9 ಜಿಲ್ಲೆಗಳಲ್ಲಿ ಶೀಘ್ರ ವೈದ್ಯ ಕಾಲೇಜು​​: ಡಾ.ಸು​ಧಾ​ಕ​ರ್‌

By Kannadaprabha NewsFirst Published Feb 2, 2021, 7:48 AM IST
Highlights

ಶೀಘ್ರದಲ್ಲೆ ಹೊಸ ಮೆಡಿಕಲ್ ಕಾಲೇಜು ತೆರೆಯಲಾಗುತ್ತದೆ. 9 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ತೆರೆಯಲಾಗುತ್ತದೆ. ಈ ಬಗ್ಗೆ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ

ಬೆಂಗಳೂರು (ಫೆ.02):  ವೈದ್ಯಕೀಯ ಕಾಲೇಜು ಇಲ್ಲದ ರಾಜ್ಯದ 9 ಜಿಲ್ಲೆಗಳಲ್ಲಿ ಸಾರ್ವಜನಿಕ-ಸಹಭಾಗಿತ್ವ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಈ ಸಂಬಂಧ ಅಧ್ಯಯನ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದರು.

ಬಿಜೆಪಿಯ ಎಸ್‌.ವಿ.ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಸಜ್ಜಿತ ಆಸ್ಪತ್ರೆ, ಅಗತ್ಯ ವೈದ್ಯರು ಹಾಗೂ ಇತರೇ ಸಿಬ್ಬಂದಿ ನೇಮಿ​ಸ​ಲಾ​ಗು​ವುದು. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುತ್ತಿದ್ದು, 2021-22ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವೈದ್ಯಕೀಯ ಕಾಲೇಜು ಸ್ಥಾಪಿಸಲು ಯೋಜನೆ ರೂಪಿಸಿದೆ.

ಕೋವಿಶೀಲ್ಡ್ , ಕೋವ್ಯಾಕ್ಸಿನ್ ಲಸಿಕೆ ಬಗ್ಗೆ ಭಯ ಬೇಡ: ಸುಧಾಕರ್ ಭರವಸೆ ..

ಇದಕ್ಕಾಗಿ ಚಿಕ್ಕಬಳ್ಳಾಪುರಕ್ಕೆ 508.11 ಕೋಟಿ ರು., ಹಾವೇರಿ 327.46 ಕೋಟಿ ರು., ಯಾದಗಿರಿ 309.54 ಕೋಟಿ ರು. ಮತ್ತು ಚಿಕ್ಕಮಗಳೂರು ಕಾಲೇಜಿಗೆ 302.70 ಕೋಟಿ ಟೆಂಡರ್‌ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಈ ಪೈಕಿ ಚಿಕ್ಕಬಳ್ಳಾಪುರ ಕಾಲೇಜಿನ ಶೇ.40 ರಷ್ಟುಕಾಮಗಾರಿ ಪ್ರಗತಿಯಲ್ಲಿದೆ. ಜಾಗದ ಸಮಸ್ಯೆ ಇದ್ದ ಕಾರಣ ಉಳಿದ ಮೂರು ಜಿಲ್ಲೆಗಳ ಕಾಮಗಾರಿ ಶೇ.5 ರಿಂದ 8ರಷ್ಟುಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಹುಬ್ಬಳ್ಳಿಯ ಶ್ರೀ ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಮೂರು ಸಾವಿರ ಮಠದ ಮೆಡಿಕಲ್‌ ಕಾಲೇಜ್‌ ಆರಂಭಕ್ಕೆ ಅನುಮತಿ ನೀಡುವಂತೆ 2020ರಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿ, 150 ಎಂಬಿಬಿಎಸ್‌ ಸೀಟುಗಳ ಪ್ರವೇಶ ಮಿತಿಯೊಂದಿಗೆ 2021-22 ನೇ ಸಾಲಿನಿಂದ ಹೊಸದಾಗಿ ಪ್ರಾರಂಭಿಸಲು ಇಸಿ/ಎಫ್‌ಸಿ ನೀಡಲಾಗಿರುತ್ತದೆ ಎಂದರು.

ಕ್ಯಾನ್ಸರ್‌ ಕೇರ್‌ ಘಟಕ:

ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಸ್ವಾಯತ್ತ ಸಂಸ್ಥೆಗಳಾದ ಮಂಡ್ಯ, ಹಾಸನ ಮತ್ತು ಕಾರವಾರ ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ ಕೇರ್‌ ಘಟಕ ಆರಂಭಿಸಲು ಕ್ರಮವಹಿಸಲಾಗಿದೆ. ಅದೇ ರೀತಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಂಗ ಸಂಸ್ಥೆಯಾಗಿ ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಫೆರಫೆರಲ್‌ ಕ್ಯಾನ್ಸರ್‌ ಕೇಂದ್ರವನ್ನು 60 ಕೋಟಿ ರು. ವೆಚ್ಚ​ದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅ. ದೇವೇಗೌಡ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಪ್ರತಿ ವರ್ಷ 65 ಸಾವಿರ ಜನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ಹೀಗಾಗಿ ತಪಾಸಣೆ, ಚಿಕಿತ್ಸೆಗಾಗಿ ವಿಭಾಗವಾರು ಕ್ಯಾನ್ಸರ್‌ ಆಸ್ಪತ್ರೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಪ್ರತಿ ಪಿಎಚ್‌ಸಿಗೆ ಆ್ಯಂಬುಲೆನ್ಸ್‌ ಸೌಲಭ್ಯ

ತ್ವರಿತವಾಗಿ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ರಾಜ್ಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲಾ ಒಂದು ಆ್ಯಂಬುಲೆನ್ಸ್‌ ಒದಗಿಸಲು ಉದ್ದೇಶಿಸಲಾಗಿದೆ. ಈವರೆಗೆ ಇದ್ದ ‘108’ ಆ್ಯಂಬುಲೆನ್ಸ್‌ ಸೇವೆಗಳ ಟೆಂಡರ್‌ ಮುಗಿದಿದೆ. ಹೊಸದಾಗಿ ಟೆಂಡರ್‌ ಕರೆಯಲಾಗಿದೆ. ಟೆಲಿಮೆಡಿಸಿನ್‌ ಸೇರಿ ಹೊಸದಾಗಿ 11 ಸೇವೆಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

click me!