ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ: ಸುಧಾಕರ್‌

By Kannadaprabha NewsFirst Published Feb 7, 2021, 7:09 AM IST
Highlights

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇನ್ನು 3 ವೈದ್ಯರು| ಹಾಸಿಗೆ ಸಂಖ್ಯೆ 12ಕ್ಕೆ ಹೆಚ್ಚಳ| ಕಿಮ್ಸ್‌ ಘಟಿಕೋತ್ಸವದಲ್ಲಿ ಭಾಷಣ| ಕಿಮ್ಸ್‌ ಆಸ್ಪತ್ರೆಯ ಕೇಂದ್ರೀಕೃತ ಪ್ರಯೋಗಾಲಯ ಹಾಗೂ 13 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಶೇಖರಣಾ ಘಟಕ ಉದ್ಘಾಟಿಸಿದ ಸುಧಾಕರ್‌| 

ಬೆಂಗಳೂರು(ಫೆ.07):  ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ಶೇಕಡ 70ರಷ್ಟುಜನರಿಗೆ ಗುಣಮಟ್ಟದ ಸೇವೆ ಸಿಗುವಂತಾಗಲು ವೈದ್ಯ ಪದವಿ ಪಡೆದವರು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ. 

ನಗರದಲ್ಲಿ ಶನಿವಾರ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕಿಮ್ಸ್‌) ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿನ ಸರ್ಕಾರಿ, ಖಾಸಗಿ ಹಾಗೂ ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿದ ಎಲ್ಲ ಸ್ನಾತಕೋತ್ತರ ಪದವೀಧರರೂ ಗ್ರಾಮೀಣ ಭಾಗಗಳಿಗೆ ತೆರಳಿ, ಸೇವೆ ನೀಡುವಂತೆ ಸಲಹೆ ನೀಡಿದರು.

ಹಳ್ಳಿಗಾಡಿನಲ್ಲಿಯೂ ಉತ್ತಮ ವೈದ್ಯಕೀಯ ಸೇವೆ ನೀಡಬೇಕು ಎಂಬ ಉದ್ದೇಶದಿಂದ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಸದ್ಯ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬ ಅಲೋಪಥಿ ವೈದ್ಯರ ಸಂಖ್ಯೆಯನ್ನು ಎರಡಕ್ಕೆ ಏರಿಸಲಾಗುತ್ತದೆ. ಜೊತೆಗೆ ಒಬ್ಬ ಆಯುಷ್‌ ವೈದ್ಯರನ್ನೂ ನಿಯೋಜಿಸಲಾಗುತ್ತಿದೆ. ಕೇಂದ್ರಗಳಲ್ಲಿನ ಹಾಸಿಗೆಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಹೇಳಿದರು.

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ರಾಜ್ಯದಲ್ಲಿ ಕೊರೋನಾ ಕಾಣಿಸಿಕೊಂಡ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟುಬದಲಾವಣೆಗಳಾಗಿದ್ದು, ಆಸ್ಪತ್ರೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆಮ್ಲಜನಕ ಘಟಕಗಳ ಮಹತ್ವವನ್ನು ಅರಿತು, ಅವುಗಳನ್ನು ವಿವಿಧ ಆಸ್ಪತ್ರೆಗಳ ಆವರಣದಲ್ಲಿ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಒಕ್ಕಲಿಗರ ಸಂಘದ ಆಡಳಿತಾಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಮಾತನಾಡಿ, ಕಿಮ್ಸ್‌ನಲ್ಲಿ ಕೋವಿಡ್‌ ಚಿಕಿತ್ಸೆ ಪ್ರಾರಂಭಿಸಿದ ಬಳಿಕ ಸ್ನಾತಕೋತ್ತರ ವಿದ್ಯಾರ್ಥಿಗಳು ಎದೆಗುಂದದೆ ಸೋಂಕಿತರಿಗೆ ಸೇವೆ ನೀಡಿದ್ದಾರೆ. ಈ ಅವಧಿಯಲ್ಲಿ ಕೆಲವರು ಕೋವಿಡ್‌ಪೀಡಿತರಾದರೂ ಚೇತರಿಸಿಕೊಂಡ ಬಳಿಕ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆಂದು ಶ್ಲಾಘಿಸಿದರು. ಇದಕ್ಕೂ ಮೊದಲು ಕಿಮ್ಸ್‌ ಆಸ್ಪತ್ರೆಯ ಕೇಂದ್ರೀಕೃತ ಪ್ರಯೋಗಾಲಯ ಹಾಗೂ 13 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಶೇಖರಣಾ ಘಟಕವನ್ನು ಸುಧಾಕರ್‌ ಉದ್ಘಾಟಿಸಿದರು.

34 ಪುರಸ್ಕಾರ ಪ್ರದಾನ

ವಿವಿಧ ವಿಭಾಗಗಳಲ್ಲಿ 111 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 150 ವಿದ್ಯಾರ್ಥಿಗಳಿಗೆ ಪದವಿಯನ್ನು ಸಚಿವ ಡಾ.ಕೆ. ಸುಧಾಕರ್‌ ಪ್ರದಾನ ಮಾಡಿದರು. ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಇರಿಸಲಾಗಿದ್ದ 34 ಪುರಸ್ಕಾರಗಳಲ್ಲಿ ಲಿಖಿತ್‌ ಬಿ.ಕೆ. 6, ಅಮೂಲ್ಯಾ ಮೂರ್ತಿ ಹಾಗೂ ಮಿಥಾಲಿ ತಲಾ 3, ನೀತಿ ಶ್ರೀನಿವಾಸ್‌, ರಕ್ಷಿತ್‌ ಪಿ. ಉತ್ತಮ್‌, ಶರವಿ ಬುದನೂರ್‌, ಶಿಲ್ಪಾ ಎಸ್‌. ಹಾಗೂ ಕೀರ್ತಿಗಾ ಎಂ. ಅವರು ತಲಾ ಎರಡು ಪುರಸ್ಕಾರ ಪಡೆದರು.
 

click me!