ವಿದ್ಯಾರ್ಥಿಗಳೇ, ನನ್ ಧ್ವನಿ ಕೇಳಿಸ್ತಾ ಇದೆಯಾ?; ಉಪನ್ಯಾಸಕಿಯ ಲಾಕ್‌ಡೌನ್ ಡೈರಿ

By Kannadaprabha News  |  First Published Jun 28, 2021, 2:22 PM IST

ಮಲೆನಾಡಿನಲ್ಲಿರುವ ಉಪನ್ಯಾಸಕಿ ವಿಭಾ ಡೋಂಗ್ರೆ ಆನ್‌ಲೈನ್ ಕ್ಲಾಸು, ವಿದ್ಯಾರ್ಥಿಗಳ ಕಷ್ಟ-ಸುಖ, ಮಳೆ ಮತ್ತು ನೆಟ್‌ವರ್ಕ್ ಹೀಗೆ ಅನೇಕ ವಿಚಾರಗಳ ಕುರಿತು ಬರೆದ ವಿಷಾದಭರಿತ ಲವಲವಿಕೆಯ ಬರಹ.


ವಿಭಾ ಡೋಂಗ್ರೆ

‘ವಿದ್ಯಾರ್ಥಿಗಳೇ ನನ್‌ಧ್ವನಿ ಕೇಳಿಸ್ತಾ ಇದಿಯಾ?’’

Tap to resize

Latest Videos

‘ಇಲ್ಲ ಮೇಡಂಕಟ್‌ಕಟ್ ಆಗ್ತಾ ಇದೆ’’.

ನಾನು ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿದ ಒಂದು ವರ್ಷದೊಳಗೆ ನಾನು ಊಹಿಸಿಯೂ ಇರದ ರೀತಿಯಲ್ಲಿ ನನ್ನ ಶಿಷ್ಯರೊಂದಿಗಿನ ಆತ್ಮೀಯ ಮುಖಾಮುಖಿ ಸಂವಾದಗಳು ಹೀಗೆ ಹಠಾತ್ತನೆ ಬದಲಾಗಿಬಿಟ್ಟವು.

ಲಾಕೌಡೌನ್‌ಎಂದುದಡಬಡನೆ ಮನೆ ಸೇರಿದ ನಾನು ಪ್ರತಿಕ್ಷಣವು ಮುಂದಿದ್ದ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರ ಹುಡುಕುವುದೆಂತು ಎಂದು ಯೋಚಿಸುತ್ತಾ ಕುಳಿತೆ. ಜೊತೆಗೆ ಶಿಕ್ಷಣ ಕ್ಷೇತ್ರವು ಹೆಚ್ಚು ಮುಖಾಮುಖಿ- ನೇರ ಚರ್ಚೆಗಳನ್ನೆ ಸಾಂಪ್ರದಾಯಿಕವಾಗಿ ರೂಢಿಸಿಕೊಂಡು ಬಂದಿದ್ದರಿಂದ ‘ಗೂಗಲ್ ಮೀಟ್, ಸ್ಕೈಪ್, ಜೂಮ್’’ಗಳು ಇನ್ನು ನನ್ನ ಬದುಕಿಗೆ ಪ್ರವೇಶವಿತ್ತಿರಲಿಲ್ಲ. ಒಂದಷ್ಟು ತಿಂಗಳ ಪ್ರಯೋಗಗಳು, ವರ್ಚುವಲ್ ಕ್ಲಾಸ್ ಎಂಬ ಅನಿವಾರ್ಯ ಪ್ರಯತ್ನಗಳು ಹೀಗೆ ನಿಧಾನವಾಗಿ ಕೊರೋನಾ ಎಲ್ಲವನ್ನೂ ಕಲಿಸುತ್ತಾ ಬಂದಿದೆ. ಈಗ ವರ್ಷವಾದ ಮೇಲೆ ಎರಡನೇ ಅಲೆ; ಹಿಂತಿರುಗಿ ನೋಡಿದರೆ ‘ಅರೆರೆ ನಾನು ಎಷ್ಟೊಂದು ಹೊಸತನಗಳನ್ನ ರೂಢಿಸಿಕೊಂಡಿದ್ದೇನೆ’’ ಎನಿಸುತ್ತಾ ಮುಂದಿಗೆ ಕೆಲವೊಂದಷ್ಟು ಸುಲಭ ದಾರಿಗಳ ವಿಶ್ವಾಸದ ಜೊತೆ, ಆತಂಕಗಳೂ ಕಾಣುತ್ತಿವೆ.

ವಿದ್ಯಾರ್ಥಿಗಳು...?

