ನೀಟ್‌ ಪರೀಕ್ಷೆ ಮುಂದೂಡಿಕೆ ಪ್ರಶ್ನಿಸಿದ್ದ ಅರ್ಜಿ ವಜಾ

By Kannadaprabha NewsFirst Published Jun 11, 2021, 11:39 AM IST
Highlights

* ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ
* ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ 
* ಗೊಂದಲದಲ್ಲಿರುವ ಎರಡು ಲಕ್ಷಕ್ಕೂ ಹೆಚ್ಚು ನೀಟ್‌ ಆಕಾಂಕ್ಷಿಗಳು 

ಬೆಂಗಳೂರು(ಜೂ.11): ಪ್ರಸಕ್ತ ಶೈಕ್ಷಣಿಕ ಸಾಲಿನ ವೈದ್ಯಕೀಯ ಸ್ನಾತಕೋತ್ತರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮುಂದೂಡಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ನೀಟ್‌ ಪರೀಕ್ಷೆ ಮುಂದೂಡುವ ನಿರ್ಧಾರ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹುಬ್ಬಳ್ಳಿಯ ಜಿ.ಬಿ. ಕುಲಕರ್ಣಿ ಮೆಮೋರಿಯಲ್‌ ಲೀಗಲ್‌ ಟ್ರಸ್ಟ್‌ ನ ಡಾ. ವಿನೋದ್‌ ಕುಲಕರ್ಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿತು.

ಕೇಂದ್ರ ಸರ್ಕಾರ ಕೋವಿಡ್‌ ಪರಿಸ್ಥಿತಿ ಆಧರಿಸಿ ತಜ್ಞರೊಂದಿಗೆ ಚರ್ಚಿಸಿದ ಬಳಿಕ ನೀಟ್‌ ಪರೀಕ್ಷೆ ಮುಂದೂಡಿದೆ. ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದ್ದು, ಅದರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಅರ್ಜಿ ವಜಾಗೊಳಿಸಿತು.

ನೀಟ್ ಪರೀಕ್ಷೆಯನ್ನೂ ರದ್ದು ಮಾಡಲು ತಮಿಳುನಾಡು ಒತ್ತಾಯ

ಇದಕ್ಕೂ ಮುನ್ನ ಅರ್ಜಿದಾರ ಡಾ.ವಿನೋದ್‌ ಕುಲಕರ್ಣಿ ವಾದ ಮಂಡಿಸಿ, ಈ ಬಾರಿಯ ನೀಟ್‌ ಪರೀಕ್ಷೆ ಮೊದಲು 2021ರ ಜನೆವರಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ನಂತರ ಏ.18ಕ್ಕೆ ನಿಗದಿಪಡಿಸಲಾಯಿತು. ಇದೀಗ ಕೇಂದ್ರ ಸರ್ಕಾರ ನಾಲ್ಕು ತಿಂಗಳು ನೀಟ್‌ ಪರೀಕ್ಷೆಯನ್ನು ಮುಂದೂಡಿತು. ಹೀಗಾಗಿ, ಯಾವಾಗ ಪರೀಕ್ಷೆ ನಡೆಸಲಾಗುತ್ತದೆ ಎಂಬ ಬಗ್ಗೆ ಖಚಿತತೆ ಇಲ್ಲ. ಇದರಿಂದ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನೀಟ್‌ ಆಕಾಂಕ್ಷಿಗಳು ಗೊಂದಲದಲ್ಲಿದ್ದಾರೆ. ನೀಟ್‌ ಮುಂದೂಡಿ ಕೇಂದ್ರ ಸರ್ಕಾರ ಕೈಗೊಂಡ ಏಕಪಕ್ಷೀಯ ಹಾಗೂ ಕಾನೂನು ಬಾಹಿರ ನಿರ್ಣಯವನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.

ಕೇಂದ್ರ ಸರ್ಕಾರಿ ವಕೀಲರು, ನೀಟ್‌ ಪರೀಕ್ಷೆಗಳನ್ನು ರದ್ದುಪಡಿಸಲಾಗಿಲ್ಲ. ಕೋವಿಡ್‌ ಹಿನ್ನಲೆಯಲ್ಲಿ ಮುಂದೂಡಲಾಗಿದೆಯಷ್ಟೇ. ಕೋವಿಡ್‌ ಎರಡನೇ ಅಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ವೈದ್ಯರ ಕೊರತೆ ಉಂಟಾಗಿದೆ. ಆದ್ದರಿಂದ ಅಂತಿಮ ವರ್ಷದ ಎಂಬಿಬಿಎಸ್‌ ಹಾಗೂ ನರ್ಸಿಂಗ್‌ ವಿದ್ಯಾರ್ಥಿಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲು ತುರ್ತು ನೇಮಕಾತಿಗಳನ್ನು ಮಾಡಿಕೊಳ್ಳಲಾಯಿತು. ಆಗಸ್ಟ್‌ 31ರ ಬಳಿಕ ಒಂದು ತಿಂಗಳು ಸಿದ್ಧತೆ ಅವಕಾಶ ನೀಡಿ ನೀಟ್‌ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಎಂದು ಮನವರಿಕೆ ಮಾಡಿಕೊಟ್ಟರು.
 

click me!