IST
Highlights
  • ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷವೂ ಉಚಿತ ಬೈಸಿಕಲ್‌ ಭಾಗ್ಯವಿಲ್ಲ
  •  ಸತತ ಎರಡನೇ ವರ್ಷವೂ ಉಚಿತ ಸೈಕಲ್‌ ಯೋಜನೆ ಅನುಷ್ಠಾನ ಮಾಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ

ವರದಿ :  ಲಿಂಗರಾಜು ಕೋರಾ

 ಬೆಂಗಳೂರು (ಆ.29:  ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷವೂ ಉಚಿತ ಬೈಸಿಕಲ್‌ ಭಾಗ್ಯವಿಲ್ಲ. ಹಣಕಾಸು ಕೊರತೆ ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷವೂ ಉಚಿತ ಸೈಕಲ್‌ ಯೋಜನೆ ಅನುಷ್ಠಾನ ಮಾಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

"

ರಾಜ್ಯವನ್ನು 2020ರ ಮಾ ರ್ಚ್ನಿಂದ ಕಾಡುತ್ತಿರುವ ಕೋವಿಡ್‌ನಿಂದಾಗಿ ಮಕ್ಕಳ ಶಾಲಾ ಶಿಕ್ಷಣ ಮಾತ್ರವಲ್ಲದೆ, ಅವರಿಗಾಗಿ ಜಾರಿಯಲ್ಲಿದ್ದ ಕೆಲ ಯೋಜನೆಗಳಿಗೂ ಹಣಕಾಸು ಕೊರತೆಯಿಂದ ಕೊಕ್ಕೆ ಬಿದ್ದಿದೆ. 2006-07ರ ಬಿಜೆಪಿ- ಜೆಡಿಎಸ್‌ ಮೈತ್ರಿ ಸರ್ಕಾರದ ಕಾಲದಿಂದ ಜಾರಿಯಲ್ಲಿದ್ದ 8ನೇ ತರಗತಿ ಮಕ್ಕಳಿಗೆ ಉಚಿತ ಬೈಸಿಕಲ್‌ ಯೋಜನೆಯನ್ನು ಸರ್ಕಾರ 2020-21ನೇ ಸಾಲಿನಲ್ಲಿ ಸ್ಥಗಿತಗೊಳಿಸಿತ್ತು. ಅನುದಾನ ಕೊರತೆ ಇದ್ದರೂ ಮಕ್ಕಳಿಗೆ ಸೈಕಲ್‌ ಯೋಜನೆ ನಿಲ್ಲಬಾರದೆಂದು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆದರೂ ಯೋಜನೆ ಜಾರಿಯಾಗಲಿಲ್ಲ. ಇದೀಗ 2021-22ನೇ ಸಾಲಿನಲ್ಲೂ ಅನುದಾನ ಕೊರತೆ ಕಾರಣದಿಂದ ಮಕ್ಕಳಿಗೆ ಸೈಕಲ್‌ ನೀಡದಿರಲು ತೀರ್ಮಾನಿಸಲಾಗಿದೆ. ಪ್ರತೀ ವರ್ಷ ಸುಮಾರು 5 ಲಕ್ಷ ಮಕ್ಕಳಿಗೆ ಉಚಿತ ಸೈಕಲ್‌ ದೊರೆಯುತ್ತಿತ್ತು. ಯೋಜನೆ ಕೈಬಿಟ್ಟಿರುವುದರಿಂದ ಕಳೆದ ಎರಡು ವರ್ಷದಿಂದ ಸರ್ಕಾರಕ್ಕೆ ಸುಮಾರು 400 ಕೋಟಿ ರು.ನಷ್ಟುಹಣ ಉಳಿತಾಯವಾಗಿದೆ.

