ರಾಜ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿ 6 ತಿಂಗಳುಗಳೇ ಕಳೆದಿದೆ. ಇದರ ನಡುವೆ ಶಾಲೆಗಳನ್ನು ಮತ್ತೆ ತೆರೆಯಬೇಕೋ ಬೇಡವೋ ಎನ್ನುವ ಗೊಂದಲವಂತು ಇದ್ದೇ ಇದೆ.
ಬೆಂಗಳೂರು (ಸೆ.28): ರಾಜ್ಯದಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಯಾವಾಗ ಶಾಲೆಗಳನ್ನು ಆರಂಭಿಸಬಹುದು? ಒಂದು ವೇಳೆ ಶಾಲಾರಂಭ ಮಾಡಿದಲ್ಲಿ ಯಾವ ತರಗತಿಗಳನ್ನು ಮೊದಲು ಆರಂಭಿಸಬಹುದು ಎಂದು ಸಮುದಾಯ ಹಾಗೂ ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಸಂಬಂಧ ಮುಂದಿನ ಎರಡು ದಿನಗಳಲ್ಲಿ ತಮ್ಮ ಸಲಹೆ-ಸೂಚನೆಗಳನ್ನು ಇ-ಮೇಲ್ nimmasuresh2019@gmail.com ಮೂಲಕ ತಿಳಿಸುವಂತೆ ಕೋರಿ ರಾಜ್ಯದ ಸಚಿವರು ಹಾಗೂ ಶಾಸಕರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಪತ್ರ ಬರೆದಿದ್ದಾರೆ.
'ಎಲ್‌ಕೆಜಿ - ಯುಕೆಜಿ ಆರಂಭಿಸಿ : ಜನಾಭಿಪ್ರಾಯಕ್ಕೆ ಒಳಪಡಿಸಿ'
ಎಲ್ಲರೂ ನೀಡುವ ಸಲಹೆ-ಸೂಚನೆಗಳು ಶೈಕ್ಷಣಿಕವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಲಿದೆ. ಶಿಕ್ಷಣ ಇಲಾಖೆ ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ಪುನಾರಂಭಿಸಲು ಅವಶ್ಯಕವಿರುವ ಎಲ್ಲಾ ಪೂರ್ವ ಸಿದ್ಧತೆಗಳು ಹಾಗೂ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಸಿದ್ಧಪಡಿಸಿದೆ. ಮಾರ್ಗಸೂಚಿ ಜೊತೆಗೆ ಸಲಹೆಗಳನ್ನು ಆಧರಿಸಿ ಶಾಲೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಖಾಸಗಿ ಶಾಲೆಗಳು ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿದ್ದರೆ, ಸರ್ಕಾರಿ ಶಾಲೆಗಳು ವಿದ್ಯಾಗಮ ಯೋಜನೆ ಅನುಷ್ಠಾನ ಮಾಡುತ್ತಿದೆ. ದೂರದರ್ಶನದ ಚಂದನ ವಾಹಿನಿ, ಶಿಕ್ಷಣ ಇಲಾಖೆಯ ಯೂ-ಟ್ಯೂಬ್ ಚಾನಲ್‌ಗಳ ಮೂಲಕ ಬೋಧನಾ ಚಟುವಟಿಕೆಗಳು ನಡೆಯುತ್ತಿವೆ. ಹಿಂದಿನ ತರಗತಿಗಳ ಬೋಧನೆಯನ್ನು ಪುನರ್ ಮನನ ಮಾಡುವ ‘ಸೇತುಬಂಧ’ ಕಾರ್ಯಕ್ರಮವನ್ನೂ ಸಹ ದೂರರ್ಶನದ ಮೂಲಕ ಪ್ರಸಾರ ಮಾಡಿ ಶಿಕ್ಷಕರಿಂದ ಪಾಲನೆ ಮಾಡಲಾಗುತ್ತಿದೆ. ಆದರೆ, ಈ ಎಲ್ಲಾ ಬೋಧನಾ ಕ್ರಮಗಳು ತರಗತಿ ಕಲಿಕೆಗೆ ಪರ್ಯಾಯವಲ್ಲ,
ತರಗತಿಯ ನಾಲ್ಕು ಗೋಡೆಗಳ ನಡುವೆ ಸಹಪಾಠಿಗಳೊಂದಿಗೆ ಕುಳಿತು, ಬಯಲಿನಲ್ಲಿ ಆಟವಾಡಿ ಮನೆಗೆ ತೆರಳುವ ವಿದ್ಯಾರ್ಥಿಗಳು ಸಮಗ್ರ ಕಲಿಕೆಯ ಪ್ರಯೋಜನ ಪಡೆದಿರುತ್ತಾರೆ. ಆದ್ದರಿಂದ ಮತ್ತೆ ಮಕ್ಕಳನ್ನು ಶಾಲಾ ಆವರಣಕ್ಕೆ ಕರೆತರಬೇಕಾದ ಅನಿವಾರ್ಯತೆ ಇದೆ. ಆದರೆ, ಪ್ರಸ್ತುತ ಸಾಮಾಜಿಕ ಸಂದರ್ಭ ಇದಕ್ಕೆ ಅವಕಾಶ ನೀಡುತ್ತಿಲ್ಲ. ಮಕ್ಕಳು ಶಾಲೆಯಿಂದ ಹೊರಗುಳಿದಿರುವುದರಿಂದ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಹೆಚ್ಚಳವಾಗುತ್ತಿವೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಸಲಹೆ ನೀಡಬೇಕೆಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.