ಕೊರೋನಾದಿಂದ ಬುಡ ಮೇಲಾಗಿರುವ ಎಲ್ಲಾ ವ್ಯವಸ್ಥೆಗಳಲ್ಲಿ ಗಾಢವಾಗಿ ಘಾಸಿಗೊಂಡಿರುವ ಶಿಕ್ಷಣ ಕ್ಷೇತ್ರದ ವ್ಯಥೆಗಳು ಹಲವು. ಪದವಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ನನಗೆ ಮುಂದೆ ಇನ್ನೆರಡು ಮೂರು ವರ್ಷಗಳಲ್ಲಿ ಕೆಲಸ- ಉನ್ನತ ಶಿಕ್ಷಣ ಎಂದು ಕನಸು ಕಟ್ಟಿ ಕೂತ ವಿದ್ಯಾರ್ಥಿಗಳ ಬಗ್ಗೆ ಅದೇನೋ ಚಿಂತೆ. ಲಾಕೌಡೌನ್ ಘೋಷಣೆಯಾದ ಮೊದಮೊದಲು ವಿದ್ಯಾರ್ಥಿಗಳಲ್ಲಿ ಹೆಚ್ಚು ಕಳವಳಗಳು ಕಾಣಲಿಲ್ಲ. ವಯೋಸಹಜ ‘ಭವಿಷ್ಯದ ಭಾರೀಯೋಚನೆ ಇರದು’’ ಎಂದು ನನ್ನ ಪ್ರಯತ್ನ, ಆನ್‌ಲೈನ್‌ಕ್ಲಾಸ್‌ನ ಪ್ರಹಸನಗಳನ್ನು ಮಾಡುತ್ತಲೇ ಇದ್ದೆ. ಬರುಬರುತ್ತಾ ವಿದ್ಯಾರ್ಥಿ ಸಮೂಹದ ಆತಂಕಗಳು-ಕಷ್ಟಗಳು ಹೆಚ್ಚಿದವು. ಇಂದಿಗೂ - ‘ಪರೀಕ್ಷೆಯಿದೆಯೋ? ಇಲ್ಲವೋ?’’, ‘ಮೇಡಂ ಸಿಗ್ನಲ್ ಸಿಗಲ್ಲ...’’, ‘ಮೇಡಂ ನಮ್ ಹತ್ರ ಸ್ಮಾರ್ಟ್‌ಫೋನ್ ಇಲ್ಲ’’, ‘ಮೇಡಂ ನನ್ನ ಫೋನ್‌ನಲ್ಲೇ ನನ್ನ ತಂಗಿ-ತಮ್ಮ ಇಬ್ಬರಿಗೂ ಕ್ಲಾಸ್ ಕೇಳಬೇಕು’’- ಹೀಗೆ ಕಾಲೇಜಿನ ಒಂದೊಂದು ವಿದ್ಯಾರ್ಥಿಯದ್ದು ಒಂದೊಂದು ಕತೆ. ಹೆಚ್ಚಿನ ವಿದಾರ್ಥಿಗಳಿಗೆ ಪ್ರಯೋಗಾತ್ಮಕ ಕಲಿಕೆಯಿಲ್ಲದೆ ವೃತ್ತಿ ಜೀವನ ಹೇಗೆ? ಎಂಬ ದೊಡ್ಡ ಸವಾಲು ತಲೆ ಕೊರೆಯಲು ಪ್ರಾರಂಭವಾಗಿದೆ.

ಹಾಡಿ ನಲಿದು ಕಲಿಸುವ ವಂದನಾ ಟೀಚರ್ ಈಗ ಎಲ್ಲೆಲ್ಲೂ ಫೇಮಸ್ 

ಇದರ ಜೊತೆಗೆ ವಿದ್ಯಾರ್ಥಿಗಳು ತಮ್ಮ ಪದವಿ ಜೀವನದಲ್ಲಿ ಅನುಭವಿಸಲೇಬೇಕಿದ್ದ ‘ಎನ್.ಎಸ್.ಎಸ್ - ಎನ್.ಸಿ.ಸಿ ಕ್ಯಾಂಪ್‌ಗಳು, ಪ್ರವಾಸ, ಕ್ರೀಡಾಉತ್ಸವ, ಕಾಲೇಜ್ ಫೆಸ್‌ಟ್’’ ಇತ್ಯಾದಿ ಅದ್ಭುತ ಅನುಭೂತಿಯಿಲ್ಲದೆ ಸಪ್ಪೆಯಾದಂತಿದ್ದಾರೆ.