ಆಗಸ್ಟ್ 30ಕ್ಕೆ ಲಾಂಚ್ ಆಗಲಿದೆ ಹೊಸ 2021 ಟಿವಿಎಸ್ Apache RR310 ಬೈಕ್

ಸರ್ಕಾರ ಸತತ ಎರಡು ವರ್ಷ ಉಚಿತ ಬೈಸಿಕಲ್‌ ಯೋಜನೆ ಜಾರಿಗೆ ತರದಿರುವುದಕ್ಕೆ ಹಣಕಾಸು ಕೊರತೆ ಕಾರಣ ಎನ್ನಲಾಗುತ್ತಿದ್ದರೂ ಶಿಕ್ಷಣ ಇಲಾಖೆ ಮೂಲಗಳು ಹೇಳುವುದೇ ಬೇರೆ. ಉಚಿತ ಸೈಕಲ್‌ ಯೋಜನೆಗೆ ಪ್ರತಿ ವರ್ಷ ಸುಮಾರು 180ರಿಂದ 200 ಕೋಟಿ ರು. ವೆಚ್ಚವಾಗಲಿದೆ. ಸರ್ಕಾರಕ್ಕೆ ಇದು ದೊಡ್ಡ ಮೊತ್ತವೇನಲ್ಲ. ಆದರೆ, ಕೋವಿಡ್‌ನಿಂದ ಕಳೆದ ವರ್ಷ ಪೂರ್ತಿ ಶಾಲೆಗಳು ಆರಂಭವಾಗಲಿಲ್ಲ. ಮಕ್ಕಳು ತರಗತಿಗೆ ಬರಲಿಲ್ಲ. ಈ ವರ್ಷವೂ ಈಗಾಗಲೇ ಎಂಟು ತಿಂಗಳು ಕಳೆಯುತ್ತಾ ಬಂದಿದೆ. ಇನ್ನೂ ಯೋಜನೆಯ ಫಲಾನುಭವಿಗಳಾದ 8ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ಆರಂಭವಾಗಿಲ್ಲ. ಸೆಪ್ಟೆಂಬರ್‌ನಲ್ಲಿ ಆ ತರಗತಿ ಮಕ್ಕಳಿಗೂ ಶಾಲೆ ಆರಂಭವಾದರೂ ಸೈಕಲ್‌ ಖರೀದಿಗೆ ಟೆಂಡರ್‌ ಆಹ್ವಾನಿಸಿ ವಿತರಿಸುವ ವೇಳೆಗೆ ಶೈಕ್ಷಣಿಕ ಅವಧಿಯೇ ಮುಗಿದಿರುತ್ತದೆ. ಹಾಗಾಗಿ ಈ ವರ್ಷವೂ ಸೈಕಲ್‌ ಯೋಜನೆ ಕೈಬಿಡಲು ನಿರ್ಧರಿಸಲಾಗಿದೆ ಎನ್ನುತ್ತವೆ ಈ ಮೂಲಗಳು.

ತಡವಾಗಿದರೂ ಪರವಾಗಿಲ್ಲ ಸೈಕಲ್‌ ಕೊಡಿ: ಪೋಷಕರು

ಸರ್ಕಾರದ ಈ ಕ್ರಮಕ್ಕೆ ಪೋಷಕರು, ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. 8ನೇ ತರಗತಿ ಮಕ್ಕಳಿಗೆ ಸೈಕಲ್‌ ನೀಡಿದರೆ 10ನೇ ತರಗತಿವರೆಗೂ ಅನುಕೂಲವಾಗುತ್ತದೆ ಎಂಬ ದೂರದೃಷ್ಟಿಯಿಂದ ಹಿಂದಿನ ಸರ್ಕಾರ ಯೋಜನೆ ಜಾರಿಗೆ ತಂದಿತ್ತು. ಈಗಿನ ಸರ್ಕಾರ ಆ ವರ್ಷಕ್ಕೆ ಮಾತ್ರ ಸೀಮಿತವಾಗಿ ಯೋಚಿಸಿ ಹಣದ ಕೊರತೆ ಹೆಸರಲ್ಲಿ ಯೋಜನೆ ಸ್ಥಗಿತಗೊಳಿಸಿರುವುದು ಸರಿಯಲ್ಲ. ತಡವಾಗಿ ವಿತರಿಸಿದರೂ ಮುಂದಿನ ವರ್ಷಗಳಲ್ಲಿ ಸೈಕಲ್‌ನಲ್ಲಿ ಶಾಲೆಗೆ ಹೋಗಲು ಉಪಯೋಗಕ್ಕೆ ಬರುತ್ತದೆ. ಇಲ್ಲದಿದ್ದರೆ ಕಳೆದ ವರ್ಷ ಮತ್ತು ಈ ವರ್ಷ 8ನೇ ತರಗತಿಯಲ್ಲಿದ್ದ ಮಕ್ಕಳು ಈ ಯೋಜನೆಯಿಂದ ವಂಚಿತರಾಗುತ್ತಾರೆ. ಹಳ್ಳಿಗಾಡಿನಲ್ಲಿ 9 ಮತ್ತು 10ನೇ ತರಗತಿಗೆ ನಡೆದೇ ಬರಬೇಕಾಗುತ್ತದೆ. ಹಾಗಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಗತ್ಯ ಅನುದಾನ ನೀಡಿ ಮಕ್ಕಳಿಗೆ ಉಚಿತ ಸೈಕಲ್‌ ನೀಡಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.

ಈ ವರ್ಷವೂ ಯೋಜನೆ ಸ್ಥಗಿತ

ಕೋವಿಡ್‌ ಲಾಕ್‌ಡೌನ್‌ನಿಂದ ಉಂಟಾದ ಹಣಕಾಸು ಕೊರತೆಯಿಂದಾಗಿ ಸರ್ಕಾರ ಕಳೆದ ಸಾಲಿನಲ್ಲಿ 8ನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್‌ ಯೋಜನೆ ಸ್ಥಗಿತಗೊಳಿಸಿತ್ತು. ಈ ಬಾರಿಯೂ ಅನುದಾನ ಕೊರತೆ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

- ಎಸ್‌.ಆರ್‌. ಉಮಾಶಂಕರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

click me!