ಆನ್‌ಲೈನ್ ಕ್ಲಾಸ್ ಎಂಬ ನಿತ್ಯದೊಂಬರಾಟ

ಲಾಕೌಡೌನ್‌ಘೋಷಣೆಯಾದ ಮೇಲೆ ನಾನೂ ಗೂಡು ಸೇರಿದೆ. ಕಾಡಿನ ಒಳಪದರಗಳಲ್ಲಿ ಇಣುಕುತ್ತಿರುವಂತೆ ಕಾಣುವ ನಮ್ಮ ಮನೆಗೆ ‘ನೆಟ್‌ವರ್ಕ್’’ ವಿಶೇಷ ಅತಿಥಿ. ಹೀಗಿದ್ದರೂ ನಿತ್ಯ ವಿದ್ಯಾರ್ಥಿಗಳ ಜೊತೆ ಸಂವಾದ ಅನಿವಾರ್ಯ. ಸರಿ, ಒಂದಿಡೀ ದಿನ ಮನೆಯ ಒಳಗೂ- ಹೊರಗೂ, ಮನೆ ಮುಂದಿನ ನೆರಳಿನ ಮರ, ಕೊಟ್ಟಿಗೆ, ಇಂಚಿಂಚೂ ಬಿಡದೆ ಮೊಬೈಲನ್ನು ವಿವಿಧ ಭಂಗಿಯಲ್ಲಿ ಹಿಡಿದು ತಿರುಗಿ ನೆಟ್‌ವರ್ಕ್ ಬರುವ ಜಾಗಗಳನ್ನು ಪಟ್ಟಿ ಮಾಡಿ ಇಡಲಾಯ್ತು. ಮಾರನೆಯ ದಿನದಿಂದ ನನ್ನ ಆನ್‌ಲೈನ್ ತರಗತಿ ಶುರು. ‘ಇಲ್ಲಿ ಪೂರ್ಣ ನೆಟ್‌ವರ್ಕ್‌ಇದೆ’’ಎಂದು ನನ್ನ ಪುಸ್ತಕಗಳನ್ನು ಹರಡಿಕೊಂಡು ಕೂತು ಪಾಠ ಶುರು ಮಾಡಿದ ಮರುಕ್ಷಣವೆ, ನೆಟ್‌ವರ್ಕ್ ನಾಪತ್ತೆ!

ಮಳೆಗಾಲದಲ್ಲಿ ಆನ್‌ಲೈನ್ ಕ್ಲಾಸ್‌ಗೆ ಕೊಡೆಯೇ ಆಸರೆ: ನಾಯಕರು ವ್ಯಾಪ್ತಿ ಪ್ರದೇಶದ ಹೊರಗೆ! 

ನನ್ನ ಅಷ್ಟೂ ಪಟಾಲಂ ಅಲ್ಲಿಂದ ಸ್ಥಳಾಂತರಿಸಿ ಮರದ ಕೆಳಗೆ ಕೂತು ಹರಡಿ ಇನ್ನೇನು ಪಾಠ ಶುರು ಮಾಡಬೇಕು, ಸೂಚನೆಯೇ ಕೊಡದ ಮಳೆ. ಒಳಗೆ ಬಂದು ಕೂತರೆ ನೆಟ್‌ವರ್ಕ್‌ನ ಸುಳಿವೇ ಇಲ್ಲ, ಅಷ್ಟರಲ್ಲಿ ಒಂದು ಪಿರಿಯಡ್ ಮುಗಿಯುತ್ತದೆ. ಕೆಲವೊಮ್ಮೆ, ಅಲ್ಲಿಂದ ಇಲ್ಲಿಗೆ ,ಇಲ್ಲಿಂದ ಅಲ್ಲಿಗೆ ಅಲೆಯುವ ನನ್ನನ್ನು ನೋಡಿ ನಮ್ಮ ಮನೆಯ ನಾಯಿಗಳೂ ಅಪಹಾಸ್ಯ ಮಾಡುತ್ತಿರುವಂತೆ ತೋರುತ್ತದೆ.

ಕಳೆದಿದ್ದೂ-ಕಲಿತದ್ದೂ

ಇಷ್ಟಿದ್ದರೂ ಇದೊಂದು ಹೊಸ ಜೀವನ ಶೈಲಿ ಅಭ್ಯಾಸವಾದಂತಿದೆ. ದಿನದ ಕೊನೆಯಲ್ಲಿ ಮಾಡಬೇಕಿದ್ದ ತರಗತಿಯ ರೆಕಾರ್ಡ್ ಕಳಿಸಿದ ನನಗೂ, ಅದನ್ನು ಕೇಳಿಸಿಕೊಂಡ ವಿದ್ಯಾರ್ಥಿಗಳಿಗೂ ಒಂದು ಸಾರ್ಥಕ ಭಾವ. ಯಾವುದನ್ನೂ ಶಪಿಸದೆ, ತಾಳ್ಮೆ ಕಳೆದುಕೊಳ್ಳದೆ, ಆಯಕಟ್ಟಿನಂತೆ ಪೂರ್ವಯೋಜಿತವಾಗಿ ಕೆಲಸ ಮಾಡುವ ಗುಣ ಬೆಳೆದಿದೆ. ಕೊರೋನಾದಿಂದ ಕಳೆದುಕೊಂಡಷ್ಟೇ, ಕಲಿತಿರುವುದಿದೆ. ಹೊಸ ಸಾಧ್ಯತೆಗಳನ್ನು ಹುಡುಕಿದ್ದಾಗಿದೆ. ಭರವಸೆ ನಾಳೆಗಳು ಸಕಾರಾತ್ಮಕವಾಗಿರಲಿವೆ ಎಂಬ ಆಶಾಭಾವ ನನ್ನ ಮುಂದಿದೆ.

click me!